ದೇವರು

ದೇವರು

ಬಿಸಿಲೆಂದರೆ ಬಿಸಿಲು. ಆ ಕಾಡಿನ ಎಲೆಗಳೆಲ್ಲಾ ಉದುರಿ ಗೊಬ್ಬರವಾಗಿದ್ದವು. ಎಲ್ಲಾ ಬೋಳು ಬೋಳು. ಇದ್ದ ಒಂದೆರಡು ಕೆರೆ ಕೊರಕಲುಗಳು ಒಣಗಿ ಬಿರಿದ ಚರ್ಮದಂತಾಗಿದ್ದವು. ಅಲ್ಲಿಯೇ ಇದ್ದ ಒಂದು ತೋಪಿನಲ್ಲಿ ವಾಸವಾಗಿದ್ದ ಕೋತಿಗಳೆಲ್ಲಾ ಪ್ರತಿದಿನ ಆಕಾಶ ನೋಡುತ್ತ ಸುಮ್ಮನೇ ಕುಳಿತುಕೊಳ್ಳುವಂತಾಯಿತು. ಕುಡಿಯಲು ತೊಟ್ಟೂ ನೀರಿರಲಿಲ್ಲ. ಮೊನ್ನೆ ಎಲ್ಲಾ ಕೋತಿಗಳು ಬಸವಳಿದು, ಕಣ್ಣಿಗೆ ಮಂಪರು ಕವಿದಂತಾಗಿ, ಬೆವರೊರೆಸಿಕೊಳ್ಳುತ್ತ ಒಣಗಿದ್ದ ಮರಗಳನ್ನೊರಗಿ ಕುಳಿತಿರುವಾಗ ಇದ್ದಕ್ಕಿದ್ದಂತೆ ‘ಧತ್’ ಎಂಬ ಸದ್ದು ಕಿವಿಗಪ್ಪಳಿಸಿತ್ತು. ಗಾಬರಿಗೊಂಡು ಹತ್ತಿರ ಓಡಿಹೋದ ಕೋತಿಗಳು ‘ನೀರು ತನ್ನಿ, ನೀರು ತನ್ನಿ, ತಡಮಾಡಬೇಡಿ’ ಎಂದು ಕೂಗಿಕೊಂಡವು. ಪೊದೆ ಪೊದೆಗಳನ್ನೆಲ್ಲಾ ಬಗೆದರೂ, ನೆಲ ಅಗೆದರೂ, ಹುಡುಕಾಡಿದರೂ ತಡಕಾಡಿದರೂ ನೀರು ಸಿಗದ ಕಾರಣ, ಒಂದಷ್ಟು ತಲೆಮಾರುಗಳನ್ನು ಕಂಡಿದ್ದ, ಆ ಪೋಡಿನ ಹಿರಿಯ ಕೋತಿಯೊಂದು ಕೊನೆಗೂ ಕೊನೆಯ ಉಸಿರೆಳೆದು ಈ ಜಗವನ್ನು ತೊರೆಯಿತು.

ಈಯೆಲ್ಲಾ ದುಃಖಗಳ ಜೊತೆಗೆ ತಮ್ಮ ಸಂತತಿಯ ಹಿರಿಯ ಕೋತಿಯೊಂದನ್ನು ಕಳೆದುಕೊಂಡ ನೋವಿನಲ್ಲಿ ಎಲ್ಲಾ ಕೋತಿಗಳು ಮುಳುಗಿರುವಾಗÀ ಆಕಾಶದಲ್ಲಿ ಅಪರೂಪದಲ್ಲಪರೂಪಕ್ಕೆ ಮೋಡಗಳ ಗರ್ಭ ಕಟ್ಟಿತ್ತು. ‘ದೇವರು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲವೆಂದು’ ಕೂಗುತ್ತಾ ಒಂದಷ್ಟು ಕೋತಿಗಳು ಜೈಕಾರ ಹಾಕಿದವು. ‘ಹುಯ್ಯೋ ಮಳೆರಾಯ ಹುಯ್ಯೋ, ಹೂವಿನ ತೋಟಕೆ ನೀರಿಲ್ಲ’ ಎಂದು ಮರಿ ಕೋತಿಗಳೆಲ್ಲಾ ಕೂಗಿಕೊಂಡವು. ಆದರೆ ಮಳೆ ಬರುವ ಮುನ್ಸೂಚನೆಯೇ ಕಾಣಲಿಲ್ಲ. ‘ದೇವರೇ, ನೀನೇ ಹುಟ್ಟಿಸಿದ ಈ ಜೀವಿಗಳನ್ನು ನೀನೇ ಸಾಯಿಸುವೆ ಎಂಬುದು ಲೋಕರೂಢಿ ಮಾತು, ಆದರೆ ಈ ರೀತಿಯಾಗಿ ಹಿಂಸೆಯ ಮೂಲಕ ನಿನ್ನ ಜೀವಿಗಳನ್ನು ತೀರಿಸುವುದು ನಿನಗೆ ಕೀರ್ತಿಯಲ್ಲ’ ಎಂದು ಒಂದಷ್ಟು ಕೋತಿಗಳು ಕೂಗಿಕೊಳ್ಳುತ್ತಿದ್ದಂತೆ, ಮೋಡಗಳ ಗರ್ಭ ಸಿಡಿದು ಚೂರಾಗಿ ನೀರಾಗಿ ಭೂ ಎದೆ ತುಂಬಿತು. ಭಾರಿ ಮಳೆ. ಎರಡು ದಿನ ನಿರಂತರವಾಗಿ ಸುರಿದ ಮಳೆಯಿಂದ ಕೆರೆ ತೊರೆಗಳೆಲ್ಲಾ ತುಂಬು ಬಸುರಿಯಂತೆ ಕಂಗೊಳಿಸಿದವು. ಬೋಳು ಬೋಳಾಗಿದ್ದ ಕಾಡಿನ ತುಂಬ ಹಸಿರಿನ ಚಿಗುರು ಪುಟಿಯಿತು. ಬಣ್ಣ ಬಣ್ಣದ ಹೂಗಳು ಎದೆ ತೆರೆದು ಖುಷಿಯಲ್ಲಿ ವಾಲಾಡಿದವು. ಸೂರ್ಯನೂ ಬೆಚ್ಚನೆಯ ಬೆಳಕು ಚೆಲ್ಲಿ ಪ್ರತಿದಿನ ನಗೆ ಬೀರಿದ.

ಮಳೆ ಸುರಿಯುವುದನ್ನೇ ಕಾಯುತ್ತಿದ್ದ ಕೆಲವು ಕೋತಿಗಳು, ಕೂಡಲೇ ತಮ್ಮ ಸಂಸಾರ, ಸರಕುಗಳನ್ನೆಲ್ಲಾ ಹೊತ್ತುಕೊಂಡು ಒಂದೊಂದು ಮರ ಹತ್ತಿ ಬಿಟ್ಟವು. ಒಂದಷ್ಟು ಕೋತಿಗಳಿಗೆ ತಂಗಿಕೊಳ್ಳಲು ಯಾವುದೇ ಮರ, ಕೊಂಬೆ, ಪೊದೆ ದೊರೆಯಲಿಲ್ಲ. ಈ ಮೊದಲೇ ಮರಗಳನ್ನು ಹಿಡಿದುಕೊಂಡಿದ್ದ ಕೋತಿಗಳು ನಿರಾಶ್ರಿತ ಕೋತಿಗಳನ್ನು ಮರಗಳ ಹತ್ತಿರವೂ ಸೇರಿಸಲಿಲ್ಲ, ಹಣ್ಣು ಹಂಪಲು ಮುಟ್ಟಲೂ ಬಿಡಲಿಲ್ಲ. ಈಗ ಉಳಿದ ಕೋತಿಗಳಿಗೆ ವಸತಿ, ಊಟವಿಲ್ಲದಂತಾಯಿತು. ಹಸಿವು, ತೊಂದರೆ ಹೆಚ್ಚಾಯಿತು. ಇದರಿಂದ ರೊಚ್ಚಿಗೆದ್ದ ಇತರೆ ಕೋತಿಗಳು ಪ್ರತಿಭಟನೆಗೆ ಕುಳಿತವು. ಧಿಕ್ಕಾರ ಕೂಗಿದವು. ಆದರೆ, ಏನೂ ಪ್ರಯೋಜನವಾಗಲಿಲ್ಲ. ಈ ನಿರಂಕುಶ ಕೋತಿಗಳು ಯಾವುದೇ ಪ್ರತಿಭಟನೆ, ಕೂಗಿಗೆ ಜಗ್ಗದೇ ಮೈಮೇಲೆಯೇ ಬಿದ್ದವು.

ಸೋತು ಸುಣ್ಣವಾದ ಕೋತಿಗಳು ಮತ್ತೆ ದೇವರ ಮೊರೆ ಹೋಗಿ ಭಿಕ್ಷೆ ಎತ್ತಿ ತಿನ್ನುವ ಸ್ಥಿತಿಗೆ ಬಂದುಬಿಟ್ಟವು. ಅಷ್ಟಕ್ಕೇ, ಅದಾವ ಕೃಪೆಯೋ ಏನೋ, ಮರಳುಗಾಡಿನ ನಡುವಿನ ತುಂಬು ಓಯಸಿಸ್‍ನಂತೆ ಬೇರೆ ಪೋಡಿನಿಂದ ಬಂದ ಕೋತಿಯೊಂದು ಇವರ ಆಸರೆಗೆ ನಿಂತುಬಿಟ್ಟಿತು. ಈ ಕೋತಿಯ ಬಗ್ಗೆ ಉಳಿದ ಕೋತಿಗಳು ಕೇಳಲ್ಪಟ್ಟಿದ್ದವು. ಶಾಂತಿಧೂತನಾದ ಆ ಕೋತಿ ಹಂಚಿ, ಹರಡಿ ಬದುಕುವುದರಲ್ಲಿ ನಂಬಿಕೆ ಇಟ್ಟಿತ್ತು. ಈ ನಿರಾಶ್ರಿತ, ಅನ್ಯಾಯಕ್ಕೊಳಗಾದ ಕೋತಿಗಳನ್ನು ಕೂರಿಸಿಕೊಂಡು ದೊಡ್ಡ ಪ್ರತಿಭಟನೆಯನ್ನೇ ನಡೆಸಿತು. ಕಾಡೇ ನಡುಗುವಂತೆ ಜೈಕಾರ ಕೂಗಿದವು, ಚೀರಾಡಿದವು. ಸುಮಾರು ದಿನಗಳವರೆವಿಗೂ ಉಗ್ರ ಹೋರಾಟಗಳೇ ಜರುಗಿದವು. ಆದರೂ ಉಳಿದ ಕೋತಿಗಳು ಈ ಯಾವತ್ತೂ ಪ್ರತಿಭಟನೆ, ಕೂಗಾಟಗಳಿಗೆ ಬಗ್ಗಲಿಲ್ಲ. ಕೊನೆಗೆ, ಪಕ್ಕದ ಪೋಡಿನಿಂದ ಬಂದಿದ್ದ ಕೋತಿಯಾಜ್ಞೆಯ ಮೇರೆಗೆ ನಿರಾಶ್ರಿತ ಕೋತಿಗಳು ಕೆರೆ ಬಾವಿಗಳನ್ನೆಲ್ಲಾ ಸುತ್ತುವರಿದವು. ದೇವರು ಕೊಟ್ಟ ಮರದಲ್ಲಿ ನಮಗೆ ವಾಸಸ್ಥಾನವಿಲ್ಲವೆಂದರೆ, ದೇವರು ಕೊಟ್ಟ ನೀರಿನಲ್ಲಿ ನಿಮಗೆ ಪಾಲಿಲ್ಲವೆಂಬ ವಿನೂತನ ಚಳುವಳಿ ಪ್ರಾರಂಭವಾಯಿತು.

ಬರಿ ಹಣ್ಣು ಹಂಪಲು ತಿಂದುಕೊಂಡು ಆ ಕೋತಿಗಳು ತಾನೇ ಅದೆಷ್ಟು ದಿನ ಬದುಕಬಲ್ಲವು? ದಾಹ ವಿಪರೀತವಾಯಿತು. ಪ್ರಾಣತ್ಯಾಗಕ್ಕೂ ತಯಾರಾದ ನಿರಾಶ್ರಿತ ಕೋತಿಗಳು ಕೊನೆಗೂ ನೀರಿನೆಡೆಗೆ ಉಳಿದ ಕೋತಿಗಳನ್ನು ಬಿಡಲಿಲ್ಲ. ಕೊನೆಗೂ ಮರದ ಕೋತಿಗಳು ವಿಧಿಯಿಲ್ಲದೇ ಪ್ರತಿಭಟನೆಗೆ ಸೋತವು. ಒಪ್ಪಂದಕ್ಕೆ ಕುಳಿತವು. ಇಂತದ್ದೇ ಮರ ಈ ಕೋತಿಗೆ ಎಂಬ ಗೆರೆಯಿಲ್ಲ, ಈ ಕೆರೆ ನೀರು ಇವರಿಗೆ ಎಂಬ ನಿಯಮ ಬೇಡ, ಮರ ನೀಡುವ ಹಣ್ಣು ಹಂಪಲುಗಳನ್ನೆಲ್ಲಾ ಕೊಯ್ದು ಬಯಲಿಗೆ ಸುರಿದು ಹಂಚಿಕೊಂಡು ತಿನ್ನುವುದು’ ಎಂಬ ತೀರ್ಮಾನಕ್ಕೆ ಬರಲಾಯಿತು. ‘ಕಾಣದ ದೇವರನ್ನು ನಂಬುವ ನೀವು, ಕಾಣದೇ ಆತ ನೀಡುವ ಸೌಲಭ್ಯಗಳ ಉಪಯೋಗದ ಏಕತಾನತೆ ಮರೆತು ಜಗಳವಾಡುವುದು ಸಲ್ಲ, ನಿಮ್ಮಲ್ಲಿ ಒಗ್ಗಟ್ಟಿರಬೇಕು, ಇಂದಲ್ಲ ನಾಳೆ ಸತ್ತು ಈ ಜಾಗದಿಂದ ನಿಶ್ಶೇಷವಾಗುವ ನೀವು, ಇರುವ ಮೂರು ದಿನ ಬರಿ ದ್ವೇಷದಲ್ಲಿ ಕಾಲ ಕಳೆಯುವುದು ಸರಿಯಲ್ಲ, ನಿಮ್ಮ ಹಿರಿಯರು ಇಲ್ಲೆಲ್ಲಾ ಓಡಾಡಿ ಹೋದರು, ಆದರೆ ಇಂದು ಅವರು ಇಲ್ಲಿಂದ ಮಾಸಿ ಹೋಗಿದ್ದಾರೆ, ಆದುದರಿಂದ ಇರುವಷ್ಟು ದಿನ ಖುಷಿಯಾಗಿ ಬದುಕಿ’ ಎಂಬ ಬುದ್ಧಿಮಾತನ್ನು ಹೇಳಿದ ಕೋತಿ ತನ್ನ ಪೋಡಿಗೆ ಹೊರಟು ಹೋಯಿತು.

ಹಂಚಿಕೊಂಡು ತಿನ್ನುವುದು, ಬದುಕುವುದನ್ನು ಕಲಿತ ಕೋತಿಗಳು ಅನ್ಯೋನ್ಯವಾಗಿಯೇ ಕಾಲ ಕಳೆಯಲು ಪ್ರಾರಂಭಿಸಿದವು. ಮೋಸ, ಹಿಂಸೆಯ ಕಾವಿನಲ್ಲಿ ಬೆಂದಿದ್ದ ಜಾಗದಲ್ಲಿ ಶಾಂತಿ ನೆಲೆಸಿತು. ತಮ್ಮಲ್ಲಿ ಸಾಮರಸ್ಯವನ್ನು ಹುಟ್ಟುಹಾಕಿದ ಕೋತಿಯನ್ನು ಪ್ರತಿಕೋತಿಯೂ ಪ್ರತಿದಿನವೂ ಸ್ಮರಿಸಿಕೊಂಡಿತು. ಒಂದಷ್ಟು ಕೋತಿಗಳು, ಆ ಕೋತಿಯ ಬಗೆಗೆ ಸುಂದರವಾದ ಹಾಡುಗಳನ್ನು ಕಟ್ಟಿದವು. ಹಾಡಿನಲ್ಲಿ ಆ ಕೋತಿಯನ್ನು ಹೊಗಳಿ, ಆ ಕೋತಿ ಬಂದ ಬಗೆ, ಬಂದಾಗಿನ ಇಲ್ಲಿನ ಸಂದರ್ಭ, ಮುಂದಿನ ಚಳುವಳಿ, ಉಪವಾಸ ಪ್ರತಿಭಟನೆಯನ್ನೆಲ್ಲಾ ಹಾಡಿನಲ್ಲಿ ಕಟ್ಟಿದವು. ಸುಂದರ ರಾಗ ಸಂಯೋಜಿಸಿ ಕುಳಿತಾಗ, ನಿಂತಾಗ, ಕೆಲಸ ಮಾಡುವಾಗ ಗುನುಗಿದವು. ಹೊಸದಾಗಿ ಹುಟ್ಟಿದ ಕೋತಿಗಳಿಗೆಲ್ಲಾ ಈ ಹಾಡುಗಳನ್ನೆಲ್ಲಾ ಹೇಳಿಕೊಟ್ಟವು. ಈ ತಲೆಮಾರು ಸತ್ತರೂ ಮುಂದಿನ ತಲೆಮಾರಿನ ಕೋತಿಗಳಿಗೆ ಈ ಹಾಡುಗಳ ಮೂಲಕ ಆ ಕೋತಿಯ ಬಗ್ಗೆ ತಿಳಿಯಿತು. ಆ ಹಾಡುಗಳಲ್ಲಿದ್ದ ಉತ್ಪ್ರೇಕ್ಷೆಗಳೆಲ್ಲಾ ಈ ತಲೆಮಾರಿನ ಕೋತಿಗಳಿಗೆ ನಿಜವೆನಿಸಿತು. ಆ ಕೋತಿಯ ಬಗೆಗಿನ ಅಭಿಮಾನ ಹೆಚ್ಚಾಗಿ ಹೆಸರಿಸಿದ್ದ ಒಂದಷ್ಟು ಉಪಮೆಗಳು ಈಗ ನಿಜವೆನಿಸಿತ್ತು. ಆ ಕೋತಿ ಬರುವಾಗ ನೂರಾರು ಪವಾಡ ಗೆದ್ದು ಬಂದಿತ್ತು ಎಂಬ ಕಾಲ್ಪನಿಕ ಸತ್ಯಗಳು ಸತ್ಯವಾಗಿಯೇ ಗೋಚರಿಸಿದವು.

ಬಾಯಿಂದ ಬಾಯಿಗೆ ಹರಡಿದ ಹಾಡು, ಕಥೆಗಳಲ್ಲಿ ಆ ಕೋತಿ ಬಗೆಗಿನ ಅಭಿಮಾನವೂ ವರ್ಗಾವಣೆಯಾಗಿ ಆ ಕೋತಿ ಸತ್ತರೂ ಅದರ ಆತ್ಮ ಒಂದಾರು ತಲೆಮಾರು ಕಳೆದರೂ ಇನ್ನೂ ಇಲ್ಲೇ ಉಳಿದಿದೆಯೇನೋ ಎಂದೆನಿಸಿತ್ತು. ಅದು ಅಂದು ಹುಟ್ಟುಹಾಕಿದ್ದ ಶಾಂತಿ ಏಕಚಿತ್ತವಾಗಿ ಅಲ್ಲೆಲ್ಲಾ ಹಬೆಯಾಡುತ್ತಿತ್ತು. ಅಷ್ಟಕ್ಕೇ ಒಂದು ಕೋತಿಗೆ ‘ಆ ಕೋತಿ ನಮ್ಮ ಪೂರ್ವಿಕರ ನಡುವೆ ಇದ್ದ ಅಸಮಾನತೆ, ನೋವನ್ನು ತೊಡೆದುಹಾಕಲು ಬಂದಿದ್ದು, ಅದಕ್ಕೇಕೆ ಒಂದು ಗುಡಿಯನ್ನು ಕಟ್ಟಿಸಬಾರದು’ ಎಂಬ ವಿಚಾರವನ್ನು ಪ್ರಸ್ತಾಪಿಸಿತು. ಪಡಸಾಲೆಯಲ್ಲಿ ಕುಳಿತಿದ್ದ ಉಳಿದೆಲ್ಲಾ ಕೋತಿಗಳಿಗೆ ಈ ವಿಚಾರ ರೋಮಾಂಚನ ತಂದಿತು. ಇದಾಗಲೇಬೇಕು ಎಂಬ ಹಠಕ್ಕೆ ಬಿದ್ದು ಕೂಡಲೇ ಗುದ್ದಲಿ, ಪಿಕಾಸಿ, ಸುತ್ತಿಗೆ, ಕಲ್ಲು, ಮಣ್ಣು ಎಲ್ಲಾ ತಂದು ಸುರಿದವು. ನೆಲವನ್ನು ಅಗೆಯಲಾಯಿತು. ಅಭಿಮಾನದ ಬೆವರು ಹರಿಯಿತು.

ಅಷ್ಟಕ್ಕೇ, ನಡುಗಿಕೊಂಡು, ಮೈಬಗ್ಗಿಸಿಕೊಂಡು, ನಡೆಯಲಾಗದಿದ್ದರೂ ನಡೆದುಕೊಂಡು ಅಲ್ಲಿಗೆ ಬಂದ ಹಿರಿಯ ಕೋತಿಯೊಂದು ‘ಇದು ಸಲ್ಲದು, ದಯವಿಟ್ಟು ಬೇಡ’ ಎಂದಿತು. ‘ಇಂದಲ್ಲ ನಾಳೆ ಸಾಯುವ ಈ ಮುದಿ ಕೋತಿಯದು ಬರಿ ಅಡ್ಡಮಾತೇ ಆಯಿತು’ ಎಂದು ಉಳಿದ ಕೋತಿಗಳು ಮೂಗು ಮುರಿದವು. ಬೇಸರಿಸಿಕೊಳ್ಳದ ಆ ಹಿರಿಯ ಕೋತಿ ಸಾವರಿಸಿಕೊಂಡು ಹೇಳಿತು – ‘ಮಕ್ಕಳೇ, ಈ ಪ್ರಪಂಚದಲ್ಲಿ ದೈವತ್ವವೆಂಬುದು ಇದೆಯೇ ಎಂಬುದೊಂದು ಒಗಟು ಮತ್ತು ಉತ್ತರಿಸಲಾಗದ ಪ್ರಶ್ನೆ, ಈ ಪ್ರಪಂಚವೆಂಬುದು ಸಮತೆಯಲ್ಲಿ ತೂಗುತ್ತಿದೆ, ದಾರಕ್ಕೆ ಮಲ್ಲಿಗೆ ಪೋಣಿಸಿದಂತೆ ಒಂದಕ್ಕೊಂದು ಬಂಧಿಸಿಕೊಂಡು ಸರಾಗವಾಗಿ ಸಾಗುತ್ತಿವೆ, ಉದಾಹರಣೆಗೆ, ನೀವು ತಿನ್ನುವ ಹಣ್ಣನ್ನು ಕೈಯೆಂಬುದು ಬಾಯಿಗೆ ತರುವಾಗ, ಅಲ್ಲೇ ಇರುವ ಮೂಗು ‘ಒಳ್ಳೆಯ ವಾಸನೆಯಿದೆ’ ಎಂದು ಕೈಯಿಗೆ ಹೇಳಿದೊಡನೆ, ಬಾಯಿ ತೆರೆಯುತ್ತೀರಿ, ನಾಲಗೆ ಮೇಲೆ ಬಿದ್ದ ಹಣ್ಣಿನ ರುಚಿ ಸವಿಯಾಗಿದ್ದರೆ ನಾಲಗೆಯೂ ಅನುಮತಿಸಿ, ಪಕ್ಕದಲ್ಲೇ ಇದ್ದ ಹಲ್ಲಿಗೆ ತಳ್ಳುತ್ತದೆ, ಅರ್ಧ ಪಚನಗೊಂಡ ಆಹಾರ, ಯಾವುದೇ ಯಂತ್ರದ ಸಹಾಯವಿಲ್ಲದೇ ಹೊಟ್ಟೆಗೆ ಜಾರಿಕೊಳ್ಳುತ್ತದೆ. ಒಮ್ಮೆ ಯೋಚಿಸಿ, ಮೂಗೊಂದು ಕಡೆ, ನಾಲಗೆ ಒಂದು ಕಡೆ, ಹಲ್ಲೆಲ್ಲೋ, ಬಾಯೆಲ್ಲೋ, ಹೊಟ್ಟೆಯೆಲ್ಲೋ ಇದ್ದಿದ್ದರೆ? ಇಂತಹ ಆಶ್ಚರ್ಯ ಅನುಭೂತಿಗಳನ್ನು ದೇವರೆಂದು ಕೆಲವರು ನಂಬಬಹುದು, ಕೆಲವರು ದೇವರೂ ಇಲ್ಲ, ದೆವ್ವವೂ ಇಲ್ಲವೆಂದು ಅಲ್ಲಗಳೆಯಬಹುದು, ದೇವರೆಂಬುದು ನಂಬಿಕೆ ಮತ್ತು ಅಪನಂಬಿಕೆಗಳ ನಡುವೆ ನಲುಗುವ ಸರಕು, ಸಾವಿರಾರು ವರ್ಷದ ಹಿಂದೆ, ನಮ್ಮಲ್ಲಿದ್ದ ತೊಡಕುಗಳನ್ನು ನಿವಾರಿಸಿದ, ಎಲ್ಲರಿಗೂ ಕಾಣುತ್ತಿದ್ದ ಕೋತಿಯೊಂದಕ್ಕೆ ಇಂದು ನೀವು ಗುಡಿ ಕಟ್ಟಿದರೆ, ಮುಂದೆ? ಪ್ರಪಂಚ ಬೆಳೆದಂತೆ, ಒಳ್ಳೆಯ ಕೆಟ್ಟ ಆಲೋಚನೆಗಳೂ ಬೆಳೆಯುತ್ತವೆ, ತರ್ಕ, ಕುತರ್ಕಗಳು ಮೈದಳೆಯುತ್ತವೆ, ಮತ್ತು...’.

‘ನಿನ್ನ ಹಳಸು ವಯಸ್ಸಿನ ಗೊಡ್ಡು ಮಾತನ್ನು ನಮ್ಮ ಮುಂದೆ ಒದರಬೇಡ, ಬೇಕಾದರೆ ನಿನಗೂ ಒಂದು ಗುಡಿ ಕಟ್ಟಿಸಿಕೊಡುತ್ತೇವೆ, ಸದ್ಯಕ್ಕೆ ತಲೆ ತಿನ್ನದೇ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡು, ನಿನ್ನದು ಅಭಿಮಾನಶೂನ್ಯ ಮನಸ್ಸು’ – ಎಂದು ರೇಗಿಕೊಂಡ ಉಳಿದ ಕೋತಿಗಳು ಕಾರ್ಯ ಪ್ರವೃತ್ತವಾದವು. ಒಂದಷ್ಟು ದಿನಗಳಲ್ಲೇ ಗುಡಿ ಮೂಡಿತು. ಯಾವುದೋ ತಾಳೆಗರಿ ಮೇಲೆ ಮೂಡಿದ್ದ ಆ ಕೋತಿಯ ಚಿತ್ರವನ್ನು ನಕಲಿಸುವಂತೆ ಒಂದು ಮೂರ್ತಿಯನ್ನು ಕೆತ್ತಿ ಪ್ರತಿಷ್ಠಾಪಿಸಲಾಯಿತು. ಕಾಲ ಕಾಲಕ್ಕೆ ಹೂ ಸುರಿದು, ಪೂಜೆ ಪುನಸ್ಕಾರಗಳನ್ನು ಮಾಡಲಾಯಿತು. ಆ ಕೋತಿಯನ್ನು ಹೊಗಳಿ ಕಟ್ಟಿದ್ದ ಹಾಡುಗಳೆಲ್ಲಾ ಈಗ ದೇವಸ್ಥಾನದ ಹಜಾರದಲ್ಲಿಯೇ ಠಿಕಾಣಿ ಹೂಡಿದವು. ಮೂರ್ತಿ ಪ್ರತಿಷ್ಠಾಪನೆಗೊಂಡ ದಿನಾಂಕದಂದು ವಿಶೇಷವಾದ ಜಾತ್ರೆ ಮಾಡುವ ತೀರ್ಮಾನಕ್ಕೆ ಬರಲಾಯಿತು. ಪ್ರತಿವರ್ಷವೂ ಸಾಲ ಸೋಲ ಮಾಡಿಯಾದರೂ ಜಾತ್ರೆಯನ್ನು ಅದ್ಧೂರಿಗೊಳಿಸಿ, ವೈಭವ ಮೆರೆಸಿ ಸ್ವರ್ಗದ ಬೆಳಕನ್ನೇ ನೆಲಕ್ಕೆ ಇಳುಗಿಸಿದರು. ಕಾಲ ಕಾಲಕ್ಕೆ ಜೀರ್ಣೋದ್ಧಾರಗೊಂಡ ದೇವಸ್ಥಾನ ಒಂದೈನೂರು ವರ್ಷದ ನಂತರ ಪ್ರವಾಸಿ ತಾಣವಾಗಿಯೂ ಪರಿವರ್ತಿತವಾಯಿತು. ದೂರ ಸ್ಥಳಗಳಿಂದ ಬಂದ ಕೋತಿಗಳೆಲ್ಲಾ ಕೈ ಮುಗಿದು ಭಕ್ತಿರಸವನ್ನು ಉಕ್ಕಿಸಿದವು.

ಈ ನಡುವೆ ಭೀಕರ ಪ್ರವಾಹವಾಗಿ ಆ ಹಳ್ಳಿ, ಬಂಧು ಬಳಗವನ್ನೆಲ್ಲಾ ನೀರು ಕೊಚ್ಚಿಕೊಂಡು ಹೋಗಿತ್ತು. ಇದರಿಂದ ನೊಂದÀ ಕೆಲವು ಕೋತಿಗಳು ದೇವಸ್ಥಾನಕ್ಕೆ ಬರುವುದನ್ನೇ ಬಿಟ್ಟುಬಿಟ್ಟವು. ಈಗ ನಾಸ್ತಿಕರ ಶಕ್ತಿ ಹೆಚ್ಚಾಯಿತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅವು, ‘ದೇವರೆಂಬುದು ಸುಳ್ಳು, ಕಷ್ಟದಲ್ಲಾಗದ ದೇವರಿಗೆ ಕೈ ಮುಗಿಯುವುದರಿಂದ ಉಪಯೋಗವಾದರೂ ಏನೂ, ಪ್ರವಾಹದಲ್ಲಿ ಸಾಯುತ್ತಿದ್ದವರಿಗೆ ಆಸರೆಯಾಗಿ ಆತ ಬಂದನೇ?’ ಎಂಬ ತರ್ಕಗಳನ್ನು ಅಲ್ಲಲ್ಲಿ ತೂರಿಬಿಟ್ಟವು. ಈಯೆಲ್ಲಾ ವಿಚಾರಗಳು ಆಸ್ತಿಕ ಕೋತಿಗಳನ್ನು ಕೆರಳಿಸಿದವು. ಅವೂ ಸಂಘ ಸಂಸ್ಥೆಗಳನ್ನು ಕಟ್ಟಿ ಹೊಡೆದಾಟ, ಬಡಿದಾಟಗಳಿಗೆ ಮುಂದಾದವು. ಹಿಂದೊಂದು ದಿನ ಶಾಂತಿಯ ನೆಲೆಬೀಡಾಗಿದ್ದ ಸ್ಥಳದಲ್ಲೀಗ ಅಶಾಂತಿ ಭುಗಿಲೆದ್ದಿತು. ಅಷ್ಟಕ್ಕೇ, ಯಾರೋ ಕೋತಿ ಮೂರ್ತಿಯ ಮುಸುಡಿಯನ್ನೇ ಮುರಿದಿದ್ದರು.

ಮತ್ತೊಂದು ಬುದ್ಧಿವಂತ ಕೋತಿ, ಸಂಶೋಧನೆ ನಡೆಸುವ ನೆಪದಲ್ಲಿ ದೇವಸ್ಥಾನದ ಭಿತ್ತಿ ಮೇಲೆ ಕೆತ್ತಿದ್ದ ಅಕ್ಷರಗಳನ್ನೆಲ್ಲಾ ಅಧ್ಯಯನ ಮಾಡಿ, ಒಂದು ಕಲ್ಲಿನ ಮೇಲೆ ‘ಇವರೇನೋ ಇಲ್ಲಿನ ಜನಗಳನ್ನು ಉದ್ಧಾರ ಮಾಡಲು ಬಂದು ಕೃತಾರ್ಥರಾದರು, ಆದರೆ, ಅಲ್ಲಿ ಇವರನ್ನೇ ನಂಬಿಕೊಂಡಿದ್ದ ಇವರ ಮೂವರು ಹೆಂಡತಿ, ಮಕ್ಕಳು ಬೀದಿ ಪಾಲಾಗಿ ಕಾಡು ಮೇಡು ಅಲೆದಿದ್ದು ಎಷ್ಟು ಸರಿ?’ ಎಂದು ಬರೆದಿದ್ದನ್ನು ಉಗ್ರಗೊಳಿಸಿ, ಈ ಗುಡಿ ಕಟ್ಟುವಾಗಲೇ ಆಸ್ತಿಕತನ ತುಂಬಿಹೋಗಿತ್ತು, ಭಗವಂತನಿಂದ ಮೋಸ, ಸಾಮಾನ್ಯ ಮನುಷ್ಯನಂತೆ ಮೂವರು ಹೆಂಡಿರ ದಾಸ, ಕಾಮ ಪಿಪಾಸು, ಎಂಬ ಕುಹಕಗಳು ಹರಿದಾಡಿದವು. ನಾಸ್ತಿಕ ಕೋತಿಗಳಿಗೆ ಇದೊಂದು ತರ್ಕದ ಸರಕಾದರೆ, ಆಸ್ತಿಕ ಕೋತಿಗಳು ತಮ್ಮತನವನ್ನು ಉಳಿಸಿಕೊಳ್ಳಲು ‘ಇದು ಸುಳ್ಳಿನ ಕಂತೆ, ಪ್ರಪಂಚದ ಉದ್ಧಾರಕ್ಕೆ ಮೇಲಿನಿಂದ ಅವತರಿಸಿದ ದೈವವನ್ನು ಈ ರೀತಿ ಅವಮಾನಿಸಬಾರದೆಂದು’ ಜಗಳಕ್ಕೆ ನಿಂತವು. ಆಸ್ತಿಕ ನಾಸ್ತಿಕ ಗುಂಪಿನ ನಡುವೆ ಅಶಾಂತಿ ಮನೆ ಮಾಡಿ ಮಾತಿಗೆ ಮಾತು ಬೆಳೆಯಿತು, ಒಡೆದಾಟ, ಬಡಿದಾಟ, ಪ್ರಾರಂಭವಾಯಿತು. ದೇವಸ್ಥಾನದ ಮುಂದೆಯೇ ರಕ್ತ ಹರಿದಾಡಿತು.

ಮೂಗು ಮುರಿದುಕೊಂಡ ಕೋತಿ ಮಾತ್ರ ಮೌನವಾಗಿತ್ತು ತನ್ನೊಳಗಿನ ಶಾಂತಿಯನ್ನು ಧೇನಿಸುತ್ತ.

Comments

Submitted by subramanyaprasad Fri, 10/04/2013 - 12:08

ಮೋಹನ್, ಮನ ಮುಟ್ಟುವ ಲೇಖನಕ್ಕೆ ಅಭಿನಂದನೆಗಳು. ನಿಜವಾಗಲೂ ಇಂದಿನ ಆಸ್ತಿಕ-ನಾಸ್ತಿಕ ವಿಚಾರದ ಹುಟ್ಟು ಹೀಗೆ ಇರಬಹುದು ಎಂದೆನಿಸುತ್ತದೆ.
Submitted by partha1059 Fri, 10/04/2013 - 15:31

ತರ್ಕಬದ್ದವಾಗಿದೆ ಕತೆ, ಒಟ್ಟಿನಲ್ಲಿ ಕೋತಿಗಳು ಜಗಳವಾಡುವದಂತು ತಪ್ಪುವದಿಲ್ಲ ಅನ್ನಿಸುತ್ತೆ. ಜಗಳಕ್ಕೆ ದೇವರೆ ಬೇಕಿಲ್ಲ, ಅದೊಂದು ಪ್ರಸ್ತುತ ಹವ್ಯಾಸ. ಇದೆ ಅಂದರೆ ಇಲ್ಲ ಅನ್ನುವುದು, ಇಲ್ಲ ಅಂದರೆ ಇದೆ ಅನ್ನುವುದು. ಇಂತಹ ತರ್ಕ ಕುತರ್ಕಗಳು ಸಾವಿರ ಸಾವಿರ ವರ್ಷಗಳಿಂದ ನಡೆದಿದೆ, ಹಾಗೆ ’ಜಗಳ’ ಸಹ ಮುಂದುವರೆದಿದೆ, ಆದರೆ ಈಗಿನ ಜಗಳ ’ಡಿಜಿಟಲ್ ’ :-)
Submitted by RAMAMOHANA Fri, 10/04/2013 - 16:49

ಮತ್ತೆ ಪ್ರಪಂಚ‌ ನಡೀಬೇಕಲ್ಲ‌ ಮೋಹನ್ ಸಾರ್.... ಎಲ್ಲಾ ತೊಂದರೆಗಳು, ಸಮಸ್ಯೆಗಳು, ತರ್ಕಗಳು ಕೊನೆಗೊಂಡರೆ ಬದುಕು ಶೂನ್ಯವಾಗಿಬಿಡುತ್ತದಲ್ಲವೆ..?? ಅದರ‌ ಸದ್ಧರ್ಶನಕ್ಕಾಗೇ ಈ ಹೋರಾಟದ‌ ಬದುಕು. ಈಸ‌ ಬೇಕು ಇದ್ದು ಜೈಸಬೇಕು, ಕೋತಿಗಳ‌ ಕೂಗಾಟ‌ ಕಿತ್ತಾಟ‌ ಇರಲೇಬೇಕು. ಚೆನ್ನಾಗಿದೆ, ರಾಮೋ.