ಹೇಳತೇವ ಕೇಳ...

ಹೇಳತೇವ ಕೇಳ...

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಎನ್‍.... ಮೋಹನ್, ಜಯಲಕ್ಷ್ಮಿಪಾಟೀಲ್‍, ಎನ್‍. ಸಂಧ್ಯಾರಾಣಿ
ಪ್ರಕಾಶಕರು
ಅಭಿನವ
ಪುಸ್ತಕದ ಬೆಲೆ
100

 

ಹೇಳತೇವ ಕೇಳ....     

“ಮುಂದೊಂದು ದಿನ

ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.”

ಅವಧಿಯ ಸಂಪಾದಕರಾದ ಜಿ.ಎನ್‍.ಮೋಹನ್‍ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತದೆ. ಇನ್ನಾದರೂ ‘ಈ ಜಗತ್ತು ಬದಲಾಗಬಾರದೇ..’ ಎನ್ನಿಸುತ್ತದೆ. ಇದರ ಸಂಪಾದಕಿ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್‍ ಮತ್ತು ಇದರಲ್ಲಿನ ಲೇಖನಗಳ ಸಂಯೋಜಕಿ ಶ್ರೀಮತಿ ಎನ್‍. ಸಂಧ್ಯಾರಾಣಿ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ ಸಂದರ್ಭದಲ್ಲಿ ಅವಧಿಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಿದು. ಹಲವು ಮಂದಿ ಮಹಿಳೆಯರು ಬಚ್ಚಿಟ್ಟ ತಮ್ಮ ನೋವನ್ನು ಇಲ್ಲಿ ತೆರೆದಿದ್ದಾರೆ.

ಇದರಲ್ಲಿ ‘ಹೀಗಾಯ್ತು.., ಬೇಡ.., ಬಿಕ್ಕು..,ಮತ್ತು ಬೆಳಕಿಗಾಗಿ’ ಎಂಬ ನಾಲ್ಕು ಭಾಗಗಳಿವೆ. ‘ಹೀಗಾಯ್ತು..’

ಭಾಗದಲ್ಲಿ ಹಲವರು ತಮ್ಮ ಅನುಭವಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

“ಇದನ್ನು ಜೋಪಾನವಾಗಿ ಇಟ್ಟುಕೋ. ಬ್ಯಾಗಿಗೆ ಕೈ ಹಾಕಿದಾಗ ತಕ್ಷಣ ಕೈಗೆ ಸಿಗಬೇಕು. ಅದಕ್ಕೆ ಇದನ್ನು ಒಂದು ಬದಿಯಲ್ಲಿ ಇಟ್ಟುಕೋ’ ಎಂದು ಅಮ್ಮ ಪುಟ್ಟ ಚಾಕುವೊಂದನ್ನು ಬ್ಯಾಗ್‍ನಲ್ಲಿ ತುಂಬಿಸಿಟ್ಟಿದ್ದಳು. ‘ಯಾಕಮ್ಮಾ ಇದೆಲ್ಲಾ?’ ಎಂದು ಕೇಳಿದರೆ ‘ಮೂರು ಮೈಲಿ ದೂರ ನಡೆದು ಹೋಗ್ತಿಯಾ. ಅದು ಬೇರೆ ಕಾಡುದಾರಿ. ಯಾರಾದ್ರೂ ಕೀಟಲೆ ಮಾಡಿದ್ರೆ.. ಇದನ್ನು ತೋರಿಸು’ ಎಂದು ಹೇಳಿದ್ದಳು ಅಮ್ಮ. ಆಗ ನಾನು ನಾಲ್ಕನೇ ತರಗತಿ. ಟೀಚರ್‍ ಬ್ಯಾಗ್‍ ನೋಡಿದ್ರೆ ಅಂತ ಅಮ್ಮನ ಬಳಿ ಕೇಳಿದ್ರೆ, ನನ್ನ ಕೇಳೋಕೆ ಹೇಳು ಎಂದು ಅಷ್ಟಕ್ಕೆ ಬಾಯಿ ಮುಚ್ಚಿಸಿ ಬಿಡೋಳು.”... ವರ್ಷ ಕಳೆದಂತೆ ಅಮ್ಮ ಕೊಟ್ಟ ಚಾಕುವಿನ ಅರ್ಥ ತಿಳಿಯುತ್ತಿತ್ತು. ಅಮ್ಮ ಒಂದೊಂದಾಗಿ ಬಿಡಿಸಿ ಹೇಳುತ್ತದ್ದಳು... ನನ್ನಲ್ಲಿ ಬೆನ್ನಿಗೆ ಹಾಕುವ ಬ್ಯಾಗ್‍ ಇತ್ತು. ಅದರ ಬದಿಯಲ್ಲಿ ಅದನ್ನು ತುಂಬಿಸಿಡೋಳು. ಪ್ರತಿವಾರ ಅದು ತುಕ್ಕು ಹಿಡಿದಿದೆಯೇ ಎಂದು ನೋಡಿ ಎಣ್ಣೆ ಸವರಿ ಇಡುತ್ತಿದ್ದಳು... ಎಂಟನೇ ತರಗತಿಗೆ ಬಂದಾಗ ಅಮ್ಮ ಹಳೆ ಚಾಕು ಬೇಡ ಎಂದು ಹೊಸ ಚಾಕು ತಂದುಕೊಟ್ಟಿದ್ದಳು..”- ಇದು ‘ಹೀಗಾಯ್ತು’ ಭಾಗದಲ್ಲಿನ ಮೊದಲ ಲೇಖನದ ಕೆಲವು ಸಾಲುಗಳು. ಎಲ್ಲ ಅಮ್ಮಂದಿರು ಹೀಗಿರುವುದಿಲ್ಲ. ನಡೆದ ಕಹಿಘಟನೆಯನ್ನು ಮೊದಲಿಗೆ ಹಿರಿಯರಿಗೆ ಹೇಳಲೇ ಮಕ್ಕಳು ಹೆದರುತ್ತವೆ. ಅಂತಹದರಲ್ಲೂ ಎಲ್ಲೋ ಕೆಲವರು ಹೇಳಿಕೊಂಡರೂ ಕೂಡ ಮಾನ-ಮರ್ಯಾದೆಯ ಹೆದರಿಕೆಯಲ್ಲಿ ಅಮ್ಮಂದಿರು ಮಕ್ಕಳನ್ನು ಮರೆಮಾಡಿ ಬಿಡುತ್ತಾರೆ. ತಪ್ಪೆಸಗಿದವರ ವಿರುದ್ಧ ದನಿಯೆತ್ತುವುದೇ ಇಲ್ಲ. “ ಥೂ ನೀನು ಹೀಗೆ ಮಾಡಿ ಮಾಡಿಯೇ ನಮ್ಮ ಬಾಯನ್ನು ಆಗಲೂ ಮುಚ್ಚಿಬಿಟ್ಟೆ” ಎಂದು ಮಗಳು ಮುಂದೊಂದು ದಿನ ಅಮ್ಮನನ್ನು ಎದುರಿಸುತ್ತಾಳೆ. ತನ್ನ ಮಗಳ ರಕ್ಷಣೆಗೆ ನಿಲ್ಲುತ್ತಾಳೆ. ನಮ್ಮ ಮನೆಯ ಮಗಳನ್ನು ಎಷ್ಟೆಲ್ಲ ಜತನದಿಂದ ಕಾಪಾಡಿಕೊಳ್ಳಬೇಕಾಗಿದೆ ನೋಡಿ. ಸುತ್ತಲಿರುವ ಯಾರನ್ನೂ ನಂಬುವಂತಿಲ್ಲ. ಯಾರೊಳಗೆ ಯಾವ ರಾಕ್ಷಸನಿದ್ದಾನೋ ಯಾರು ಬಲ್ಲರು? ಏನೋ ಆತಂಕ, ದುಗುಡ, ಭಯ.. ಹೆಣ್ಣು ಮಕ್ಕಳ ಬದುಕು ಇಂತಹುದರ ನೆರಳಲ್ಲೇ ಕಳೆಯುವಂತೆ ಮಾಡಿರುವುದಾದರೂ ಯಾರು? ಈ ಭಾಗದ ಪ್ರತೀ ಲೇಖನವೂ ಓದಿದ ನಂತರ ಕಾಡದೆ ಬಿಡದು. ಲೇಖನಗಳೊಂದಿಗೆ ಉಳಿದ ಭಾಗಗಳಲ್ಲಿ ಕಥೆಗಳಿವೆ, ಪದ್ಯಗಳಿವೆ.. ಸಮಸ್ಯೆಯ ವಿಶ್ಲೇಷಣೆಯಿದೆ.

ನಮ್ಮ ಮಕ್ಕಳಿಗೆ ಹೇಳಿಕೊಡಬೇಕಾದ ಪಾಠಗಳು ಕಳಬೇಡ,ಕೊಲಬೇಡ,ಹುಸಿಯನುಡಿಯಲು ಬೇಡ ಮಾತ್ರವಲ್ಲ.. ಅದನ್ನು ಮೀರಿ ಮಾನವೀಯತೆಯೊಂದಿಗೆ ಸಹಜೀವಿಗಳೊಂದಿಗೆ ವರ್ತಿಸುವುದನ್ನು ಕಲಿಸಬೇಕಾಗಿದೆ. ಹೆಣ್ಣು-ಗಂಡು ಸಮಾನವಾಗಿ ನಕ್ಕು ನಲಿಯುತ್ತಾ ಬಾಳುವುದನ್ನು ನಾವು ಮಾದರಿಯಾಗಿ ನಿಂತು ಕಲಿಸಬೇಕಾಗಿದೆ. ಈ ಪುಸ್ತಕ ಅಂತಹ ಬದುಕು ಏಕೆ ಬೇಕು ಎಂದು ಒಮ್ಮೆ ಯೋಚಿಸುವಂತೆ ಮಾಡುತ್ತದೆ.