' ಶಾಲ್ಮಲೆ '

' ಶಾಲ್ಮಲೆ '

ಚಿತ್ರ


          


ಗುಡ್ಡ ಬೆಟ್ಟಗಳಿಂದಾವೃತ
ಪ್ರಸ್ತಭೂಮಿ
ಅನತಿ ದೂರದಲೊಂದು
ಬೃಹತ್ತಮರ
ಗಗನದೆತ್ತರಕೆ ತಲೆ ಚಾಚಿದೆ
ಯಾರಿಹರು
ತನಗಿಂತ ಮಿಗಿಲೆಂದು !


ಮೈದುಂಬಿ ವೃಕ್ಷದ ತುಂಬೆಲ್ಲ
ಅವರಿಸಿಹ ಕಡುಗೆಂಪು ಬಣ್ಣದ
ಬಟ್ಟಲಾಕೃತಿಯ ಸುಂದರ
ಹೂಗುಚ್ಛಗಳ ತುರಾಯಿ
ಕಾಣುತ್ತಿದ್ದಾಳೆ ಶಾಲ್ಮಲೆ ನವೀನಳಾಗಿ


ಅಂಗೈಯಲಿ ಕಡುಗೆಂಪು
ಬಣ್ಣದ ದೀಪಗಳ ಹಿಡಿದ
ಭೂರಮೆಯಂತೆ
ನಿಂತಿದ್ದಾಳೆ ಮಹಾ ಶಾಲ್ಮಲಿ
ಭೂಮ್ಯಾಕಾಶಗಳನು
ಒಂದು ಮಾಡಿ


ಮರ ಮುಟ್ಟುಗಳಲಿ ನೀನು
ದೊಡ್ಡವಳು ಶಾಲ್ಮಲೆ
ವೇದಕಾಲದಿಂದಲೂ ನಿನ್ನ
ಐತಿಹ್ಯವುಂಟು
ವಧು ವರರ ಕೊಂಡೊಯ್ವ
ರಥಕೆ ನೀನಾಗಿದ್ದೆ  ಮೂಲಾಧಾರ 
ಗ್ರಾಮಗಳ ಮಧ್ಯದ
ಗಡಿ ಗುರುತು ನೀನಾಗಿದ್ದೆ
 
ಕಾಯಿಗಳು ಬಿರಿದು
ಅಜ್ಜನ ಗಡ್ಡವಾಗಿ
ಸುತ್ತ ಮುತ್ತಲಲೆಲ್ಲ ಗಾಳಿಯಲಿ
ತೇಲಿ ಎಲ್ಲಿಯೋ ಒಂದು
ಗೌಪ್ಯ ಜಾಗದಲಿ ಬಿದ್ದು
ಅಂಕುರಿಸಿ ಮತ್ತೆ
ನಿನ್ನ ಸಂತತಿ ಹುಟ್ಟು
ಅವುಗಳ ಪುನರುಜ್ಜೀವನ



ಬೇಸಿಗೆಯ ಬಿಸಿಲಿಗೆ
ಬಳಲಿ ಬೆಂಡಾಗಿ
ಎಲೆಗಳುದುರಿಸಿಕೊಂಡು
ಬೆತ್ತಲಾಗಿ ವಸಂತದಲಿ
ರೆಂಬೆ ಕೊಂಬೆಗಳಲ್ಲಿ
ಹೂವುಗಳರಳಿಸಿ ಕೊಂಡು
ನಿಂತು ಕಾರ್ತೀಕದ
ದೀಪಗಳ ನೆನಪಿಸುವವಳು



ವಾಸನೆರಹಿತ ಬರಿ
ಬಣ್ಣದ ಬಡಿವಾರದ ಹೂವುಗಳ
ಕಣ್ಣು ಕೋರೈಸುವ
ಬೆಡಗಿನ ಶಾಲ್ಮಲೆ ಅಂದ ಚೆಂದದಲಿ
ಬೆಡಗು ಬೀರಿ ಎಲ್ಲರ ಮನ ಸೆಳೆವ
ಬರಿ ಮೋಸಗಾತಿ ನೀನು ಶಾಲ್ಮಲಿ


 


ನಿನ್ನ ಹೂಗೊಂಚಲುಗಳನು
ಹಂಸಗಳು ಕಮಲ
ಪುಷ್ಪಗಳೆಂದು
ರಣ ಹದ್ದುಗಳು ಮಾಂಸದ
ತುಂಡುಗಳೆಂದು
ದುಂಬಿಗಳು ಜೇನಿನ
ಆಗರಗಳೆಂದು
ದಾರಿಹೋಕರು ಗಳಿತ
ಫಲಗಳೆಂದು
ನಿನ್ನ ಕಂಡು ಮೋಸ
ಹೋಗುವ ಪರಿ



ಶಾಲ್ಮಲೆ ಹಿಂಜರಿಕೆ
ರೇಶಿಮೆಯ ನಯ ನುಣುಪು
ನಾಜೂಕಿನ ಅರಳೆ
ನೀನು ಸುರಿಸುವ ಅಂಟು
ವೈದ್ಯದಲಿ ಉಪಯೋಗ
ಬೆಂಕಿ ಕಡ್ಡಿಗೆ ಪ್ಲೈವುಡ್ ಪಲ್ಪಿಗೆ
ಸೆಲ್ಯುಲೋಸ್ ಸಾಮಗ್ರಿಗೆ
ನೀನು ಮೂಲಾಧಾರ
ಜನುಪಯೋಗಿ
ಸಾರ್ಥಕ ಬದುಕು ನಿನ್ನದು


                 *


 


ಚತ್ರ ಕೃಪೆ: http://www.google.co.in/imgres?q=shalmali+tree&sa=X&rls=com.microsoft:en-us&rlz=1I7ADFA_enIN462&biw=862&bih=590&tbm=isch&tbnid=ouHE8tqCvxgCiM:&imgrefurl=http://creative.sulekha.com/the-silk-cotton-tree_400511_blog&docid=iRdN8MAzJ1EihM&imgurl=http://www1.sulekha.com/mstore/a1samud/albums/default/DSC00263.JPG&w=500&h=375&ei=dPqhUd7rMsrJrAfD2oDACg&zoom=1&iact=rc&dur=140&page=1&tbnh=147&tbnw=206&start=0&ndsp=14&ved=1t:429,r:5,s:0,i:96&tx=155&ty=89
 

Rating
Average: 5 (1 vote)

Comments

Submitted by partha1059 Sun, 05/26/2013 - 18:23

ಶಾಲ್ಮಲೆ ಒಂದು ನದಿಯ ಹೆಸರು ಹೌದು ಇಲ್ಲಿ ಪ್ರಕೃತಿ ಎಂಬಂತೆ ಒಂದು ಮರದ ಹೆಸರಿನಂತೆ ಬಳಸಿದ್ದೀರಿ. ಶಾಲ್ಮಲೆ ವೃಕ್ಷವು ಇರಬಹುದು. ಹಾಗೆ ವೇದ ಕಾಲದಲ್ಲಿ , ರಾಜ್ಯಗಳ ನಡುವಿನ ಗಡಿ ಎಂದೆಲ್ಲ ಹೇಳಿದೆ, ಮತ್ತಷ್ಟು ವಿವರಗಳ ನಿರೀಕ್ಷೆಯಲ್ಲಿ

Submitted by nageshamysore Sun, 05/26/2013 - 20:41

In reply to by partha1059

ಪಾರ್ಥ ಸಾರ್, ಶಾಲ್ಮಲಿ ಅಂದರೆ ಬೂರುಗದ ಮರ ಅನ್ನುವ ಅರ್ಥ ಇರುವಂತೆ ಕಾಣುತ್ತಿದೆ. (ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು). ಸಪ್ತ ದ್ವೀಪಗಳಲ್ಲಿ ಒಂದರ ಹೆಸರು ಶಾಲ್ಮಲೀ ಎಂದಿದೆ, ಇಪ್ಪತ್ತೊಂದು ನರಕಗಳಲ್ಲಿ ಒಂದು ನರಕದ ಹೆಸರು ಶಾಲ್ಮಲೀ ಎಂದಿದೆ (ದಾಸ ಸಾಹಿತ್ಯ). ಶಾಲ್ಮಲೀ ಮತ್ತು ಶಾಲ್ಮಲೆ ಒಂದೆ ಇರಬಹುದೇನೊ?- ನಾಗೇಶ ಮೈಸೂರು

Submitted by H A Patil Sat, 06/22/2013 - 19:37

In reply to by partha1059

ಪಾರ್ಥ ಸಾರಥಿ ಯವರಿಗೆ ವಂದನೆಗಳು
' ಶಾಲ್ಮಲೆ ' ಕವನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ಈ ಕವನವನ್ನು ಸಂಪದಕ್ಕೆ ಹಾಕಿ ಹೋದವನು ನಿನ್ನೆ ಮರಳಿದ್ದೇನೆ, ವಿಳಂಬಕ್ಕೆ ಕ್ಷಮೆಯಿರಲಿ, ಶಾಲ್ಮಲಾ ಎಂಬ ನದಿಯ ಕುರಿತು ಚಂಪಾ ರವರು ಒಂದು ಕವನವನ್ನು ಬರೆದಿದ್ದಾರೆ, ನಾಗೇಶ ಮೈಸೂರು ರವರು ನಮೂದಿಸಿದಂತೆ ಇದು ಬೂರಗದ ಮರದ ಸಂಸ್ಕೃತ ಹೆಸರು, ಒಮ್ಮೆ ಲೇಖನವೊಂದನ್ನು ಓದುವಾಗ ವೇದ ಕಾಲದಿಂದಲೂ ಇದರ ಐತಿಹ್ಯದ ಕುರಿತು ವಿವರವನ್ನು ಓದಿದೆ, ಗಂಧ ಮತ್ತಿ ತೇಗ ಹೊನ್ನೆ ಮತ್ತು ಬೀಟೆ ಮುಂತಾದ ಶ್ರೇಷ್ಟಮರಗಳಿರುವಾಗ ಬೂರಗದಂತಹ ಸಾಮಾನ್ಯ ಮರವೂ ವೇದ ಪುರಾಣಗಳ ಕಾಲದಿಂದಲೂ ಪಡೆದಿರುವ ಮಹತ್ವ ಬರಗು ಗೊಳಿಸಿತು, ಅದನ್ನು ಕವನದ ಮೂಲಕ ದಾಖಲಿಸ ಬೆಕೆನಿಸಿತು, ಅದಕ್ಕಾಗಿ ಈ ಕವನ ರೂಪ ಗೊಂಡಿತು, ಪ್ರತಿಕ್ರಿಯೆಗೆ ಧನ್ಯವಾದಗಳು

Submitted by ಗಣೇಶ Sun, 05/26/2013 - 23:13

ಪಾಟೀಲರೆ, ಶಾಲ್ಮಲೆಯ ವರ್ಣನೆ ಚೆನ್ನಾಗಿದೆ. ಒಂದೊಂದೇ ಗಿಡ ಮರಗಳನ್ನು (ಕಳೆದ ಬಾರಿ ಎಕ್ಕದ ಗಿಡ) ಕವನವಾಗಿಸುತ್ತಿದ್ದೀರಿ!

Submitted by H A Patil Sat, 06/22/2013 - 19:41

In reply to by ಗಣೇಶ

ಗಣೇಶ ರವರಿಗೆ ವಂದನೆಗಳು

ಈ ಕವನಕ್ಕೆ ತಾವು ಬರೆದ ಮೆಚ್ಚುಗೆಯ ಪ್ರತಿಕ್ರಿಯೆ ಓದಿದೆ, ಯಾಕೋ ಏನೋ ಒಮ್ಮೊಮ್ಮೆ ಆ ಭಾವ ಮೂಡುತ್ತದೆ, ಆ ಭಾವಗಳ ಅಭಿವ್ಯಕ್ತಿ ಕವನದ ರೂಪ ಪಡೆಯುತ್ತವೆ, ಧನ್ಯವಾದಗಳು.

Submitted by lpitnal@gmail.com Mon, 05/27/2013 - 09:15

ಪಾಟೀಲರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಶಾಲ್ಮಲಿ/ಲೆ ಯ ಕುರಿತು ಕವನ ಕಾವ್ಯಶೈಲಿ ಚನ್ನಾಗಿದೆ. ಒಡಮೂಡಿದ ವಿವರಗಳು ಬಹು ವಿಸ್ತೃತ,, ತಮ್ಮ ಕಣ್ಣು ಕಂಡದ್ದು ಕಾವ್ಯವಾಗುತ್ತಿರುವುದು ಖುಷಿಯ ಸಂಗತಿ. ಕನ್ನಡಮ್ಮನ ಗರಿಗಳು ಹೆಚ್ಚು ಹೆಚ್ಚು ನಳನಳಿಸುವಂತೆ ಮಾಡುವ ತಮಗೆ ಮತ್ತೆ ಮತ್ತೆ ಸಲಾಮ್.........

Submitted by H A Patil Sat, 06/22/2013 - 19:45

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು

ಈ ಕವನಕ್ಕೆ ತಾವು ಬರೆದ ಪ್ರಿಕ್ರಿಯೆ ಓದಿದೆ, ತಮ್ಮ ಹೃತ್ಪೂರ್ವಕ ಮೆಚ್ಚುಗೆಗೆ ಮತ್ತು ಪ್ರೋತ್ಸಾಹಕ ಕಾವ್ಯಾತ್ಮಕ ನುಡಿಗಳಿಗೆ ಧನ್ಯವಾದಗಳು

Submitted by H A Patil Sat, 06/22/2013 - 19:47

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು

ಈ ಕವನದ ಕುರಿತು ತಾವು ಬರೆದ ನುಡಿಗಳು ಬಹಳ ಅರ್ಥಪೂರ್ಣ " ಕಾಣುವ ಕಣ್ಣುಗಳಿದ್ದರೆ ಎಲ್ಲವೂ ಸುಂದರ ಸುಮನೋಹರ " ಬಹಳ ಅರ್ಥಗರ್ಭಿತ ನುಡಿಗಳು, ಮೆಚ್ಚುಗೆಗೆ ಧನ್ಯವಾದಗಳು.