ಸಂಬಂಧಗಳು
ಕವನ
ಬೆಟ್ಟದ ನೆಲ್ಲಿಗದೆಲ್ಲಿಯ ಕಡಲುಪ್ಪಿನ ಬೆರಕೆ?
ಬಳ್ಳಿಯಲರಳಿದ ಹೂಗಳು ಬೀಳ್ವವು ಹರಿಶಿರಕೆ [೧]
ಸಾಗರದಾಚೆಯ ಗೇರಿಗೆ ನಮ್ಮಯ ನೆಲ ಸಾಕು
ವನಧಿಯ ಮತ್ಸ್ಯವು ಕೊಳೆಯದೆ ಉಳಿಯಲು ಹಿಮ ಬೇಕು! [೨]
ಕಾಡಲಿ ಮೇಯುವ ಹಸುವಿಗೆ ಕರುವಿನದೇ ನೆನಪು
ಕಳ್ಳಗು ಸುಳ್ಳಗು ದೊರೆವುದು ತಾಯೊಲವಿನ ಮುಡಿಪು [೩]
ಅಡಿಕೆಯ ಮರಗಳ ಗಾಳಿಯನುಸಿರಾಡಿದ ಹುಡುಗ
ತನ್ನನೆ ಕಳಕೊಳ್ಳುವ ನಗರದಲೆನಿತೋ ಬೇಗ ! [೪]
ಭೂಕಂಪದ ದಾವಾಗ್ನಿಗೆ ಬೆಂದಿಹ ಗಡ್ಡೆಗಳ
ಆಯುತ್ತಲಿ ಬಾಯ್ಗಿಕ್ಕುವನಿವನಾರೋ ಮರುಳ! [೫]
ಉಬ್ಬರದಬ್ಬರ ಕಡಲಲಿ ತೂಗಾಡುವ ಹಡಗು
ಜನಭಾರದಿ ಮುನ್ನಡೆವುದು ನೆಲೆ ದೊರೆವುದೆ ಕಡೆಗೂ? [೬]
ಗೋಜಲು ಗೋಜಲು ಅಕ್ಷರ ಸಾರ್ಥಕ ಪದವೆಲ್ಲಿ?
ಹುಡುಕಲು ಸಾಧ್ಯವೇ ಅಲ್ಲವಿದಂಗೈಲಿಹ ನೆಲ್ಲಿ! [೭]