ದೀಪಾವಳಿ... ಒಂದು ಕಿರು ಪರಿಚಯ .....

ದೀಪಾವಳಿ... ಒಂದು ಕಿರು ಪರಿಚಯ .....

ಬರಹ

 

 


      
         ಎಲ್ಲರ ಮನೆಯಲ್ಲೂ ದೀಪಾವಳಿಯು ಸಂಭ್ರಮದಿಂದ ನಡೆಯುತ್ತಿದೆ........   ಈ ದೀಪಾವಳಿಯ ಬಗ್ಗೆ ಒಂದು ಚಿಕ್ಕ  ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಇಚ್ಛೆಯಿಂದ ಈ ಲೇಖನ ಬರೆಯುತ್ತಿದ್ದೇನೆ.
     ನರಕ ಚತುರ್ದಶಿ .... ಈ ಹೆಸರನ್ನು ಎಲ್ಲರೂ ಕೇಳಿರುವಿರಿ.  ನರಕ ಚತುರ್ದಶಿ ಎಂದರೆ ಎರೆದುಕೊಳ್ಳುವ ಹಬ್ಬ ಎಂದೇ ಪ್ರಸಿದ್ಧಿ.  ಹಾಗಾದರೆ ಈ ದಿನ ಏಕೆ ಎರೆದುಕೊಳ್ಳಬೇಕು..?? ಈ ದಿನದ ವಿಶೇಷವೇನು..?? ಈ ದಿನ ತೈಲಾಭ್ಯಂಗವನ್ನು  ಮಾಡುವುದರಿಂದ ಏನು ಫಲ ಎಂದು ತಿಳಿದುಕೊಳ್ಳೋಣ.

     "ನರಕ ಚತುರ್ದಶಿ"  ಈ ಹೆಸರೇ ತಿಳಿಸುವಂತೆ ನರಕಕ್ಕೆ ಹೆದರುವವರು ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ಚಂದ್ರೋದಯವಾದ ನಂತರ ತಿಲ ತೈಲಾಭ್ಯಂಗ (ಎಳ್ಳೆಣ್ಣೆ ಯಿಂದ ಅಭ್ಯಂಗ ಸ್ನಾನ) ಮಾಡಬೇಕು.  ಈ ಅಭ್ಯಂಗ ಸ್ನಾನಕ್ಕೆ ರಾತ್ರಿ ಚಂದ್ರೋದಯವಾದ ನಂತರ ಹಾಗೂ ಸೂರ್ಯೋದಯಕ್ಕೆ ಮೊದಲು ಅತ್ಯಂತ ಮುಖ್ಯ ಕಾಲವಾಗಿರುತ್ತದೆ.  ಈ ಮೇಲೆ ಹೇಳಿದ ದಿನ ಹಾಗೂ ಕಾಲದಲ್ಲಿ ತಿಲ ತೈಲಾಭ್ಯಂಗ ಮಾಡುವುದರಿಂದ ನರಕ ಭಯ ನಿಯಾರಣೆಯಾಗುತ್ತದೆಂದು ಧರ್ಮಸಿಂಧುವಿನಲ್ಲಿ ಹೇಳಲ್ಪಟ್ಟಿದೆ.  ತ್ರಯೋದಶಿಯ (ಹಿಂದಿನ ದಿನದ) ದಿನ ರಾತ್ರಿ (ಕೆಲವೆಡೆ ಬೆಳಗಿನ ಜಾವ ನಾಲ್ಕು ಘಂಟೆಗೆ) ಮನೆಯ ಹೊರಭಾಗದಲ್ಲಿ ಅಪಮೃತ್ಯು ನಿವಾರಣೆಗಾಗಿ, ಯಮನ ಪ್ರೀತಿಗಾಗಿ ಎರಡು ದೀಪಗಳನ್ನು ಹೊತ್ತಿಸಿ ನಂತರ ದೇವರಿಗೆ ದೀಪ ಹಚ್ಚಿ ದೇವರ ಮುಂದೆ ಮಕ್ಕಳನ್ನು ಹಾಗೂ ಮನೆಯವರನ್ನು ಕೂರಿಸಿ ಹಣೆಗೆ ಕುಂಕುಮವನ್ನಿರಿಸಿ ತಲೆಗೆ ಎಣ್ಣೆಯನ್ನಿಟ್ಟು ನಂತರ ಅಭ್ಯಂಗ ಮಾಡುವ ಪದ್ಧತಿಯು ನಮ್ಮ ಹಿಂದೂ ಧರ್ಮದ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿದೆ.  ಮೇಲೆ ಹೇಳಿದ ಕಾಲದಲ್ಲಿ ಸ್ನಾನ ಮಾಡಲಾಗದಿದ್ದರೆ ಸೂರ್ಯೋದಯದ ನಂತರವಾದರೂ (ಗೌಣ ಕಾಲ) ಅಭ್ಯಂಗ ಸ್ನಾನ ಮಾಡಲೇಬೇಕು.  ಈ ನರಕ ಚತುರ್ದಶಿಯಿಂದ ಮೂರು ದಿನಗಳು ಅಂದರೆ ಚತುರ್ದಶಿ, ಅಮಾವಾಸ್ಯೆ ಹಾಗೂ ಪಾಡ್ಯ ಅವಶ್ಯಕವಾಗಿ ಅಭ್ಯಂಗ ಸ್ನಾನವನ್ನು ಮಾಡಬೇಕು ಇಲ್ಲವಾದರೆ ನರಕಪ್ರಾಪ್ತಿ ಮೊದಲಾದ ದೋಷಗಳು ಪ್ರಾಪ್ತವಾಗುತ್ತದೆಂದೂ, ಆಚರಿಸಿದಲ್ಲಿ ಐಶ್ವರ್ಯ ಪ್ರಾಪ್ತಿ, ದಾರಿದ್ರ್ಯ ನಿವಾರಣೆ ಮೊದಲಾದ ಶುಭಫಲಗಳು ಉಂಟಾಗುವುದೆಂದು ಧರ್ಮಸಿಂಧುವಿನಲ್ಲಿ ಹೇಳಿದ್ದಾರೆ.
ಬಲಿ ಪಾಡ್ಯಮಿ...  ಕಾರ್ತಿಕ ಮಾಸದ ಶುಕ್ಲಪಕ್ಷದ ಪಾಡ್ಯಕ್ಕೆ ಬಲಿಪಾಡ್ಯಮಿ ಎಂದು ಹೇಳುತ್ತಾರೆ.  ಈ ದಿನದಂದು ಬೆಳಿಗ್ಗೆ ಗೋ ಪೂಜೆ ಹಾಗೂ ಗೋವರ್ಧನ ಪೂಜೆಗಳನ್ನು ಸಂಜೆ ಬಲಿಪೂಜೆ, ಲಕ್ಷ್ಮೀಪೂಜೆ ಹಾಗೂ ದೀಪೋತ್ಸವಗಳನ್ನು ಆಚರಿಸಬೇಕು.  ಗೋವುಗಳಿಗೆ ಬೆಳಿಗ್ಗೆ ಅರಿಸಿನ ಕುಂಕುಮವನ್ನಿಟ್ಟು ತಲೆಗೆ ಎಣ್ಣೆಯನ್ನು ಹಚ್ಚಿ ಸ್ನಾನವನ್ನು ಮಾಡಿಸಿ ಅರಿಸಿನ ಕುಂಕುಮ ಹಾಗೂ ವಸ್ತ್ರಗಳಿಂದ ಅಲಂಕರಿಸಿ  " ಅಗ್ರತಃ ಸಂತು ಮೇ ಗಾವೋ ಗಾವೋ ಮೇ ಸಂತು ಪೃಷ್ಠತಃ|  ಗಾವೋ ಮೇ ಹೃದಯೇ ಸಂತು ಗವಾಂ ಮಧ್ಯೇ ವಸಾಮ್ಯಹಂ|| "  ಎಂಬ ಮಂತ್ರದಿಂದ ಕರುವಿನ ಸಹಿತವಾದ ಪ್ರತ್ಯಕ್ಷ ಹಸುವನ್ನು (ಅಭಾವದಲ್ಲಿ ಮಣ್ಣಿನಿಂದ ಮಾಡಿದ ಹಸುವನ್ನಾದರೂ) ಷೋಡಶೋಪಚಾರಗಳಿಂದ ಪೂಜಿಸಿ, ಅವುಗಳಿಗೆ ತೃಣ ದಾನ (ಹುಲ್ಲು) ಮಾಡಿ ಹುಗ್ಗಿ ಹೋಳಿಗೆ ಮೊದಲಾದ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಕೊಟ್ಟು ಮಂಗಳಾರತಿ ಮಾಡಿ ಪ್ರದಕ್ಷಿಣೆ ಮಾಡಿ ನಮಸ್ಕರಿಸಬೇಕು.  ಈ ದಿನ ಹಸುಗಳ ಹಾಲನ್ನು ಕರೆಯುವುದಾಗಲೀ ಅಥವಾ ಅವುಗಳಿಂದ ಕೆಲಸವನ್ನಾಗಲೀ ಮಾಡಿಸಬಾರದು.

     ಗೋವರ್ಧನ ಪರ್ವತದ ಬಳಿ ಇರುವವರು ಅದನ್ನೇ ಪೂಜಿಸತಕ್ಕದ್ದು.  ಬೇರೆ ಕಡೆ ಇರುವವರು ಗೋಮಯ (ಸಗಣಿ) ಅಥವಾ ಅನ್ನದ ರಾಶಿಯಿಂದ ಗೋವರ್ಧನ ಪರ್ವತವನ್ನು ನಿರ್ಮಿಸಿ  " ಗೋವರ್ಧನ ಧರಾಧಾರ ಗೋಕುಲ ತ್ರಾಣಕಾರಕ|  ವಿಷ್ಣುಬಾಹು ಕೃತಚ್ಛಾಯ ಗವಾಂ ಕೋಟಿ ಪ್ರದೋಭವ|| " ಎಂಬ ಮಂತ್ರದಿಂದ ಶ್ರೀ ಕೃಷ್ಣನ ಪ್ರೀತ್ಯರ್ಥವಾಗಿ ಪೂಜಿಸಿ ನೂತನ ವಸ್ತ್ರಗಳನ್ನು ಧರಿಸಿಕೊಂಡು  ಮೃಷ್ಟಾನ್ನ ಭೋಜನ ಮಾಡಬೇಕು.
     ಸಂಜೆ ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ ಹಾಗೂ ದೀಪೋತ್ಸವಗಳನ್ನು ಆಚರಿಸಬೇಕು.  " ಬಲಿರಾಜ ನಮಸ್ತುಭ್ಯಂ ವಿರೋಚನ ಸುತ ಪ್ರಭೋ| ಭವಿಷ್ಯೇಂದ್ರ ಪುರಾರಾತೇ  ಪೂಜೇಯಂ ಪ್ರತಿಗೃಹ್ಯತಾಂ|| " ಎಂಬ ಮಂತ್ರದಿಂದ ಬಲಿಚಕ್ರವರ್ತಿಯನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು.  ಈ ದಿನ ಬಲಿಚಕ್ರವರ್ತಿಯ ಸಲುವಾಗಿ ಏನನ್ನಾದರೂ ಶಕ್ತ್ಯಾನುಸಾರ ದಾನವನ್ನು ಮಾಡಿದರೆ ಅದು ಮಹಾವಿಷ್ಣುವಿಗೆ ಪ್ರೀತಿಯಾಗಿ ಅಕ್ಷಯವಾಗುವುದು ಎಂದು ಧರ್ಮಸಿಂಧುವಿನಲ್ಲಿ ಹೇಳಿದೆ.  ಈ ದಿನವು ಯಾರು ಯಾರು ಯಾವ ಯಾವ ಭಾವನೆಯಿಂದ ಇರುವರೋ ಅವರು ವರ್ಷವಿಡೀ ಹಾಗೆಯೇ ಇರುವರೆಂದು ಹೇಳುವರು.  ಆದ್ದರಿಂದ ಈ ದಿನದಂದು ಎಲ್ಲರೂ ಒಳ್ಳೆಯ ಭಾವನೆಯಿಂದ ಸಂತೋಷವಾಗಿರಬೇಕು.  ಬಲೀಂದ್ರ ಪೂಜೆಯ ಸಮಯದಲ್ಲಿ ದೀಪೋತ್ಸವವನ್ನು ಆಚರಿಸುವುದರಿಂದ ಯಾವಾಗಲೂ ಸಂಪತ್ತು ಸ್ಥಿರವಾಗಿರುವುದು.  ಈ ದಿನ ಎಲ್ಲೆಡೆ ದೀಪೋತ್ಸವ ಮಾಡುವುದರಿಂದ ಹಾಗೂ ಬಲಿಚಕ್ರವರ್ತಿಗೆ ದೀಪಗಳಿಂದ ಆರತಿ ಬೆಳಗುವುದರಿಂದಲೇ "  ದೀಪಾವಳೀ "ಎಂದು ಹೆಸರು ಬಂದಿದೆ.  ಪುರಾಣಗಳಲ್ಲಿ ಈ ದಿನವು ದೀಪೋತ್ಸವ ಮಾಡದಿದ್ದರೆ ಅವನ ಮನೆಯ ದೀಪವು ಹೇಗೆ ಉಳಿದೀತು..?? ಎನ್ನುವ ಉಕ್ತಿ ಇದೆ.  ಅಂದರೆ ದೀಪೋತ್ಸವವನ್ನು ಮಾಡುವುದರಿಂದ ಕುಲದೀಪಕನು ಹುಟ್ಟಿ ವಂಶೋದ್ಧಾರವಾಗುವುದೆಂದು ಅರ್ಥ.  ಮಹಾವಿಷ್ಣುವು ವಾಮನಾವತಾರದಲ್ಲಿ ಬಲಿಚಕ್ರವರ್ತಿಯ ಬಳಿಗೆ ಬಂದು ಮೂರು ಹೆಜ್ಜೆಗಳನ್ನು ಇಡುವಷ್ಟು ಜಾಗವನ್ನು ದಾನವನ್ನಾಗಿ ಕೇಳುತ್ತಾನೆ.  ದಾನಶೂರನಾದ ಬಲಿಚಕ್ರವರ್ತಿಯು ಕೊಡುವುದಾಗಿ ಒಪ್ಪಿದಾಗ ವಟುರೂಪದಲ್ಲಿದ್ದ ಮಹಾವಿಷ್ಣುವು ಬೃಹದಾಕಾರವಾಗಿ ಬೆಳೆದು ಒಂದು ಹೆಜ್ಜೆಯನ್ನು ಭೂಮಿಗೂ ಇನ್ನೊಂದನ್ನು ಆಕಾಶಕ್ಕೂ ಇಟ್ಟು ಮತ್ತೊಂದನ್ನು ಎಲ್ಲಿ ಇಡಲೆಂದು ಕೇಳಿದಾಗ ಬಲಿಚಕ್ರವರ್ತಿಯು ತನ್ನ ತಲೆಯಮೇಲಿಡುವಂತೆ ಹೇಳುತ್ತಾನೆ.  ಅದರಂತೆ ವಾಮನರೂಪಿಯಾದ ಮಹಾವಿಷ್ಣುವು ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ತಲೆಯಮೇಲಿಟ್ಟು ಅವನನ್ನು ಪಾತಾಳ ಲೋಕಕ್ಕೆ ತಳ್ಳುತ್ತಾನೆ.  ಬಲಿಚಕ್ರವರ್ತಿಯ ಪುಣ್ಯವಿಶೇಷದಿಂದ ಅವನು ಮುಂದಿನ ಕಲ್ಪದಲ್ಲಿ ಇಂದ್ರಪದವಿಯನ್ನು ಪಡೆದುಕೊಳ್ಳುತ್ತಾನೆ. ಪ್ರತಿವರ್ಷವೂ ಕಾರ್ತಿಕ ಶುದ್ಧ ಪ್ರತಿಪದಿಯಂದು  ಮರಳಿ ಬಂದು  ನಿನ್ನ ರಾಜ್ಯವನ್ನು ನೋಡಿಕೊಂಡು ಹೋಗುತ್ತಾನೆ ಎಂದು  ಪುರಾಣದಲ್ಲಿ ಹೇಳಿದೆ (ಬಲಿಚಕ್ರವರ್ತಿಯು ಏಳುಜನ ಚಿರಂಜೀವಿಗಳಲ್ಲಿ ಒಬ್ಬನಾಗಿದ್ದಾನೆ).  ಆದ್ದರಿಂದ ಬಲಿಚಕ್ರವರ್ತಿಯು ಮರಳಿ ತನ್ನ ರಾಜ್ಯಕ್ಕೆ ಬರುವ ಈ ದಿನಕ್ಕೆ " ಬಲಿಪಾಡ್ಯಮಿ " ಎಂದು ಕರೆಯುತ್ತಾರೆ.
     ನರಕಚತುರ್ದಶಿಯಿಂದ ಮೂರು ದಿನವೂ (ಚತುರ್ದಶಿ, ಅಮಾವಾಸ್ಯೆ, ಪಾಡ್ಯ)  ಸಂಜೆ ವೇಳೆಗೆ ಲಕ್ಷ್ಮೀ ಪೂಜೆ ಮಾಡಬೇಕೆಂದು ಹೇಳಿದ್ದಾರೆ.  ಇದು ಕಾರಣಾಂತರದಿಂದ ಕೆಲವೆಡೆ ನಿಂತುಹೋಗಿ ಅಮಾವಾಸ್ಯೆಯ ಸಂಜೆ ಅಥವಾ ಬಲಿಪಾಡ್ಯಮಿ ದಿನ ಸಂಜೆ ಅವರವರ ಸಂಪ್ರದಾಯಕ್ಕನುಗುಣವಾಗಿ ಮಾಡುವಂತಾಗಿದೆ.
ಯಮ ದ್ವಿತೀಯ...  ಅಂದರೆ, ಹಬ್ಬದ ಮರುದಿನ...  ಅಕ್ಕನ ತದಿಗೆ ಭಾವನ ಬಿದಿಗೆ ಎಂದೂ ಕರೆಯುವುದುಂಟು.  ಕಾರ್ತಿಕ ಶುದ್ಧ ಬಿದಿಗೆಗೆ (ದ್ವಿತೀಯಾ)  ಯಮದ್ವಿತೀಯ ಎನ್ನುವರು.  ಪೂರ್ವದಲ್ಲಿ ಯಮುನೆಯು ತನ್ನ ಅಣ್ಣನಾದ ಯಮನನ್ನು ತನ್ನ ಮನೆಗೆ ಕರೆದು ಊಟಮಾಡಿಸಿದಳೆಂದು ಪುರಾಣದಲ್ಲಿ ಹೇಳಿದೆ.  ಆದ್ದರಿಂದ ಈ ದಿನಕ್ಕೆ ಯಮದ್ವಿತೀಯ ಎನ್ನುವರು.  ಈ ದಿನ ಸ್ವಗೃಹದಲ್ಲಿ ಭೋಜನ ಮಾಡಬಾರದು.  ಅಕ್ಕ ತಂಗಿಯರ ಮನೆಯಲ್ಲಿ ಊಟಮಾಡಬೇಕು ಅದರಿಂದ ಧನ ಧಾನ್ಯ ಸಮೃದ್ಧಿಯಾಗಿ ಸುಖ ಪ್ರಾಪ್ತಿಯಾಗುವುದು.  ಎಲ್ಲ ಅಕ್ಕ ತಂಗಿಯರನ್ನೂ ವಸ್ತ್ರಾಲಂಕಾರಗಳಿಂದ ಸತ್ಕರಿಸಬೇಕು.  ತನಗೆ ಅಕ್ಕ ತಂಗಿಯರು ಇಲ್ಲದಿದ್ದಲ್ಲಿ ಸ್ನೇಹಿತರ ಅಕ್ಕ ತಂಗಿಯರನ್ನಾದರೂ ಸತ್ಕರಿಸಬೇಕೆಂದು ಹೇಳಿದ್ದಾರೆ.  ಭಗಿನಿಯರು (ಅಕ್ಕತಂಗಿಯರು) ಅಣ್ಣ ತಮ್ಮಂದಿರುಗಳನ್ನು ಈ ದಿನ ಸತ್ಕರಿಸುವುದರಿಂದ ಅವರಿಗೆ ವೈಧವ್ಯವು ಉಂಟಾಗುವುದಿಲ್ಲ ಹಾಗೂ ಅಣ್ಣ ತಮ್ಮಂದಿರುಗಳಿಗೆ ದೀರ್ಘಾಯುಷ್ಯವು ಉಂಟಾಗುತ್ತದೆ.

     ನಮ್ಮ ಭಾರತ ದೇಶವು ಬಲಿಚಕ್ರವರ್ತಿಯ ರಾಜ್ಯದಂತಾಗಲಿ, ಮಹಾಲಕ್ಷ್ಮಿಯು ನಮ್ಮೆಲ್ಲರಿಗೂ ಆಯುರಾರೋಗ್ಯ ಐಶ್ವರ್ಯವನ್ನು ಕೊಡಲಿ ಹಾಗೂ ಯಮಧರ್ಮರಾಜನು ನಮಗೆಲ್ಲ ದೀರ್ಘಾಯುಷ್ಯವನ್ನು ಕೊಡಲಿ ಎಂದು ಹಾರೈಸುತ್ತಾನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯವನ್ನು ಕೋರುತ್ತೇನೆ.