ದೆವ್ವ ಭೂತದ ಭೀತಿ!

ದೆವ್ವ ಭೂತದ ಭೀತಿ!

ಮುಸುಕಿದ ರಾತ್ರಿಯ
ನಿರ್ಜನ ಹಾದಿ;
ಇಕ್ಕೆಲ ಸಾಲು ಕಳ್ಳಿಗಳ 
ನಡುವೆ ತುಳಿದ ಸೈಕಲ್ಲಿನ ವೇಗ,
ಹಾಳು ಸರಿಗಟ್ಟದ ಮನೋವೇಗ.
ದೀಪವಿಲ್ಲದ ರಸ್ತೆ ಕುಳಿ
ಅಮಾವಾಸೆಯಾಗಸದ ಹಳ್ಳಿ,
ಪೆಡಲೊತ್ತಿ ಮಿಣಮಿಣ ದೀಪ
ಊರು ತಲುಪಿದರೆ ಸಾಕಪ್ಪ!

ತಂಗಾಳಿಗೆ ಬೆವರೊ
ಕಗ್ಗತ್ತಲಿನ ತಿಮಿರೊ
ಹತ್ತಿಳಿಸಿದ ರಸ್ತೆಯ ನಿಮಿರೊ..
ದೂರದಳ್ಳಿಯ ಮನೆದೀಪ
ಹಾಕಿ ಆಶಾಕಿರಣಕೆ ಧೂಪ;
ಆವರ್ತನಗಳ ಸೊನ್ನೆ
ಅರೆ! ಏನಿದು ಸ್ಥಗಿತ ದಿಣ್ಣೆ?
ಮುಂದೋಡದೆ ತೆವಳಿದ ಚಕ್ರ
ಕಲ್ಲೊಡೆದು ತೂತಾದನೆ ಮಿತ್ರ!

ತಳ್ಳುತ ಭೀತಿಯ ಕಾಲ
ನಡುಗುವ ಬರಿಗಾಲ, 
ನಿಶೀಥಕು ಬೆವರಲೆ ಜಳಕ
ಸವೆಯದ ಹಾದಿಯ ತವಕ..
ಹಿಡಿದೆಳೆದ್ಯಾರೊ ಬೈಸಿಕಲ್ಲು
ಎಳೆದಂತೆ ಬಂಡೆಗಲ್ಲು
ಕಥೆಗಳೆಲ್ಲ ಹೂಡಿ ದಾವೆ
ಪ್ರತ್ಯಕ್ಷ ಕಣ್ಣಲಿ ನಾವೆ
ದೆವ್ವ ಪಿಶಾಚಿಗಳ ಕಾವೆ!

ನಡುಗಿಸಿ ಥರಥರ ಭೀತಿ
ಅಪರಿಚಿತ ಚೀತ್ಕರಿಸಿದ ರೀತಿ,
ಬಲ ಬಿಟ್ಟೆಳೆದೂ ಜಗ್ಗದೆ
ಪುಕ್ಕಲೆ ತಿರುಗಿ ನೋಡಲಳ್ಳೆದೆ...
ಸಾಲು ದೈವಗಳೆಲ್ಲರ ಅವತಾರ
ಬರದ ಮಂತ್ರಗಳಿಗು ಅಪಚಾರ;
ತಟ್ಟನೆ ಮಿಂಚು ಗುಡುಗಿದ ಸದ್ದು
ಬಿಟ್ಟೆಲ್ಲ ಸಡಿಲ ಓಡೆದ್ದೂ ಬಿದ್ದು;
- ಕಲ್ತುದಿಯಡಿ ಸಿಕ್ಕ ಚಕ್ರ ಕೆಳಬಿದ್ದು!

Comments

Submitted by makara Fri, 07/19/2013 - 09:45

  ನಾಗೇಶರೆ, ಭಯದಲ್ಲೂ ಹಾಸ್ಯವನ್ನು ನೋಡುವ ನಿಮ್ಮ ಪ್ರಯತ್ನ ಚೆನ್ನಾಗಿ ಮೂಡಿ ಬಂದಿದೆ. ಈ ಕವಿತೆ ಓದುತ್ತಿದ್ದಂತೆ ನಮ್ಮ ಜಮಾನಾದ ಕಥೆಯೊಂದು ಜ್ಞಾಪಕಕ್ಕೆ ಬಂತು. ಅದರ ಸಾರಾಂಶ ಹೀಗಿದೆ:  ಅಮವಾಸ್ಯೆಯ ಕತ್ತಲಲ್ಲಿ ಸಮಾಧಿಗೆ ಮೊಳೆ ಹೊಡೆಯುವ ಪಂದ್ಯಕ್ಕೆ, ಏಳು ಗುಂಡಿಗೆಯ, ಅಂಜದ ಧೀರನೊಬ್ಬ, ರಾತ್ರಿ ಕತ್ತಲೆಯಲ್ಲಿ ತನ್ನ ಅಂಗಿಗೇ ಮೊಳೆ ಹೊಡೆದುಕೊಂಡು ಅಲ್ಲಿಂದ ಕದಲಲಿಕ್ಕಾಗಲಿಲ್ಲವಂತೆ. ಯಾವುದೋ ದೆವ್ವ ತನ್ನನ್ನು ಕತ್ತಲಲ್ಲಿ ಹಿಡಿದುಕೊಂಡಿದೆಯೆಂದು ಭಾವಿಸಿ ಅವನು ಅಲ್ಲೇ ಎದೆ ಒಡೆದುಕೊಂಡು ಸತ್ತನಂತೆ :( ಸದ್ಯ ನಿಮ್ಮ ಧೀರ ಬಚಾವಾದ ಬಿಡಿ :))
Submitted by nageshamysore Fri, 07/19/2013 - 19:55

In reply to by makara

ಶ್ರೀಧರರೆ, ನಿಮ್ಮ ಧೀರನ ಹಾಗೆ ನನ್ನ ಕವನದ ಧೀರನೂ ಏನಾದರೂ 'ಢಮಾರಾಗಿಬಿಟ್ಟಿದ್ದಿದ್ದರೆ' ನೀವು ಲಲಿತಾನಾಮಳಿಯ ಕವನ ಬರೆಯಲು ಇನ್ಯಾರನ್ನಾದರೂ ಹುಡುಕಬೇಕಾಗುತ್ತಿತ್ತು ಅಂತ ಕಾಣುತ್ತದೆ (ಕವಿ ನಾಗರಾಜರಿರುವಾಗ ಅದೇನು ದೊಡ್ಡ ವಿಷಯವಲ್ಲ ಬಿಡಿ)! ಬರೆದಾಗೇನೊ ಹಾಸ್ಯದ ಛಾಯೆ ಬಂದರೂ, ಅನುಭವಿಸುವಾಗ  ಹಾಗಿರಲಿಲ್ಲ :-) ಅಂದಹಾಗೆ ಯಥಾರೀತಿ ನೀವು ಇಲ್ಲಿ ಹುಡುಕಿಟ್ಟ ಸಂಧರ್ಭೋಚಿತ ಜೋಕ್ ಮಾತ್ರ ಸುಪರ್! - ನಾಗೇಶ ಮೈಸೂರು
Submitted by kavinagaraj Fri, 07/19/2013 - 15:27

:)) ನನಗೂ ಬಾಲ್ಯದ ನೆನಪಾಯಿತು. ಆಗ ಈಗಿನಂತೆ ಮೊಬೈಲು ಇರಲಿ, ಸಾಮಾನ್ಯ ಫೋನುಗಳೂ ಇರಲಿಲ್ಲ. ಚಿಕ್ಕಮಗಳೂರಿನಿಂದ ಹಳೇಬೀಡಿನ ಅಜ್ಜಿಯ ಮನೆಗೆ ತುರ್ತು ಸುದ್ದಿಯೊಂದನ್ನು ಕೊಡಲು 10 ವರ್ಷದ ನನ್ನನ್ನು ಸಾಯಂಕಾಲದ ಬಸ್ಸಿಗೆ (ಆಗ ಬಸ್ಸುಗಳ ಸಂಖ್ಯೆಯೂ ಕಡಿಮೆ) ಕಳಿಸಿದ್ದರು. ಬೇಲೂರಿಗೆ ಹೋಗಿ ಅಲ್ಲಿಂದ ಬೇರೆ ಬಸ್ಸು ಹಿಡಿದು ಹೋಗಬೇಕಿತ್ತು. ಬೇಲೂರು ತಲುಪುವ ವೇಳೆಗೆ ಬಹಳ ತಡವಾಗಿ ಕೊನೆಯ ಬಸ್ಸೂ ಹೋಗಿಬಿಟ್ಟಿತ್ತು. ಇನ್ನು ಮರುದಿನ ಬೆಳಿಗ್ಗೆ 8 ಗಂಟೆಯವರೆಗೂ ಬೇರೆ ಬಸ್ಸಿಲ್ಲ. ಬೇಲೂರಿನಲ್ಲಿ ಇಳಿದಾಗ ರಾತ್ರಿಯಾಗಿತ್ತು. ಹಳೇಬೀಡಿಗೆ 10 ಮೈಲಿ ದೂರ ನಡೆದು ಹೋಗಲು ಚಿಂತಿಸಿದರೂ ಕತ್ತಲೆಯಲ್ಲಿ ಹೋಗಲು ಧೈರ್ಯ ಸಾಲದೆ ಮುರುಕಲು ಬಸ್ ನಿಲ್ದಾಣದಲ್ಲೆ ಕುಳಿತೆ. ಬಸ್ ಚಾರ್ಜಿನ ಮೇಲೆ ಕೇವಲ ನಾಲ್ಕಾಣೆ ಮಾತ್ರ ಜಾಸ್ತಿ ಕೊಟ್ಟಿದ್ದರು. ಒಂದಾಣೆಯಲ್ಲಿ ಎರಡು ಬಾಳೆಹಣ್ಣು ಕೊಂಡು ತಿಂದೆ. ಅಲ್ಲಿ ಮುದುರಿ ಮಲಗಿದ್ದ ಜನರು, ಭಿಕ್ಷುಕರು, ಕತ್ತೆಗಳು, ನಾಯಿಗಳನ್ನು ನೋಡುತ್ತಾ (ಅವಲೋಕಿಸುತ್ತಾ..?) ಕುಳಿತಿದ್ದು, ಬೆಳಗಿನ ಜಾವ ಸುಮಾರು 4 ಗಂಟೆಯ ಹೊತ್ತಿಗೆ ಇನ್ನೇನು ಬೆಳಕಾಗುತ್ತದೆ ಎಂದು ಧೈರ್ಯದಿಂದ ನಡೆದು ಹೊರಟೆ. ಚಂದ್ರನ ಬೆಳಕು, ನೀರವ ಮೌನ, ಜೀರ್ ಜೀರ್ ಶಬ್ದ ಮಾಡಿ ನಿಶ್ಶಬ್ದತೆಗೆ ಭಂಗ ತರುತ್ತಿದ್ದ ಜೀರುಂಡೆ ಶಬ್ದಗಳು ಅಲ್ಲಲ್ಲಿ ಕೇಳುತ್ತಿದ್ದವು. ಸ್ವಲ್ಪ ದೂರದಲ್ಲಿ ಕೈಗಳನ್ನು ಅಗಲಕ್ಕೆ ಚಾಚಿ ಸುಮಾರು 8 ಅಡಿ ಎತ್ತರದ ಆಕೃತಿಯೊಂದು ನಿಂತಿದ್ದುದನ್ನು ಕಂಡು ನನ್ನೆದೆ ಧಸಕ್ಕೆಂದಿತ್ತು. ಅಲುಗಾಡದೆ ಎಷ್ಟು ಹೊತ್ತು ನಾನೆ ನಿಂತಲ್ಲೆ ನಿಂತಿದ್ದರೂ ಅದೂ ಅಲುಗಾಡದೆ ನಿಂತಿತ್ತು. ಕೊನೆಗೆ ಧೈರ್ಯ ಮಾಡಿ ಒಂದೊಂದೇ ಹೆಜ್ಜೆ ಇಟ್ಟು ಅದಕ್ಕೆ ದೂರವಾಗಿ ರಸ್ತೆಯ ಇನ್ನೊಂದು ಬದಿಯಲ್ಲಿ ಆ ಆಕೃತಿಯನ್ನೇ ನೋಡುತ್ತಾ ಸಾಗಿದೆ. ಅದು ಆಗಲೂ ಅಲುಗಾಡಿರಲಿಲ್ಲ. ಹತ್ತಿರ ಬಂದಾಗ ಕಂಡದ್ದೇನೆಂದರೆ ಅದೊಂದು ಒಣಗಿದ ಗಿಡವಾಗಿದ್ದು ಅದನ್ನು ಪೂರ್ಣ ಆವರಿಸಿ ಜೇಡ ಬಲೆ ಕಟ್ಟಿತ್ತು! ಹಿಮ ಉದುರಿ ಹನಿಗಳು ಉದುರುತ್ತಿದ್ದವು. ಚಂದ್ರನ ಬೆಳಕು ಅದನ್ನು ದೆವ್ವದಂತೆ ಕಾಣಲು ಸಹಕರಿಸಿತ್ತು. ಆ ನಂತರವೇ ನಾನು ಸರಾಗವಾಗಿ ಉಸಿರಾಡಿದ್ದು. ನಂತರ ಓಡುತ್ತಾ ಹಳೇಬೀಡು ತಲುಪಿದರೆ ಆಗಲೂ ಸೂರ್ಯ ಮೂಡಿರಲೇ ಇಲ್ಲ!
Submitted by nageshamysore Fri, 07/19/2013 - 23:00

In reply to by kavinagaraj

ಕವಿ ನಾಗರಾಜರೆ, ನಿಮ್ಮ ಸ್ವಂತ ಅನುಭವವೆ ಈ ಕವನದ ಅನುಭವಕ್ಕಿಂತ ವಿಶಿಷ್ಟವಾಗಿದೆ. ಈ ಮೇಲಿನ ಅನುಭವ ಹದಿನಾಲ್ಕು, ಹದಿನೈದು ವರ್ಷಗಳ ಹುಡುಗನಾಗಿದ್ದಾಗಿನ ಆಸುಪಾಸಿನ ಸಮಯದ್ದು. ನಂಜನಗೂಡಿಗೆ ಸೈಕಲ್ಲಿನಲ್ಲಿ ಹೋಗಿ ಮತ್ತೆ ಹತ್ತಿರದ ಊರಿಗೆ ವಾಪಸ್ಸು ಹೋಗುವುದು ತಡವಾದಾಗ ಆದ 'ಭಯಾನುಭವ' :‍) ‍ ‍ ನಾಗೇಶ ಮೈಸೂರು