ಹಾಳು ಮದನನಿಗೊಂದು ಧಿಕ್ಕಾರ

ಹಾಳು ಮದನನಿಗೊಂದು ಧಿಕ್ಕಾರ

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ,  ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ?  ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ:

 
ನಾನವಳ  ಬಿಡದೆಲೇ ನೆನೆಯುತಿರಲು
ಒಟ್ಟು ಕಡೆಗಣಿಸಿಹಳಲ್ಲ ನನ್ನನವಳು;
 
ಅವಳು ಬಯಸಿಹಳಲ್ಲ ಮತ್ತೊಬ್ಬ ನಲ್ಲನನು
ಆವನ ಮನ ಸೆಳೆದಾಕೆ  ಬೇರೊಬ್ಬಳು.
 
ಇತ್ತ ಕಡೆ ಚಡಪಡಿಸಿ ನನಗೋಸ್ಕರ
ಸುರುಟಿ ಹೋಗಿಹಳಲ್ಲ ಮತ್ತೋರ್ವಳು
 
ಹಾ ! ಇರಲಿ ಧಿಕ್ಕಾರ ಅವನಿಗೂ ಅವಳಿಗೂ
ಹಾಳು ಮದನಗು ಮತ್ತೆ ಇವಳಿಗೂ ನನಗೂ!
 
ಸಂಸ್ಕೃತ ಮೂಲ  (ಭರ್ತೃಹರಿಯ ನೀತಿಶತಕ -೨ ):
 
ಯಾಮ್ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋಽನ್ಯಸಕ್ತಃ
ಅಸ್ಮತ್ಕೃತೇ ಚ ಪರಿಶುಷ್ಯತಿ  ಕಾಚಿದನ್ಯಾ
ಧಿಕ್ ತಾಮ್ ಚ ತಮ್ ಚ ಮದನಮ್ ಚ ಇಮಾಮ್ ಚ ಮಾಮ್ ಚ ||
 
ಹೊಸತಲೆಮಾರಿನ ನಿರ್ದೇಶಕರಾದ  ಯೋಗರಾಜ ಭಟ್ಟರು ತಮ್ಮ  "ಮನಸಾರೆ" ಚಲನಚಿತ್ರದಲ್ಲಿ ಬಹಳ ಹಳೆ ತಲೆಮಾರಿನ ಈ ಪದ್ಯವನ್ನು ನೇರವಾಗಿ ಭಟ್ಟಿ ಇಳಿಸಿ, ಆ ಚಿತ್ರದಲ್ಲೊಂದು ಪ್ರಸಂಗಗನ್ನು ಹೆಣೆದಿರುವುದು, ಆ ಚಿತ್ರವನ್ನೂ ನೋದಿದ್ದವರಿಗೆ ನೆನಪಾದರೂ ನೆನಪಾಗಬಹುದು!
 
-ಹಂಸಾನಂದಿ
 
ಕೊ: ಇದು ಭರ್ತೃಹರಿಯ ಜೀವನದಲ್ಲಿ ನಡೆದ ಘಟನೆಯೊಂದರಿಂದ ಬೇಸರಗೊಂಡಾಗ ಅವನು ಬರೆದನೆಂದು ಪ್ರತೀತಿ. ಆ ಕಥೆಯ ಬಗ್ಗೆ ಮತ್ತೊಮ್ಮೆ ಹೇಳಬೇಕು!
 
ಕೊ.ಕೊ: ಇದು ನೀತಿಶತಕದ ಕೆಲವು ಪ್ರತಿಗಳಲ್ಲಿ ಎರಡನೇ ಪದ್ಯವಾಗಿ ಕಂಡುಬರುತ್ತದೆ. ಆದರೆ ಎಲ್ಲ ಆವೃತ್ತಿಗಳಲ್ಲೂ ಇದು ಇಲ್ಲ. ಹಾಗಾಗಿ ಪ್ರಕ್ಷಿಪ್ತವೆಂದೂ ಪರಿಗಣಿಸಲಾಗಿದೆ.
 
ಕೊ.ಕೊ.ಕೊ: ಮೂರನೇ ಸಾಲಿನಲ್ಲಿ "ಪರಿಶುಷ್ಯತಿ" ಬದಲು "ಪರಿತುಷ್ಯತಿ" ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅರ್ಥದಲ್ಲಿ ಬದಲಾವಣೆ ಇದ್ದರೂ  ಅದರಿಂದ ಪದ್ಯದ ಆಶಯದಲ್ಲಿ ಬಹಳ ಹೆಚ್ಚಿನ ಬದಲಾವಣೆ ಏನೂ ಆಗದು.
Rating
No votes yet

Comments