ಈ ಅಪ್ಪಗಳು...!

ಈ ಅಪ್ಪಗಳು...!

ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡುವ ಚಿತ್ರಣಗಳಿಗೇನೂ ಕಡಿಮೆಯಿಲ್ಲ. ಇದೆಲ್ಲಕ್ಕು ಮೀರಿ, ಸಾಮಾನ್ಯ ಅಪ್ಪನೊಬ್ಬನ ತುಡಿತ, ಹಂಬಲ, ಒದ್ದಾಟ, ಹೋರಾಟದತ್ತ ನೋಡುವ ಹಂಬಲ ಈ ಪುಟ್ಟ ಕವನದ್ದು - ಸಾಧಾರಣ ಕಾಣುವ ಎಲ್ಲಾ ಅಪ್ಪಗಳ ಹಾಗೆ ಕಡಿಮೆ ಮಾತಿನದೂ ಹೌದು :-) ಅಪ್ಪಗಳನ್ನು ಹಚ್ಚಿಕೊಂಡ ಪ್ರತಿಯೊಬ್ಬರಲ್ಲು ಅವರದೆ ಆದ ಕಥೆಗಳಿರಬಹುದಾದರೂ, ಸಾಂಕೇತಿಕವಾಗಿ ಇದು ಅವರೆಲ್ಲರ ಭಾವನೆಗಳ ಪ್ರತಿನಿಧಿ ಎಂಬ ಸಮಷ್ಟಿಭಾವದೊಂದಿಗೆ ಎಲ್ಲ ಅಪ್ಪಂದಿರಿಗೂ ಈ ಕವನ ಅರ್ಪಿತ. ಹಾಗೆಯೆ ಅಂತಹ ಅಪ್ಪಂದಿರನ್ನು ನೆನೆದು ಕೃತಜ್ಞತೆ ಹೇಳುವ ಪುಟ್ಟ ಪ್ರೇರೇಪಣೆ ಸಹ - ನಾಗೇಶ ಮೈಸೂರು, ಸಿಂಗಪೂರದಿಂದ


ಈ ಅಪ್ಪಗಳು
---------------------------------

ಅಪ್ಪಗಳೇನಿಲ್ಲಾ ಕಮ್ಮಿ ಹೆಮ್ಮರ
ನೀರೂಡಲಿ ಬಿಡಲಿ ಬೆಳೆದವರ
ಆಲದ ಹಾಗೆ ವಿಶಾಲ ಚಾಮರ
ಬಾಗೆ ಗೊಬ್ಬಳಿ ಮರ ನೆರಳಾಗಿರ!

ಪೊದೆಯ ಮೀಸೆಯಿರಲಿ ಬಿಡಲಿ 
ನರೆತ ಕೂದಲೆಲ್ಲ ಕಪ್ಪ ಹಚ್ಚಿರಲಿ
ಸ್ಕೂಟರು ಬಸ್ಸು ಸೈಕಲ್ಲೆ ತುಳಿದ
ಮಾತಾಡದೆಲೆ ಸುತ್ತಿ ಬಸವಳಿದ!

ಮಾತೆ ಮಿತಾ ಗತ್ತು ದರ್ಪ ಅವ್ಯಕ್ತ
ಡಬ್ಬೀ ಮನೆಯೂಟದಲೆ ಸಂತೃಪ್ತ 
ಹನಿ ಹನಿಗುಳಿಸುತೆ ಕಟ್ಟೆ ಸಂಕಲ್ಪ
ಮಕ್ಕಳೋದಿ ಬೆಳೆಸಲೆಷ್ಟು ವಿಕಲ್ಪ!

ಸೈಟು ಮನೆಯೊಂದಾ ಕಟ್ಟಿ ನಿವೃತ್ತಿ
ಮಗಳ ಮದುವೆ ಕಾಡೆ ಮಹರಾಯ್ತಿ
ಮಾಡಬೇಕೆ ಬಿಡದೆ ನೀತೀ ನಿಜಾಯ್ತಿ
ಮಾಡೆ ನೆಮ್ಮದಿ ಆಮೇಲ್ಹಿಡಿ ಪ್ರವೃತ್ತಿ!

ಅಂತಃಕರಣ ವಾತ್ಸಲ್ಯ ಅಂತರ ಗಂಗೆ
ಬಾಯ್ಬಿಡದೆ ಹಿಡಿದಾ ತ್ಯಾಗದ ಹಂಗೆ
ಸಂಭಾಳಿಸಿ ನೆಂಟ ಬಳಗದೆಲ್ಲ ಟೊಂಗೆ
ನೇಪಥ್ಯ ನೋವ್ಹಿರುತೆ ತುಟಿಯಾ ನಗೆ!
 
- ನಾಗೇಶ ಮೈಸೂರು, ಸಿಂಗಪೂರದಿಂದ
 

Comments

Submitted by nageshamysore Mon, 06/17/2013 - 19:26

In reply to by Vinutha B K

ಸಲಾಂ ವಿನುತಾ ಜಿ, ಈ ವಿಭಿನ್ನ ರೀತಿಯ ಅಪ್ಪನೂ ನಿಮಗಿಷ್ಟವಾಯ್ತೆಂದುಕೊಳ್ಳುತ್ತೇನೆ - ನಿಮಗೆ ಅಪ್ಪನ ಮೇಲಿರುವ ಪ್ರೀತಿ ತುಂಬ ಹೆಚ್ಚೆಂದು ನನ್ನ ಊಹೆ - ನಾನಂದುಕೊಂಡ ಹಾಗೆ ನಿಮ್ಮದು ಒಂದು ಕವನ ಅಪ್ಪನ ಕುರಿತದ್ದು , ಇದೀಗ ತಾನೆ ಓದಿದೆ. ಅಂದಹಾಗೆ ನಿಮಗೆ ಸಂಗೀತ ಹಾಡು ಗೊತ್ತಿದ್ದರೆ ಒಂದು ರಾಗ ಹಾಕಿ ಹಾಡಿಬಿಡಿ - ಸೀಡಿ ಮಾಡಿಸಿಬಿಡಬಹುದು :-) - ನಾಗೇಶ ಮೈಸೂರು, ಸಿಂಗಪುರದಿಂದ
Submitted by Vinutha B K Mon, 06/17/2013 - 19:35

In reply to by nageshamysore

ಅಪ್ಪನ ಬಗ್ಗೆ ನಿಮ್ಮ ಊಹೆ ನೂರಕ್ಕೆ ನೂರು ನಿಜ ಹೌದು . ಸಂಗೀತದ ಮೇಲೆ ಒಲವಿದೆ, ಟ್ಯೂನ್ ಹಾಕಲು ಪ್ರಯತ್ನಿಸುತ್ತೇನೆ .ಧನ್ಯವಾದಗಳು
Submitted by Vinutha B K Mon, 06/17/2013 - 19:49

In reply to by nageshamysore

ಒಂದು ಹೆಮ್ಮೆಯೆಂದರೆ ನನ್ನ ಮನೆಯಲ್ಲಿ ಅಮ್ಮನ ವೈಭವೀಕರಣವಿಲ್ಲ ,ಹಾಗಾಗಿ ಮಸುಕಲ್ಲಿಯು ಬೆಳಗುವ ತಾರೆಯನ್ನಾಗಿ ಮಾಡಿದ ಹೆಸರು ಅಮ್ಮನಿಗಿದೆ .. http://sampada.net/…
Submitted by nageshamysore Mon, 06/17/2013 - 20:20

In reply to by Vinutha B K

ನಿಮ್ಮ ಈ ಲೇಖನ ನಾನು ಮುಂಚೆ ನೋಡಿದ್ದೇನೆ. ಒನ್ ಇಂಡಿಯಾದಲ್ಲಿ ಪ್ರಕಟಿಸಿದ್ದ ನನ್ನ 'ಈ ಅಮ್ಮಗಳು' ಕವನ ನೀವು ನೋಡಿದ್ದಿರೊ ಇಲ್ಲವೊ ಗೊತ್ತಿಲ್ಲ. ನಿಮ್ಮಮ್ಮನಿಗೆ ಓದಿ ಹೇಳಿಬಿಡಿ. ಅಪ್ಪ ಅಮ್ಮ ಇಬ್ಬರಿಗೂ ಒಟ್ಟಿಗೆ ಹಾಡಿದಂತಾಗುತ್ತದೆ :-) - ನಾಗೇಶ ಮೈಸೂರು ಈ ಅಮ್ಮಗಳು --------------------- ತನ್ನ ತಪ್ಪಿಗೆ ತನ್ನನೆ ಬೈದಾಡುತೊಂದೇ ಸಮನೆ ಹಾಳು ಮರೆವಿಗೆ ಶಾಪ ಧಮಕಿ ಹಾಕಿ ಸುಮ್ಮನೆ ದೇವಕೋಟಿ ರಾಕ್ಷಸ ವಾಚಾಮಗೋಚರ ದಮನೆ ಬೇರಿನ್ನಾರಿಗೆ ಸಾಧ್ಯ ಈ ಧೈರ್ಯಕೆ ನಮ್ಮಮ್ಮನೆ! ಮುಲಾಜಿಲ್ಲದೆ ಮುಖದ ಮೇಲ್ಹೊಡೆದಂತೆ ಮಾತೆ ಎದ್ದು ಬಂದಂತೆ ನೇರ ರಾಮಾಯಣದಿಂದ ಸೀತೆ ಹಗಲಿರುಳು ಕಟ್ಟಿ ನೊಗ ಮೂಗೆತ್ತಿನ ಹಾಗೆ ಜಗ ಗಂಡ ಮನೆ ಮಕ್ಕಳ ಸುತ್ತೆ ಬುಗುರಿಯಾಡಿ ಜಾಗ! ಕತ್ತಲಡುಗೆ ಮನೆಯ ಮಂಕು ದೀಪವೆ ಅರಮನೆ ಹಚ್ಚಿದೊಲೆ ಬೆಂಕಿ ಬೆಳಕಲ್ಲೆ ಜಗಮಗಿಸಿತೆ ಕರುಣೆ ದಿನರಾತ್ರಿ ಹಗಲಿರುಳು ಸುಟ್ಟು ಬೇಯಿಸುತದನೆ ಮಾಡಿದ್ದೆ ಮಾಡಿ ಬೇಸರವಿರದೆ ರುಚಿಯಾಗಮನೆ! ಸುತ್ತಾಡಿದ ಪ್ರಪಂಚ ನೆರೆಹೊರೆಯಲಾಡಿ ಉವಾಚ ವಠಾರ ಬೀದಿ ಹೆಂಗಳೆಯರಾ ಒಡನಾಟವೆ ಕವಚ ಅಗ್ರಹಾರದಾ ಸುತ್ತೆ ಮಿಕ್ಕರೆ ದೇವಸ್ಥಾನಕೆ ಹೊತ್ತೆ ಸ್ನಾನ ಪೂಜೆ ಪುನಸ್ಕಾರ ತುಳಸಿ ಕಟ್ಟೆಗಳೆ ಸಂಪತ್ತೆ! ಮದುವೆ ಮುಂಜಿ ನಾಮಕರಣ ರೇಷ್ಮೆ ಚಿನ್ನಾಭರಣ ಕಾಲಾಯಾಪನೆಗಷ್ಟೂ ಅವರಿವರಾ ರಾಮಾಯಣ ಕೆಂಚಿ ಸಿದ್ದಿ ಕರಿಯಮ್ಮನ ಹರಟೇ ಲೋಕಾಭಿರಾಮ ನೀರಿಟ್ಟೊಲೆ ಮರೆಸಿಬಿಟ್ಟ ನೆನಪ ಬೈದೊಡುವಳಮ್ಮ!
Submitted by nageshamysore Tue, 06/18/2013 - 14:40

In reply to by Vinutha B K

ಅಲ್ಲಿಗೆ ನಿಮಗೆ ಟ್ಯೂನ್ ಮಾಡಲು ಎರಡು ಹಾಡು ಸಿಕ್ಕಿದಂತಾಯ್ತು :-) (ಬೈ ವನ್ ಗೆಟ್ ವನ್ ಫ್ರೀ - ಅನ್ನುವ ಹಾಗೆ) ನಿಮ್ಮೆಲ್ಲಾ ಪ್ರತಿಕ್ರಿಯೆಗೆ ಮತ್ತೆ ಧನ್ಯವಾದಗಳು! - ನಾಗೇಶ ಮೈಸೂರು
Submitted by ರಾಮಕುಮಾರ್ Mon, 06/17/2013 - 14:07

ಕವನ ಚೆನ್ನಾಗಿದೆ... ನಾನು ಓದಿದರಲ್ಲಿ ಅಪ್ಪನ ಸೊಗಸಾದ ಚಿತ್ರಣ ಬಂದಿರುವುದು ಶ್ರೀನಿವಾಸ ವೈದ್ಯರ "ಶ್ರದ್ಧಾ" ಕತೆಯಲ್ಲಿ... ಆ ಕತೆ ಇಲ್ಲಿದೆ http://kendasampige…
Submitted by nageshamysore Mon, 06/17/2013 - 19:04

In reply to by ರಾಮಕುಮಾರ್

ರಾಮಕುಮಾರರೆ ಧನ್ಯವಾದಗಳು. ಮತ್ತೊಂದು ಮನೋಜ್ಞ ಕಥೆ ಓದಿಯೆ 'ತಲೆ ಬೋಳಿಸಿಕೊಂಡ ಅನುಭವ' :-) ನಿಜಕ್ಕು ಅಪ್ಪಂದಿರ ಕುರಿತ ಅಪರೂಪದ ಕಥೆಗಳಲ್ಲಿದೊಂದು. ಹಾಗೆಯೆ ಸಂಪದದಲ್ಲಿ ಅಪ್ಪನ ಕುರಿತು ಓದಿದ ಮತ್ತೊಂದು ಕಥೆ - ಶ್ರೀನಾಥ ಭಲ್ಲೆಯವರ ' ಅಂತ್ಯಕ್ರಿಯೆ' ನೆನಪಾಯ್ತು (ಲಿಂಕು ಇಲ್ಲಿದೆ ನೋಡಿ). http://sampada.net/…