SUmUಕತೆ : ಭಾಗ - ೭
ಡಾಕ್ಟರ್ ಜೊತೆ ನಾನು ಸಂಯುಕ್ತಾ ಸುಮಾರು ಹೊತ್ತು ಚರ್ಚಿಸಿದೆವು. ಪ್ರಾಣಕ್ಕೇನೂ ಅಪಾಯವಿಲ್ಲ, You Must Thank Mr. Ramesha, ಅವ್ರು ಪೇಷಂಟ್ ನ ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದರು. ಇನ್ನ ಹತ್ತು ಹದಿನೈದು ನಿಮಿಷ ತಡ ಆಗಿದ್ದರೂ ನಿಮ್ಮ ತಂದೆಯವರ ಬಾಡಿ ತೊಗೊಂಡು ಹೋಗಬೇಕಿತ್ತು ಇಷ್ಟೊತ್ತಿಗೆ. ಕುತ್ತಿಗೆ ಮತ್ತು ಬೆನ್ನಿನ ಮೂಳೆ ಫ್ರಾಕ್ಚರ್ ಆಗಿದೆ, ಕಾಲಿನ ಮೂಳೆ ಮುರಿದಿರೋದರಿಂದ ಕಬ್ಬಿಣದ ರಾಡ್ ಹಾಕಬೇಕಾಗುತ್ತದೆ. ಮೂರರಿಂದ ನಾಕು ತಿಂಗಳು ಬೆಡ್ ರೆಸ್ಟ್ ಮಾಡಬೇಕು.... ..... ... ಡಾಕ್ಟರ್ ಇನ್ನು ಹೇಳುತ್ತಲೇ ಇದ್ದರು. ಸಂಯುಕ್ತಾ ಅಳಲು ಶುರು ಮಾಡಿದ್ದಳು. ಅವಳನ್ನು ಸಮಾಧಾನ ಮಾಡಿ ಆಚೆ ಕೂಡಿಸಿ, ನಾನು ಮತ್ತೆ ಒಳಬಂದು, ಡಾಕ್ಟರ್, ಅಂದಾಜು ಎಷ್ಟು ಖರ್ಚಾಗಬಹುದು ಎಂದು ಕೇಳಿದೆ. ತಮ್ಮ ಕನ್ನಡಕವನ್ನು ಸಡಿಲಿಸಿ ನನ್ನ ಮುಖವನ್ನೊಮ್ಮೆ ನೋಡಿದ ಡಾಕ್ಟರ್, ಚೀಟಿಯಲ್ಲಿ ನಾಕೈದು ಲೈನ್ ಗೀಚಿ, ಚೀಟಿಯನ್ನು ನನ್ನ ಕೈಲಿಟ್ಟು , ಆಫೀಸಿನ ಅಕೌಂಟ್ ಸೆಕ್ಷನ್ ಗೆ ಹೋಗಿ ವಿಚಾರಿಸಿ ಎಂದರು. ಸಂಯುಕ್ತಾಳಿಗೆ ಅಲ್ಲೇ ಕೂತಿರಲು ಹೇಳಿ ಆಫೀಸಿನಲ್ಲಿ ವಿಚಾರಿಸಿದೆ. ಆಫೀಸಿನವರು ಚೀಟಿಯ ಹಿಂದುಗಡೆ ಏನೇನೋ ಗೀಚಿ ಮಾತ್ರೆ ಔಷಧಿ ಹೊರತುಪಡಿಸಿ ಸುಮಾರು ಹನ್ನೊಂದು ಲಕ್ಷವಾಗಬಹುದು ಎಂದು ಹೇಳಿ, ಯಾವ ಕಂಪನಿ ಇನ್ಸೂರೆನ್ಸ್ ಇದೆ ಎಂದು ಕೇಳಿದರು. ನಾನು ಯಾವುದು ಇಲ್ಲ ಸಾರ್, ಅಷ್ಟೊಂದು ದುಡ್ಡು ನಮಗೆ ಕೂಡಿಸುವುದು ಕಷ್ಟ ಸಾರ್ ಎಂದೆ. ಅವನು ಚೀಟಿ ಹಿಂಪಡೆದು ಏನೋ ಲೆಕ್ಕಾಚಾರ ಮಾಡಿ ಏಳರಿಂದ ಎಂಟು ಲಕ್ಷಕ್ಕೆ ಕಡಿಮೆ ಆಗೋದೇ ಇಲ್ಲ ಸಾರ್ ಎಂದು ಹೇಳಿ ಚೀಟಿ ವಾಪಸ್ಸು ಕೊಟ್ಟು ಅತ್ತ ಕಡೆ ತಿರುಗಿ ನನ್ನ ಯಾವುದೇ ಪ್ರೆಶ್ನೆಗೂ ಇನ್ನು ಉತ್ತರ ಕೊಡಲು ಸಿದ್ದರಿಲ್ಲ ತಾವು ಬ್ಯುಸಿ ಎಂಬಂತೆ ಕಂಪ್ಯೂಟರ್ ಸ್ಕ್ರೀನ್ ದಿಟ್ಟಿಸುತ್ತಾ ಕೂತರು.
ದುಡ್ಡು ಹೇಗೋ ಹೊಂದಿಸಿದೆವು. ಆಪರೇಶನ್ ಗಳು ಆದವು, ವೈದ್ಯರಿಗೆ ಲಕ್ಷಗಟ್ಟಲೆ ಫೀಸ್ ತುಂಬಿದ್ದು ಆಯಿತು. ನಾಕು ತಿಂಗಳು ಬೆಡ್ ರೆಸ್ಟು ಕಳೆಯಿತು. ಅಂಕಲ್ ಕೂಡಿಟ್ಟಿದ್ದ ಹಣವೆಲ್ಲ ಖಾಲಿಯಾಗಿತ್ತು. ಕೆಲಸವೂ ಹೋಗಿತ್ತು. ಗಾಯಾಳುಗಳಿಗೆಂದು ಸರ್ಕಾರ ಕೊಟ್ಟಿದ್ದು ಕೇವಲ ಐವತ್ತು ಸಾವಿರ, ಅವರ ಚಿಕಿತ್ಸೆಗೆ ಖರ್ಚಾದದ್ದು ಬರೋಬ್ಬರಿ ಒಂಬತ್ತು ಕಾಲು ಲಕ್ಷ, ಮಗಳ ಮದುವೆಗೆಂದು ಕೂಡಿಟ್ಟಿದ್ದ ಐದು ಲಕ್ಷ, ಆಪದ್ಧನ ಎಂದು ಅತ್ತೆ ಬಚ್ಚಿಟ್ಟಿದ್ದ ಒಂದು ಲಕ್ಷ, ನನ್ನ ಹತ್ತಿರ ಸಾಲ ಎಂದು ಪಡೆದ ಮೂರು ಲಕ್ಷ. ಅಂಕಲ್ ಈಗ ಮನೆಪೂರ್ತಿ ಓಡಾಡಿಕೊಂಡಿದ್ದಾರೆ ಕೆಲಸವಿಲ್ಲದೇ. ಮಗಳ ಮದುವೆ ಮಾಡಬೇಕು ಆದರೆ ಹಣವಿಲ್ಲ, ಮಗಳ ಸಂಪಾದನೆಯಲ್ಲೇ ಜೀವನ, ಹಾಗು ಬೇಡವೆಂದರೂ ನನ್ನ ಸಾಲ ಮರುಪಾವತಿ. ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲದ ಕಾರಣ ಮುಂಚೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯವರು ಈಗ ಕೆಲಸ ಕೊಡುತ್ತಿಲ್ಲ.
ನಾನು ಇಲ್ಲಿ ಹೇಳುತ್ತಿರುವುದು ಒಬ್ಬರ ಕಥೆಯಲ್ಲ. ಭಯೋದ್ಪಾದಕರ ಬಾಂಬ್ ದಾಳಿ, ಲಾಠಿ ಚಾರ್ಜ್, ಮಾವೋವಾದಿಗಳ ದುಷ್ಕೃತ್ಯ ಇಂಥಾ ಇನ್ನು ಹಲವು ದುರ್ಘಟನೆಯಲ್ಲಿ ಸತ್ತ ಅಥವಾ ಗಾಯಗೊಂಡ ವ್ಯಕ್ತಿಗೆ ನಾವು ಏನು ಸಹಾಯ ಮಾಡಬಹುದು? ಸರ್ಕಾರ ಸತ್ತವರಿಗೆ ಒಂದು ಲಕ್ಷ, ಗಾಯಗೊಂಡವರಿಗೆ ಐವತ್ತು ಸಾವಿರ ಪರಿಹಾರ ಘೋಷಿಸಿ ಕೈ ತೊಳೆದುಕೊಂಡು ಬಿಡುತ್ತದೆ. ಪರಿಹಾರದ ಹಣ ಪಡೆಯಲೂ ತಿಂಗಳುಗಟ್ಟಲೆ ಅಲೆಯಬೇಕು ಮತ್ತು ಲಂಚ ಕೊಡಬೇಕು. ಹೋದ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಿಜ, ಆದರೆ ಸತ್ತು ಹೋದರೆ ಒಂತರ ನೆಮ್ಮದಿ, ಗಾಯಗೊಂಡು ಬದುಕಿ, ಸತ್ತ ಜೀವನ ಮಾಡುವವರನ್ನು ನೋಡಿದಾಗ ಎಂಥವರಿಗೆ ಆದರೂ ಅಯ್ಯೋ ಅನಿಸುತ್ತದೆ. ಸತ್ತ/ಗಾಯಗೊಂಡ ವ್ಯಕ್ತಿ ಒಬ್ಬನೇ ಮಗನೋ/ಮಗಳೋ ಆಗಿದ್ದರೆ, ಅಥವಾ ಅವನೊಬ್ಬನೇ ಮನೆಯಲ್ಲಿ ದುಡಿಯುತ್ತಿದ್ದರೆ, ಆ ಮನೆಯ ಗತಿ ಹೇಗಾಗುತ್ತೆ ಅಂತ ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಯಾವುದೋ ಸಂಸ್ಥೆ, ಮತ್ಯಾವುದೋ NGO ಮತ್ತಿನ್ಯಾರೋ ಅಂಥವರಿಗೆ ಸಹಾಯ ಮಾಡುತ್ತಾರೆ ನಿಜ. ಆದರೆ ಅವರ ಸಹಾಯ ಎಲ್ಲರಿಗೂ ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಸರಿಯಾದ ಸಮಯಕ್ಕೆ ದೊರಕುವುದಿಲ್ಲ. ನಿಮ್ಮ ಸುತ್ತ ಮುತ್ತ ಅಂಥವರು ಯಾರಾದರೂ ಇದ್ದರೆ ದಯಮಾಡಿ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ನಿಮ್ಮಲ್ಲಿ ಪ್ರಾರ್ಥಿಸುವೆ.
************************
ಕೆಲಸದ ಒತ್ತಡ ಹಾಗು ನನ್ನ ಜೀವನದ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಮಯ - ಇವೆರಡೂ ಸೇರಿರುವುದರಿಂದ ಆ ದಿನ ವಿಮಲ ಕರೆ ಮಾಡಿದ್ದರ ಕಥೆ ನಿಮಗೆ ತಿಳಿಸಲು ಆಗುತ್ತಿಲ್ಲ ಮತ್ತು SUmUಕತೆ ಯನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಸಮಯ ಸಿಕ್ಕಾಗ ವಿಮಲ ಕರೆ ಮಾಡಿದ್ದು ಮತ್ತು ನನ್ನ ಸಂಯುಕ್ತಾಳ ಮುಂದುವರೆದ ಕಥೆ - ಇವೆರಡನ್ನೂ ಬೇರೆ ಕಥೆಯೊಂದಿಗೆ ಹೇಳುವೆ.
ಇಂತಿ ನಿಮ್ಮ
SUmUಕತೆ: ಭಾಗ - ೬ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%AC/28-5-2013/41004
SUmUಕತೆ: ಭಾಗ - ೫ ಲಿಂಕ್ :- http://sampada.net/b...
SUmUಕತೆ: ಭಾಗ - ೪ ಲಿಂಕ್ :- http://sampada.net/b...
SUmUಕತೆ: ಭಾಗ - ೩ ಲಿಂಕ್ :- http://sampada.net/b...
SUmUಕತೆ: ಭಾಗ - ೨ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%...
SUmUಕತೆ: ಭಾಗ - ೧ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%...