೭೪. ಶ್ರೀ ಲಲಿತಾ ಸಹಸ್ರನಾಮ ೨೬೮ರಿಂದ ೨೭೦ನೇ ನಾಮಗಳ ವಿವರಣೆ

೭೪. ಶ್ರೀ ಲಲಿತಾ ಸಹಸ್ರನಾಮ ೨೬೮ರಿಂದ ೨೭೦ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೬೮ - ೨೭೦

Saṃhārinī संहारिनी (268)

೨೬೮. ಸಂಹಾರಿಣೀ

            ದೇವಿಯು ವಿನಾಶವನ್ನು ಉಂಟುಮಾಡುತ್ತಾಳೆ. ವಿನಾಶವು ಪ್ರಳಯಕ್ಕಿಂತ ಭಿನ್ನವಾದದ್ದು. ಅವರೆಡರ ಮಧ್ಯೆ ಇರುವ ವ್ಯತ್ಯಾಸವು ಮಹತ್ತರವಾದದ್ದು. ವಿನಾಶವೆನ್ನುವುದು ಒಂದು ವ್ಯಕ್ತಿಗತ ಜೀವಿಯ ಮರಣವಾದರೆ, ಪ್ರಳಯವು ಬ್ರಹ್ಮದ ಪರಮೋನ್ನತ ಕಾರ್ಯವಾಗಿದ್ದು ಅದರಲ್ಲಿ ಅವನು ಸಮಸ್ತ ವಿಶ್ವವನ್ನು ಕರಗಿಸಿ (ಲಯವಾಗಿಸಿ) ತನ್ನೊಳಗೆ ಲೀನಗೊಳಿಸಿಕೊಳ್ಳುತ್ತಾನೆ (ನಾಮ ೨೭೦). ಈ ನಾಮವು ಸ್ಥೂಲ ಶರೀರಗಳ ಸಾವಿನ ಕುರಿತಾಗಿ ಹೇಳುತ್ತದೆ ಮತ್ತು ದೇವಿಯು ಈ ಸಮಸ್ತ ವಿಶ್ವದ ನಿಯಂತ್ರಕಳಾಗಿರುವುದರಿಂದ ಅವಳು ಸಾವನ್ನು ಉಂಟು ಮಾಡುತ್ತಾಳೆ.

Rudra-rūpā रुद्र- रूपा (269)

೨೬೯. ರುದ್ರ-ರೂಪಾ

             ದೇವಿಯು ಸಾವನ್ನುಂಟು ಮಾಡುವಾಗ ಆಕೆಯು ರುದ್ರ ರೂಪವನ್ನು ತಾಳುತ್ತಾಳೆ. ಯಾವಾಗ ದೇವಿಯು ಜೀವಿಗಳಿಗೆ ಮರಣವನ್ನುಂಟು ಮಾಡುತ್ತಾಳೆಯೋ ಆಗ ಅವಳ ರೂಪವನ್ನು ರುದ್ರ ಎಂದು ಕರೆಯಲಾಗಿದೆ. ರುದ್ರ ಎಂದರೆ ಮರಣದ ಅಧಿದೇವತೆ ಅಲ್ಲ ಎನ್ನುವುದನ್ನು ಗಮನಿಸಿ.  

ರುದ್ರ ಎಂದರೆ ಯಾತನೆಗಳನ್ನು ನಾಶ ಮಾಡುವವನು. ರು ಎಂದರೆ ಪಂಚೇಂದ್ರಿಯಗಳನ್ನು ಸರಿಯಾಗಿ ಉಪಯೋಗಿಸದೇ ಇರುವುದರಿಂದ ಉದ್ಭವವಾಗುವ ದುಃಖಗಳಿಂದ ಉಂಟಾಗುವ ನೋವು ಮತ್ತು ದ್ರ ಎಂದರೆ ಚದುರಿಸು ಎಂದರ್ಥ. ರುದ್ರ ಎಂದರೆ ದುಃಖಗಳನ್ನು ಹೊಡೆದೋಡಿಸುವುದು.

               ಛಾಂದೋಗ್ಯ ಉಪನಿಷತ್ತು (೩.೧೬.೩) ಹೀಗೆ ಹೇಳುತ್ತದೆ, "ರುದ್ರರು ಧಾರ್ಮಿಕ ಕ್ರಿಯೆಗಳೊಂದಿಗೆ ಸಂಭಂದವುಳ್ಳವರು. ಪ್ರಾಣಗಳನ್ನು ಸಹ ರುದ್ರರೆಂದು ಕರೆದಿದ್ದಾರೆ ಏಕೆಂದರೆ ಅವರು ಈ ಪ್ರಪಂಚದಲ್ಲಿರುವ ಎಲ್ಲರನ್ನೂ ಅಳುವಂತೆ ಮಾಡುತ್ತಾರೆ".

ರುದ್ರವನ್ನು ಕುರಿತಾಗಿ ಇನ್ನಷ್ಟು ವಿವರಗಳು:

              ಸೂಕ್ಷ್ಮರೂಪದ ರುದ್ರವು ಬ್ರಹ್ಮಾಂಡ ಶಕ್ತಿಯಾಗಿದ್ದು ಅದು ದುಷ್ಟ ಶಕ್ತಿಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ರುದ್ರದ ಸ್ಥೂಲ ರೂಪವು ಶಿವನ ಒಂದು ರೂಪವಾಗಿದೆ. ಮತ್ತು ರುದ್ರನು ಕಟ್ಟುನಿಟ್ಟಾದ ಶಿಸ್ತಿಗೆ ಹೆಸರಾಗಿದ್ದಾನೆ. ಅವನು ಪರಿಪೂರ್ಣತೆಯ ಹಾದಿಯಲ್ಲಿ ಅಡ್ಡಬರುವ ಯಾವುದನ್ನೇ ಆಗಲಿ ನಾಶ ಮಾಡುತ್ತಾನೆ. ಆದರೆ ಅವನು ಖಂಡಿತವಾಗಿಯೂ ಸಹಾನುಭೂತಿ ಮತ್ತು ಕರುಣೆಯುಳ್ಳವನಾಗಿದ್ದಾನೆ. ರುದ್ರ ಎನ್ನುವುದರ ಶಬ್ದಶಃ ಅರ್ಥವೇನೆಂದರೆ ಸುತ್ತಲೂ ಓಡಾಡುತ್ತಾ ಗಟ್ಟಿಯಾಗಿ ಅಳುವವನು. ವಾಸ್ತವಾಂಶವೇನೆಂದರೆ, ರುದ್ರನ ಅಳುವೇ ಸೃಷ್ಟಿಯಾಗಿದೆ. ರುದ್ರ ಎಂದರೆ ಪ್ರಾಣ ಅಥವಾ ಜೀವಶಕ್ತಿ/ಚೈತನ್ಯ (ಛಾಂದೋಗ್ಯ ಉಪನಿಷತ್ತು ೩.೧೬.೩). ಒಂದು ಮಗು ಹುಟ್ಟಿದಾಗ, ಅದು ಪ್ರಾಣವಾಯುವನ್ನು ಅಥವಾ ಮೊದಲ ಉಸಿರನ್ನು ಒಳಗೆಳೆದುಕೊಂಡಾಗ ಮಾತ್ರವೇ ಅಳಲು ಪ್ರಾರಂಭಿಸುತ್ತದೆ. ಇದುವೇ ಮಗುವಿನ ನಿಖರವಾದ ಜನನದ ಸಮಯವಾಗಿದ್ದು ಇದನ್ನು ಮಗುವಿನ ಜಾತಕವನ್ನು ಬರೆಯುವಾಗ ಗಮನದಲ್ಲಿಟ್ಟುಕೊಳ್ಳಬೇಕು. ಸಾಮನ್ಯವಾಗಿ ಹನ್ನೊಂದು ರುದ್ರರ ಕುರಿತಾಗಿ ಉಲ್ಲೇಖಿಸುತ್ತಾರೆ ಅವರನ್ನು ಏಕಾದಶ ರುದ್ರರೆಂದು ಕರೆಯುತ್ತಾರೆ. ವಾಸ್ತವವಾಗಿ ಅವರು ಶಿವ ಮತ್ತು ಶಕ್ತಿಯರ ಅರ್ಧನಾರೀಶ್ವರ (ಲಂಬವಾಗಿ ವಿಭಜಿಸಲ್ಪಟ್ಟ ಹೆಣ್ಣು-ಗಂಡುಗಳ ಸಂಯುಕ್ತ ರೂಪ) ಅವತಾರದಿಂದ ಸೃಷ್ಟಿಸಲ್ಪಟ್ಟವರು. ರುದ್ರನು ಸೃಷ್ಟಿಕರ್ತನಾದ ಬ್ರಹ್ಮನ ಮೂರನೆಯ ಕಣ್ಣಿನಿಂದ ಜನಿಸಿದನೆಂದೂ ಸಹ ಹೇಳಲಾಗುತ್ತದೆ. ರುದ್ರನು ‘ಓಂ’ ಅಥವಾ ಪ್ರಣವದ ಮೂಲಕ ವ್ಯಕ್ತಿಗತ ಆತ್ಮವು ಪರಮೋನ್ನತವಾದ ಪರಮಾತ್ಮದೊಂದಿಗೆ ಒಂದುಗೂಡುವುದಕ್ಕೆ ಕಾರಣನಾಗಿದ್ದಾನೆ. ಬಹುಶಃ ಈ ಕಾರಣದಿಂದಾಗಿ ರುದ್ರನು ಮರಣದ ಅಧಿದೇವತೆಯೆಂದು ಕರೆಯಲ್ಪಟ್ಟಿರಬೇಕು. ಯಜುರ್ವೇದದ ಮತ್ತು ಋಗ್ವೇದದ ಶ್ರೀ ರುದ್ರಂ’ನ ಪ್ರಸಿದ್ಧವಾದ ತ್ರ್ಯಂಬಕ ಮಂತ್ರವು ಈ ಮುಂದಿನ ಅರ್ಥವನ್ನು ವಿಶದಪಡಿಸುತ್ತದೆ. "ಓಹ್ಞ್! ಮೂಜಗದ ಒಡೆಯನೇ, ಕರುಣೆಯನ್ನು ದಯಪಾಲಿಸುವವನೇ, ಪರಿಪೂರ್ಣತೆ ಮತ್ತು ಶಕ್ತಿಯನ್ನು ಪ್ರಸಾದಿಸುವಾತನೇ, ನಾನು ಮಾಗಿದ ಸೌತೇಕಾಯಿಯಂತೆ ಮರಣದ ಬಂಧನದಿಂದ ಬೇರ್ಪಡುವಂತಾಗಲಿ (ಮಾಗಿದ ಸವತೇಕಾಯಿಯು ಬಳ್ಳಿಯಿಂದ ಸಿಡಿದು ತನ್ನಷ್ಟಕ್ಕೇ ತಾನೆ ಹೊರಬರುತ್ತದೆ. ಅದನ್ನು ಗಿಡದಿಂದ ಕೀಳುವ ಅವಶ್ಯಕತೆಯಿರುವುದಿಲ್ಲ); ಚಿಪ್ಪಿನಿಂದ ಹೊರಬರುವಂತಾಗಲಿ ಆದರೆ ಅಮೃತತ್ವದಿಂದಲ್ಲ". ಇಲ್ಲಿ ಚಿಪ್ಪೆಂದರೆ, ಭೌತಿಕ ಕಾಯವಾಗಿದ್ದು ಸವತೇಕಾಯಿಯ ಬೀಜ ಮತ್ತು ಖಂಡಗಳನ್ನು ಆತ್ಮಕ್ಕೆ ಹೋಲಿಸಲಾಗಿದೆ. ತ್ರ್ಯಂಬಕ ಮಂತ್ರವು ಅಕಾಲ ಮೃತ್ಯುವಿನಿಂದ ಕಾಪಾಡಲು ರುದ್ರನ ಕೃಪೆಯನ್ನು ಬೇಡುತ್ತದೆ. ಅಮೃತತ್ವನನ್ನು ಕುರಿತು ಕೇಳಲಾಗಿಲ್ಲ ಮತ್ತದನ್ನು ಕೇಳಲಾಗದೂ ಕೂಡಾ. ಇವೆಲ್ಲವೂ ರುದ್ರನು ಮರಣದ ಅಧಿದೇವತೆ ಅಲ್ಲವೆನ್ನುವುದನ್ನು ನಿರೂಪಿಸುತ್ತದೆ.

Tirodhānakarī तिरोधानकरी (270)

೨೭೦. ತಿರೋಧಾನಕರೀ

           ದೇವಿಯು ಸರ್ವನಾಶವನ್ನುಂಟುಮಾಡಿ ಈ ಪ್ರಪಂಚವು ಕಣ್ಮರೆಯಾಗುವಂತೆ ಮಾಡುತ್ತಾಳೆ. ತಿರೋಧಾನವು ಬ್ರಹ್ಮದ ನಾಲ್ಕನೆಯ ಕ್ರಿಯೆಯಾಗಿದ್ದು, ಇದನ್ನೇ ಮಹಾಪ್ರಳಯವೆಂದು ಕರೆಯಲಾಗಿದೆ. ಎಲ್ಲಾ ಜೀವಿಗಳು ಮರಣಕ್ಕೆ ಈಡಾಗುತ್ತಿರುವಾಗ ಪ್ರಳಯದ ಅವಶ್ಯಕತೆಯಾದರೂ ಏಕೆ ಬೇಕು? ಅಹಂಕಾರದ ಇರುವಿಕೆಯು ಮನುಷ್ಯನನ್ನು ಜೀವದಿಂದ ಇರುವಂತೆ ಮಾಡುತ್ತದೆ, ಏಕೆಂದರೆ ಅಹಂಕಾರವು ಅಂತಃಕರಣದ (ಮನಸ್ಸು, ಚಿತ್ತ, ಬುದ್ಧಿ, ಅಹಂಕಾರಗಳು ಸೇರಿ ಅಂತಃಕರಣಗವಾಗಿವೆ) ಭಾಗವಾಗಿದೆ. ಅಹಂಕಾರ ಅಥವಾ ನಾನು ಎನ್ನುವ ವಸ್ತುವಿಲ್ಲದಿದ್ದರೆ ಮನುಷ್ಯನ ಅಸ್ತಿತ್ವವಿರುವುದಿಲ್ಲ. ಅಹಂಕಾರವು ಆತ್ಮದಲ್ಲಿರುತ್ತದೆಯೇ ಹೊರತು ಭೌತಿಕ ದೇಹದಲ್ಲಲ್ಲ. ಆತ್ಮದಲ್ಲಿ ಅಹಂಕಾರವು ಉಪಸ್ಥಿತವಾಗಿರುವುದರಿಂದ ಅದು ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದನ್ನು ಮರೆಯಾಗಿಸುತ್ತದೆ. ಆತ್ಮಗಳು ಎಂದೂ ನಶಿಸುವುದಿಲ್ಲ ಮತ್ತು ಅವುಗಳ ಕರ್ಮ ಶೇಷಕ್ಕನುಗುಣವಾಗಿ ಅವು ಪುನಃ ಜನಿಸುತ್ತವೆ ಅಥವಾ ಪರಬ್ರಹ್ಮದಲ್ಲಿ ಐಕ್ಯವಾಗುತ್ತವೆ. ಕರ್ಮ ನಿಯಮವು ಆತ್ಮಕ್ಕೆ ಕೇವಲ ಮೂರು ವಿಧವಾದ ಪರಿಹಾರಗಳಿವೆ ಎಂದು ಹೇಳುತ್ತದೆ. ಅದರಲ್ಲೊಂದು ಬ್ರಹ್ಮದೊಂದಿಗೆ ಐಕ್ಯವಾಗುವುದು, ಎರಡನೆಯದು ಪುನರ್ಜನ್ಮ ಹೊಂದುವುದು ಮತ್ತು ಮೂರನೆಯದು ಪ್ರಳಯದ ಕಾಲದಲ್ಲಿ ಕರಗಿ ಹೋಗುವುದು ಅಥವಾ ಲೀನವಾಗುವುದು. ಬಹುತೇಕ ಆತ್ಮಗಳು ಮತ್ತೆ ಹುಟ್ಟಿ ಬರುತ್ತವೆ. ಆತ್ಮಗಳಲ್ಲಿನ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಪ್ರಳಯವು ಉಂಟಾಗುತ್ತದೆ. ಇಂತಹ ಮಹಾಪ್ರಳಯಗಳು ಕೋಟ್ಯಂತರ ವರ್ಷಗಳ ನಂತರವಷ್ಟೇ ಸಂಭವಿಸುತ್ತವೆ. ಆತ್ಮವನ್ನು ಕೇವಲ ಪರಬ್ರಹ್ಮನೊಬ್ಬನೇ ನಾಶಗೊಳಿಸಬಲ್ಲ. ಪರಬ್ರಹ್ಮವು ಕೇವಲ ಸಾಕ್ಷಿಯಾಗಿದ್ದುಕೊಂಡು ಆತ್ಮಕ್ಕೆ ಸಂಭಂದಪಟ್ಟ ಎಲ್ಲಾ ಕ್ರಿಯೆಗಳನ್ನು ನೋಡುತ್ತದೆಯಷ್ಟೇ ಆದರೆ ಅದರ ಯಾವುದೇ ಕ್ರಿಯೆಗಳಲ್ಲಿ ಅದು ಭಾಗವಹಿಸುವುದಿಲ್ಲ. ಒಂದು ಕಾಲಘಟ್ಟದಲ್ಲಿ ಪರಬ್ರಹ್ಮವು ಎಚ್ಚರಗೊಂಡು ಮಹಾಪ್ರಳಯವನ್ನುಂಟು ಮಾಡಿ, ವಿಶ್ವದ ಎಲ್ಲಾ ಪರಮಾಣುಗಳನ್ನು ಹಿಂದಕ್ಕೆ ಸೆಳೆದುಕೊಳ್ಳುತ್ತದೆ. ಮಹಾಪ್ರಳಯವು ಯಾವಾಗ ಕಡಿಮೆ ಪ್ರಮಾಣದ ಆತ್ಮಗಳು ಬ್ರಹ್ಮದೊಂದಿಗೆ ಐಕ್ಯವಾಗಿ ಬಹಳಷ್ಟು ಪ್ರಮಾಣದ ಆತ್ಮಗಳು ಮತ್ತೆ ಹುಟ್ಟುತ್ತವೆಯೋ ಆಗ ಉಂಟಾಗುತ್ತದೆ. ಈ ವಿಧವಾದ ಸಂದರ್ಭವು ಹೆಚ್ಚಿನ ಪಾಪಕಾರ್ಯಗಳು ಮಾಡಲ್ಪಟ್ಟಾಗ ಉದ್ಭವವಾಗುತ್ತದೆ. ವಾಸ್ತವದಲ್ಲಿ ಮಹಾಪ್ರಳಯವೆಂದರೆ ಬ್ರಹ್ಮಾಂಡದಲ್ಲಿರುವ ಅಹಂಕಾರವನ್ನು ಸಂಪೂರ್ಣವಾಗಿ ನಾಶಮಾಡುವುದೇ ಆಗಿದೆ. ಆ ಮಹಾಪ್ರಳಯದ ನಂತರ ಒಂದೇ ಒಂದು ಜೀವಿಯೂ ಬದುಕುಳಿಯುವುದಿಲ್ಲ. ಪರಬ್ರಹ್ಮವು ಸಂಪೂರ್ಣ ವಿಶ್ವವನ್ನು ತನ್ನೊಳಕ್ಕೆ ಸೆಳೆದುಕೊಳ್ಳುತ್ತದೆ ಮತ್ತು ಪುನರ್ ಸೃಷ್ಟಿಯ ಸಮಯದಲ್ಲಿ ಇದು ಬಂಗಾರದ ಮೊಟ್ಟೆ ಅಥವಾ ಹಿರಣ್ಯಗರ್ಭದ ಆಕಾರವನ್ನು ತಾಳುತ್ತದೆ.

******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 268-270 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Sun, 07/21/2013 - 17:11

ಶ್ರೀಧರರೆ, ಲಲಿತಾ ಸಹಸ್ರನಾಮ ೨೬೮ - ೨೭೦ರ ಸಾರ ತಮ್ಮ ಪರಿಷ್ಕರಣೆ / ಅವಗಾಹನೆಗೆ ಸಿದ್ದ - ನಾಗೇಶ ಮೈಸೂರು :-)
ಲಲಿತಾ ಸಹಸ್ರನಾಮ ೨೬೮ - ೨೭೦
೨೬೮. ಸಂಹಾರಿಣೀ
ಜೀವ ಸೃಷ್ಟಿಯ ಹರ್ಷ ಸ್ಥೂಲ ಜಡಕಾಯ ವಿನಾಶ ಸಾವಿನಲೆ
ವಿಶ್ವ ನಿಯಂತ್ರಣ ಸೂತ್ರ ಸಮತೋಲನದಲಿಟ್ಟಾ ದೇವಿ ಲೀಲೆ
ಸಮಗ್ರ ವಿಶ್ವ ಲಯ ಲೀನವಾಗಿಸೊ ಪ್ರಳಯ ಬ್ರಹ್ಮದ ಕಾರ್ಯ
ಸಂಹಾರಿಣೀ ರೂಪದಿ ಜೀವಿ ಮರಣಕೆ ಕರುಣೆ ಲಲಿತಾಂತರ್ಯ!
೨೬೯. ರುದ್ರ-ರೂಪಾ 
ಯಾತನೆಗಳ ನಾಶಕ'ರು' ಚದುರಿಸುತ ವೇದನೆ ರು'ದ್ರ'
ಸದ್ಬಳಸದ ಜ್ಞಾನೇಂದ್ರಿಯಜನ್ಯ ದುಃಖ ನೋವೆಲ್ಲ ಛಿದ್ರ   
ಬಡಿಸುತ ಜೀವಿಗೆ ಸಾವು ಲಲಿತೆ ತಾಳುವ ರುದ್ರ ರೂಪ
ಅಳಿಸುತ್ತೆಲ್ಲರ ಜಗವ ರುದ್ರಾ ಪ್ರಾಣ ಧಾರ್ಮಿಕ ಸ್ವರೂಪ!
೨೭೦. ತಿರೋಧಾನಕರೀ
ಕುಗ್ಗುತಿರೆ ಬ್ರಹ್ಮೈಕ್ಯವಾಗುವ ಆತ್ಮ ಹಿಗ್ಗಿಸುತ ಪುನರ್ಜನ್ಮಾತ್ಮ ಗಾತ್ರ
ಪಾಪ ಕಾರ್ಯಗಳ್ಹೆಚ್ಚಿಸುತ ಚೀತ್ಕಾರ ಅಹಂಕಾರ ಅಟ್ಟಹಾಸ ಪಾತ್ರ
ಹೀರುತೆಲ್ಲಾ ಸಮಷ್ಟಿ ವಿಶ್ವವೆ ಮಹಾಪ್ರಳಯಾಪೋಷಿತ ಮೂಕಸಾಕ್ಷಿ
ಕಣವಾಗಿಸುತೆಲ್ಲ ತಿರೋಧಾನಕರೀ ಸರ್ವನಾಶಕೆ ಬ್ರಹ್ಮಾಂಡದಸೃಷ್ಟಿ!
ಮಹಾಪ್ರಳಯದ ಮುನ್ನುಡಿ (ಮತ್ತೊಂದು ಅನಿಸಿಕೆ)
-----------------------------------------------------
ಸಮತೋಲನದಲಿರುವಾಗ ಪಾಪ ಪುಣ್ಯಾತ್ಮದ ಮೊತ್ತ
ಜೀವಿಯ ಸೃಷ್ಟಿ ಸ್ಥಿತಿ ಲಯಗಳೆ ಪರಬ್ರಹ್ಮಕೆ ಸಾಕಾಗಿತ್ತ
ಮಿತಿ ಮೀರೆ ಅಸಮತೋಲನ, ತ್ರಿಕಾರ್ಯ ಕಾಲಹರಣ
ಮಹಾಪ್ರಳಯಕದೆ ಮುನ್ನುಡಿ ಜತೆ ನವವಿಶ್ವ ನಿರ್ಮಾಣ!

ಶ್ರೀಧರರೆ, ರುದ್ರವನ್ನು ಕುರಿತು ಮತ್ತು ಅಹಂಕಾರದ ಕುರಿತು ಕೆಲವು ಪಂಕ್ತಿಗಳನ್ನು ಜತೆಗೆ ಸೇರಿಸುತ್ತಿದ್ದೇನೆ :-) - ನಾಗೇಶ ಮೈಸೂರು 

ರುದ್ರವನ್ನು ಕುರಿತಾಗಿ ಇನ್ನಷ್ಟು ವಿವರಗಳು:
-------------------------------------------------------

ರುದ್ರವೆನೆ ಪ್ರಾಣ, ಜೀವಶಕ್ತಿ ಚೈತನ್ಯ ಶಿವಸ್ಥೂಲ ರೂಪ
ಅಡ್ಡಾಡುತ ಅಳುತ ನವಜೀವ, ಸೃಷ್ಟಿ ಇಂಗಿತ ಸ್ವರೂಪ
ಬ್ರಹ್ಮಾಂಡ ಶಕ್ತಿ, ದುಷ್ಟ ದಮನಾ ಸಮರ್ಥ ಸೂಕ್ಷ್ಮರೂಪ
ಶಿಸ್ತೆ ಸಿದ್ದಾಂತ ಪರಿಪೂರ್ಣತೆಗಡ್ಡಿಬರಲು ನಾಶದ ಶಾಪ!

ಶಿಸ್ತಿನ ಜತೆ ಸಹಾನುಭೂತಿ ಕರುಣೆಯುಳ್ಳವನಾಗಿ ರುದ್ರ
ಪ್ರಾಣ ಚೈತನ್ಯ ಜೀವಶಕ್ತಿ ತುಂಬಿ ಕಂದನನೆಬ್ಬಿಸುತ ನಿದ್ರ
ನವಜಾತಕು ಉಸಿರಾಟ ಪ್ರಥಮ ಪ್ರಾಣವಾಯುಸಮಯ 
ತಟ್ಟನೆದ್ದು ಅತ್ತಾಗಲೆ ನಿಖರಗಳಿಗೆ ಜನನ ಜೀವಸಂಚಯ!

ಅರ್ಧನಾರೀಶ್ವರ ಅವತಾರದಿಂದುಸಿದ ಏಕಾದಶ ರುದ್ರ
ಸೃಷ್ಟಿಕರ್ತನ ಮೂರನೆ ಕಣ್ಣಿಂದ ಜನಿಸಿದನೆಂದೂ ಪ್ರವರ
ಜೀವಾತ್ಮ ಪರಮಾತ್ಮ ಮಿಲನ ಕಾರಕ ರುದ್ರ ಓಂ ಪ್ರಣವ
ಬೇಡಲಾಗದಮರತ್ವ ಅಕಾಲ ಮೃತ್ಯುವಿನಿಂದ ರಕ್ಷಿಸುವ!

ಅಹಂಕಾರ (ತಿರೋಧಾನಕರೀ)
-------------------------------------------------------
ಅಂತಃಕರಣದ ಭಾಗ ಅಹಂಕಾರ ಮನುಜ ಜೀವದ ನಿಗ
ನಾನತ್ವ ವ್ಯಕ್ತಿಯ ಅಸ್ತಿತ್ವ ವಸತಿಯಾತ್ಮ ಅಭೌತಿಕ ಜಾಗ
ಅಹಂಕಾರದುಪಸ್ಥಿತಿ ಮುಸುಕಿದಾತ್ಮ ಮರೆಯೆ ಸಂಸ್ಕಾರ
ನಶಿಸದಾತ್ಮ ಜನ್ಮಜನ್ಮದಿ ಹುಡುಕುತ ಆತ್ಮ ಸಾಕ್ಷಾತ್ಕಾರ!

Submitted by ಗಣೇಶ Tue, 08/06/2013 - 00:12

ಶ್ರೀಧರ್ ಜಿ, "ಏಕಾದಶ ರುದ್ರ" ದ‌ ಬಗ್ಗೆ ನಾನು ಒಂದು ದೇವಸ್ಥಾನಕ್ಕೆ ಸಂಬಂಧಿಸಿದ ಪುಸ್ತಕದ‌ಲ್ಲಿ ಓದಿದ್ದೆ. "ekadasha rudradevatas" ಗೂಗ್ಲ್ ಸರ್ಚ್ ಕೊಟ್ಟು ನೋಡಿ, "The Rudras Eleven/ Sulekha Creative" ನಲ್ಲಿ ತುಂಬಾ ವಿವರಗಳಿವೆ. ನಿಮಗೆ ಸಹಾಯವಾಗಬಹುದು.

ರುದ್ರರ ಬಗೆಗಿನ ಕೊಂಡಿಯನ್ನು ಕೊಟ್ಟದ್ದಕ್ಕೆ ಧನ್ಯವಾದಗಳು @ಗಣೇಶರೆ; ವಿವರಗಳಿಗಾಗಿ ಅದನ್ನು ನೋಡುತ್ತೇನೆ.
@ನಾಗೇಶರೆ,
ಒಟ್ಟಾರೆಯಾಗಿ ಕವನಗಳು ಮತ್ತು ಹೆಚ್ಚಿನ ವಿವರಣೆಯ ಕವನಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿವೆ. ಒಂದೆರಡು ಸಣ್ಣಪುಟ್ಟ ಸವರಣೆಗಳಿವೆ, ಅವನ್ನು ಆಮೇಲೆ ನಿಮ್ಮ ಗಮನಕ್ಕೆ ತರುತ್ತೇನೆ.

Submitted by ananthesha nempu Tue, 08/06/2013 - 09:59

ಶ್ರೀಧರ ಬಂಡ್ರಿಯವರಿಗೆ ನಮಸ್ಕಾರಗಳು.

ತಮ್ಮ ಅನುವಾದಮಾಲೆ ಸುಂದರವಾಗಿ ಮೂಡಿ ಬರುತ್ತಿದೆ, ಮೊದಮೊದಲು ಸ್ವಲ್ಪಮಟ್ಟಿನ ಟೈಪಿಂಗ್ ತಪ್ಪುಗಳಿಂದಾಗಿ ಅಕ್ಷರಸ್ಖಾಲಿತ್ಯ ಉಂಟಾಗುತ್ತಿತ್ತು, ಆದರೆ ಈಗ ಬಹುತೇಕ ತಪ್ಪುಗಳಿಲ್ಲದೆ ಮೂಡಿಬರುತ್ತಿದೆ.

ವಿ. ರವಿಯವರ ಜ್ಞಾನ ಅಗಾಧವಾದದ್ದು, ಸರಳವಾದ ವಿವರಣೆಯ ಮೂಲಕ ಅವರು ತಮ್ಮ ವಿಚಾರವನ್ನು ನಿರೂಪಿಸಿದ್ದಾರೆ ಮತ್ತು ಧಾರ್ಮಿಕ ಪರಂಪರೆಯ ಅರಿವಿಲ್ಲದವರಿಗೂ ಕೂಡಾ ಸುಲಭವಾಗಿ ಅರ್ಥವಾಗುವಂತೆ ಸಹಸ್ರನಾಮದ ವಿವರಣೆ ನೀಡಿದ್ದಾರೆ. ಪಾರಿಭಾಷಿಕ ಶಾಸ್ತ್ರೀಯ ಪದಗಳ (ತಂತ್ರ ಇತ್ಯಾದಿ ) ಕುರಿತು ಅವರ ವಿವರ ಸಾಮಾನ್ಯರಿಗೂ ಆಸಕ್ತಿ ಹುಟ್ಟಿಸಿ ತಿಳುವಳಿಕೆ ಮೂಡಿಸುವಂತಿದೆ.

ನಾನು ಈ ಮುಂಚೆ ರಾಮಕೃಷ್ಣಾಶ್ರಮ , ಮೈಸೂರು ಇವರ ಪ್ರಕಟಣೆಯಾದ ಲಲಿತಾಸಹಸ್ರನಾಮ ಭಾಷ್ಯ (ಸ್ವಾಮೀ ಆದಿದೇವಾನಂದ) ವನ್ನು ಓದಿದ್ದೆ. ಭಾರತದ ಧಾರ್ಮಿಕ ಪರಂಪರೆಯು ಅವಿನಾಶಿಯಾಗಿ ಮುಂದುವರೆಯಲು ರಾಮಕೃಷ್ಣ ಮಠಗಳಿಂದ ಬತ್ತದ ಸ್ರೋತಸ್ಸು ಹರಿದು ಬರುತ್ತಿದೆ. ರಾಮಕೃಷ್ಣ ಪರಮಹಂಸರ ಕುರಿತಾದ ತಮ್ಮ ಅಭಿಮಾನ ನನಗೆ ಬಹಳ ಮೆಚ್ಚಿಕೆ.

ವಿಶೇಷವಾಗಿ ತಾಂತ್ರಿಕ ಪರಂಪರೆಯೊಂದಿಗಿನ ಲಲಿತಾಸಹಸ್ರನಾಮದ ಸಂಬಂಧವನ್ನು ಚೆನ್ನಾಗಿ ನಿರೂಪಿಸುತ್ತಿದ್ದೀರಾ. ಲಲಿತಾಸಹಸ್ರನಾಮವು ಬಹಳ ವಿಶಿಷ್ಟವಾದ ರಚನೆಯಾಗಿದ್ದು ಇಲ್ಲಿ ಪಾದಪೂರಣಕ್ಕಾಗಿ ಬಳಸಲಾಗುವ ಚ, ತು, ಹಿ , ವೈ ಮುಂತಾದವುಗಳ ಬಳಕೆಯಾಗಿಲ್ಲ ಮತ್ತು ಅರ್ಥವಿಲ್ಲದೆ ವ್ಯರ್ಥವಾಗುವ ಒಂದಕ್ಷರವೂ ಇಲ್ಲ. ಇಂತಹ ಅನುಪಮವಾದ ಸಂರಚನೆಯನ್ನು ಹೊಂದಿರುವ ಮಂತ್ರಕಾವ್ಯವಾಗಿರುವ ಲಲಿತಾಸಹಸ್ರನಾಮದ ಅನುವಾದದ ಮೂಲಕ ಜ್ಞಾನಪ್ರಸಾರ ಮಾಡುತ್ತಿದ್ದೀರಿ, ಧನ್ಯವಾದಗಳು.

ಜಾತಕ ಮತ್ತು ಜನ್ಮಸಮಯದ ಬಗ್ಗೆ ಇಲ್ಲಿ http://sampada.net/b... ಚರ್ಚೆಯಾಗಿದೆ ನೋಡಿ.

ಲಿಂಕ್ ಕೆಲಸ ಮಾಡದಿದ್ದರೆ ಜ್ಯೋತಿಷ ಮತ್ತು ಜನ್ಮಸಮಯ ಎಂದು ಸರ್ಚ್ ಮಾಡಿ , ನಾ ಸೋ ಅವರ ಲೇಖನ ಸಿಗುವುದು.

ಅನಂತೇಶ ನೆಂಪು ಅವರೆ,
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ನೀವು ತಿಳಿಸಿರುವಂತೆ ವಿ.ರವಿಯವರ ಹಿಂದೂ ಧರ್ಮ ಮತ್ತು ಕೃತಿಗಳ ಕುರಿತಾದ ಆಳವಾದ ಜ್ಞಾನ ಮತ್ತು ಅದರಲ್ಲೂ ಲಲಿತಾ ಸಹಸ್ರನಾಮ ಮತ್ತು ತಾಂತ್ರಿಕಾಚರಣೆಗಳ ಜ್ಞಾನ ಅಸದೃಶವಾದುದು. ಅನುಮಾನಗಳ ಪರಿಹಾರಕ್ಕೆ ಅವರನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಿದರೂ ಸಹ ಅವರು ಕೂಡಲೇ ಅದಕ್ಕೆ ಸೂಕ್ತ ಉತ್ತರಗಳನ್ನು ಒದಗಿಸುತ್ತಾರೆ ಅದು ಅವರ ವಿಶೇಷತೆ ಮತ್ತು ಬದ್ಧತೆ. ಇದರಿಂದಾಗಿ ನನ್ನ ಅನುವಾದ ಕಾರ್ಯ ಸುಗುಮವಾಗಿಯೇ ಸಾಗಿದೆ ಎಂದು ಹೇಳಬಹುದು. ಕೆಲವೊಂದು ಶಬ್ದಗಳ ಸರಿಯಾದ ರೂಪಗಳು ತಿಳಿಯದೇ ಸಹ ತಪ್ಪಾಗಿ ಬಳಸುವ ಸಾಧ್ಯತೆಗಳಿವೆ. ಆದ್ದರಿಂದ ಅಂತಹ ಶಬ್ದಗಳನ್ನು ನನ್ನ ದೃಷ್ಟಿಗೆ ತನ್ನಿ; ಇದರಲ್ಲಿ ಸರಿಪಡಿಸಲಾಗದಿದ್ದರೂ ಸಹ ಮುಂದಿನ ಕಂತುಗಳಲ್ಲಿ ಅವುಗಳನ್ನು ಸರಿಪಡಿಸಬಹುದು.
ಸ್ವಾಮಿ ಆದಿದೇವಾನಂದರು ರಚಿಸಿರುವ ಎಲ್ಲಾ ಬ್ರಹ್ಮಸೂತ್ರಗಳು, ಭಗವದ್ಗೀತೆ ಮತ್ತು ಪ್ರಮುಖ ಉಪನಿಷತ್ತುಗಳ ವಿವರಣೆಗಳ ಪುಸ್ತಕಗಳು ನನ್ನ ಬಳಿ ಇವೆ. ಆದರೆ ಅವರು ಲಲಿತಾ ಸಹಸ್ರನಾಮದ ಕುರಿತು ಬರೆದ ವ್ಯಾಖ್ಯಾನ ಗ್ರಂಥದ ಕುರಿತು ತಿಳುವಳಿಕೆ ಇರಲಿಲ್ಲ. ಅದರ ಮಾಹಿತಿಗಾಗಿ ನಿಮಗೆ ಧನ್ಯವಾದಗಳು. ಈ ಬಾರಿ ಹೈದರಾಬಾದಿನ ರಾಮಕೃಷ್ಣಾಶ್ರಮಕ್ಕೆ ಹೋದಾಗ ಅದರ ಬಗ್ಗೆ ವಿಚಾರಿಸುತ್ತೇನೆ.
ನೀವು ತಿಳಿಸಿರುವಂತೆ ಲಲಿತಾ ಸಹಸ್ರನಾಮದ ಯಾವುದೇ ನಾಮವೂ ಪುನರುಕ್ತಿಗೊಂಡಿಲ್ಲ ಮತ್ತು ಯಾವ ಅಕ್ಷರವನ್ನೂ ವೃಥಾ ಬಳಸಿಲ್ಲ. ವಿ.ರವಿಯವರು ಹೇಳುವಂತೆ ಪ್ರತಿಯೊಂದು ನಾಮದಲ್ಲೂ ಒಂದೊಂದು ಬೀಜಾಕ್ಷರವು ಸುಪ್ತವಾಗಿ ಅಡಗಿದೆ. ಗಣೇಶ್ ಅವರು ಕೇಳಿರುವ ಪ್ರಶ್ನೆಗೆ ಈ ಹಿನ್ನಲೆಯಲ್ಲಿ ಒಂದು ಸಣ್ಣ ಟಿಪ್ಪಣಿಯನ್ನೇ ಬರೆಯಬೇಕಾಗಬಹುದೆನಿಸುತ್ತದೆ.
ನೀವು ಕೊಟ್ಟಿರುವ ಎರಡೂ ಕೊಂಡಿಗಳ ಮೂಲಕ ನಾ.ಸೋಮೇಶ್ವರ ಅವರ ಕೊಂಡಿಯನ್ನು ಹೊಕ್ಕು ನೋಡಲು ಪ್ರಯತ್ನಿಸಿದಾಗ ನಿಮಗೆ ಅಪ್ಪಣೆಯಿರದ ಕೊಂಡಿಯನ್ನು ತೆರೆಯಲು ಪ್ರಯತ್ನಿಸುತ್ತಿದ್ದೀರಿ ಎಂದು ಬರುತ್ತಿದೆ. ಜ್ಯೋತಿಷ ಮತ್ತು ಜನನ ಸಮಯ ಎನ್ನುವ ಸರ್ಚ್ ಕೊಟ್ಟು ನೋಡಿದೆ ಅದರಲ್ಲೂ ಸೋಮೇಶ್ವರರ ಲೇಖನದ ಕೊಂಡಿ ಸಿಗಲಿಲ್ಲ. ನೇರವಾಗಿ ನಾ. ಸೋಮೇಶ್ವರ ಎಂದು ಟೈಪಿಸಿ ಹುಡುಕುತ್ತೇನೆ.
ವಂದನಗಳೊಂದಿಗೆ, ಶ್ರೀಧರ್ ಬಂಡ್ರಿ

ಅನಂತೇಶ ನೆಂಪು ಅವರೆ,
ಕ್ಷಮಿಸಿ ಗಣೇಶರು ಪ್ರಶ್ನೆ ಕೇಳಿರುವುದು ೨೭೮ರಿಂದ ೨೮೪ನೇ ನಾಮಗಳಲ್ಲಿ ರಹಸ್ಯವಾಗಿರುವ ಬೀಜಾಕ್ಷರ/ಪಂಚದಶೀ ಮಂತ್ರದ ಕುರಿತಾಗಿ. ಅದು ಇಲ್ಲಿ ಅಪ್ರಸ್ತುತ. ಅದಕ್ಕೆ ವಿವರಣೆಯನ್ನು ಆ ನಾಮಗಳ ಕಂತಿನಲ್ಲಿಯೇ ಕೊಡುತ್ತೇನೆ.