ಯಾವುದೀ ಚೇತನ‌

ಯಾವುದೀ ಚೇತನ‌

ಕವನ

ಗೆಳತಿ ಬಲ್ಲೆಯ ನೀನು

ಕಾರಣ ಯಾರೆಂದು ಈ ಸೃಷ್ಠಿ ನಡೆಗೆ             //೧//

ಯಾರು ಕಾರಣರೆಂದು ಬಲ್ಲವರು ಯಾರು

ನೀಡಲು ರವಿಯು ಬೆಳಕ ಈ ಧರೆಗೆ               //೨//

ಬೆಳದಿಂಗಳ ಚೆಲ್ಲಿ ಧರೆಗೆ ತಂಪೆರೆಯೆ

ಕಾರಣವದಾರು ಚಂದಿರನ ಕೃಪೆಗೆ               //೩//

ಕೋಗಿಲೆಯ ಕಂಠದಲಿ, ಕೊಳಲ ಗಾನದಲಿ

ಇತ್ತವರು ಯಾರು ಮಧುರ ರಾಗದ ಕೊಡುಗೆ  //೪//

ಕಾಲ ಕಾಲಕ್ಕೆ ಮಳೆಯ ನೀರೆರೆದು

ಉಸಿರು ತುಂಬಿದವರಾರು ಈ ಹಸಿರು ಸಿರಿಗೆ //೫//

ಮುಚ್ಚಿದಾ ಮಣ್ಣನ್ನು ಸರಿಸಿ ಮೇಲೇಳೊ

ಛಲವನಿತ್ತವರಾರು ಮೊಳಕೆ ಕುಡಿಗೆ            //೬//

ನಾನಾರೊ ನೀನಾರೊ ಆಗಿದ್ದರೂ ಒಮ್ಮೆ

ಒಂದು ಮಾಡಿದವರಾರು ಬೆಸೆದು ಈ ಬೆಸುಗೆ //೭//

ನಾನಂತು ಅರಿಯೆ ಈ ಸೃಷ್ಠಿಯ ಬಗ್ಗೆ

ತಿಳಿದಿದ್ದರೆ ಹೇಳು ಈ ಚೇತನದ ಬಗೆಗೆ         //೮//

 

Comments