ಕತ್ತೆಯ ಕೊರಗು

ಕತ್ತೆಯ ಕೊರಗು

ಕವನ

ಅಗಸನೊಬ್ಬನ ಕತ್ತೆ,ತಾಯ ಕಳಕೊಂಡು

ಬಗೆಬಗೆಯ ಕಷ್ಟದಲಿ ಬಾಳನೆಳಕೊಂಡು

ದುಡಿಯುತಿರೆ ಹೊಟ್ಟೆ ತುಂಬದ ಸಿಟ್ಟಿನಿಂದ

ಹಗ್ಗವನು ಕಡಿದು ಹೊರಟಿತು ಗೇಹದಿಂದ  [೧]

ಸುಟ್ಟಬಟ್ಟೆಯೆ, ನೀನು ನನ್ನ ಮೇಲೇರಿ

ಕಷ್ಟ ಕೊಡುತಿರುವಿಯಲ! ನೀನೆನಗೆ ಮಾರಿ

ಎಂದಮಿತ ಕ್ರೋಧದಲಿ ಬಟ್ಟೆಗಳ ತುಳಿದು

ಚಿಂದಿ ಮಾಡುತ್ತ ತೆರಳಿತು ನದಿಗೆ ಅಂದು  [೨]

ನೀನಿರಲು ಕೆಲಸವಿಹುದೆನ್ನ ಮಾಲಕಗೆ

ನಿನ್ನಿಂದ ನೂರಾರು ಬನ್ನ ಬಂತೆನಗೆ

ಎಂದು ನೂಕಿತು ಕಲ್ಲ ನದಿಯ ಕೆಸರಲ್ಲಿ

ಹುಲ್ಲು ಮೇಯಲು ಬಂತು ಹೊಳೆಯ ದಡದಲ್ಲಿ  [೩]

ಓಡಿ ಬಂದನು ಅಗಸ,ಬಟ್ಟೆಗಳ ನೋಡಿ

ಈ ಕತ್ತೆಗೇನು ರೋಗವೆ?ಹುಚ್ಚು ಖೋಡಿ!

ಎಂದೆನುತ ಬಾರಿಸಿದ ನೂರಾರು ಹೊಡೆತ

ಬಂಧನಕೆ ಸಿಕ್ಕಿತಾ ಕತ್ತೆ ರೋದಿಸುತ          [೪]

ಸೋಲಿರಲಿ ,ಗೆಲುವಿರಲಿ ಕ್ರಾಂತಿ ಗೀತೆಯನು

ಶೋಷಿತರು ಊದುವರು ಪಾಂಚಜನ್ಯವನು

ನಿಂತ ಗಡಿಯಾರವೂ ದಿನಕೆರಡು ಬಾರಿ

ಸರಿಯಾಗಿ ತೋರುವುದು ವೇಳೆಯನು ಸಾರಿ [೫]

 

 

 

 

Comments