೬೪. ಶ್ರೀ ಲಲಿತಾ ಸಹಸ್ರನಾಮ ೨೧೯ರಿಂದ ೨೨೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೧೯ - ೨೨೮
Mahā-bhogā महा-भोगा (219)
೨೧೯. ಮಹಾ-ಭೋಗಾ
ದೇವಿಯು ಎಣೆಯಿಲ್ಲದ ಸಂತೋಷದ ಮೂರ್ತ ರೂಪವಾಗಿದ್ದಾಳೆ. ಈ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವುದೆಲ್ಲಾ ಆಕೆಗೆ ಸಂಪತ್ತಾಗಿದೆ ಏಕೆಂದರೆ ದೇವಿಯು ಅವೆಲ್ಲವುಗಳ ಮೇಲೆ ಅಧಿಕಾರವನ್ನು ಹೊಂದಿದ್ದಾಳೆ.
Mahaiśvaryā महैश्वर्या (220)
೨೨೦. ಮಹೈಶ್ವರ್ಯಾ
ಬ್ರಹ್ಮಾಂಡವು ಬ್ರಹ್ಮದಿಂದ ಅನಾವರಣಗೊಂಡು ಅದರೊಳಗೆ ಅವನು ಪಸರಿಸಿದ್ದಾನೆ ಅಥವಾ ಅಂತರ್ಗತನಾಗಿದ್ದಾನೆ, ಬ್ರಹ್ಮದ ಈ ಗುಣವನ್ನು ದೇವಿಯು ಹೊಂದಿದ್ದಾಳೆ. ಇದನ್ನೇ ವಿಭೂತಿ ಅಥವಾ ಬ್ರಹ್ಮದ ಸಹಜಾತೀತ ವೈಭವವೆಂದು ಕರೆಯುತ್ತಾರೆ. ದೇವಿಯು ಶಿವನ ಸ್ವಾತಂತ್ರ್ಯ ಶಕ್ತಿಯಾಗಿದ್ದು ಆಕೆಯು ಈ ವಿಶ್ವವನ್ನು ತನ್ನ ಶಕ್ತಿಯಿಂದ ಮಾರ್ಪಾಟಿಗೊಳಪಡಿಸುತ್ತಾಳೆ. (ದೇವಿಯು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದವಳಾಗಿದ್ದು ಆಕೆಗೆ ಸ್ವತಂತ್ರವಾಗಿ ವ್ಯವಹರಿಸುವ ಶಕ್ತಿಯಿದೆ ಏಕೆಂದರೆ ಆಕೆಯು ಬ್ರಹ್ಮದ ವಿಮರ್ಶಾ ಶಕ್ತಿಯಾಗಿದ್ದಾಳೆ).
ಕೃಷ್ಣನು ಭಗವದ್ಗೀತೆಯಲ್ಲಿ (೧೦. ೮,೯) ಹೀಗೆ ಹೇಳುತ್ತಾನೆ, “ನನ್ನ ವ್ಯಾಪ್ತತೆಗೆ ಪರಿಮಿತಿಯಿಲ್ಲ, ನಾನೇ ಈ ಬ್ರಹ್ಮಾಂಡದ ಆತ್ಮವಾಗಿದ್ದೇನೆ ಮತ್ತು ಎಲ್ಲಾ ಜೀವಿಗಳ ಹೃದಯದಲ್ಲಿ ಆಸೀನನಾಗಿದ್ದೇನೆ; ಆದ್ದರಿಂದ ನಾನೇ ಎಲ್ಲಾ ಜೀವಿಗಳ ಆರಂಭ, ಮಧ್ಯ ಮತ್ತು ಅಂತ್ಯಗಳಾಗಿದ್ದೇನೆ".
ಐಶ್ವರ್ಯವೆಂದರೆ ಸಂಪತ್ತು, ಇಲ್ಲಿ ಸಂಪತ್ತೆಂದರೆ ದೇವಿಯು ನಮಗೆ ಕೊಡಮಾಡುವ ಕೃಪೆಯಾಗಿದೆ.
Mahā-vīryā महा-वीर्या (221)
೨೨೧. ಮಹಾ-ವೀರ್ಯಾ
ವೀರ್ಯ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿವೆ ಅದರಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವುವೆಂದರೆ ಧೈರ್ಯ, ಶಕ್ತಿ, ತೇಜಸ್ಸು, ಬಲ, ಘನತೆ, ಮೊದಲಾದವು. ದೇವಿಯು ಈ ಎಲ್ಲಾ ಗುಣಗಳ ನಿಧಿಯಾಗಿದ್ದು ಆಕೆಯು ಈ ಗುಣಗಳನ್ನು ತನ್ನ ಭಕ್ತರಿಗೆ ಪ್ರಸಾದಿಸುತ್ತಾಳೆ; ಅವರವರ ಭಕ್ತಿಗೆ ಅನುಸಾರವಾಗಿ.
Mahā-balā महा-बला (222)
೨೨೨.ಮಹಾ-ಬಲಾ
ಬಲವೆಂದರೆ ಸಾಮರ್ಥ್ಯ. ದೇವಿಯು ಬ್ರಹ್ಮದ ಒಂದು ಗುಣವಾದ ಪ್ರಬಲವಾಗಿದ್ದಾಳೆ. ಆದರೆ ೨೨೦ನೇ ನಾಮದಲ್ಲಿ ನೋಡಿದಂತೆ ಕೇವಲ ಆಕೆಯ ಸ್ಮರಣೆ ಮಾತ್ರದಿಂದಲೇ ಸುಖ, ಸಂಪದ, ಧೈರ್ಯ ಮೊದಲಾದವುಗಳನ್ನು ಆಕೆಯು ಕರುಣಿಸುತ್ತಾಳೆ. ವಾಕ್ ದೇವಿಯರು ಈ ನಾಮಗಳ ಮೂಲಕ ಪರಬ್ರಹ್ಮದ ಲಕ್ಷಣಗಳನ್ನು ವಿವರಿಸುತ್ತಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕು. ಬ್ರಹ್ಮವನ್ನು ಎರಡು ವಿಧವಾಗಿ ವಿವರಿಸುತ್ತಾರೆ; ಮೊದಲನೆಯದು ನಕಾರಾತ್ಮಕವಾಗಿ (ಋಣಾತ್ಮಕವಾಗಿ) ಅಂದರೆ ಬ್ರಹ್ಮವು ಇದಲ್ಲ ಅಥವಾ ಬ್ರಹ್ಮವು ಅದಲ್ಲ ಎಂದು. ಎರಡನೆಯದು ಸಕಾರಾತ್ಮಕವಾಗಿ (ಆದೇಶಾತ್ಮಕವಾಗಿ) ಇದುವೇ ಬ್ರಹ್ಮವೆಂದು ಹೇಳುತ್ತಾರೆ, ಉದಾಹರಣೆಗೆ ಧೈರ್ಯ, ಪವಿತ್ರತೆ, ಬುದ್ಧಿವಂತಿಕೆ, ಆನಂದ ಮೊದಲಾದವು. ಆದರೆ ವಾಸ್ತವವಾಗಿ ಬ್ರಹ್ಮವನ್ನು ಶೂನ್ಯತ್ವದಿಂದ ಅರಿಯಬೇಕು.
Mahā-buddhiḥ महा-बुद्धिः (223)
೨೨೩. ಮಹಾ-ಬುದ್ಧಿಃ
ದೇವಿಯು ಬುದ್ಧಿಯ ವ್ಯಕ್ತರೂಪವಾಗಿದ್ದಾಳೆ ಮತ್ತು ಬುದ್ದಿವಂತಿಕೆಯು ಬ್ರಹ್ಮದ ಇನ್ನೊಂದು ಲಕ್ಷಣವಾಗಿದೆ. ಬುದ್ಧಿವಂತಿಕೆಯನ್ನು, ’ಯಾವುದನ್ನು ಅರಿಯುವುದರಿಂದ ಉಳಿದೆಲ್ಲವನ್ನೂ ವಿವರಿಸಬಹುದೋ’ ಅದೇ ಎಂದು ವ್ಯಾಖ್ಯಾನಿಸಬಹುದು. ಛಾಂದೋಗ್ಯ ಉಪನಿಷತ್ತಿನಲ್ಲಿ (೬.೧.೩) ಹೀಗೆ ಹೇಳಲ್ಪಟ್ಟಿದೆ, "ಯಾವುದರ ಬೋಧನೆಯಿಂದ ಯಾವಾಗಲೂ ಕೇಳದೇ ಇರುವುದು ಕೇಳಲ್ಪಡುತ್ತದೆಯೋ, ಯಾವಾಗಲೂ ಆಲೋಚಿಸದೇ ಇದ್ದದ್ದು ಆಲೋಚನೆಯಾಗುತ್ತದೆಯೋ, ಎಂದೂ ಅರಿಯದೇ ಇದ್ದದ್ದು ಅರಿವಿಗೆ ಬರುತ್ತದೆಯೋ". ಈ ವಿಧವಾದ ಬುದ್ಧಿವಂತಿಕೆಯನ್ನು ದೇವಿ ಮಾತ್ರಳೇ ಕರುಣಿಸಬಲ್ಲಳು ಆದ್ದರಿಂದ ಆಕೆಯನ್ನು ಮಹಾ-ಬುದ್ಧಿಃ ಎಂದು ಸಂಬೋಧಿಸಲಾಗಿದೆ.
ಬುದ್ಧಿಯ ಕುರಿತಾಗಿ ಇನ್ನಷ್ಟು ವಿವರಣೆಗಳು:
ಬುದ್ಧಿಯು ಮನಸ್ಸಿನ ಒಂದು ಉತ್ಪನ್ನವಾಗಿದೆ. ಸೃಷ್ಟಿ ಕ್ರಿಯೆಯಲ್ಲಿ ಮೊದಲನೆಯದಾಗಿ ಅಹಂಕಾರವು ಉಗಮವಾಗುತ್ತದೆ. ಅಂತಃಕರಣವು ಒಳಗಡೆಯಿಂದ ಕಾರ್ಯ ನಿರ್ವಹಿಸಿದರೆ ಅದಕ್ಕೆ ಪ್ರತಿಯಾಗಿ ಇತರೇ ತತ್ವಗಳು ಬಾಹ್ಯವಾಗಿ ಪಂಚೇಂದ್ರಿಯಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಅಂತಃಕರಣವು ಮನಸ್ಸು ಮತ್ತದರ ರೂಪಾಂತರಗಳಿಂದ ಕೂಡಿದೆ. ಅವೆಂದರೆ ಚಿತ್ತ (ವೈಯ್ಯಕ್ತಿಕ ಪ್ರಜ್ಞೆ), ಬುದ್ಧಿ (ಜಾಣತನ), ಮನಸ್ (ಮನಸ್ಸು) ಮತ್ತು ಅಹಂಕಾರ (ನಾನು ಎನ್ನುವ ಭಾವ), ಚಿತ್ತವು ಶುದ್ಧ ಚೈತನ್ಯದ ಕಳಂಕಿತ ಪ್ರತಿಬಿಂಬವಾಗಿದೆ. ಉಳಿದ ಮೂರು ಬುದ್ಧಿ, ಮನಸ್ಸು ಮತ್ತು ಅಹಂಕಾರಗಳು ಅತ್ಯಂತ ಸೂಕ್ಷ್ಮವಾಗಿವೆ. ಬುದ್ಧಿಯನ್ನು ಮಹತ್ ಎಂದೂ ಕರೆಯಲಾಗಿದೆ. ಮಹತ್ ಎಂದರೆ ಉನ್ನತವಾದದ್ದು, ಮಹತ್ತರವಾದದ್ದು ಎನ್ನುವುದು ಶಬ್ದಶಃ ಅರ್ಥ ಮತ್ತು ಇದು ಮನಸ್ಸು ಮತ್ತು ಅಹಂಕಾರದ ಮೂಲವಾಗಿದೆ. ಮತ್ತು ಈ ಮಹತ್ತಿನಿಂದಾಗಿ ಈ ತೋರಿಕೆಯ ವಿಶ್ವವು ಉಂಟಾಗಿದೆ. ಮಹತ್ ಈ ಭೌತಿಕ ಜಗತ್ತನ್ನು ಅರಿಯುವುದಕ್ಕೆ ಸಹಾಯ ಮಾಡುವುದಲ್ಲದೇ ಅದು ಬ್ರಹ್ಮದೊಂದಿಗೆ ಸಂವಹನವೇರ್ಪಡಿಸಿಕೊಳ್ಳಲಿಕ್ಕೂ ಸಹಾಯಕವಾಗಿದೆ. ಬುದ್ಧಿಯಿಲ್ಲದೇ ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲಾಗದು. ಶ್ವೇತಾಶ್ವತರ ಉಪನಿಷತ್ತು (೬.೫) ಹೀಗೆ ಹೇಳುತ್ತದೆ, " ಮತ್ತೆ ಮತ್ತೆ ಹುಟ್ಟಿ ಬರುವುದಕ್ಕೆ ಅಜ್ಞಾನವು ಮೂಲ ಕಾರಣವಾಗಿದೆ." ಅಜ್ಞಾನವನ್ನು ಬುದ್ಧಿಯಿಂದ ಮಾತ್ರವೇ ಜಯಿಸಬಹುದು.
Mahā-siddhiḥ महा-सिद्धिः (224)
೨೨೪. ಮಹಾ-ಸಿದ್ಧಿಃ
ದೇವಿಯು ಸಾಧನೆಯ ಅತ್ಯುನ್ನತ ಗುರಿಯಾಗಿದ್ದಾಳೆ. ಸಿದ್ಧಿ ಎಂದರೆ ತಪಸ್ಸಿನ ಮೂಲಕ ಗಳಿಸಿದ ಶ್ರೇಷ್ಠವಾದ ಅಥವಾ ಅತ್ಯುನ್ನತವಾದ ಸೌಭಾಗ್ಯ, ಪರಮಾನಂದ, ಪರಮಶಾಂತಿ, ಸಂಪೂರ್ಣ ತೃಪ್ತಿ ಅಥವಾ ಅಂತಿಮ ಮುಕ್ತಿ. ಅತಿಮಾನುಷ ಶಕ್ತಿಗಳಾದ ಎಂಟು ಪ್ರಮುಖವಾದ ಸಿದ್ಧಿಗಳಿವೆ ಅವನ್ನೇ ಅಷ್ಟಮ ಸಿದ್ಧಿ ಅಥವಾ ಅಷ್ಟ ಸಿದ್ಧಿಗಳೆಂದು ಕರೆಯುತ್ತಾರೆ. ಈ ಎಂಟು ಸಿದ್ಧಿಗಳೆಂದರೆ ಅಣಿಮಾ, ಲಘಿಮಾ, ಮಹಿಮಾ, ಪ್ರಾಪ್ತಿಃ, ಪ್ರಾಕಾಮ್ಯಂ, ಈಶಿತ್ವಮ್, ವಶಿತ್ವಮ್, ಕಾಮವಶ್ಯತ.
ಕೃಷ್ಣನು ತನ್ನ ಉದ್ಧವ ಗೀತೆಯಲ್ಲಿ (೧೦.೩) ಹೇಳುತ್ತಾನೆ, “ಯಾರು ಮನಸ್ಸನ್ನು ಕೇಂದ್ರೀಕರಿಸುವುದರಲ್ಲಿ ಮತ್ತು ಯೋಗದಲ್ಲಿ ನಿಪುಣರೋ ಅವರು ಹದಿನೆಂಟು ಶಕ್ತಿಗಳಿಗಳನ್ನು ಗಳಿಸಬಲ್ಲರು. ಎಂಟು ನನಗೆ ಸಂಭಂದಿಸದವುಗಳಾದರೆ ಉಳಿದ ಹತ್ತು ಸತ್ವ ಗುಣದ ದೋಷರಾಹಿತ್ಯತೆ (ಪರಿಪೂರ್ಣತೆ) ಆಗಿದೆ. ಅಣುವಿನಷ್ಟು ಅಥವಾ ಅತ್ಯಂತ ಕಿರಿದಾಗುವಿಕೆ, ಹಗುರವಾಗುವಿಕೆ, ಅತ್ಯಂತ ದೊಡ್ಡದಾಗುವಿಕೆ (ಅಣಿಮಾ, ಲಘಿಮಾ, ಮಹಿಮಾ), ತನ್ನ ಇಂದ್ರಿಯಗಳೊಂದಿಗೆ ಸಂಪರ್ಕ ಹೊಂದುವುದು (ಪ್ರಾಪ್ತಿಃ), ನೋಡಿದ ಅಥವಾ ಕೇಳಿದ ಪ್ರತಿಯೊಂದರಿಂದಲೂ ಆನಂದವನ್ನು ಹೊಂದುವ ಸಾಮರ್ಥ್ಯ (ಪ್ರಾಕಾಮ್ಯಂ), ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರುವುದು ಅಥವಾ ಅವರ ಮೇಲೆ ಅಧಿಕಾರ ಸಾಧಿಸುವುದು (ಈಶಿತ್ವಂ), ಇಂದ್ರಿಯಗಳಿಗೆ ವಶನಾಗಿರದೆ ಅವುಗಳನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವುದು (ವಶಿತ್ವಂ) ಮತ್ತು ಎಲ್ಲಾ ಹಾಗೂ ಯಾವುದೇ ಆಸೆಗಳನ್ನು ಪೂರೈಸಿಕೊಳ್ಳುವುದು (ಕಾಮವಶ್ಯತ) ಇವೆಲ್ಲವೂ ನನ್ನ ಸಹಜ ಶಕ್ತಿಗಳಾಗಿವೆ."
ಆದರೆ ನಿಜವಾದ ಭಕ್ತನಿಗೆ ಈ ಎಲ್ಲಾ ಅತಿಮಾನುಷ ಶಕ್ತಿಗಳು ಮಾರಕವಾಗಿವೆ. ನಿಃಸಂಶಯವಾಗಿ ದೇವಿಯು ಧ್ಯಾನ ಮಾರ್ಗವನ್ನು ಅನುಸರಿಸುವ ತನ್ನ ಭಕ್ತರಿಗೆ ಈ ಅಷ್ಟಮ ಸಿದ್ಧಿಗಳನ್ನು ಕರುಣಿಸುತ್ತಾಳೆ, ಆದರೆ ನಿಜವಾದ ಭಕ್ತನು ಇವುಗಳ ಬಗ್ಗೆ ಆಸಕ್ತಿ ತಾಳದೆ ಅತಿಮಾನುಷ ಶಕ್ತಿಗಳಾದ ಈ ಮಾಯಾ ಶಕ್ತಿಗಳನ್ನು ಬದಿಗಿರಿಸಿ ಅವಳನ್ನು ಸಾಕ್ಷಾತ್ಕರಿಸಿಕೊಳ್ಳುವ ಏಕೈಕ ಗುರಿಯನ್ನು ಹೊಂದಿರುತ್ತಾನೆ.
Mahā-yogeśvareśvarī महा-योगेश्वरेश्वरी (225)
೨೨೫. ಮಹಾ-ಯೋಗೇಶ್ವರೀ
ದೇವಿಯು ಯೋಗಕ್ಕೆ ಅಧಿಕಾರಿಣಿಯಾಗಿದ್ದಾಳೆ ಮತ್ತು ಆಕೆಯನ್ನು ಹೊಂದಲು ಯೋಗಿಗಳು ಬಯಸುತ್ತಾರೆ. ಯೋಗವು ವ್ಯಕ್ತಿಗತ ಚೈತನ್ಯವನ್ನು ಬ್ರಹ್ಮಾಂಡದ ಚೈತನ್ಯದೊಂದಿಗೆ ಸಮ್ಮಿಳಿತಗೊಳಿಸುವುದಾಗಿದೆ. ಯೋಗವೆಂದರೆ ಜೋಡಿಸುವುದು; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವುದಾಗಿದೆ. ಈ ಹಂತವನ್ನು ತಲುಪಿದವರನ್ನು ಯೋಗಿಗಳೆನ್ನುತ್ತಾರೆ ಮತ್ತು ಇಂತಹ ಯೋಗಿಗಳು ಅವಳನ್ನು ಧ್ಯಾನಿಸುವುದರ ಮೂಲಕ ಅವಳೊಂದಿಗೆ ಸಂವಹನವೇರ್ಪಡಿಸಿಕೊಂಡು ಅವಳ ಕೃಪೆಗಾಗಿ ಕಾತರಿಸುತ್ತಾರೆ.
Mahā-tantrā महा-तन्त्रा (226)
೨೨೬. ಮಹಾ-ತಂತ್ರಾ
ತಂತ್ರವು ಆರಾಧನೆಯ ಒಂದು ಪದ್ಧತಿಯಾಗಿದೆ. ದೇವಿಯೇ ಸ್ವಯಂ ಮಹಾನ್ ತಂತ್ರವಾಗಿದ್ದಾಳೆ ಅಥವಾ ಎಲ್ಲಾ ತಂತ್ರಗಳು ಆಕೆಯೆಡೆಗೆ ಕರೆದೊಯ್ಯುತ್ತವೆ.
ತಂತ್ರದ ಬಗ್ಗೆ ಇನ್ನಷ್ಟು ಮಾಹಿತಿ:
ತಂತ್ರ ಶಾಸ್ತ್ರಗಳಲ್ಲಿ ವಿಧಿಸಲ್ಪಟ್ಟ ಆಚರಣೆಗಳನ್ನು ಅನುಸರಿಸುವುದರಿಂದ ವೇದಗಳಲ್ಲಿ ವಿಧಿಸಲ್ಪಟ್ಟ ಆಚರಣೆಗಳಿಗೆ ಹೋಲಿಸಿದರೆ ಶೀಘ್ರವಾಗಿ ಫಲಗಳನ್ನು ಪಡೆಯಬಹುದು. ತಾಂತ್ರಿಕ ವಿಧಿ-ವಿಧಾನಗಳನ್ನು ವೇದಗಳು ಸಂಪೂರ್ಣವಾಗಿ ಅಲ್ಲಗಳೆಯುತ್ತವೆಂದು ಹೇಳಲಾಗದು, ಏಕೆಂದರೆ ಅಥರ್ವಣ ವೇದವು ಹಲವಾರು ಗಿಡ ಮೂಲಿಕೆಗಳನ್ನು ಒಳಗೊಂಡ ಕೆಲವೊಂದು ಆಚರಣೆಗಳ ಕುರಿತಾಗಿ ಚರ್ಚಿಸುತ್ತದೆ. ಕೆಲವೊಂದು ಆಚರಣೆಗಳು, ಗಿಡಮೂಲಿಕೆಗಳು ಮತ್ತು ಕಿರಿದಾದ ಆಭರಣಗಳ ಕುರಿತಾಗಿ ಚರ್ಚಿಸುವುದರ ಹೊರತಾಗಿ ಅಥರ್ವಣ ವೇದವು ತಾಂತ್ರಿಕ ಸಾಧನೆಯ ಬಗ್ಗೆ ವಿಶದವಾಗಿ ಚರ್ಚಿಸುವುದಿಲ್ಲ. ಆದ್ದರಿಂದ ತಾಂತ್ರಿಕ ಆಚರಣೆಗಳಿಗೆ ವೇದಗಳ ಆಮೋದ ಮುದ್ರೆಯಿದೆ ಎಂದು ಭಾವಿಸಬಾರದು. ತಂತ್ರ ಶಾಸ್ತ್ರಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಮತ್ತು ಇದರಿಂದ ತಂತ್ರದಲ್ಲಿ ವಿಧಿಸಲ್ಪಟ್ಟಿರುವ ಆಚರಣೆಗಳ ಬಗ್ಗೆ ಇತರರು ಕುಪಿತಗೊಳ್ಳುವಂತಾಗಿದೆ. ತಂತ್ರ ಶಾಸ್ತ್ರದ ಬಗೆಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ, ವಾಸ್ತವವಾಗಿ ತಂತ್ರಗಳಲ್ಲಿ ಪ್ರಸ್ತುತ ಪಡಿಸಿರುವ ಆಚರಣೆಗಳು ಬಹಳ ಕಠಿಣವಾಗಿದ್ದು ಆಶಿಸಿದ ಫಲಗಳನ್ನು ಪಡೆಯಬೇಕಾದರೆ ತೀವ್ರವಾದ ಕಷ್ಟಗಳನ್ನು ಅನುಭವಿಸಬೇಕಲ್ಲದೆ ಕಠಿಣವಾದ ತಪಸ್ಸಿನೊಂದಿಗೆ ಯಜ್ಞಗಳನ್ನು ಕೈಗೊಳ್ಳಬೇಕು. ತಂತ್ರ ಶಾಸ್ತ್ರದ ಮುಖ್ಯವಾದ ಅಂಶಗಳೆಂದರೆ ಮಂತ್ರ ಮತ್ತು ಯಂತ್ರಗಳಾಗಿವೆ. ತಂತ್ರವು ಹಲವು ವಿಧವಾದ ವೈಜ್ಞಾನಿಕ ವಿಷಯಗಳನ್ನೊಳಗೊಂಡಿದೆ. ಉದಾಹರಣೆಗೆ, ಖಗೋಳ ಶಾಸ್ತ್ರ, ಜ್ಯೋತಿಷ್ಯ, ಅಂಗ ರಚನಾ ಶಾಸ್ತ್ರ, ಜೌಷದೀಯ ಸಸ್ಯಗಳ ಅಧ್ಯಯನ (ಆಯುರ್ವೇದ), ಜ್ಯಾಮಿತಿ/ರೇಖಾಗಣಿತ (ಯಂತ್ರಗಳನ್ನು ರಚಿಸಲು) ಮೊದಲಾದವುಗಳು ತಂತ್ರ ಶಾಸ್ತ್ರದ ಮೂಲಭೂತ ತತ್ವ ಸಿದ್ಧಾಂತಗಳಾಗಿವೆ. ಸಾಧನೆಯನ್ನು ಕೈಗೊಳ್ಳುವ ಮುನ್ನ ಒಬ್ಬರಿಗೆ ತಾಂತ್ರಿಕ ಆಚರಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದು ಒಳ್ಳೆಯದು. ತಾಂತ್ರಿಕ ಆಚರಣೆಯಲ್ಲಿ ಮುಖ್ಯವಾದ ಅಂಶವೆಂದರೆ ತಂತ್ರಗಳಲ್ಲಿ ದೇವಿಯ ರೂಪವೊಂದನ್ನು ಪೂಜಿಸುವುದಾಗಿದ್ದು ಇದು ಉಪನಿಷತ್ತುಗಳ ಬೋಧನೆಗಳಿಗೆ ವಿರುದ್ಧವಾಗಿದೆ. ಎಲ್ಲಾ ತಂತ್ರ ಶಾಸ್ತ್ರಗಳನ್ನು ಪಾರ್ವತಿಗೆ ಆಕೆಯ ಸಂಗಾತಿಯಾದ ಶಿವನು ಬೋಧಿಸಿದನೆಂದು ಹೇಳಲಾಗಿದೆ. ಸ್ವಯಂ ಶಿವನೇ ಈ ಕಲಿಯುಗದಲ್ಲಿ ಇತರೇ ಶಾಸ್ತ್ರಗಳಿಗಿಂತ ತಂತ್ರಶಾಸ್ತ್ರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆಯೆಂದು ಹೇಳಿದ್ದಾನೆ. ತಂತ್ರ ಶಾಸ್ತ್ರದ ಮೂಲವನ್ನು ಕಂಡು ಹಿಡಿಯುವುದು ಕಷ್ಟಕರವಾದದ್ದು. ಆದರೆ ತಂತ್ರವು ಬಹುತೇಕ ಏಷ್ಯಾ ಖಂಡದ ಭಾರತ, ಟಿಬೆಟ್, ಚೀನಾ, ಜಪಾನ್ ಮೊದಲಾದ ದೇಶಗಳಲ್ಲೆಲ್ಲಾ ಕಂಡುಬರುತ್ತದೆ. ಬೌದ್ಧ ಧರ್ಮದಲ್ಲಿ ಕೂಡಾ ಹಿಂದೂ ಧರ್ಮದಲ್ಲಿರುವಂತೆಯೇ ತಾಂತ್ರಿಕ ರೂಪದ ಮಂತ್ರಗಳಿರುತ್ತವೆ.
ವೈದಿಕ ಆಚರಣೆಗಳು ಇಂದು ಮನ್ನಣೆಯನ್ನು ಕಳೆದುಕೊಳ್ಳುತ್ತಿವೆ ಏಕೆಂದರೆ ಅದರಲ್ಲಿ ವಿಧಿಸಲ್ಪಟ್ಟಿರುವ ವಿಧಾನಗಳು ಬಹಳ ದೊಡ್ಡದಾಗಿರುವುದರಿಂದ ಅವುಗಳನ್ನು ಸರಿಯಾಗಿ ಅನುಸರಿಸುವುದು ಈಗಿನ ಕಾಲದಲ್ಲಿ ಕಷ್ಟವಾಗಿದೆ. ದೇಹ ಮತ್ತು ಮನಸ್ಸಿನ ಪರಿಶುದ್ಧತೆಯು ವೈದಿಕ ಕ್ರಿಯೆಗಳಲ್ಲಿ ಮಹತ್ವವನ್ನು ಪಡೆಯುತ್ತದೆ ಆದರೆ ಇವಕ್ಕೆ ತಾಂತ್ರಿಕ ಆಚರಣೆಗಳಲ್ಲಿ ಅಷ್ಟು ಮಹತ್ವವಿಲ್ಲ; ಆದರೂ ತಂತ್ರಗಳಿಗೆ ತಮ್ಮವೇ ಆದ ಶುದ್ಧತೆಯ ನಿಯಮಗಳಿವೆ. ಮತ್ತು ತಂತ್ರಗಳಲ್ಲಿ ವಿಧಿಸಿದ ಮಂತ್ರಗಳಿಗೂ ವೇದಗಳಲ್ಲಿ ವಿಧಿಸಿರುವ ಮಂತ್ರಗಳಿಗೂ ಸಂಭಂದವಿಲ್ಲ. ಈಗಿನ ದಿನಗಳಲ್ಲಿ ತಾಂತ್ರಿಕ ಮಂತ್ರಗಳಿರುವ ಶಕ್ತಿಯು ವೈದಿಕ ಮಂತ್ರಗಳಿಗೆ ಇಲ್ಲವಾಗಿದೆ. ಇವತ್ತಿಗೂ ಕೂಡಾ ತಾಂತ್ರಿಕ ಶಾಸ್ತ್ರಗಳನ್ನು ಬಹಳ ರಹಸ್ಯವಾಗಿ ಕಾಪಾಡಿಕೊಳ್ಳಲಾಗಿದೆ ಮತ್ತದಕ್ಕೆ ಎರಡು ಕಾರಣಗಳಿವೆ. ಅದರಲ್ಲಿರುವ ವಿಧಾನಗಳನ್ನು ಸರಿಯಾಗಿ ಅನುಸರಿಸಿದರೆ ಅದರಿಂದ ಉಂಟಾಗುವ ಪರಿಣಾಮಗಳು ಮಹತ್ತರವಾಗಿರುತ್ತವೆ; ಆದರೆ ಕೆಲವು ಸಾಧಕರು ಇವುಗಳನ್ನು ವಿನಾಶಕಾರಕ ಕ್ರಿಯೆಗಳಿಗೆ ಬಳಸಿಕೊಳ್ಳುವ ಅಪಾಯವಿದೆ. ಎರಡನೆಯದಾಗಿ, ತಾಂತ್ರಿಕ ಆಚರಣೆಗಳ ಪೂರ್ತಿ ಜ್ಞಾನವನ್ನು ಪಡೆದವನು ಅಹಂಕಾರದಿಂದಾಗಿ ಅವುಗಳನ್ನು ಬೇರಿಯವರೊಂದಿಗೆ ಹಂಚಿಕೊಳ್ಳಲು ಇಷ್ಟಪಡದೇ ಇರುವುದು.
ಗುರು ಶಿಷ್ಯರ ಸಂಭಂದವು ತಂತ್ರ ಶಾಸ್ತ್ರದಲ್ಲಿ ಅತ್ಯಂತ ಪ್ರಮುಖವಾದದ್ದು. ಇದರಲ್ಲಿ ಗುರುವು ಯಾವಾಗಲೂ ತನ್ನ ಶಿಷ್ಯನನ್ನು ಆರಿಸಿಕೊಳ್ಳುತ್ತಾನೆ ಮತ್ತು ಒಮ್ಮೆ ಆರಿಸಿಲ್ಪಟ್ಟ ನಂತರವಷ್ಟೇ ಈ ಶಿಷ್ಯನಿಗೆ ಗುರುವಿನಿಂದ ಮಂತ್ರೋಪದೇಶವಾಗುತ್ತದೆ. ಕೇವಲ ಗುರುವು ಮಾತ್ರವೇ ಶಿಷ್ಯನಿಗೆ ಉಪದೇಶಿಸಬೇಕಾದ ಮಂತ್ರದ ಕುರಿತಾಗಿ ನಿರ್ಣಯಿಸುತ್ತಾನೆ. ಬಹುತೇಕ ತಾಂತ್ರಿಕ ಮಂತ್ರಗಳು ಶಕ್ತಿಗೆ ಸಂಭಂದಿಸಿದ್ದಾಗಿವೆ, ಆದ್ದರಿಂದ ಸಹಜವಾಗಿಯೇ ಅನೇಕರು ಶಕ್ತಿ ಆರಾಧನೆಯನ್ನೇ ತಾಂತ್ರಿಕ ಆಚರಣೆ ಎಂದು ಕರೆಯುತ್ತಾರೆ. ಆದರೆ ಇದು ನಿಜವಾಗಿರದೆ ಶಕ್ತಿಯು ವೇದಗಳ ಹಾಗೂ ತಂತ್ರಗಳೆರಡರ ಮೂಲಕವೂ ಪೂಜಿಸಲ್ಪಡುತ್ತಾಳೆ.
ಶಕ್ತಿ ಆರಾಧನೆಯ ಹಿಂದಿರುವ ಉದ್ದೇಶವೇನೆಂದರೆ ದೇವಿಯು ಕ್ರಿಯಾತ್ಮಕ ಶಕ್ತಿಯನ್ನು ಹೊಂದಿದ್ದಾಳೆ ಮತ್ತು ಆಕೆಯನ್ನು ಪ್ರೀತಿಯಿಂದ ಮಾತಾ ಅಥವಾ ತಾಯಿಯೆಂದು ಕರೆಯುವುದರಿಂದ ಆಕೆಯು ತನ್ನ ಮಕ್ಕಳ ಬಯಕೆಗಳನ್ನು ಪೂರೈಸಲು ಸಮರ್ಥಳಾಗಿದ್ದಾಳೆ. ಮಂತ್ರೋಪದೇಶವೆನ್ನುವುದು ಕೇವಲ ಒಂದು ಸಂಪ್ರದಾಯವಾಗಿರದೆ ಅದರೊಂದಿಗೆ ಹಲವಾರು ಆಚರಣೆಗಳನ್ನು ಕೈಗೊಳ್ಳಬೇಕಾಗುತ್ತದೆ. ಪ್ರತಿಯೊಬ್ಬ ಶಿಷ್ಯನಿಗೂ ಪ್ರತ್ಯೇಕ ಮಂತ್ರವಿರುತ್ತದೆ ಮತ್ತು ಈ ಮಂತ್ರಗಳನ್ನು ನಿರ್ದೇಶಿಸಲ್ಪಟ್ಟ ಸಂಖ್ಯೆಗನುಗುಣವಾಗಿ ಪಠಿಸಬೇಕು. ಒಮ್ಮೆ ಇದು ಮುಗಿದ ನಂತರ ಇತರ ಆಚರಣೆಗಳು ಮೊದಲಾಗುತ್ತವೆ. ಇತರೇ ಪದ್ಧತಿಗಳೆಂದು ಕರೆಯಲ್ಪಡುವ ತಂತ್ರದ ಇನ್ನಿತರ ಆಚರಣೆಗಳನ್ನು ವ್ಯಾಖ್ಯಾನಿಸುವಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ವ್ಯತ್ಯಾಸವುಂಟಾಗುತ್ತದೆ.
Mahā-mantrā महा-मन्त्रा (227)
೨೨೭. ಮಹಾ-ಮಂತ್ರಾ
ದೇವಿಯು ಎಲ್ಲಾ ಮಂತ್ರಗಳ ಮೂರ್ತರೂಪವಾಗಿದ್ದಾಳೆ. ಎಲ್ಲಾ ಮಂತ್ರಗಳು ಸಂಸ್ಕೃತದ ೫೧ ಅಕ್ಷರಗಳಿಂದ ಉದ್ಭವವಾಗಿವೆ. ಈ ಐವತ್ತೊಂದು ಅಕ್ಷರಗಳನ್ನು ಆಕೆಯು ತನ್ನ ಕೊರಳ ಸುತ್ತಲೂ ಮಾಲೆಯಂತೆ ಧರಿಸಿದ್ದು ಮತ್ತು ಎಲ್ಲಾ ಮಂತ್ರಗಳು ಈ ಅಕ್ಷರಮಾಲೆಯಿಂದ ಹೊರಹೊಮ್ಮುತ್ತದೆ. ಈ ನಾಮವು ದೇವಿಯ ಪಂಚದಶೀ ಮತ್ತು ಷೋಡಶೀ ಮಂತ್ರಗಳನ್ನು ಕುರಿತಾಗಿ ಹೇಳುತ್ತದೆನಿಸುತ್ತದೆ, ಏಕೆಂದರೆ ಈ ಮಂತ್ರಗಳು ಮಂತ್ರಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠವಾದವುಗಳೆನಿಸಿದೆ.
ಮಂತ್ರಗಳ ಕುರಿತು ಹೆಚ್ಚಿನ ವಿವರಣೆ:
ತಂತ್ರ ಶಾಸ್ತ್ರದಲ್ಲಿ, ಮಂತ್ರಗಳು ಬಹಳ ಮಹತ್ತರವಾದ ಪಾತ್ರವನ್ನು ಪೋಷಿಸುತ್ತವೆ, ಏಕೆಂದರೆ ತಂತ್ರವು ಶಬ್ದಗಳ ಶಕ್ತಿಗೆ (ಅಥವಾ ವಾಕ್ ಶಕ್ತಿಗೆ) ಅತೀ ಹೆಚ್ಚಿನ ಮಹತ್ವವನ್ನು ಕೊಡುತ್ತವೆ. ವಾಕ್ ಎನ್ನುವುದು ಪ್ರಮುಖವಾಗಿ ಶಕ್ತಿಯ ಜೊತೆಗೆ ಗುರುತಿಸಿಕೊಳ್ಳುತ್ತದೆ. ಸಂಸ್ಕೃತದಲ್ಲಿ ಪ್ರತಿ ಅಕ್ಷರವನ್ನೂ ಅಥವಾ ಸಂಯುಕ್ತಾಕ್ಷರವನ್ನೂ ಬೀಜವೆಂದು ಕರೆಯಲಾಗುತ್ತದೆ ಮತ್ತು ಹಲವಾರು ಬೀಜಗಳು ಸೇರಿ ಒಂದು ಮಂತ್ರವಾಗುತ್ತದೆ. ಬೀಜ ಅಥವಾ ಬೀಜಾಕ್ಷರವನ್ನು ಮೋಡಿ ಮಾಡುವ ಅಥವಾ ಸಮ್ಮೋಹನಗೊಳಿಸುವ ಅಕ್ಷರವೆಂದು ಮತ್ತು ಇದು ಯಾವುದೇ ದೇವತೆಯ ಮಂತ್ರದ ಅತ್ಯಂತ ಅವಶ್ಯಕ ಭಾಗವೆಂದು ವಿವರಿಸಬಹುದು. ಬೀಜಾಕ್ಷರವನ್ನು ಮೂಲ ತತ್ವ ಅಥವಾ ಮೂಲ ಕಾರಣವೆಂದು ಕೂಡ ವಿವರಿಸಬಹುದು. ಬೀಜಾಕ್ಷರವೆನ್ನುವುದು ಗಿಡಗಳ ಬೀಜವಿದ್ದಂತೆ ಹಾಗಾಗಿ ಕಿರಿದಾದ ಬೀಜವು ಮೊಳೆತು ಹೆಮ್ಮರವಾಗುವಂತೆ ಮಂತ್ರದ ಪರಿಣಾಮವು ಅನಾವರಣಗೊಳ್ಳುತ್ತಾ ಹೋಗುತ್ತದೆ. ತಂತ್ರ ಶಾಸ್ತ್ರವನ್ನು ಯಾವ ರೀತಿಯಾಗಿ ರೂಪಿಸಲ್ಪಟ್ಟಿದೆ ಎಂದರೆ ಮಂತ್ರದೊಳಗೆ ಶಬ್ದದ (ಸಪ್ಪಳದ) ಶಕ್ತಿಯನ್ನು ತುಂಬಿಸಿರುತ್ತಾರೆ ಮತ್ತು ಅದನ್ನು ಯಾವ ರೀತಿ ಬೇಕೋ ಆ ರೀತಿಯಾಗಿ ಅನಾವರಣಗೊಳಿಸಿಕೊಳ್ಳಬಹುದು. ಕೇವಲ ನಿತ್ಯ ಪಠಣದಿಂದ ಮಂತ್ರಗಳಿಗೆ ಬಲವು ಬರುವುದಿಲ್ಲ. ಮಂತ್ರಗಳಿಗೆ ಶಕ್ತಿಯನ್ನು ಹೇಗೆ ತುಂಬಬೇಕೆಂದು ವಿವಿಧ ತಾಂತ್ರಿಕ ಶಾಸ್ತ್ರಗಳು ವಿಶದವಾಗಿ ತಿಳಿಸಿ ಕೊಡುತ್ತವೆ. ತಂತ್ರ ಶಾಸ್ತ್ರದ ವಿಶಿಷ್ಥ ಲಕ್ಷಣವೇನೆಂದರೆ ಅದರಲ್ಲಿ ಮಂತ್ರಗಳ ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳುವುದೇ ಆಗಿದೆ. ಮಂತ್ರಗಳು ದಿವ್ಯ ಶಕ್ತಿಯ ಮುಂದುವರೆದ ಭಾಗವಾಗಿದ್ದು ನಾವು ಉಪಯೋಗಿಸುವ ಮಂತ್ರಗಳ ಆಧಾರದ ಮೇಲೆ ಅವು ಕೆಲವೊಂದು ದೇವತೆಗಳಿಗೆ ಅಥವಾ ಬ್ರಹ್ಮಕ್ಕೆ/ಪರಮಾತ್ಮಕ್ಕೆ ಸೀಮಿತವಾಗಿರುತ್ತವೆ. ತಂತ್ರದ ಪ್ರತಿಯೊಂದು ಆಚರಣೆಯೂ ಮಂತ್ರದ ರೂಪಿಸುವಿಕೆಗೆ ಸಂಬಂಧ ಹೊಂದಿರುತ್ತದೆ. ಮಂತ್ರಗಳ ಶಕ್ತಿಯು ಎಷ್ಟು ಪ್ರಬಲವಾಗಿರುತ್ತದೆಂದರೆ ಅವುಗಳನ್ನು ನಿರ್ದೇಶಿತ ಕ್ರಮದಲ್ಲಿ ಪಠಣ ಮಾಡಿದಾಗ ಅವು ಸಂಪೂರ್ಣವಾಗಿ ಪರಿಣಾಮಕಾರಿಯಾಗಿರುತ್ತವೆ. ಉದಾಹರಣೆಗೆ ಪಂಚದಶೀ ಮತ್ತು ಷೋಡಶೀ ಮಂತ್ರಗಳ ಪರಿಣಾಮವು ಕೇವಲ ಮುಕ್ತಿಯನ್ನು ದೊರಕಿಸಿ ಕೊಡುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ಸಿದ್ಧಿಗಳನ್ನು ಪ್ರಸಾದಿಸುವುದಿಲ್ಲ. ಮಂತ್ರದ ಆಯ್ಕೆಯು ದೀಕ್ಷಾ ಗುರುವಿನ ಮೇಲೆ ಅವಲಂಭಿತವಾಗಿದ್ದು ಅವನು ಅದನ್ನು ಶಿಷ್ಯನ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯಗಳ ಮೇಲೆ ನಿರ್ಧರಿಸುತ್ತಾನೆ.
Mahā-yantrā महा-यन्त्रा (228)
೨೨೮. ಮಹಾ-ಯಂತ್ರಾ
ಈ ನಾಮಕ್ಕೆ ಎರಡು ವಿಧವಾದ ವ್ಯಾಖ್ಯಾನಗಳನ್ನು ಕೊಡಬಹುದು. ಮಹಾ-ಯಂತ್ರವೆಂದರೆ ದೇವಿಯು ನಿವಸಿಸುವ ಶ್ರೀ ಚಕ್ರವನ್ನು ಸೂಚಿಸಬಹುದು, ಅದರ ಮಧ್ಯದಲ್ಲಿ ದೇವಿಯು ವಾಸವಾಗಿರುತ್ತಾಳೆ. ಶ್ರೀ ಚಕ್ರವನ್ನು ಪರಮೋನ್ನತವಾದ ಯಂತ್ರವೆಂದು ಪರಿಗಣಿಸಲಾಗಿರುವುದರಿಂದ ಆಕೆಯು ಮಹಾ-ಯಂತ್ರಾ ಆಗುತ್ತಾಳೆ. ಎರಡನೆಯದಾಗಿ, ಆಕೆಯ ರೂಪವೇ ಶ್ರೀ ಚಕ್ರವಾಗಿದ್ದು ಅದುವೇ ಮಹಾ-ಯಂತ್ರವಾಗಿದೆ.
ಯಂತ್ರದ ಕುರಿತಾಗಿ ಇನ್ನಷ್ಟು ವಿವರಗಳು:
ಒಂದು ವೇಳೆ ತಂತ್ರ, ಮಂತ್ರ ಮತ್ತು ಯಂತ್ರ ಇವುಗಳನ್ನು ಸಮನ್ವಯಗೊಳಿಸಿ ಉಪಯೋಗಿಸಿದರೆ ತ್ವರಿತವಾಗಿ ಫಲಗಳನ್ನು ಹೊಂದಬಹುದು. ವಿಶೇಷವಾಗಿ, ಮಂತ್ರ ಮತ್ತು ಯಂತ್ರಗಳ ಸಂಯೋಗವು ಪ್ರಾರ್ಥನೆಯ ಫಲವನ್ನು ಹೊಂದುವುದಕ್ಕೆ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿದೆ. ಯಂತ್ರವೆಂದರೆ ಅಡ್ಡಗೆರೆಗಳಿಂದ ಮತ್ತು ಬೀಜಾಕ್ಷರಗಳಿಂದ ಕೂಡಿದ ಒಂದು ಚಿತ್ರವಾಗಿದೆ. ಸರಿಯಾದ ಕ್ರಮದಲ್ಲಿ ಪವಿತ್ರೀಕರಿಸಿದ ಯಂತ್ರವು ನಿಗದಿತ ದೇವತೆಯ ಆವಾಸ ಸ್ಥಾನವಾಗಿ ಹೊರಹೊಮ್ಮುವುದಲ್ಲದೇ ಅದು ಪವಿತ್ರ ಶಕ್ತಿಯ ಮೂಲವಾಗುತ್ತದೆ ಅದರ ಮೂಲಕ ಸಾಧಕನು ತನ್ನ ಇಷ್ಟ ದೈವದೊಂದಿಗೆ ವಿಶ್ವ ಸಂಭಂದವನ್ನು ಏರ್ಪಡಿಸಿಕೊಳ್ಳಬಹುದು. ಒಂದು ಯಂತ್ರವನ್ನು ರೂಪಿಸಲು ಹಲವಾರು ಪೂರ್ವ ನಿಯಮಗಳಿವೆ, ಅವೆಂದರೆ ಬರೆಯುವ ಸಾಧನ, ಅದಕ್ಕೆ ಬಳಸಲ್ಪಡುವ ಮಸಿ ಅಥವಾ ಷಾಯಿ, ಅದಕ್ಕೆ ಉಪಯೋಗಿಸ ಬೇಕಾದ ಲೇಖನಿ, ಶುಭಘಳಿಗೆ, ಮೊದಲಾದವು. ಈ ಪವಿತ್ರಗೊಳಿಸಿದ ಯಂತ್ರಗಳನ್ನು ರಹಸ್ಯವಾಗಿ ಪವಿತ್ರವಾದ ಸ್ಥಳಗಳಲ್ಲಿ ಇರಿಸಬೇಕು ಏಕೆಂದರೆ ಈ ಯಂತ್ರಗಳು ದಿವ್ಯವಾದ ಶಕ್ತಿಯನ್ನು ಪ್ರಚುರಿಸುತ್ತವೆ (ಹೊಮ್ಮಿಸುತ್ತವೆ). ಸರಿಯಾದ ಯಂತ್ರ ಮತ್ತು ಮಂತ್ರಗಳನ್ನು ಬಳಸುವುದರ ಮೂಲಕ ಗ್ರಹದೋಷಗಳನ್ನೂ ಕೂಡಾ ಪರಿಷ್ಕರಿಸಿಕೊಳ್ಳಬಹುದು.
******
Comments
ಶ್ರೀಧರರೆ, ಲಲಿತಾ ಸಹಸ್ರನಾಮ ೨೧೯
ಶ್ರೀಧರರೆ, ಲಲಿತಾ ಸಹಸ್ರನಾಮ ೨೧೯ - ೨೨೮, ತಮ್ಮ ಪರಿಶೀಲನೆಗೆ / ಅವಗಾಹನೆಗೆ ಸಿದ್ದ - ನಾಗೇಶ ಮೈಸೂರು :-)
219. ಮಹಾ-ಭೋಗಾ
ಪ್ರಪಂಚದಲಿಹುದೆಲ್ಲ ದೇವಿಯ ಸಂಪತ್ತಿನ ಭಾಗ
ಅವೆಲ್ಲದಕು ಅಧಿಕಾರ ಲಲಿತೆಯದಾಗಿರುವಾಗ
ಎಣೆಯಿಲ್ಲದ ಸಂತೋಷಕೆ ಮೂರ್ತರೂಪದ ಸಗ್ಗ
ಕೃಪಾಪಾತ್ರಭಕ್ತಗೆ ದಯಪಾಲಿಸಿ ಮಹಾ ಭೋಗ!
220. ಮಹೈಶ್ವರ್ಯಾ
ಸೃಷ್ಟಿಸಿದ ಬ್ರಹ್ಮಾಂಡದೊಳಗಂತರ್ಗತವಾಗೆ ಬ್ರಹ್ಮಗುಣ
ಅಪರಿಮಿತ ವ್ಯಾಪ್ತಿ ಜೀವಿ ಆರಂಭ ಮಧ್ಯ ಅಂತ್ಯ ತಾಣ
ಲಲಿತಾ ಸಂಪತ್ತೈಶ್ವರ್ಯವೆಲ್ಲ ಮಾತೆಯ ಕರುಣಾ ಕೃಪೆ
ದೇವಿ ಮಹೈಶ್ವರ್ಯಾ ಸ್ವತಂತ್ರೆ ಮಾರ್ಪಡಿಸಿ ವಿಶ್ವರೂಪೆ!
221. ಮಹಾ-ವೀರ್ಯ
ದುಡಿಮೆಗೆ ಅರ್ಹತೆಗೆ ಸಿಕ್ಕುವಂತೆ ಪ್ರತಿಫಲ
ಭಕ್ತಿಗನುಸಾರವಾಗಿ ಗುಣ ಪ್ರಸಾದಿಸಿ ಸಕಲ
ಶಕ್ತಿ ಬಲ ತೇಜ ಘನತೆ ಧೈರ್ಯದ ನಿಧಿಯ
ಪಾತ್ರರಿಗ್ಹಂಚುವಳು ಮಾತೆ ಮಹಾ ವೀರ್ಯ!
222.ಮಹಾ-ಬಲಾ
ಬ್ರಹ್ಮವನರಿಯುವ ತತ್ವ ವಾಸ್ತವದೆ ಶೂನ್ಯತ್ವ
ವಾಕ್ ದೇವಿ ವರ್ಣಿತ ಪರಬ್ರಹ್ಮ ಲಕ್ಷಣ ಸತ್ವ
ಬ್ರಹ್ಮಗುಣ ಸಾಮರ್ಥ್ಯ ಲಲಿತೆಯಾಗಿ ಪ್ರಬಲ
ಸಕಾರಾತ್ಮಕವೆ ಇದು ಬ್ರಹ್ಮವೆನೆ ಮಹಾಬಲ!
223. ಮಹಾ ಬುದ್ಧಿಃ
ಅರಿತೊಂದು ನೀತಿ ಮಿಕ್ಕೆಲ್ಲ ತಿಳಿಯೆ ಬುದ್ದಿವಂತಿಕೆ
ಅರಿಯದ ಕೇಳದ ಅಲೋಚಿಸದ್ದೆಲ್ಲ ಅರಿವಾಗುವಿಕೆ
ಬುದ್ಧಿಯ ವ್ಯಕ್ತರೂಪವೆ ದೇವಿ ಬ್ರಹ್ಮದ ಲಕ್ಷಣವಾಗೆ
ಮಹಾಬುದ್ಧಿಃ ಲಲಿತೆಯಷ್ಟೆ ಕರುಣಿಸಬಲ್ಲ ಸೊಬಗೆ!
ಬುದ್ಧಿಯ ಕುರಿತಾಗಿ ಇನ್ನಷ್ಟು ವಿವರಣೆಗಳು:
-----------------------------------------
ಅಜ್ಞಾನವ ಜಯಿಸೆ ಬುದ್ಧಿ ಪುನರ್ಜನ್ಮವೆಲ್ಲ ಮುಕ್ತಾಯ
ಮನಸು ಅಹಂಕಾರದ ಮೂಲ ಭೌತಿಕವಿಶ್ವ ಅರಿಸುವ
ಉನ್ನತ ಮಹತ್ತರವಾಗಿ ಬ್ರಹ್ಮ ಸಂವಹನ ಸಹಾಯಕ
ಬುದ್ಧಿಯಿರದೆ ಬ್ರಹ್ಮಸಾಕ್ಷಾತ್ಕಾರ ಆಗದೆ ಅಮಾಯಕ!
೨೨೪. ಮಹಾ-ಸಿದ್ಧಿಃ
ಅತಿಮಾನುಷ ಶಕ್ತಿ ಅಷ್ಟಸಿದ್ದಿಗಳೆಂಬ ಸಮೃದ್ಧಿ
ಮಾರಕ ನಿಜಭಕ್ತಗೆ ಗಮ್ಯದಿಂದೆಳೆದು ದೂರದಿ
ಗುರಿ ದೇವಿ ಶಕ್ತಿ ಸಿದ್ದಿ ಸೌಭಾಗ್ಯ ಅಂತಿಮಮುಕ್ತಿ
ಪರಮಾನಂದ ಪರಮಶಾಂತಿ ಸಂಪೂರ್ಣತೃಪ್ತಿ!
ಅಷ್ಟಸಿದ್ದಿಗಳು
-------------------------------------------------------
ಅಣುವಂತೆ ಕಿರಿದಾಗೆ ಅಣಿಮಾ, ಹಗುರವಾಗೆ ಲಘುಮಾ
ಹಿರಿದಾದರೆ ಮಹಿಮಾ, ಸ್ವ ಇಂದ್ರೀಯ ಸಂಪರ್ಕಿಸೆ ಪ್ರಾಪ್ತಿಃ
ಸರ್ವಾನಂದ ಸಾಮರ್ಥ್ಯ ಪ್ರಾಕಾಮ್ಯಂ, ಸರ್ವ ಪ್ರಭಾವ ಪ್ರಭುತ್ವ ಈಶಿತ್ವಂ
ಇಂದ್ರೀಯ ನಿಯಂತ್ರಣ ವಶಿತ್ವಂ, ಸರ್ವ ಕಾಮನೆ ಪೂರೈಕೆ ಕಾಮವಶ್ಯತ!
೨೨೫. ಮಹಾ-ಯೋಗೇಶ್ವರೀ
ದೇಹ ಮನಸು ಆತ್ಮ ಜೋಡಿಸಿದವನೆ ಯೋಗಿ
ಬ್ರಹ್ಮಾಂಡಕೆ ವ್ಯಕ್ತಿಗತ ಚೈತನ್ಯ ಸಮ್ಮಿಳಿತವಾಗಿ
ಧ್ಯಾನಯೋಗದೆ ಸಂವಹಿಸಿ ಕಾಯುತಾ ಕೃಪೆಗೆ
ಯೋಗೈಕ್ಯವಾಗೆ ಮಹಾ ಯೋಗೇಶ್ವರೀ ಒಳಗೆ!
೨೨೬. ಮಹಾ-ತಂತ್ರಾ
ತಂತ್ರ ಶಾಸ್ತ್ರ ವ್ಯಾಖ್ಯಾನ ಮಂತ್ರ ಯಂತ್ರ ವೈಜ್ಞಾನಿಕ
ಖಗೋಳಾಂಗ ಜೋತಿಷ್ಯಾಯುರ್ವೇದ ಜ್ಯಾಮಿತಿ ತತ್ವ
ಕಲಿಯುಗ ಸೂಕ್ತ ತಂತ್ರಾರಾಧನೆ ಶಿವ ಸತಿಗೆ ಭೋಧೆ
ಎಲ್ಲ ತಂತ್ರಾ ಕೊನೆಗೊಯ್ಯುತ ಮಹಾ-ತಂತ್ರಾ ಬಳಿಗೆ!
೨೨೭. ಮಹಾ-ಮಂತ್ರಾ
ತಂತ್ರ ಶಾಸ್ತ್ರದಲಿ ಮಂತ್ರ ಮಹತ್ತರ ಪಾತ್ರ
ಬೀಜಾಕ್ಷರ ವಾಕ್ ಶಕ್ತಿ ಪ್ರಸಾದಿಸೊ ಸೂತ್ರ
ಮಂತ್ರವೆಲ್ಲಕು ಮೂರ್ತರೂಪವಾಗಿ ಲಲಿತೆ
ಕೊರಳಕ್ಷರ ಧರಿಸೆ ಮಹಾ-ಮಂತ್ರಾವಾಯ್ತೆ!
೨೨೮. ಮಹಾ-ಯಂತ್ರಾ
ಬೀಜಾಕ್ಷರ ಅಡ್ಡಗೆರೆ ಪವಿತ್ರ ಸಕ್ರಮ ಚಿತ್ರವೆ ಯಂತ್ರ
ಇಷ್ಟದೈವ ವಿಶ್ವಸಂಭಂದ ಸರಿ ನಿಯಮಾವಳಿ ಸಾರ
ದೇವಿ ನಿವಸಿತ ಶ್ರೀ ಚಕ್ರವೆ ಮಹಾ ಯಂತ್ರ ಸಾಕಾರ
ಲಲಿತಾ ರೂಪವೆ ಶ್ರೀ ಚಕ್ರವಾಗವಳಿನ್ನೊಂದು ಆಕಾರ!
In reply to ಶ್ರೀಧರರೆ, ಲಲಿತಾ ಸಹಸ್ರನಾಮ ೨೧೯ by nageshamysore
೨೧೯ ರಿಂದ ೨೨೮ರ ಕಾವ್ಯ ನಿಜಕ್ಕೂ
೨೧೯ ರಿಂದ ೨೨೮ರ ಕಾವ್ಯ ನಿಜಕ್ಕೂ ಅತ್ಯದ್ಭುತವಾಗಿ ಮೂಢಿ ಬಂದಿವೆ ನಾಗೇಶರೆ. ಮಹಾ-ಮಂತ್ರಾ, ಮಹಾ-ತಂತ್ರಾ, ಮಹಾ-ಯಂತ್ರಾ ಇವುಗಳನ್ನು ಅತ್ಯಂತ ಸಾರವಾತ್ತಾಗಿ ನಿಮ್ಮ ಕವನದಲ್ಲಿ ಹಿಡಿದಿಟ್ಟಿದ್ದೀರ. ಮಾಮೂಲಿಯಾಗಿರುವಂತೆ ಮುದ್ರಾ ರಾಕ್ಷಸ ನಿಮ್ಮ ಕವನಗಳಿಗೂ ಸ್ವಲ್ಪ ದಾಳಿ ಇಟ್ಟಿದ್ದಾನೆ; ಅವನನ್ನು ಸ್ವಲ್ಪ ನಿಯಂತ್ರಿಸಿ :))
221. ಮಹಾ-ವೀರ್ಯ
ಪಾತ್ರರಿಗ್ಹಂಚುವಳು ಮಾತೆ ಮಹಾ ವೀರ್ಯ!
ವೀರ್ಯ=ವೀರ್ಯಾ
ಅಷ್ಟಸಿದ್ದಿಗಳು
-------------------------------------------------------
ಅಣುವಂತೆ ಕಿರಿದಾಗೆ ಅಣಿಮಾ, ಹಗುರವಾಗೆ ಲಘುಮಾ
ಲಘುಮಾ=ಲಘಿಮಾ
ಹಿರಿದಾದರೆ ಮಹಿಮಾ, ಸ್ವ ಇಂದ್ರೀಯ ಸಂಪರ್ಕಿಸೆ ಪ್ರಾಪ್ತಿಃ
ಇಂದ್ರೀಯ=ಇಂದ್ರಿಯ; ಸಂಪರ್ಕಿಸೆ ಎನ್ನುವುದಕ್ಕಿಂತ ಸೂಕ್ತ ಪದ ಸಿಗುವುದೇನೋ ನೋಡಿ. ಬರವಣಿಗೆಯಲ್ಲಿ ಅಲ್ಲಿನ ಸಂದರ್ಭಕ್ಕೆ ಇದು ಹೊಂದಬಹುದು ಆದರೆ ಇಲ್ಲಿ ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಿದವನು ಎನ್ನುವ ಅರ್ಥ ಬರುವಂತೆ ಮಾರ್ಪಡಿಸಿ. ಬಹುಶಃ ಸರಳವಾಗಿ ’ನಿಗ್ರಹಿಸೆ’ ಇಲ್ಲಿ ಸರಿಹೋಗಬಹುದು ಎಂದುಕೊಳ್ಳುತ್ತೇನೆ.
ಸರ್ವಾನಂದ ಸಾಮರ್ಥ್ಯ ಪ್ರಾಕಾಮ್ಯಂ, ಸರ್ವ ಪ್ರಭಾವ ಪ್ರಭುತ್ವ ಈಶಿತ್ವಂ
ಇಂದ್ರೀಯ ನಿಯಂತ್ರಣ ವಶಿತ್ವಂ, ಸರ್ವ ಕಾಮನೆ ಪೂರೈಕೆ ಕಾಮವಶ್ಯತ!
ಇಂದ್ರೀಯ=ಇಲ್ಲಿ ಇದೇ ರೂಪ ಸರಿ.
೨೨೬. ಮಹಾ-ತಂತ್ರಾ
ಕಲಿಯುಗ ಸೂಕ್ತ ತಂತ್ರಾರಾಧನೆ ಶಿವ ಸತಿಗೆ ಭೋಧೆ
ಭೋಧೆ=ಬೋಧೆ ಸರಿಯಾ?
----------------
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ೨೧೯ ರಿಂದ ೨೨೮ರ ಕಾವ್ಯ ನಿಜಕ್ಕೂ by makara
ಶ್ರೀಧರರೆ, ಮುದ್ರಾರಾಕ್ಷಸ ಸ್ವಲ್ಪ
ಶ್ರೀಧರರೆ, ಮುದ್ರಾರಾಕ್ಷಸ ಸ್ವಲ್ಪ ಭಾಗ ಕೈಯಲ್ಲಿ ಮತ್ತಷ್ಟು ನಾನು ಬಳಸುವ ಎಡಿಟರಿನಲ್ಲಿ ಸೇರಿಬಿಟ್ಟಿದ್ದಾನೆ. ಆ ಎಡಿಟರಿನಲ್ಲಿ ಮಾಡಿ ಸಂಪದಕ್ಕೆ ವರ್ಗಾಯಿಸಿದಾಗ ಸದ್ದಿಲ್ಲದೆ ಕೆಲವು ಹೀಗೆ ನುಸುಳುತ್ತಿವೆ, ಮುಂದೆ ಪ್ರೂಫ್ ರೀಡಿಂಗಿಗೆ ಇನ್ನಷ್ಟು ಗಮನ ಕೊಡುತ್ತೇನೆ :-)
ಅಂದ ಹಾಗೆ ನೀವು ಬರೆದ 'ಬೋಧೆ'ಯೆ ಸರಿ!
ಈಗ ಸೂಕ್ತವಾಗಿರುವುದೆ ನೋಡಿ - ನಾಗೇಶ ಮೈಸೂರು.
221. ಮಹಾ-ವೀರ್ಯಾ
ದುಡಿಮೆಗೆ ಅರ್ಹತೆಗೆ ಸಿಕ್ಕುವಂತೆ ಪ್ರತಿಫಲ
ಭಕ್ತಿಗನುಸಾರವಾಗಿ ಗುಣ ಪ್ರಸಾದಿಸಿ ಸಕಲ
ಶಕ್ತಿ ಬಲ ತೇಜ ಘನತೆ ಧೈರ್ಯದ ನಿಧಿಯ
ಪಾತ್ರರಿಗ್ಹಂಚುವಳು ಮಾತೆ ಮಹಾ ವೀರ್ಯಾ!
ಅಷ್ಟಸಿದ್ದಿಗಳು
-------------------------------------------------------
ಅಣುವಂತೆ ಕಿರಿದಾಗೆ ಅಣಿಮಾ, ಹಗುರವಾಗೆ ಲಘಿಮಾ
ಹಿರಿದಾದರೆ ಮಹಿಮಾ, ಸ್ವ ಇಂದ್ರಿಯ ನಿಗ್ರಹಿಸೆ ಪ್ರಾಪ್ತಿಃ
ಸರ್ವಾನಂದ ಸಾಮರ್ಥ್ಯ ಪ್ರಾಕಾಮ್ಯಂ, ಸರ್ವ ಪ್ರಭಾವ ಪ್ರಭುತ್ವ ಈಶಿತ್ವಂ
ಇಂದ್ರೀಯ ನಿಯಂತ್ರಣ ವಶಿತ್ವಂ, ಸರ್ವ ಕಾಮನೆ ಪೂರೈಕೆ ಕಾಮವಶ್ಯತ!
೨೨೬. ಮಹಾ-ತಂತ್ರಾ
ತಂತ್ರ ಶಾಸ್ತ್ರ ವ್ಯಾಖ್ಯಾನ ಮಂತ್ರ ಯಂತ್ರ ವೈಜ್ಞಾನಿಕ
ಖಗೋಳಾಂಗ ಜೋತಿಷ್ಯಾಯುರ್ವೇದ ಜ್ಯಾಮಿತಿ ತತ್ವ
ಕಲಿಯುಗ ಸೂಕ್ತ ತಂತ್ರಾರಾಧನೆ ಶಿವ ಸತಿಗೆ ಬೋಧೆ
ಎಲ್ಲ ತಂತ್ರಾ ಕೊನೆಗೊಯ್ಯುತ ಮಹಾ-ತಂತ್ರಾ ಬಳಿಗೆ!
In reply to ಶ್ರೀಧರರೆ, ಮುದ್ರಾರಾಕ್ಷಸ ಸ್ವಲ್ಪ by nageshamysore
ಈಗ ಸರಿಯಾಗಿದೆ ನಾಗೇಶರೆ. ೨೧೯ರಿಂದ
ಈಗ ಸರಿಯಾಗಿದೆ ನಾಗೇಶರೆ. ೨೧೯ರಿಂದ ೨೨೮ನೇ ನಾಮಗಳ ಕಾವ್ಯಗಳು. ಇದನ್ನು ನೇರವಾಗಿ ನಿಮ್ಮ ಲಿಂಕಿಗೆ ಜೋಡಿಸಬಹುದು; ಇದಕ್ಕೆ ಗಣೇಶರು ಅಂಡ್ ಪಾರ್ಥರು ಆಮೋದ ಮುದ್ರೆ ಒತ್ತುತ್ತಾರೆ ಎಂದು ಕೊಳ್ಳುತ್ತೇನೆ. ಅನಂತೇಶ್ ಅವರೂ ಸಹ ಅನುಮೋದಿಸಿದರೆ ಇನ್ನೂ ಒಳ್ಳೆಯದು :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಈಗ ಸರಿಯಾಗಿದೆ ನಾಗೇಶರೆ. ೨೧೯ರಿಂದ by makara
ಶ್ರೀಧರರೆ, ಲಲಿತಾ ಸಹಸ್ರನಾಮ ೨೧೯
ಶ್ರೀಧರರೆ, ಲಲಿತಾ ಸಹಸ್ರನಾಮ ೨೧೯ - ೨೨೮ ಅಂತಿಮ ಕೊಂಡಿ ಸೇರಿಸಿದೆ - ನಾಗೇಶ ಮೈಸೂರು
https://ardharaatriaalaapagalu.wordpress.com/%e0%b3%ac%e0%b3%aa-%e0%b2%…
In reply to ಶ್ರೀಧರರೆ, ಲಲಿತಾ ಸಹಸ್ರನಾಮ ೨೧೯ by nageshamysore
ಲಲಿತಾಸಹಸ್ರನಾಮದ ಬಳಿಕ ವಿಷ್ಣು
ಲಲಿತಾಸಹಸ್ರನಾಮದ ಬಳಿಕ ವಿಷ್ಣು ಸಹಸ್ರನಾಮ ?
ಶ್ರೀ ಶ್ರೀ ಶ್ರೀಧರ ಜೀ,
ಲಲಿತಾಸಹಸ್ರನಾಮದ ಮೇಲಿನ ನಿಮ್ಮ ಪಾಂಡಿತ್ಯಪೂರ್ಣ ಬರಹವನ್ನು, ಪ್ರತಿಕ್ರಿಯೆಗಳನ್ನು ಓದದಿದ್ದರೂ ಗಮನಿಸುತ್ತಿದ್ದೇನೆ.
ಈ ನನ್ನ ಅನಾಸಕ್ತಿ, ಅಜ್ಞಾನಗಳನ್ನು ಕ್ಷಮಿಸಿ.
ಬಹಳ ವರ್ಷಗಳ ಹಿಂದೆ ನನ್ನ ಗ್ರಹಚಾರ ಪರಿಹಾರಕ್ಕೋಸ್ಕರ ಶ್ರೀ ವಿಷ್ಣು ಸಹಸ್ರನಾಮ ಪಠಣವನ್ನು ಹಿರಿಯರ ಸಲಹೆಯಂತೆ ಶುರು ಮಾಡಿದೆ.
ಸುಬ್ಬುಲಕ್ಷ್ಮಿ ಅವರ ಧ್ವನಿಮುದ್ರಿಕೆ ಕೇಳುತ್ತ ಕಷ್ಟದಿಂದ ನಾಲಿಗೆ ಹೊರಳಿಸಿ ಪಠಿಸುತ್ತಿದ್ದೆ . ಆ ಮೇಲೆ ಅಭ್ಯಾಸ ತಪ್ಪಿ ಹೋಯಿತು
.ಈಗ ಮತ್ತೆ ಆರಂಭಿಸಿದ್ದೇನೆ.
ಇಲ್ಲಿನ ಶ್ಲೋಕಗಳ ಗೇಯತೆ, ಪ್ರಾಸಬದ್ಧತೆಗಳನ್ನು ಮೆಚ್ಚಿದ್ದೇನೆ.
ಆದಿಪ್ರಾಸ, ಮಧ್ಯಪ್ರಾಸ, ಅಂತ್ಯಪ್ರಾಸ ಮುಂತಾಗಿ ಅನೇಕ ಚಮತ್ಕಾರಗಳಿವೆ.
ಎಷ್ಟೋ tonguetwister ಗಳಿವೆ.
ಅರ್ಥ ಮಾತ್ರ ನನಗೆ ಇನ್ನೂ ದಕ್ಕಿಲ್ಲ.
ಲಲಿತಾಸಹಸ್ರನಾಮ ವರ್ಸಸ್ ವಿಷ್ಣುಸಹಸ್ರನಾಮ ಹೋಲಿಕೆ, ವೈರುಧ್ಯ, ಮಹತ್ತು, ಅರ್ಥವಿವರಣೆಗಳ ಕುರಿತು ಕುತೂಹಲವಿದೆ.
ಕಿಶೋರಿ ಆಮೋಣ್ ಕರ್, ವಿದ್ಯಾಭೂಷಣರ ಧ್ವನಿಮುದ್ರಿಕೆಗಳೂ ಇವೆ, ಆದರೆ ಸುಬ್ಬುಲಕ್ಷ್ಮಿ ಯವರ ಮುಂದೆ ಅವು ಸ್ವಲ್ಪ ಸಪ್ಪೆಯೇ ಸರಿ.
ಒಂದೆಡೆ ನಿಮ್ಮ ಹೆಸರು ಮೊದಲು ಬಂದು ನಂತರ ಶ್ರೀಕರ ಎಂದಿದೆ.
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಹ್ ಶ್ರೀವಿಭಾವನಃ
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ
ಇಲ್ಲಿನ ಅನೇಕ ಶ್ಲೋಕಗಳು ಜನಪ್ರಿಯವಾಗಿದ್ದು quotes ಗಳಾಗಿವೆ. ಉದಾ: ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ । ಯೋಗಕ್ಷೇಮಮ್ ವಹಾಮ್ಯಹಂ , ಇತ್ಯಾದಿ
In reply to ಶ್ರೀಧರರೆ, ಲಲಿತಾ ಸಹಸ್ರನಾಮ ೨೧೯ by nageshamysore
ಲಲಿತಾಸಹಸ್ರನಾಮದ ಬಳಿಕ ವಿಷ್ಣು
ಲಲಿತಾಸಹಸ್ರನಾಮದ ಬಳಿಕ ವಿಷ್ಣು ಸಹಸ್ರನಾಮ ?
ಶ್ರೀ ಶ್ರೀ ಶ್ರೀಧರ ಜೀ,
ಲಲಿತಾಸಹಸ್ರನಾಮದ ಮೇಲಿನ ನಿಮ್ಮ ಪಾಂಡಿತ್ಯಪೂರ್ಣ ಬರಹವನ್ನು, ಪ್ರತಿಕ್ರಿಯೆಗಳನ್ನು ಓದದಿದ್ದರೂ ಗಮನಿಸುತ್ತಿದ್ದೇನೆ.
ಈ ನನ್ನ ಅನಾಸಕ್ತಿ, ಅಜ್ಞಾನಗಳನ್ನು ಕ್ಷಮಿಸಿ.
ಬಹಳ ವರ್ಷಗಳ ಹಿಂದೆ ನನ್ನ ಗ್ರಹಚಾರ ಪರಿಹಾರಕ್ಕೋಸ್ಕರ ಶ್ರೀ ವಿಷ್ಣು ಸಹಸ್ರನಾಮ ಪಠಣವನ್ನು ಹಿರಿಯರ ಸಲಹೆಯಂತೆ ಶುರು ಮಾಡಿದೆ.
ಸುಬ್ಬುಲಕ್ಷ್ಮಿ ಅವರ ಧ್ವನಿಮುದ್ರಿಕೆ ಕೇಳುತ್ತ ಕಷ್ಟದಿಂದ ನಾಲಿಗೆ ಹೊರಳಿಸಿ ಪಠಿಸುತ್ತಿದ್ದೆ . ಆ ಮೇಲೆ ಅಭ್ಯಾಸ ತಪ್ಪಿ ಹೋಯಿತು
.ಈಗ ಮತ್ತೆ ಆರಂಭಿಸಿದ್ದೇನೆ.
ಇಲ್ಲಿನ ಶ್ಲೋಕಗಳ ಗೇಯತೆ, ಪ್ರಾಸಬದ್ಧತೆಗಳನ್ನು ಮೆಚ್ಚಿದ್ದೇನೆ.
ಆದಿಪ್ರಾಸ, ಮಧ್ಯಪ್ರಾಸ, ಅಂತ್ಯಪ್ರಾಸ ಮುಂತಾಗಿ ಅನೇಕ ಚಮತ್ಕಾರಗಳಿವೆ.
ಎಷ್ಟೋ tonguetwister ಗಳಿವೆ.
ಅರ್ಥ ಮಾತ್ರ ನನಗೆ ಇನ್ನೂ ದಕ್ಕಿಲ್ಲ.
ಲಲಿತಾಸಹಸ್ರನಾಮ ವರ್ಸಸ್ ವಿಷ್ಣುಸಹಸ್ರನಾಮ ಹೋಲಿಕೆ, ವೈರುಧ್ಯ, ಮಹತ್ತು, ಅರ್ಥವಿವರಣೆಗಳ ಕುರಿತು ಕುತೂಹಲವಿದೆ.
ಕಿಶೋರಿ ಆಮೋಣ್ ಕರ್, ವಿದ್ಯಾಭೂಷಣರ ಧ್ವನಿಮುದ್ರಿಕೆಗಳೂ ಇವೆ, ಆದರೆ ಸುಬ್ಬುಲಕ್ಷ್ಮಿ ಯವರ ಮುಂದೆ ಅವು ಸ್ವಲ್ಪ ಸಪ್ಪೆಯೇ ಸರಿ.
ಒಂದೆಡೆ ನಿಮ್ಮ ಹೆಸರು ಮೊದಲು ಬಂದು ನಂತರ ಶ್ರೀಕರ ಎಂದಿದೆ.
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಹ್ ಶ್ರೀವಿಭಾವನಃ
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ
ಇಲ್ಲಿನ ಅನೇಕ ಶ್ಲೋಕಗಳು ಜನಪ್ರಿಯವಾಗಿದ್ದು quotes ಗಳಾಗಿವೆ. ಉದಾ: ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ। ಯೋಗಕ್ಷೇಮಮ್ ವಹಾಮ್ಯಹಂ , ಇತ್ಯಾದಿ
In reply to ಲಲಿತಾಸಹಸ್ರನಾಮದ ಬಳಿಕ ವಿಷ್ಣು by Shreekar
ಶ್ರೀಕರ್ ಜಿ,
ಶ್ರೀಕರ್ ಜಿ,
ನಿಮ್ಮ ಆಸಕ್ತಿಗೆ ಧನ್ಯವಾದಗಳು, ನಿಮ್ಮ ಇಷ್ಟು ದಿವಸದ ಅನಾಸಕ್ತಿಯ ಕುರಿತು ಚಿಂತಿಸಬೇಡಿ. ಇಷ್ಟು ದಿವಸಗಳ ನಂತರವಾದರೂ ನಿಮಗೆ ಲಲಿತಾ ಸಹಸ್ರನಾಮದ ಕುರಿತಾದ ಆಸಕ್ತಿ ಮೂಡಿದೆ ಎಂದರೆ ಅದಕ್ಕೆ ಖಂಡಿತಾ ದೇವಿಯ ಕೃಪಾಶೀರ್ವಾದವಿದೆ. ನಿಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿರುವಂತೆ, ವಿಷ್ಣು ಸಹಸ್ರನಾಮ ಪಾರಾಯಣವನ್ನು ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸುತ್ತಿರುವವರು ಅದರಿಂದ ಮುಕ್ತವಾಗಲು ಪಠಿಸುವುದು ರೂಢಿಯಲ್ಲಿದೆ. ಅದನ್ನು ಸಾಮಾನ್ಯವಾಗಿ ಪ್ರಾತಃ ಸಂಧ್ಯಾ ಸಮಯದಲ್ಲಿ ಮಾಡಬೇಕೆಂದು ವಿಧಿಸಲಾಗಿದೆ. ಅದೇ ರೀತಿ ಶಿವನ ಕೀರ್ತನೆಗಳನ್ನು ಸಾಯಂ ಸಂಧ್ಯಾ ವೇಳೆಯಲ್ಲಿಯೂ ಮತ್ತು ದೇವಿಯ ಆರಾಧನೆಯನ್ನು ರಾತ್ರಿಯ ಹೊತ್ತಿನಲ್ಲಿಯೂ ಮಾಡಬೇಕೆಂದು ವಿಧಿಸಿದ್ದಾರೆ. ಅದೇನೆ ಇರಲಿ, ದೇವರನ್ನು ಯಾವ ವಿಧವಾಗಿಯಾದರೂ ಪೂಜಿಸಬಹುದು. ಈ ದೇವರನ್ನೇ ಪರಬ್ರಹ್ಮವೆಂದು ಕರೆಯುತ್ತಾರೆ.
ಪರಬ್ರಹ್ಮವನ್ನು ಸಗುಣನೆಂದೂ ಮತ್ತು ನಿರ್ಗುಣನೆಂದೂ ಎರಡು ವಿಧವಾಗಿ ಪೂಜಿಸುವರು. ನಿರ್ಗುಣ ನಿರಾಕಾರ ಬ್ರಹ್ಮದ ಉಪಾಸನೆ ಬಹಳ ಕಠಿಣತರವಾದದ್ದು; ಆದ್ದರಿಂದ ಭಗವತ್ ಸಾಕ್ಷಾತ್ಕಾರದ ಪ್ರಾರಂಭಿಕ ಹಂತದಲ್ಲಿರುವವರಿಗೆ ಸಗುಣ ಮತ್ತು ಸಾಕಾರ ಬ್ರಹ್ಮದ ಆರಾಧನೆಯನ್ನು ಶಿಪಾರಸು ಮಾಡಲಾಗುತ್ತದೆ. ಈ ಸಾಕಾರ ಬ್ರಹ್ಮವು ಸ್ವತಃ ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ ಆದರೂ ಆದರೂ ಭಕ್ತನ ಭಾವನೆಗೆ ಅನುಸಾರವಾಗಿ ಪುಂ ಅಥವಾ ಸ್ತ್ರೀ ರೂಪವನ್ನು ಧರಿಸಬಲ್ಲದು. ವೈಷ್ಣವರೂ, ಶೈವರೂ, ಸೌರರೂ, ಗಾಣಪತ್ಯರೂ, ಪುಂಭಾವವನ್ನು ಮೆಚ್ಚುವರು. ಶಾಕ್ತರಾದರೋ, ಸಾಕಾರಬ್ರಹ್ಮನನ್ನು ಜಗನ್ಮಾತೆಯೆಂದು ಕಾಣುವರು. ದೇವರು ತಾಯಿಯೆಂಬ ಭಾವನೆಯು, ಭಕ್ತನಿಗೂ, ಅವನ ಇಷ್ಟದೇವತೆಗೂ ಮಧುರಬಾಂಧವ್ಯವನ್ನು ಕಲ್ಪಿಸುವುದು. ಭಕ್ತನು ಮಗುವಿನಂತೆ ಜಗನ್ಮಾತೆಯ ಪ್ರೇಮಾದರಗಳಿಗೆ ಪಾತ್ರನಾಗುವನು. ಇದು ದೇವಿ ಲಲಿತಾಂಬಿಕೆಯ ಆರಾಧನೆಯ ಹಿನ್ನಲೆಯಲ್ಲಿರುವ ಕಲ್ಷನೆ. ಇದರ ಕುರಿತ ಹೆಚ್ಚಿನ ವಿವರಗಳಿಗಾಗಿ ಈ ಲೇಖನವನ್ನು ನೋಡಿ - ತಾಂತ್ರಿಕ ಸಾಧನ (ಭಕ್ತಿಯೋಗದ ಅಂಶಗಳು) http://sampada.net/blog/%E0%B2%A4%E0%B2%BE%E0%B2%82%E0%B2%A4%E0%B3%8D%E…
ವಿಷ್ಣು ಸಹಸ್ರನಾಮದ ಬಗೆಗಿನ ಸಂಪೂರ್ಣ ವಿವರಗಳನ್ನು ತಿಳಿಯಬೇಕೆಂದರೆ ಸ್ವಾಮಿ ವಿಜ್ಞಾನಂದ ಅವರು ರಚಿಸಿರುವ ಶ್ರೀ ವಿಷ್ಣು ಸಹಸ್ರನಾಮ (ಭಾಷ್ಯ ಸಹಿತ), ಪ್ರಕಟಣೆ ಶ್ರೀ ರಾಮಕೃಷ್ಣಾಶ್ರಮ, ಯಾದವಗಿರಿ, ಮೈಸೂರು; ಈ ಪುಸ್ತಕವನ್ನು ಓದಿ. ಇದರಲ್ಲಿ ಎಲ್ಲಾ ನಾಮಗಳ ಕುರಿತಾದ ಅತ್ಯಂತ ಸರಳ ವಿಶ್ಲೇಷಣೆಯಿದೆ. ನನ್ನ ಬಳಿ ಅದರ ೨೦೦೭ ಇಸವಿಯಲ್ಲಿ ಪ್ರಕಟವಾದ ಆವೃತ್ತಿ ಇದೆ. ಆಗಿನ ಬೆಲೆ ೨೫ರೂಪಾಯಿಗಳು ಮಾತ್ರ. ಇರಲಿ, ನೀವು ಎತ್ತಿರುವ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮದ ತುಲನಾತ್ಮಕ ಹೋಲಿಕೆಯನ್ನು ತಿಳಿಯಬೇಕೆಂದರೆ ಸಂಪದದ ಕೆಳಗಿನೆರಡು ಲೇಖನಗಳನ್ನು ನೋಡಿ.
೭. ಲಲಿತಾ ಮತ್ತು ಶ್ರೀ ಕೃಷ್ಣ
http://sampada.net/blog/%E0%B3%AD-%E0%B2%B2%E0%B2%B2%E0%B2%BF%E0%B2%A4%…
೮. ಲಲಿತಾ ಸಹಸ್ರನಾಮದ ವಿವರಣೆ - ಶ್ರೀ ಲಲಿತೆಯೇ ಶ್ರೀ ಕೃಷ್ಣ
http://sampada.net/blog/%E0%B3%AE-%E0%B2%B2%E0%B2%B2%E0%B2%BF%E0%B2%A4%…
ಇನ್ನು ಸುಬ್ಬುಲಕ್ಷ್ಮಿಯವರು ಹಾಡಿರುವ ವಿಷ್ಣು ಸಹಸ್ರನಾಮ ಚೆನ್ನಾಗಿದೆಯೆಂದರೆ ಅವರು ಇತರರಿಗಿಂತ ಅದನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಹಾಡಿರುತ್ತಾರಾದ್ದರಿಂದ ಅದು ನಿಮ್ಮ ಮನಸ್ಸಿಗೆ ಶಾಂತಿಯನ್ನು ಕೊಡಬಹುದೆನಿಸುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಕೊನೆ ಹನಿ - ಶ್ರೀಧರ ಕೇವಲ ಲಕ್ಷ್ಮಿಯನ್ನು ಧರಿಸಿದ್ದಾರೆ, ಶ್ರೀ ಕರ ಸಂಪದವನ್ನು ಉಂಟು ಮಾಡುತ್ತಾನೆ. ಮೊದಲು ಬಂದದ್ದಲ್ಲ ಮುಖ್ಯವಾದದ್ದು ಆದರೆ ಏನು ಮಾಡುತ್ತಾನೆ ಎನ್ನುವುದು ಮುಖ್ಯವಾದದ್ದು :))
In reply to ಶ್ರೀಕರ್ ಜಿ, by makara
ಶ್ರೀಧರಜೀ, ಅದ್ಭುತ ವಿವರಣೆಗಳು !
ಶ್ರೀಧರಜೀ, ಅದ್ಭುತ ವಿವರಣೆಗಳು !
ಸುಬ್ಬುಲಕ್ಷ್ಮಿಯವರ ಶ್ರದ್ಧಾಭಕ್ತಿಗಳ ಬಗ್ಗೆ ಬರೆದದ್ದು, ಹಾಗೆಯೇ, ಕೊನೆ ಹನಿ ಇಷ್ಟವಾದವು.
ಸುಬ್ಬುಲಕ್ಷ್ಮಿಯವರು ಆರಂಭದಲ್ಲಿ ಇದ್ದಷ್ಟೇ ತಾಜಾತನ, ಕಸುವುಗಳನ್ನು ಕೊನೆಯತನಕವೂ ಉಳಿಸಿದ್ದಾರೆ. ನಾನೋ ಇಪ್ಪತ್ತು ಶ್ಲೋಕ ಪಠಿಸುವಷ್ಟರಲ್ಲಿ ದನಿ ಬಿದ್ದಿರುತ್ತದೆ.
ಮೊದಲೇ ಉತ್ತಮಬರಹಗಾರರಾದ ನೀವು ಲಲಿತಾಸಹಸ್ರನಾಮದ ಬರಹದ ನಂತರ ಇನ್ನಷ್ಟು ಬೆಳೆದಿರುವುದು ಕಾಣುತ್ತದೆ. ಶಾಂತಿ ಸಮಾಧಾನಗಳು ಪ್ರಧಾನವಾಗಿರುವಂತೆ ಅನಿಸುತ್ತಿದೆ
In reply to ಶ್ರೀಧರಜೀ, ಅದ್ಭುತ ವಿವರಣೆಗಳು ! by Shreekar
ಶ್ರೀಕರ್‌ಜಿ, ನಿಮ್ಮ ಮೆಚ್ಚುಗೆಗೆ
ಶ್ರೀಕರ್‌ಜಿ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಒಂದು ವಿಷಯವನ್ನು ನೀವು ಇಲ್ಲಿ ಗಮನಿಸಿಲ್ಲ. ಈ ಸರಣಿ ಲೇಖನಗಳ ಮೂಲ ಬರಹಗಾರರು ಶ್ರೀಯುತ ವಿ. ರವಿ, ಚೆನ್ನೈ ಇವರು. ಅವರ ಬ್ಲಾಗಿನ ಕೊಂಡಿಯನ್ನು ಪ್ರತಿ ಕಂತಿನಲ್ಲೂ ಕಡೆಯಲ್ಲಿ ಕೊಡುತ್ತಿದ್ದೇನೆ. ಆದ್ದರಿಂದ ಎಲ್ಲಾ ವಿಧವಾದ ಶ್ರೇಯಸ್ಸುಗಳು ಅವರಿಗೇ ಸಲ್ಲಬೇಕು; ನಾನು ಕೇವಲ ಅನುವಾದಕನಷ್ಟೇ!
ಸುಬ್ಬಲಕ್ಷ್ಮಿಯವರದು ಮೊದಲಿನಿಂದ ಕಡೆಯ ತನಕ ಒಂದೇ ದನಿಯಲ್ಲಿ ಹಾಡುತ್ತಾರೆ ಎಂದರೆ ಅವರ ಹಾಡಿನ ಹಿಂದೆ ವರ್ಷಗಳಷ್ಟು ಸಾಧನೆಯಿದೆ ಎನ್ನುವುದನ್ನು ನೆನಪಿಡಿ. ನಾವೂ ಸಹ ಸತತ ಅಭ್ಯಾಸದಿಂದ ಒಂದೇ ತೆರನಾಗಿ ಪಠಿಸುವುದನ್ನು ಕಲಿಯಬಹುದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಹಿಂದಿನ ಪ್ರತಿಕ್ರಿಯೆಯ ಕೊನೆ ಹನಿ - ಶ್ರೀಧರ ಕೇವಲ ಲಕ್ಷ್ಮಿಯನ್ನು ಧರಿಸಿದ್ದಾರೆ, ಶ್ರೀ ಕರ ಸಂಪದವನ್ನು ಉಂಟು ಮಾಡುತ್ತಾನೆ. ಮೊದಲು ಬಂದದ್ದಲ್ಲ ಮುಖ್ಯವಾದದ್ದು ಆದರೆ ಏನು ಮಾಡುತ್ತಾನೆ ಎನ್ನುವುದು ಮುಖ್ಯವಾದದ್ದು :)) --- ಇಲ್ಲಿ ಧರಿಸಿದ್ದಾರೆ ಬದಲು ಧರಿಸಿದ್ದರೆ ಎಂದಾಗಬೇಕಿತ್ತು.
In reply to ಶ್ರೀಕರ್‌ಜಿ, ನಿಮ್ಮ ಮೆಚ್ಚುಗೆಗೆ by makara
ಹಾಗಿದ್ದರೆ ಶ್ರೀಧರರಿಗೆ ನಮಿಸಿ,
ಹಾಗಿದ್ದರೆ ಶ್ರೀಧರರಿಗೆ ನಮಿಸಿ, ಶ್ರೀಕರರಲ್ಲಿ ಬೇಡಿಕೆ ಸಲ್ಲಿಸುವೆವು. :)
In reply to ಹಾಗಿದ್ದರೆ ಶ್ರೀಧರರಿಗೆ ನಮಿಸಿ, by ಗಣೇಶ
ಜೈಗಣೇಶ !
ಜೈಗಣೇಶ !
ಗಣೇಶಣ್ಣಾ
ಶ್ರೀಧರ, ಶ್ರೀಕರರು ಯಾರಿಗೂ ನಿರಾಶೆಗೊಳಿಸಲಾರರು.
ವಿಷ್ಣು ಸಹಸ್ರನಾಮದ ಬಗೆಗಿನ ಸಂಪೂರ್ಣ ವಿವರಗಳನ್ನು ಪೂರೈಸುವ ಶ್ರೀ ರಾಮಕೃಷ್ಣಾಶ್ರಮ, ಯಾದವಗಿರಿ, ಮೈಸೂರು ಇವರ ಪ್ರಕಟಣೆ ಸ್ವಾಮಿ ವಿಜ್ಞಾನಂದ ಅವರು ರಚಿಸಿರುವ ಶ್ರೀ ವಿಷ್ಣು ಸಹಸ್ರನಾಮ (ಭಾಷ್ಯ ಸಹಿತ), ಇದನ್ನು ನಿಮಗೆ ಕಳಿಸಲು ನಿಮ್ಮ ವಿಳಾಸವನ್ನು shree.kar@yahoo.in ಇದಕ್ಕೆ ದಯವಿಟ್ಟು ಬರೆಯಿರಿ.
ನಮ್ಮ ಪುಟ್ಟಿಗೆ ಮೂರನೇ ಯೋಗ್ಯತಾ ಯಾದಿಯಲ್ಲಿ ಹೆಸರು ಬಂದು ಬೆಳಗಾವಿಯಲ್ಲಿ ಕಿವಿ, ಮೂಗು, ಗಂಟಲು ವಿಷಯದಲ್ಲಿ ಆಯ್ಕೆಯಾಯಿತು ಎಂದು ನಿನ್ನೆ ತಿಳಿಯಿತು.
In reply to ಜೈಗಣೇಶ ! by Shreekar
<p>@ಶ್ರೀಕರ್‌ಜಿ,<br />
@ಶ್ರೀಕರ್‌ಜಿ,
ನಿಮ್ಮ ಪುಟ್ಟಿಗೆ ಮೂರನೇ ಯಾದಿಯಲ್ಲಿ ಕಿವಿ, ಮೂಗು & ಗಂಟಲು ವಿಷಯದಲ್ಲಿ ಮುಂದಿನ ವ್ಯಾಸಂಗಕ್ಕೆ ಸೀಟು ಸಿಕ್ಕಿರುವುದಕ್ಕೆ ಅಭಿನಂದನೆಗಳು.
In reply to ಜೈಗಣೇಶ ! by Shreekar
ಉ: ೬೪. ಶ್ರೀ ಲಲಿತಾ ಸಹಸ್ರನಾಮ ೨೧೯ರಿಂದ ೨೨೮ನೇ ನಾಮಗಳ ವಿವರಣೆ
ಶ್ರೀಕರ್‌ಜಿ, ಡಾ.ಪುಟ್ಟಿಗೆ ನನ್ನ ಶುಭಾಶಯಗಳನ್ನು ತಿಳಿಸಿ. ನನ್ನ ಮಗಳು ಮೊದಲ ಪಟ್ಟಿಯಲ್ಲಿ ಅವಳಿಗೆ ಬೇಕಾದ ಸಬ್ಜೆಕ್ಟ್ ಇಲ್ಲ ಎಂದಾಕ್ಷಣ, ಮುಂದಿನ ವರ್ಷದ ಸಿ ಇ ಟಿಗೆ ತಯಾರಿ ನಡೆಸಲು ಪ್ರಾರಂಭಿಸಿದ್ದಾಳೆ.
In reply to ಲಲಿತಾಸಹಸ್ರನಾಮದ ಬಳಿಕ ವಿಷ್ಣು by Shreekar
ಶ್ರೀಕರ್‌ಜಿ,
ಶ್ರೀಕರ್‌ಜಿ,
>>ಬಹಳ ವರ್ಷಗಳ ಹಿಂದೆ ನನ್ನ ಗ್ರಹಚಾರ ಪರಿಹಾರಕ್ಕೋಸ್ಕರ ಶ್ರೀ ವಿಷ್ಣು ಸಹಸ್ರನಾಮ ಪಠಣವನ್ನು ಹಿರಿಯರ ಸಲಹೆಯಂತೆ ಶುರು ಮಾಡಿದೆ.
-ಗ್ರಹಚಾರ ಪರಿಹಾರಕ್ಕೋಸ್ಕರ...-->ನಾನೂ ಮಾಡಿದ್ದೆ. ಅದು ಈಗಲೂ ಮುಂದುವರೆದಿದೆ. ಆದರೆ>>> "....ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ। ಯೋಗಕ್ಷೇಮಮ್ ವಹಾಮ್ಯಹಂ , ಇತ್ಯಾದಿ" ನಾನು ಓದುತ್ತಿರುವ ವಿಷ್ಣು ಸಹಸ್ರನಾಮದಲ್ಲಿ ಸೇರಿಸಬೇಕಷ್ಟೆ.:)
In reply to ಶ್ರೀಕರ್‌ಜಿ, by ಗಣೇಶ
ಗಣೇಶ್.ಜಿ ಅಂತೂ ಬಹಳ ದಿನದ ದೇವಿಯ
ಗಣೇಶ್.ಜಿ ಅಂತೂ ಬಹಳ ದಿನದ ದೇವಿಯ ಆರಾಧನೆ ಮಾಡುವ ಸಮಯದಲ್ಲಿ ಸಿಕ್ಕಿದ್ದೀರ, ನಮಸ್ಕಾರ. ಅಂದಹಾಗೆ, ವಿಷ್ಣು ಸಹಸ್ರನಾಮದಲ್ಲಿ ಶ್ರೀಕರರು ಹೇಳಿರುವ ವಿಷಯಗಳನ್ನು ನೀವೇನೂ ಹೊಸದಾಗಿ ಸೇರಿಸಬೇಕಾಗಿಲ್ಲ. ಈ ವಿಷಯಗಳೆಲ್ಲವೂ ಫಲಶ್ರುತಿಯ ಭಾಗದಲ್ಲಿ ಬರುತ್ತವೆ. ನೀವು ಫಲಶ್ರುತಿಯನ್ನು ಹೇಳಿಕೊಳ್ಳುವುದಿಲ್ಲ ಎಂದು ಹಿಂದೊಮ್ಮೆ ಲೇಖನವೊಂದಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದಂತೆ ನೆನಪು; ಏಕೆಂದರೆ ಇವು ಒಂದು ರೀತಿಯ ಯಾಡ್ ಇದ್ದಂತೆ ಎಂದೂ ಸಹ ಪ್ರಸ್ತಾಪಿಸಿದ್ದಿರಿ!
ಗಣೇಶರೆ, ಶ್ರೀಧರನನ್ನು ವಂದಿಸಿ ಆಮೇಲೆ ಶ್ರೀಕರನಲ್ಲಿ ಬೇಡಿಕೆ ಸಲ್ಲಿಸುವೆವು ಎಂದಿದ್ದೀರ; ನನ್ನನ್ನು ನಮಿಸಿದರೆ ಏನೂ ಸಿಕ್ಕದು ಆದ್ದರಿಂದ ಕೊಡುವವನ್ನು ನಮಿಸಿ ಮತ್ತು ಮನವಿ ಸಲ್ಲಿಸಿ. ಆಗ ಟೂ-ಇನ್-ಒನ್ ಆಗುತ್ತದೆ :))
In reply to ಗಣೇಶ್.ಜಿ ಅಂತೂ ಬಹಳ ದಿನದ ದೇವಿಯ by makara
ನಿಜ ಶ್ರೀಧರ್‌ಜಿ, ಫಲಶ್ರುತಿ ನೋಡೇ
ನಿಜ ಶ್ರೀಧರ್‌ಜಿ, ಫಲಶ್ರುತಿ ನೋಡೇ ಇಲ್ಲ. :(
ನಾನೂ ಗಾಯತ್ರಿ ಮಂತ್ರದ ಛಂದಸ್ಸಿನ ಬಗ್ಗೆ ನೆಟ್ ಹುಡುಕುತ್ತಿದೆ. ಕರೆಂಟು ಹೋಗಿದ್ದರಿಂದ ಇಷ್ಟು ತಡವಾಯಿತು. ಈ ಬ್ಲಾಗ್ ನಲ್ಲಿ ಅದರ ಬಗ್ಗೆ ಕೆಲ ವಿವರವಿದೆ- http://creative.sulekha.com/sri-gayatri-part-one-rishi-chhandas-and-the…
In reply to ನಿಜ ಶ್ರೀಧರ್‌ಜಿ, ಫಲಶ್ರುತಿ ನೋಡೇ by ಗಣೇಶ
ಬಹಳ ಉಪಯುಕ್ತ ಕೊಂಡಿಯನ್ನು
ಬಹಳ ಉಪಯುಕ್ತ ಕೊಂಡಿಯನ್ನು ಕೊಟ್ಟಿದ್ದೀರ ಗಣೇಶರೆ, ಅದಕ್ಕಾಗಿ ನಿಮಗೆ ಅನಂತಾನಂತ ವಂದನೆಗಳು. ಅದರೊಂದಿಗೆ ಶಕ್ತಿ ಆರಾಧನೆಯ ಕುರಿತಾದ ಹಲವಾರು ಕೊಂಡಿಗಳೂ ಸಹ ಉಚಿತ ಕೊಡುಗೆಯಾಗಿ ಸಿಕ್ಕವು, ಆ ಬರಹಕ್ಕೆ ಪ್ರತಿಕ್ರಿಯಿಸಿದ ಓದುಗರೊಬ್ಬರ ಕೃಪೆಯಿಂದಾಗಿ :)
In reply to ಈಗ ಸರಿಯಾಗಿದೆ ನಾಗೇಶರೆ. ೨೧೯ರಿಂದ by makara
<p>ನಮಸ್ತೆ, ಒಂದು ತಿಂಗಳು
ನಮಸ್ತೆ, ಒಂದು ತಿಂಗಳು ಇಂಟರ್ನೆಟ್ ಇಅರಲಿಲ್ಲ.. ಆದ್ದರಿಂದ ನಿಮ್ಮ ಎಲ್ಲ ಲೇಖನಗಳನ್ನು ಓದಲು ಆಗಿರಲಿಲ್ಲ.
ಈಗ ಒಮ್ಮೆಲೆ ತುಂಬಾ ಓದಬೇಕಾಗಿದೆ. ಇನ್ನು ೧೫-೨೦ ದಿನ ಬೇರೆ ಕಡೆ ಹೋಗಬೇಕಾಗಿದೆ..
ಆದ್ದರಿಂದ ನಿಧಾನವಾಗಿ ನೋಡುವೆ. ದಯವಿಟ್ಟು ಮನ್ನಿಸಿರಿ :)
In reply to <p>ನಮಸ್ತೆ, ಒಂದು ತಿಂಗಳು by ananthesha nempu
<p>ಅನಂತೇಶರೆ,<br />
ಅನಂತೇಶರೆ,
ನಿಮಗೂ ವಂದನೆಗಳು. ನಿಮಗೆ ಸಮಯ ಸಿಕ್ಕಾಗ ನಿಧಾನವಾಗಿ ಓದಿ ಪ್ರತಿಕ್ರಿಯಿಸಿ ಪರವಾಗಿಲ್ಲ. ನನ್ನಿಂದ ಓದುಗರಿಗೆ ತಪ್ಪು ಮಾಹಿತಿ ಹೋಗಬಾರೆದೆನ್ನುವುದಷ್ಟೇ ನನ್ನ ಕಳಕಳಿ. ಅದನ್ನು ಆಮೇಲೆಯಾದರೂ ತಿದ್ದಿ ಸರಿಪಡಿಸಬಹುದು.