ಇಲಿಗಳೂ ಮತ್ತು ಸಿಂಹವೂ....
ಬಲಾಢ್ಯ ಸಿಂಹವು ಬಲೆಯಲಿ ಸಿಲುಕಲು |
ಬೇಡರ ಬಲೆಯನು ಕ್ಷಣದಲಿ ಕಡಿದು |
ಬಂಧನ ಬಿಡಿಸಿ ಪ್ರಾಣವ ಉಳಿಸಿದ |
ಮಾತಿಗೆ ತಪ್ಪದ ಇಲಿಗಳ ಸಾಹಸ |
ಕಥೆಯನು ಹೇಳುವೆ ಮಕ್ಕಳೆ ಕೇಳಿರಿ || 1 ||
ಪಂಪಾತೀರದ ದುರ್ಗಮ ಕಾಡಿನ |
ಬೆಟ್ಟದ ಗುಹೆಯೇ ಸಿಂಹದ ಧಾಮ |
ನಿಶ್ಚಿತ ಸಮಯದಿ ಹಸಿವೆಗೆ ಬೇಟೆಯು |
ನಂತರ ಗುಹೆಯಲಿ ಸುಖದಾ ನಿದ್ದೆಯು |
ನಡೆಯುತಲಿದ್ದಿತು ಸಿಂಹದ ದಿನಚರಿ || 2 ||
ಗುಹೆಯಾ ಪಕ್ಕದ ಚೊಕ್ಕದ ಬಿಲದಲಿ |
ಅಮ್ಮನ ಜೊತೆಯಲಿ ಚಿಕ್ಕಿಲಿ ವಾಸವು |
ಸಿಂಹವು ಸುಖದಾ ನಿದ್ದೆಯೊಳಿರಲು |
ಸಿಂಹದ ಮೇಲೆಯೆ ಚಿಕ್ಕಿಲಿ ಚೆಲ್ಲಾಟ |
ನಿದ್ದೆಯ ಸಿಂಹಕೆ ನೀಗದ ಪೇಚಾಟ || 3 ||
ನಿದ್ದೆಯ ಮಾಡಲು ಚಿಕ್ಕಿಲಿ ಬಿಡದು |
ಹಿಡಿಯಲು ಹೋದರೆ ಕೈಗೇ ಸಿಗದು |
ಪಟ್ಟನೆ ಹಾರುತ ಬಿಲವನು ಸೇರುತ |
ಗೇಲಿಯ ಮಾಡುತ ಸೊಕ್ಕಲಿ ಮೀರಿ |
ಕಿರಿಕಿರಿ ಮಾಡುವ ಮೂಷಿಕ ಮರಿಯು || 4 ||
ಅಮ್ಮನು ಬುದ್ಧಿಯ ಮಾತನು ಹೇಳಲು |
ಕೇಳದೆ ಕೆಟ್ಟಿತು ಪುಟಾಣಿ ಇಲಿಮರಿ |
ಸಿಂಹಕೆ ಕಾಟವ ಕೊಡುತಲೇ ಇರಲು |
ಸಿಂಹದ ತಾಳ್ಮೆಯು ಕೆಟ್ಟಿತು ಕೊನೆಗೆ |
ಬಿಡದೇ ಹಿಡಿಯವೆ ಹಟಮಾರಿ ಇಲಿಮರಿ |
ಯೋಜನೆ ಹಾಕಿತು ಸಿಟ್ಟಿನ ಸಿಂಹ || 5 ||
ಸೋಗಿನ ನಿದ್ದೆಯ ನಟಿಸುತ ಸಿಂಹ |
ಚಿಕ್ಕಿಲಿ ಬರುವುದ ಹೊಂಚಲಿ ಕಾಯುತ |
ಭಾರಿ ನಿದ್ದೆಯಲಿದೆ ಸಿಂಹವು ಎನ್ನುತ |
ಸೊಕ್ಕಿನ ಚಿಕ್ಕಿಲಿ ಠಕ್ಕಿನ ಹೆಜ್ಜೆಲಿ |
ಛಕ್ಕನೆ ಹಾರಿತು ಮೂಗಿನ ಮೇಲೆ || 6 ||
ಮೂಗಿನ ಮೇಲೆಯೆ ಥೈತಕ ಕುಣಿಯುವ |
ಮೂರ್ಖ ಇಲಿಮರಿ ಉಪಟಳ ಹೆಚ್ಚಲು |
ಠಕ್ಕನೆ ಹಿಡಿಯಿತು ಇಲಿಮರಿ ಕೈಯಲೆ |
ಸಿಂಹವು ಕೋಪದಿ ದಿಟ್ಟಿಸಿ ನೋಡಲು |
ಭಯದಲಿ ಎಲ್ಲವ ಅಲ್ಲಿಯೆ ಮಾಡಿತು || 7 ||
ಇಲಿಮರಿ ಭಯದಲಿ ಚೀರುತಲಿರಲು |
ಧಾವಿಸಿ ಬಂದಿತು ಚಿಕ್ಕಿಲಿ ತಾಯಿ |
ನೋಡಲು ಚಿಕ್ಕಿಲಿ ಸಿಂಹದ ಕೈಯಲಿ |
ತಾಯಿಗೆ ಬಂದಿತು ಜೀವವೆ ಬಾಯಿಗೆ |
ದೈನ್ಯದಿ ಬೇಡಿತು ಚಿಕ್ಕಿಲಿ ಬಿಡುಗಡೆ || 8 ||
ಕೊಂದೇ ಬಿಡುವೆನು ಎಂದಿತು ಕೋಪದಿ |
ಕಾಡಿನ ರಾಜನೆ ಸೇಡಲಿ ಕೊಂದರೆ |
ನಿನ್ನಯ ಘನತೆಗೆ ಬರದೇ ಕುಂದು |
ಬುದ್ಧಿಯ ಮಾತನು ಹೇಳುವೆ ಮರಿಗೆ |
ಬಿಡುಗಡೆ ಭಾಗ್ಯವ ಕರುಣಿಸು ದೊರೆಯೆ || 9 ||
ಬಿಡದಿರು ಎಂದಿಗು ನನ್ನಯ ಗುಹೆಯೊಳು |
ಬಿಡುವೆನು ತಾಯಿಯೆ ನಿನ್ನಯ ಮರಿಯ |
ಚಿಕ್ಕಿಲಿ ಬಿಡುಗಡೆ ತಾಯಿಗೆ ಸಂಭ್ರಮ |
ಸಿಂಹಕೆ ನಮಿಸುತ ಧಾವಿಸಿ ಬರುವೆವು |
ನಿನ್ನಯ ಕಷ್ಟಕೆ ಕರೆಯುವ ಮೊದಲೆ || 10 ||
ಇಲಿಗಳು ನೀವು ಮೃಗರಾಜನು ನಾನು |
ನಿಮ್ಮಯ ಸಹಾಯ ನಿಮಗೇ ಇರಲಿ |
ಕಾಟವ ಕೊಟ್ಟರೆ ಕೊಲ್ಲದೇ ಬಿಡೆನು |
ನಿಮ್ಮಯ ಬಿಲದಲಿ ಸೇರಿರಿ ಮೊದಲು |
ಬಲಾಢ್ಯ ಸಿಂಹವು ಹೇಳಿತು ದರ್ಪದಿ || 11 ||
ಚಿಕ್ಕವರೆಂದು ಉಪೇಕ್ಷೆಯು ಕೂಡದು |
ಕಷ್ಟದಿ ಜೀವಿಗೆ ಕಡ್ಡಿಯೆ ಆಸರೆ |
ಕಡ್ಡಿಯು ಚಿಕ್ಕದೆ ಸಹಾಯ ದೊಡ್ಡದು |
ಪ್ರಾಣವ ಉಳಸಿದ ಋಣವನು ತೀರಿಸೆ |
ಮರೆಯದೆ ಬರುವೆವು ಸಂಕಟ ಸಮಯದಿ || 12 ||
ಸಿಂಹದ ದಿನಚರಿ ಸುಖದಲಿ ಸಾಗಿರೆ |
ಪಕ್ಕದ ಊರಿನ ಬೇಡರ ಪಡೆಯದು |
ಕಾಡಲಿ ಬೇಟೆಗೆ ಹೊಂಚನು ಹಾಕಲು |
ಬೇಟೆಗೆ ಬಲೆಗಳ ಎಲ್ಲೆಡೆ ಹರಡಿ |
ನಡೆದರು ಊರಿಗೆ ಮರುದಿನ ಬರಲು || 13 ||
ಹಸಿದಿಹ ಸಿಂಹಕೆ ಬೇಟೆಯ ಆತುರ |
ಕಾಣದ ಬಲೆಯಲಿ ಬಂಧಿತ ಸಿಂಹ |
ಕೋಪದಿ ಕೊಸರಲು ಬಿಗಿಯುವ ಬಂಧನ |
ಬಲೆಯದು ಬಿಗಿಯಲು ಭರ್ಜರಿ ಘರ್ಜನೆ |
ಪ್ರಾಣಿಗಳೆಲ್ಲಾ ದಿಕ್ಕಾಪಾಲು || 14 ||
ಬಲೆಯಲಿ ಸಿಲುಕಿದ ಸಿಂಹದ ಘರ್ಜನೆ |
ಕೇಳಿದ ಚಿಕ್ಕಿಲಿ ಓಡುತ ಬಂದಿತು |
ಭಾರೀ ಬಲೆಯಲಿ ಸಿಂಹದ ವಿಲವಿಲ |
ತಕ್ಷಣ ತಿಳಿಸಿತು ತಾಯಿಗೆ ಚಿಕ್ಕಿಲಿ |
ಧಾವಿಸಿ ಬಂದವು ಸಂಕಟ ಸಮಯದಿ || 15 ||
ಬಲೆಯ ಒಳಗಡೆ ತೂರಿದ ಚಿಕ್ಕಿಲಿ |
ಸಿಂಹಕೆ ನೀಡಿತು ಅಭಯವ ವಿನಯದಿ |
ಚಿಕ್ಕಿಲಿ ತಾಯಿಲಿ ಇಬ್ಬರೂ ಸೇರಿ |
ಕ್ಷಣದಲಿ ಬಲೆಯಾ ಹಗ್ಗವ ಕಡಿದು |
ಬಲೆಯನು ಸಡಿಲಿಸಿ ಬಂಧನ ಬಿಡಿಸಲು || 16 ||
ಅಹಮಿನ ಸಿಂಹದ ಪ್ರಾಣದ ರಕ್ಷಣೆ |
ಸಿಂಹಕೆ ತನ್ನಯ ತಪ್ಪಿನ ಅರಿವು |
ಮೂರ್ತಿಯು ಚಿಕ್ಕದು ಕೀರ್ತಿಯು ದೊಡ್ಡದು |
ಕ್ಷಮೆಯನು ಕೋರುತ ಇಲಿಗಳ ಹೊಗಳುತ |
ಸಿಂಹಕೆ ಇಲಿಗಳ ಸ್ನೇಹದ ಸಂತಸ || 17 ||
ಚಿಕ್ಕದು ದೊಡ್ಡದು ಭೇದವು ಸಲ್ಲದು |
ಕೊಟ್ಟಿಹ ಮಾತಿಗೆ ತಪ್ಪದ ಇಲಿಗಳ |
ಸಿಂಹದ ಸ್ನೇಹದ ಸಾಹಸ ವಿಜಯವು |
ಪಶ್ಚಿಮ ದೇಶದ ನೀತಿಯ ಕಥೆಯು |
ಜಯಪ್ರಕಾಶಿತ ಕನ್ನಡ ಕವನವು |
ಕನ್ನಡ ಮಕ್ಕಳ ರಂಜನೆ ಗೀತೆಯು || 18 ||