ಅವನು ನನ್ನೊಳಗೇ ಇರಲಿ...!!

ಅವನು ನನ್ನೊಳಗೇ ಇರಲಿ...!!

ಕಡಲ ತೀರದಿ
ಅವನ ಹೆಸರು ಬರೆದೆ
ಅಲೆ ಬಂದು ಅಳಿಸಿತು...
ಒಡಲ ಆಳದಿ ಇನ್ನು
ಅಲೆಗಳು ಏಳುವುದಿಲ್ಲ...!!

ಮಿನುಗುವ ನಕ್ಷತ್ರಕೆ
ಅವನ ಹೆಸರಿಟ್ಟೆ
ಮೋಡ ಬಂದು ಮರೆಸಿತು...
ಹೊಳೆವ ಕಣ್ಣುಗಳಲಿನ್ನು
ಮೋಡ ಕಟ್ಟುವುದಿಲ್ಲ...!!

ಮುಡಿದ ಮಲ್ಲಿಗೆ ಗಂಧ
ಅವಗೆ ಮುಡಿಪೆಂದೆ..
ಗಾಳಿ ಬಂದು ಹೊತ್ತೊಯ್ದಿತು..
ಮನದ ಕಿಡಕಿಯ ಕದವ
ಇನ್ನು ತೆರೆಯುವುದಿಲ್ಲ...!!

ಕವಿತೆಯ ಪ್ರತಿ ಸಾಲಲ್ಲು
ಅವನಿರುವ ಕಂಡೆ..
ಹಾಡುಗನ ಕಂಠದಲಿ ಲೀನವಾಯ್ತು..
ಎದೆಯ ಆಸೆಗಳಿನ್ನು
ಹಾಡಾಗುವುದಿಲ್ಲ...!!

Comments

Submitted by Dileep Hegde Fri, 05/24/2013 - 00:55

In reply to by makara

ಮಕರ ಅವರೇ.. ನಮಸ್ತೆ... ಹೊರ ಜಗತ್ತಿಗೆ "ಅವನ" ನಂಟು ಹತ್ತಿಸಲು ಹೋದಾಗಲೆಲ್ಲ "ಇವಳು" ಸೋತಿದ್ದಾಳಂತೆ.. ಅದರಿಂತ ಪಾಠವನ್ನೂ ಕಲಿತು ಒಳಗಿರುವ ಅವನನ್ನು ಅಲ್ಲೇ ಕಟ್ಟಿಡುವ ಲೆಕ್ಕಾಚಾರ ಮಾಡ್ತಿದಾಳಂತೆ.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
Submitted by nageshamysore Fri, 05/24/2013 - 06:28

In reply to by Dileep Hegde

ನಮಸ್ಕಾರ ದೀಲಿಪರವರೆ, ಮನಸೆಂಬ ಮರ್ಕಟದ ವ್ಯಾಪಾರದಲ್ಲಿ 'ಆಕೆ' ಎಷ್ಟು ಕಾಲ ಕಟ್ಟಿಹಾಕಿಡಬಲ್ಲಳೆಂಬುದು ಕುತೂಹಲಕರ ವಿಷಯ. ಸದ್ಯಕ್ಕೆ ನಿಮ್ಮ ಕವನದಲ್ಲಿಯಂತೂ ಚೆನ್ನಾಗಿ ಕಟ್ಟಿಹಾಕಿ ಬಿಟ್ಟಿದ್ದಿರಾ ಬಿಡಿ! - ನಾಗೇಶ ಮೈಸೂರು, ಸಿಂಗಪುರದಿಂದ