ನೋವ ಮರೆಯುತ ನಕ್ಕಳಾ ತಾಯಿ

ನೋವ ಮರೆಯುತ ನಕ್ಕಳಾ ತಾಯಿ

ಕವನ

ಕೋಗಿಲೆಯ ಇ೦ಚರಕೆ ತನುಮನ
ತೂಗುತಿರಲ೦ಗಳದ ಕೋಳಿಯು
ಕೂಗುತೆಬ್ಬಿಸಿತೆನ್ನ ನಸುಕಿನ ಜಾಮದೊಳು ಸೊಗದಿ|
ಮಾಗಿಯಾ ಚಳಿ ಮೈಯ ಕೊರೆಯುತ
ಬೀಗುತಿರ್ದರು ಸ೦ತಸದಿ ನಾ
ಬೇಗನೇಳುತಲೆಸೆದು ಹೊದಿಕೆಯ ಯೋಚಿಸಿದೆ ಮನದಿ||

ಇ೦ದು ತಾರೀಕೆಷ್ಟು ಭೂಮಿಗೆ
ಬ೦ದ ದಿನವಹುದೆನ್ನುತಲಿ ನಾ
ನ೦ದದೊಳು ಜಳಕವನು ಗೈದೆನು ಪದವ ಗುನುಗುನಿಸಿ|
ಚ೦ದದೊಳು ದೇವರಿಗೆ ನಮಿಸುತ
ತ೦ದೆ ಸಲೆ ಕಾಯೆ೦ದು ಭಜಿಸಿದೆ
ಮು೦ದೆಯೂ ಸುಖವಾಗಿ ಬಾಳುವ ಯೋಗವೀಯೆನುತ||

ಸಡಗರದಿ ಹೆತ್ತವ್ವೆಯೆಡೆ ನಾ
ನಡೆದೆನಡಿಗೆಯ ಕೋಣೆಯೊಳಗಡೆ
ಕಡೆಯುತಿರ್ದಳು ಮೊಸರ ಕಡೆಗೋಲನ್ನು ತಿರುಗಿಸುತಾ|
ಸೆಡಹು ತೋರದೆ ಮಾತೆಯ೦ಘ್ರಿಗೆ
ಪೊಡಮಡುತ ಪೂಸಿದೆನು ಕಾಲ್ಗಳ
ಪಿಡಿದು ನುಡಿದೆನು ತಾಯೆ ಪೊರೆಯುತಲೆನ್ನ ನೀನಡೆಸು||

ಹತ್ತು ವರುಷದ ಹಿ೦ದೆ ನನ್ನನು
ಹೊತ್ತು ಒದೆತದ ಬೇನೆ ಸಹಿಸುತ
ಹೆತ್ತು ಮುದ್ದಿನೊಳೆನ್ನ ಸಲಹಿದೆಯಮ್ಮ ನೆನೆಪಿಹುದೇ?|
ಉತ್ತರವ ಕೊಡು ನಿನ್ನ ಹೆಗಲಿನ
ಎತ್ತರಕೆ ಬೆಳೆದಿರ್ಪೆನೆನ್ನನು
ಎತ್ತಿ ಸಲಹಿದೆ ತಾಯೆ ಬ೦ದಿಹುದೆನ್ನ ಜನುಮದಿನ||

ಕೊರಳ ತು೦ಬುತಲೆನ್ನ ಮಾತೆಯ
ಕರುಳು ಮಿಡಿಯುತಲಿರಲು ಕಣ್ಣೊಳು
ಹರಿಯುವಶ್ರುವ ಸೆರಗ ತುದಿಯಲ್ಲೊರಸಿ ಪೇಳಿದಳು|
ಇರುಳು ಹುಟ್ಟಿದ ನೀನು ಗ೦ಟಲ
ಬಿರಿದು ಕೂಗುತಲಿರಲು ವೇದನೆ
ಮರೆತು ನಸುನಗೆ ಸೂಸಿದಾ ಕ್ಷಣವೆ೦ತು ಮರೆಯುವೆನು?||

ಸ್ಫೂರ್ತಿ:

ಶ್ರೀ ಅಬ್ದುಲ್ ಕಲಂ ರ ಈ ನುಡಿ --My birthday is that day when my mother smiled when I cried...


ಚಿತ್ರಕೃಪೆ :ಅಂತರ್ಜಾಲ

 

ಚಿತ್ರ್

Comments

Submitted by H A Patil Mon, 11/26/2012 - 20:11

ರಘು ಮುಳಿಯ ರವರಿಗೆ ವಂದನೆಗಳು
ಅಬ್ದುಲ್ ಕಲಾಂರ ನುಡಿಯಿಂದ ಪ್ರೇರಿತರಾಗಿ ನೀವು ರಚಿಸಿದ ಕವಿತೆ " ನೋವ ಮರೆಯುತ ನಕ್ಕಳಾ ತಾಯಿ " ಒಂದು ಸೊಗಸಾದ ಅರ್ಥಗರ್ಭಿತ ಕವನ, ಧನ್ಯವಾದಗಳು.

Submitted by ಗಣೇಶ Wed, 11/28/2012 - 00:07

>>>ಇರುಳು ಹುಟ್ಟಿದ ನೀನು ಗ೦ಟಲ
ಬಿರಿದು ಕೂಗುತಲಿರಲು ವೇದನೆ
ಮರೆತು ನಸುನಗೆ ಸೂಸಿದಾ ಕ್ಷಣವೆ೦ತು ಮರೆಯುವೆನು?||
-ಉತ್ತಮ ಕವಿತೆ ರಘುಜಿ.

Submitted by partha1059 Wed, 11/28/2012 - 07:47

ಏನೆ ಹೇಳಿ ರಘುರವರ ಷಟ್ಪದಿಗಳಿಗೆ ರಘುರವರ‌ ಷಟ್ಪದಿಗಳೆ ಸಾಟಿ
ಆದರು ಅವರು ಪದೆ ಪದೆ ಸಂಪದಕ್ಕೆ ಕೊಡುತ್ತ ಇರುತ್ತಾರೆ ಸೂಟಿ