ಮರಳು ಗಾಡು ( ಕವನ )

ಮರಳು ಗಾಡು ( ಕವನ )

ಕವನ

 


ಮರಳು ಗಾಡಲಿ ನಿಂತು ಮರೀಚಿಕೆಯ ಬೆಂಬತ್ತಿ


ಓಡುತಿರುವವನೆಂದು ನಗುವಿರೇಕೆ ?


ವ್ಯಂಗ್ಯವಾಡುವಿರೇಕೆ ? ಸಮೃದ್ಧ ಗಂಗೆಯ


ತಟದಲಿ ನೆಲೆ ನಿಂತ ನಿಮಗೇನು ಗೊತ್ತು


ಬಾಯಾರಿಕೆ ದಾಹಗಳ ಕಟು ಅನುಭವ !


 


ನಾ ಹುಟ್ಟಿ ಬೆಳೆದು ಆಡಿ ಕನಸಿದ್ದು


ಎಲ್ಲ ಈ ಮರಳುಗಾಡಲ್ಲೆ


ಸಾಗಿದೆ ಮರಭೂಮಿಯಲ್ಲಿ ಕಾರವಾನ


ಎಂದಾದರೊಂದು ದಿನ ಹಿಡಿಯುವೆ ಮರೀಚಿಕೆ


ತಣಿಸುವೆ ಮರಳುಗಾಡಿನ ದಾಹ


 


ಮುಸಿ ಮುಸಿ ನಗು ಎಕೆ ? ವ್ಯರ್ಥ ಕನಸೆಂದೆ ?


ಸಮೃದ್ಧ ನೆಲೆ ಕಂಡು ತಾಯ್ನೆಲ ತೊರೆದು


ವಲಸೆ ಹೋಗುವ ವಲಸೆ ಹಕ್ಕಿ ನಾನಲ್ಲ


ಜನನಿ ಜನ್ಮಭೂಮಿ ಸ್ವರ್ಗಕೂ ಮಿಗಿಲೆನುವ


ಈ ನೆಲದ ಅಪ್ಪಟ ಅಭಿಮಾನಿ ನಾನು


 


ವಿಜಯ ಲಕ್ಷ್ಮಿಯ ಒಲುಮೆ ಸಾಹಸಿಗೆ


ಕನಸುಗಾರನಿಗೆ ಸಂಕಲ್ಪಮಾಡಿ


ತಪಗೈದು ಭಗಿರಥನ ಕರೆತಂದು


ಗಂಗೆಯನು ಹರಿಸಿ ನಂದನವಾಗಿಸುವೆ


ಈ ನನ್ನ ಮರಳುಗಾಡನ್ನು


 

Comments