ರೂಪಾಯಿ ಬೆಲೆ ಕುಸಿತ, ಯಾಕೆ?

ರೂಪಾಯಿ ಬೆಲೆ ಕುಸಿತ, ಯಾಕೆ?

ನಮ್ಮ ರೂಪಾಯಿ ಬೆಲೆ ಕುಸಿಯುತ್ತಿದೆ, ಗಮನಿಸಿದ್ದೀರಾ? ಕೇವಲ ಎರಡು ತಿಂಗಳ ಅವಧಿಯಲ್ಲಿ (೨೦೧೩ ಮೇ ಮೊದಲ ವಾರದಿಂದ ಜುಲಾಯಿ ಮೊದಲ ವಾರಕ್ಕೆ) ಶೇಕಡಾ ೧೫ರಷ್ಟು ಕುಸಿತ! ಒಂದು ಡಾಲರಿಗೆ ೫೩ ರೂಪಾಯಿ ಇದ್ದದ್ದು ೬೧ ರೂಪಾಯಿಗೆ ಕುಸಿದಿದೆ. ಕಳೆದ ಎರಡು ದಶಕಗಳಲ್ಲಿ ಇದು ಅಸಾಧಾರಣ ಇಳಿಕೆ.

ರೂಪಾಯಿ ಬೆಲೆ ಕುಸಿದರೆ ನಮಗೇನಂತೆ? ಎಂದು ನಾವು ಸುಮ್ಮನಿರುವಂತಿಲ್ಲ. ಯಾಕೆಂದರೆ, ಈ ಕುಸಿತ ನಮ್ಮೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಕಾರಣ. ಜೊತೆಗೆ, ಕೆಲವರಿಗೆ ಇದರಿಂದ ಲಾಭ!

೨೦೧೨ರ ವರುಷವಿಡೀ ರೂಪಾಯಿಯ ಬೆಲೆ ಒಂದು ಡಾಲರಿಗೆ ೫೨ರಿಂದ ೫೪ರ ಹಂತದಲ್ಲೇ ಸುಳಿದಾಡುತ್ತಿತ್ತು. ಇದರಿಂದಾಗಿ ವಿದೇಶಿ ವಿನಿಮಯ ವ್ಯವಹಾರದಲ್ಲಿ ತೊಡಗಿದ ಹಲವರಲ್ಲಿ ರೂಪಾಯಿ ಬೆಲೆ ಸುಭದ್ರ ಎಂಬ ಭಾವನೆ ಮೂಡಿತ್ತು. ಆದರೆ, ಆರ್ಥಿಕ ತಜ್ನರು ಎಚ್ಚರಿಸುತ್ತಲೇ ಇದ್ದರು - ರೂಪಾಯಿ ಕುಸಿತ ಕಾದಿದೆ ಎಂದು.

ಅದೀಗ ನಿಜವಾಗಿದೆ. ಯಾಕೆ? ಒಂದು ವಸ್ತುವಿನ ಬೆಲೆಯನ್ನು ನಿರ್ಧರಿಸುವುದು ಅದರ ಬೇಡಿಕೆ ಮತ್ತು ಪೂರೈಕೆ. ಡಾಲರಿನಂತಹ ವಿದೇಶಿ ಹಣಕಾಸಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಲು ಪ್ರಧಾನ ಕಾರಣ ನಮ್ಮ ದೇಶದ ಆಮದು (ಅಂದರೆ ಆಮದು ಮಾಡಿದ ವಸ್ತುಗಳ ಬೆಲೆಯ ಪಾವತಿಗಾಗಿ). ಹಾಗೆಯೇ, ನಮ್ಮ ರೂಪಾಯಿಗೆ ಬೇಡಿಕೆ ಹೆಚ್ಚಾಗಲು ಕಾರಣ ವಿದೇಶಗಳಿಂದ ಭಾರತೀಯ ವಸ್ತುಗಳ ಖರೀದಿ (ಅಂದರೆ ಭಾರತದಿಂದ ರಫ್ತು). ಹಾಗಿದ್ದರೆ ನಮ್ಮ ದೇಶದ ಸಮಸ್ಯೆ ಏನು? ಪ್ರತಿ ವರುಷವೂ ನಮ್ಮ ದೇಶ ರಫ್ತು ಮಾಡುವ ವಸ್ತುಗಳ ಬೆಲೆಗಿಂತ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಜಾಸ್ತಿ. ಈ ಅಂತರವೇ (ಅಂದರೆ ವಾಣಿಜ್ಯ ಕೊರತೆ) ನಮ್ಮ ವಿದೇಶಿ ವಿನಿಮಯದ ಸಮಸ್ಯೆಗೆ ಮೂಲ ಕಾರಣ.

ಈ ಆರ್ಥಿಕ ವರುಷದ ಎಪ್ರಿಲ್ - ಮೇ ತಿಂಗಳುಗಳಲ್ಲಿ ನಮ್ಮ ವಾಣಿಜ್ಯ ಕೊರತೆ ೩೮ ಬಿಲಿಯನ್ ಡಾಲರ್! ಇಡೀ ಆರ್ಥಿಕ ವರುಷದಲ್ಲಿ ಈ ವಾಣಿಜ್ಯ ಕೊರತೆ ೨೨೦ ಬಿಲಿಯನ್ ಡಾಲರ್ ಆಗಲಿದೆ! ಇಂತಹ ಅಗಾಧ ವಾಣಿಜ್ಯ ಕೊರತೆ ಕಡಿಮೆ ಮಾಡಲು ಮೂರು ಮೂಲಗಳಿವೆ. ಮೊದಲನೆಯದು ನಮ್ಮ ದೇಶದಿಂದ ಕಂಪ್ಯೂಟರ್ ತಂತ್ರಾಶಗಳ ರಫ್ತು. ಇದರಿಂದ ಪ್ರತಿ ವರುಷ ೭೫ ಬಿಲಿಯನ್ ಡಾಲರ್ ಆದಾಯ ಬರುತ್ತಿದೆ. ಎರಡನೆಯ ಮೂಲ, ಅನಿವಾಸಿ ಭಾರತೀಯರು ಭಾರತಕ್ಕೆ ರವಾನಿಸುವ ಹಣ (ಎನ್‍ಆರ್‍ಐ ರೆಮಿಟೆನ್ಸ್). ಇದು ೨೦೧೨ರಲ್ಲಿ ೭೦ ಬಿಲಿಯನ್ ಡಾಲರ್ ಆಗಿತ್ತು. ಮೂರನೆಯ ಮೂಲ, ವಿದೇಶಿ ಭಂಡವಾಳ. ಇದು ಮೂರು ದಾರಿಗಳಲ್ಲಿ ಭಾರತಕ್ಕೆ ಬರುತ್ತದೆ: (೧) ಭಾರತದಲ್ಲಿ ವ್ಯವಹಾರ ಆರಂಭಿಸುವ ವಿದೇಶಿ ಕಂಪೆನಿಗಳ ಮೂಲಕ ಭಾರತಕ್ಕೆ ಬರುವ ‍ಬಂಡವಾಳ (ಫಾರಿನ್ ಡೈರೆಕ್ಟ್ ಇನ್‍ವೆಸ್ಟ್ ಮೆಂಟ್ ಅಥವಾ ಎಫ್‍ಡಿಐ) (೨) ಭಾರತೀಯ ಕಂಪೆನಿಗಳ ಷೇರು ಮತ್ತು ಬಾಂಡ್‍ಗಳನ್ನು ಖರೀದಿಸುವ ವಿದೇಶಿ ಹೂಡಿಕೆದಾರರ ಹೂಡಿಕೆ (ಫಾರಿನ್ ಇನ್‍ಸ್ಟಿಟ್ಯೂಷನಲ್ ಇನ್‍ವೆಸ್ಟ್ ಮೆಂಟ್ ಅಥವಾ ಎಫ್‍ಐಐ) (೩) ಭಾರತದ ಕಂಪೆನಿಗಳು ಅಥವಾ ಸರಕಾರ ವಿದೇಶಗಳಿಂದ ಪಡೆಯುವ ಸಾಲ.

ಇವುಗಳಲ್ಲಿ ಎಫ್‍ಡಿಐ ಹಣ ದೀರ್ಘಾವಧಿ ನಮ್ಮ ದೇಶದಲ್ಲಿ ಉಳಿಯುತ್ತದೆ. ಆದರೆ ಎಫ್‍ಐಐ ಯಾವುದೇ ಕ್ಷಣ ಭಾರತದಿಂದ ಹೊರಕ್ಕೆ ಹೋದೀತು. ಆದರೆ, ಈ ಬಗ್ಗೆ ಇತ್ತೀಚೆಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಯಾಕೆಂದರೆ, ೨೦೧೨ರಲ್ಲಿ ಈ ಮೂಲಕ ಭಾರತಕ್ಕೆ ಬಂದ ಹಣ ೩೧ ಬಿಲಿಯನ್ ಡಾಲರ್. ಈ ವರುಷವೂ ಮೇ ತಿಂಗಳ ಕೊನೆಯ ವರೆಗೆ ೧೯ ಬಿಲಿಯನ್ ಡಾಲರ್ ಹೂಡಿಕೆ ಭಾರತದ ಒಳಕ್ಕೆ ಹರಿದು ಬಂತು. ಆದರೆ, ಜೂನ್ ತಿಂಗಳಿನಲ್ಲಿ ಇದೆಲ್ಲ ತಿರುವುಮುರುವಾಯಿತು. ಆ ಒಂದೇ ತಿಂಗಳಿನಲ್ಲಿ ಏಳು ಬಿಲಿಯನ್ ಡಾಲರ್ ದೇಶದಿಂದ ಹೊರಕ್ಕೆ ಹೋಯಿತು. ಭಾರತದ ಕಂಪೆನೆಗಳ ಷೇರು ಮತ್ತು ಬಾಂಡ್‍ಗಳನ್ನು ಮಾರಿದ ವಿದೇಶಿ ಹೂಡಿಕೆದಾರರು, ಆ ಹಣವನ್ನು ಡಾಲರಿನಲ್ಲಿ ತಮ್ಮ ದೇಶಕ್ಕೆ ರವಾನಿಸುತ್ತಾರೆ. ಅದಕ್ಕಾಗಿ ಅವರು ಡಾಲರುಗಳನ್ನು ಖರೀದಿಸಬೇಕಾಯಿತು. ಡಾಲರ್ ಖರೀದಿಗೆ ಇಂತಹ ಅಧಿಕ ಬೇಡಿಕೆ ಅನಿರೀಕ್ಷಿತ. ಇದು, ನಮ್ಮ ದೇಶದ ಆಯಾತ-ನಿರ್ಯಾತದ ಅಂತರದ ಜೊತೆ ಸೇರಿಕೊಂಡಾಗ, ಡಾಲರಿನ ನೆಲೆಯಲ್ಲಿ ರೂಪಾಯಿಯ ಕುಸಿತ ಆರಂಭವಾಯಿತು.

ಇದೇನು ಹೊಸ ವಿದ್ಯಮಾನವಲ್ಲ. ಕಳೆದ ಶತಮಾನದಲ್ಲಿ ಅಧಿಕ ಆಯಾತ ಮಾಡಿಕೊಳ್ಳುವ ದೇಶಗಳು ಮತ್ತೆಮತ್ತೆ ಇಂತಹ ಸಂಕಟಕ್ಕೆ ಸಿಲುಕಿವೆ. ಇನ್ನು ಮುಂದೆಯೂ ಇಂತಹ ಕುಸಿತ ಆಗಿಯೇ ಆಗುತ್ತದೆ.

ಈಗ ನಮ್ಮ ಮುಂದಿರುವ ಪ್ರಶ್ನೆ: ನಮ್ಮ ದೇಶ ಆಮದು ಮತ್ತು ವಿದೇಶಿ ಭಂಡವಾಳವನ್ನು ಯಾಕೆ ಅವಲಂಬಿಸಿದೆ? ಇದಕ್ಕೆ ನೇರವಾದ ಉತ್ತರ: ಅಸಮರ್ಪಕ ಆರ್ಥಿಕ ನೀತಿ.

ನಾವು ದೇಶಕ್ಕೆ ಭಾರೀ ಪ್ರಮಾಣದಲ್ಲಿ ಆಮದು ಮಾಡುತ್ತಿರುವ ಮೂರು ವಸ್ತುಗಳ ಬಗ್ಗೆ ಪರಿಶೀಲಿಸಿದರೆ ಈ ಉತ್ತರ ಸ್ಪಷ್ಟವಾಗುತ್ತದೆ. ಅವು: ಕಚ್ಚಾತೈಲ, ಕಲ್ಲಿದ್ದಲು ಮತ್ತು ಚಿನ್ನ. ನಮ್ಮ ದೇಶ ಕಚ್ಚಾತೈಲದ ಆಮದಿಗಾಗಿ ಮಾಡುತ್ತಿರುವ ವೆಚ್ಚ ಅಗಾಧ. ಇದನ್ನು ಸರಿದೂಗಿಸಬೇಕಾದರೆ ಡೀಸಿಲಿನ ಮತ್ತು ಸೀಮೆ ಎಣ್ಣೆಯ ಬೆಲೆ ಹೆಚ್ಚಿಸಬೇಕು. ಆದರೆ ನಮ್ಮ ದೇಶದಲ್ಲಿ ರಿಯಾಯ್ತಿ ದರದಲ್ಲಿ ಅವುಗಳ ಮಾರಾಟ! ಕಲ್ಲಿದ್ದಲಿನ ಬಗ್ಗೆ ಹೇಳಬೇಕೆಂದರೆ, ಜಗತ್ತಿನ ಎರಡನೇ ಅತಿ ದೊಡ್ಡ ಕಲ್ಲಿದ್ದಲಿನ ಖಜಾನೆ ನಮ್ಮ ದೇಶದಲ್ಲಿದೆ. ಆದರೆ ನಾವು ಕಲ್ಲಿದ್ದಲನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದ್ದೇವೆ! ಇದರಿಂದಾಗಿ, ಉಷ್ಣ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಆದರೆ, ವಿವಿಧ ರಾಜ್ಯಗಳ ವಿದ್ಯುತ್ ಮಂಡಲಿಗಳು ವಿದ್ಯುತ್ ಉತ್ಪಾದನಾ ವೆಚ್ಚವನ್ನೂ ಗ್ರಾಹಕರಿಂದ ವಸೂಲಿ ಮಾಡುತ್ತಿಲ್ಲ. ಬದಲಾಗಿ, ಅವು ಹತ್ತಾರು ವರುಷಗಳಿಂದ ನಷ್ಟದಲ್ಲಿ ಮುಳುಗಿವೆ. ಇನ್ನು ಚಿನ್ನದ ವಿಚಾರ ಎತ್ತದಿರುವುದೇ ಚೆನ್ನ. ಕೆಲವು ಮುಂದಾಳುಗಳು ಚಿನ್ನದಲ್ಲಿ ಹೂಡಿಕೆ ಅನುತ್ಪಾದಕ ಎನ್ನುತ್ತಿದ್ದಾರೆ. ಹಾಗಾದರೆ, ಜನಸಾಮಾನ್ಯರು ತಮ್ಮ ಉಳಿತಾಯದ ಮೌಲ್ಯ ಉಳಿಸಿಕೊಳ್ಳಲು ಏನು ಮಾಡಬೇಕು? ಷೇರುಪೇಟೆಯಲ್ಲಿ ಹಣ ಹೂಡಿದ ಲಕ್ಷಗಟ್ಟಲೆ ಜನರು ಕೈಸುಟ್ಟುಕೊಂಡಿದ್ದಾರೆ. ಬ್ಯಾಂಕುಗಳಲ್ಲಿ ಹೂಡಿದ ಠೇವಣಿ ಹಣದ ಮೌಲ್ಯ ವರುಷದಿಂದ ವರುಷಕ್ಕೆ ಕಡಿಮೆಯಾಗುತ್ತಿದೆ - ಹಣದುಬ್ಬರದ ಏರಿಕೆಯಿಂದಾಗಿ. ಆದ್ದರಿಂದ, ಹೂಡಿಕೆಗೆ ಜನಸಾಮಾನ್ಯರ ಆಯ್ಕೆ - ಚಿನ್ನ ಖರೀದಿ.

ನಮ್ಮ ದೇಶದ ಆಯಾತ-ನಿರ್ಯಾತದ ಅಂತರ ಕಡಿಮೆಯಾಗ ಬೇಕಾದರೆ, ಹತ್ತಾರು ತಿಂಗಳು ತಗಲೀತು. ಅಷ್ಟರಲ್ಲಿ ಡಾಲರಿನ ನೆಲೆಯಲ್ಲಿ ರೂಪಾಯಿ ಇನ್ನಷ್ಟು ಕುಸಿದೀತು. ಈ ಕುಸಿತ ತಡೆಯಲು ಸುಲಭದ ದಾರಿಗಳಿಲ್ಲ ಎಂಬುದಂತೂ ವಾಸ್ತವ.

ಚಿತ್ರ: ದಿನೇಶ್ ಸಿ

Comments

Submitted by gopinatha Tue, 07/30/2013 - 19:08

ಆಡೂರು ಕೃಷ್ಣರಾಯರ ಲೇಖನ ಸಕಾಲಿಕ. ಮೊನ್ನೆ ಮೊನ್ನೆಯವರೆಗೂ ಆರ್ಥಿಕ ತಜ್ಜ ನಮ್ಮ ದೇಶದ ಆರ್ಥಿಕ ಸಂಕಟವನ್ನು ಸುಧಾರಿಸುತ್ತಾರೆ ಎಂದೇ ಬಿಂಬಿಸಲಾಗಿತ್ತು. ಆದರೆ ಕಳೆದ ೬೫ ವರ್ಷಗಳಿಂದಲೂ ದೇಶ ಆರ್ಥಿಕವಾಗಿ ಸದೃಡಗೊಳ್ಳಲು ಏನು ಮಾಡಿದ್ದೇವೆ. ಆಮದು ಕಡಿಮೆ ಮಾಡಲು ಏನನ್ನು ಯೋಚಿಸಿದ್ದೇವೆ. ಕಳೆದ ಹತ್ತು ವರುಷಗಳಿಂದಲೂ ಸೌರ ವಿಧ್ಯುತ್ ಅಥವಾ ಪರ್ಯಾಯ ವ್ಯವಸ್ಥೆ ಮಾಡಲಾಗಲಿಲ್ಲ. ಬಿಳಿ ಆನೆಯಾದ ಡಿ ಆರ್ ಡಿಓ ಸಹಾ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಅಲ್ಲೊಂದು ಇಲ್ಲೊಂದು ಊರಿನಲ್ಲಿ ಸ್ವಾವಲಂಬನೆಯ ಬೇರಾದ ನೀರಿನಿಂದ ಗಾಳಿಯಿಂದ ವಿಧ್ಯುತ್ ತಯಾರಿಸಿ ತೋರಿಸಿದರೂ, ನಮ್ಮ ದೇಭರು ತಮ್ಮ ಹೊಟ್ಟೆ ತುಂಬಿಸೋದ್ರಲ್ಲೇ ಕಾಲವ್ಯಯಿಸುತ್ತಿದ್ದಾರೆ.ಜನಸಾಮಾನ್ಯರು ಚಿನ್ನದ ನಂತರದ ಹೂಡಿಕೆಗಾಗಿ ನೆಲ/ಜಾಗವನ್ನು ತೆಗೆದುಕೊಳ್ಳೋಣವೆಂದರೆ ಅದೂ ಮಾಫಿಯವಾಗಿ ಬದಲಾಗುತ್ತಿದೆ. ಅದೇ ರೀತಿ ಡಾಲರ್ ರೇಟು ಸಹಾ ಕೆಲವೇ ಮಂದಿ ದೇಭರು ಮತ್ತು ವ್ಯಾಪಾರೀ ಮನೋಭಾವದವರು ನಿರ್ಧರಿಸುವ ಕಾಲವಿದು.
Submitted by makara Fri, 08/02/2013 - 19:46

In reply to by partha1059

ಒಳ್ಳೆಯ ಕೊಂಡಿಗಾಗಿ ಧನ್ಯವಾದಗಳು ಪಾರ್ಥ ಸರ್. ಬ್ರಿಟೀಷರು ನಮ್ಮನ್ನು ಬಿಟ್ಟು ಹೋದಾಗ ಒಂದು ರೂಪಾಯಿಗೆ ಒಂದು ಡಾಲರ್ ಇದ್ದದ್ದು ನಿಜ. ಆದರೆ ನಮ್ಮ ಪಂಡಿತ್ ನೆಹರೂರವರ ಆಲೋಚನೆ ಬ್ಯಾಂಕಿಂಗ್ ಸಿಸ್ಟಂ ಆಫ್ ಕರೆನ್ಸಿ ಅಂದರೆ ಟೋಕನ್ ಕರೆನ್ಸಿ ವಿಧಾನವನ್ನು ಅಳವಡಿಸಿಕೊಂಡರು; ಇದರ ಮೂಲಕ ಅಭಿವೃದ್ದಿಯನ್ನು ಸಾಧಿಸಬಹುದು ಎಂದು. ಏಕೆಂದರೆ, ನಾವು ಮುದ್ರಿಸುವ ರೂಪಾಯಿಗೆ ಸಮಪ್ರಮಾಣದ ಗೋಲ್ಡ್ ರಿಸರ್ವ್ ಅವಶ್ಯಕತೆಯಿಲ್ಲದೇ ಇರುವುದರಿಂದ ಹೆಚ್ಚಿನ ರೂಪಾಯಿ ಚಾಲನೆಯಲ್ಲಿ ಬಂದು ಅಭಿವೃದ್ಧಿ ಕೆಲಸಗಳು ಆಗುತ್ತವೆನ್ನುವುದು ಅದರ ಉದ್ದೇಶವಾಗಿತ್ತು. ಆರಂಭಿಕ ವರ್ಷಗಳಲ್ಲಿ ಅದರ ಉದ್ದೇಶವೇನೋ ಚೆನ್ನಾಗಿಯೇ ಇತ್ತು. ಆದರೆ ಇಂತಹ ವಿಚಾರ ನಮ್ಮ ನೇತಾರರ ಕೈಯ್ಯಲ್ಲಿ ಸಿಕ್ಕರೆ ಮುಗಿಯಿತಲ್ಲವೇ? ಮುಂದಿನ ವರ್ಷಗಳಲ್ಲಿ ಅದೇ ಪರಿಪಾಠವಾಗಿ ಬೆಳೆದು ಮನಮೋಹನ್ ಸಿಂಗರ ಕಾಲದಲ್ಲಿ ನಾವೇ ರೂಪಾಯಿಯನ್ನು ಅಪಮೌಲ್ಯಗೊಳಿಸಿ ಹೆಚ್ಚಿನ ಲಾಭ ಹೊಂದಬಹುದೆಂದು ಆಶೆ ಪಟ್ಟು ಈಗಿರುವ ಹಾದಿಯಲ್ಲಿ ಬಂದು ನಿಂತಿದ್ದೇವೆ :(
Submitted by ಕೀರ್ತಿರಾಜ್ ಮಧ್ವ Wed, 07/31/2013 - 07:00

ಕ್ರಷ್ಣರಾಯರವರೇ ಲೇಖನಕ್ಕಾಗಿ ಧನ್ಯವಾದ.. ಪ್ರಸಕ್ತ ವಿಷಯದ ಬಗ್ಗೆ ಇನ್ನಷ್ಟು ಬರಹಗಳು ಹೊರಹೊಮ್ಮಲಿ..
Submitted by ಕೀರ್ತಿರಾಜ್ ಮಧ್ವ Wed, 07/31/2013 - 07:01

ಕ್ರಷ್ಣರಾಯರವರೇ ಲೇಖನಕ್ಕಾಗಿ ಧನ್ಯವಾದ.. ಪ್ರಸಕ್ತ ವಿಷಯದ ಬಗ್ಗೆ ಇನ್ನಷ್ಟು ಬರಹಗಳು ಹೊರಹೊಮ್ಮಲಿ..
Submitted by nageshamysore Wed, 07/31/2013 - 15:20

ರೂಪಾಯಿಯ ಅಸಹಾಯಕತೆಯನ್ನು ಸೊಗಸಾಗಿ ಮತ್ತು ಸರಳವಾಗಿ ನಿರೂಪಿಸಿದ ಲೇಖನ. ಕೊನೆಯಲ್ಲುಳಿಯುವ ಅದೇ ಯಕ್ಷಪ್ರಶ್ನೆ - ಈ ಕಗ್ಗಂಟಿನಿಂದ ಪಾರಾಗುವ ದಾರಿ ಎಲ್ಲಿದೆ?
Submitted by ಗಣೇಶ Wed, 07/31/2013 - 23:40

ಸೀನಿಯರ್ ಸಿಟಿಜನ್ "ರೂಪಾಯಿ". "May your happiness increase like petrol price May your sorrow fall like the Indian Rupee" e-mail ನಲ್ಲಿ ಬಂದ ಗ್ರೀಟಿಂಗ್ಸ್ :( ಮಹಾನ್ ಆರ್ಥಿಕ ತಜ್ಞ ಪ್ರಧಾನಿಯಾಗಿರುವುದರಿಂದ ಏನಾದರೂ ದಾರಿ ಹುಡುಕಿಯಾರು ಎಂಬ ಆಶಾಭಾವನೆ. ಉತ್ತಮ ಲೇಖನಕ್ಕಾಗಿ ಅಡ್ಡೂರರಿಗೆ ಧನ್ಯವಾದಗಳು.
Submitted by makara Fri, 08/02/2013 - 19:37

In reply to by ಗಣೇಶ

ರೂಪಾಯಿಯನ್ನು ಮೊದಲು ಅಪಮೌಲ್ಯಗೊಳಿಸುವ ಚಾಳಿ ಪ್ರಾರಂಭವಾದದ್ದೇ ಈ ಮನಮೋಹನ ಸಿಂಗ್ ವಿತ್ತ ಮಂತ್ರಿಯಾಗಿದ್ದಾಗ. ಅದು ಮುದಿ ಹೀರೋಯಿನ್ನುಗಳು ತುಂಡು ಲಂಗವನ್ನು ತೊಟ್ಟು ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುವಂತಹ ಪ್ರಕ್ರಿಯೆಯಾಗಿದೆ ಎನ್ನದೇ ವಿಧಿಯಿಲ್ಲ :( ನಾವು ಸ್ವಾವಲಂಬನೆ ಮತ್ತು ಸ್ವದೇಶಿ ವಸ್ತುಗಳನ್ನು ಬಳಸುವುದರಿಂದ ಆಮದು ಮಾಡಿಕೊಳ್ಳುವ ವಸ್ತುಗಳು ಕಡಿಮೆಯಾದಾಗ ಸಹಜವಾಗಿಯೇ ವಿತ್ತೀಯ ಕೊರತೆ ಕಡಿಮೆಯಾಗುತ್ತದೆ. ಇದೊಂದೇ ನಮಗೆ ಉಳಿದಿರುವ ಮಾರ್ಗ. ಉತ್ತಮ ಮತ್ತು ಸಕಾಲಿಕ ಲೇಖನಕ್ಕಾಗಿ ಅಡ್ಡೂರು ಕೃಷ್ಣರಾಯರಿಗೆ ಮತ್ತು ಚಿಂತನಾರ್ಹ ಜೋಕು ಹಂಚಿಕೊಂಡ ಗಣೇಶರಿಗೆ ಧನ್ಯವಾದಗಳು.
Submitted by Shreekar Sat, 08/03/2013 - 21:33

In reply to by ಗಣೇಶ

(ಮಹಾನ್ ಆರ್ಥಿಕ ತಜ್ಞ ಪ್ರಧಾನಿಯಾಗಿರುವುದರಿಂದ ಏನಾದರೂ ದಾರಿ ಹುಡುಕಿಯಾರು ಎಂಬ ಆಶಾಭಾವನೆ).... ಮಹಾನ್ ಆರ್ಥಿಕ ತಜ್ಞರ ಇಡೀ ರಾಜಕೀಯ ಜೀವನವೇ ಸುಳ್ಳಿನ ಬುನಾದಿಯ ಮೇಲೆ ನಿಂತಿರುವಾಗ ಯಾವ ದಾರಿ ಹುಡುಕಿಯಾರು, ಪಾಪ ! 1991ರಲ್ಲಿ ರಾಜಕೀಯ ಪ್ರವೇಶಿಸಿದ ಮನಮೋಹನ್ ಸಿಂಘರು ತಾನು ಅಸ್ಸಾಂ ವಾಸಿಯೆಂದು ಸುಳ್ಳು affidavit ಕೊಟ್ಟು ರಾಜ್ಯಸಭೆ ಪ್ರವೇಶಿಸಿದವರು. 1991ರಲ್ಲಿ ತಂದ ಆರ್ಥಿಕ ಸುಧಾರಣೆಗಳು IMF ನವರು ಹಾಕಿದ ಶರತ್ತುಗಳಿಂದಾಗಿಯೇ ಹೊರತು ಸಿಂಗರ ಬುದ್ಧಿವಂತಿಕೆಯಿಂದಲ್ಲ ಅನ್ನುತ್ತಾರೆ.
Submitted by RAMAMOHANA Sat, 08/31/2013 - 10:31

In reply to by ಗಣೇಶ

ಗಣೇಶ್ ಜಿ ಇದಕ್ಕೆ ನನ್ನ ಬಳಿ ರಾಮಬಾಣವೇ ಇದೆ. ಅತ್ಯಂತ‌ ಸುಲುಭೋಪಾಯ‌ 1) ನಮ್ಮ 1 ರೂಪಾಯಿ ಬೆಲೆ 1ಡಾಲರಿಗೆ ಸಮ‌ ಎಂದು ದಿನಪತ್ರಿಕೆಗಳಲ್ಲಿ ಪ್ರಧಾನ‌ ಮಂತ್ರಿಗಳು ಘೋಷಿಸಿಬಿಡುವುದು. ಅಥವಾ 2) ಇನ್ನು ಮುಂದೆ ರೂಪಾಯಿ ಮುದ್ರಣವನ್ನು ನಿಲ್ಲಿಸಿ ಡಾಲರನ್ನೆ ಮುದ್ರಿಸಿದರಾಯ್ತು. ಈ ಐಡಿಯ‌ ನಾನು ಯಾರಿಗೂ ಕೊಟ್ಟಿಲ್ಲ ನೀವೂ ಗುಟ್ಟಾಗೇ ಇಟ್ಟಿರಿ ಸರಿಯದ‌ ಸಮಯ‌ ನೋಡಿ ಆಚೆಗೆ ಬಿಡೋಣ‌. ‍ರಾಮೋ.
Submitted by Dr Pannag kamat Sun, 08/18/2013 - 09:11

ನನ್ನ ಅನಿಸಿಕಯಂತೆ ನಾವು ಕಚ್ಚಾತೈಲದ‌ ಆಮದು ಕಡಿಮೆ ಮಾಡಲು ಸುಲಭ‌ ಉಪಾಯಗಳಿವೆ. ಭಾರತದ‌ "ಇಂಡಿಯನ್ ಒಯಿಲ್ ಕೋರ್ಪೋರೇಶನ್" ವಿದೇಶಗಳಲ್ಲಿ ತೈಲ‌ ಬಾವಿಗಳನ್ನು ಹೊಂದಿದ್ದು ಅವುಗಳ‌ ಸಂಪೂರ್ಣ‌ ಹಕ್ಕುಗಳನ್ನು ಹೊಂದಿದೆ. ಆದರೆ "IOC" ಅಲ್ಲಿ ಸಂಗ್ರಹಿಸಿದ‌ ತೈಲವನ್ನು ಭಾರತಕ್ಕೆ ತರುವ‌ ಬದಲಾಗಿ ಅದನ್ನು ಅದೇ ದೇಶದಲ್ಲಿ ಮಾರಾಟಮಾಡಿ ಅಥವಾ ಬೇರೆ ಹತ್ತಿರದ‌ ದೇಶಗಳಲ್ಲಿ ಮಾರಾಟಮಾಡುವುದರ‌ ಮೂಲಕ‌ ಲಾಭಗಳಿಸುತ್ತಿದೆ. ಆ ತೈಲವು ಭಾರತಕ್ಕೆ ಆಮುದಾದರೆ 25% ತೈಲ‌ ಆಮದಿನ‌ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಭಾರತ‌ ಸರ್ಕಾರ‌ ಈ ನಿಟ್ಟಿನಲ್ಲಿ ಗಮನಕೊಡುವುದು ಅವಶ್ಯಕ‌.
Submitted by Shreekar Fri, 08/30/2013 - 19:47

ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಖರ್ಚಿಗೆ ಕೋಟ್ಯಾಂತರ ರೂಪಾಯಿಗಳನ್ನು ಸುಲಭವಾಗಿ ಹೊಂದಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಹೂಡಿದ ಪಿತೂರಿಯೇ ರೂಪಾಯಿ ಬೆಲೆ ಕುಸಿತದ ಹಿಂದಿರುವ ನಿಜವಾದ ಕಾರಣವಿರಬಹುದೇ? ಈ ವಾದದ ಹಿಂದಿರುವ ತರ್ಕ ಹೀಗಿದೆ:-. ಆಳುವ ಪಕ್ಷದ ದೊಡ್ಡ ಪುಢಾರಿಗಳು ಸ್ವಿಸ್ ಬ್ಯಾಂಕುಗಳಲ್ಲಿ ಕೋಟ್ಯಾಂತರ ಡಾಲರ್ ಗಳನ್ನು ಅಡಗಿಸಿ ಇಟ್ಟಿರುವುದು ನಾವು ಕೇಳಿದ್ದೇವೆ. ಡಾಲರಿಗೆ ಮೂವತ್ತು ನಾಲುವತ್ತು ರೂಪಾಯಿ ಇರುವಾಗ (ಅಂದರೆ ರೂಪಾಯಿ ಬೆಲೆ ಹೆಚ್ಚಿರುವಾಗ ) ಈ ಹಣ ಹೂಡಿಕೆಯಾಗಿದ್ದು, ಕಡಿಮೆ ರೂಪಾಯಿಗಳಲ್ಲಿ ಹೆಚ್ಚಿನ ಡಾಲರ್ ಠೇವಣಿ ಇಡಲಾಗುತ್ತದೆ. ಚುನಾವಣೆ ಹತ್ತಿರ ಬಂದಾಗ ಕೃತಕವಾಗಿ ರೂಪಾಯಿಬೆಲೆಯನ್ನು ಕುಸಿತವಾಗುವಂತೆ ಮಾಡಿದರೆ ಮೂವತ್ತು ನಾಲುವತ್ತು ರೂಪಾಯಿಗೆ ಇಟ್ಟ ಅದೇ ಡಾಲರ್ 66 ರಿಂದ 80 ರೂಪಾಯಿಗಳನ್ನು ವಾಪಸ್ ಕೊಡುತ್ತದೆ. :-))) ( ಅಂತರ್ಜಾಲದಲ್ಲಿ ಓದಿದ್ದು. )
Submitted by Shreekar Fri, 09/06/2013 - 22:43

In reply to by Shreekar

ರೂಪಾಯಿ ಬೆಲೆ ಕುಸಿತದ ಮೇಲೆ ಆಸಕ್ತಿ ಮೂಡಿಸುವಂಥ ಬರಹಕ್ಕಾಗಿ ಅಡ್ಡೂರು ಕ್ರಷ್ಣರಾಯರಿಗೆ ಧನ್ಯವಾದಗಳು. ಲೇಖನ ಓದಿ ನಾನು ಕೂಡಾ ಗಾಬರಿಗೊಂಡಿದ್ದೆ, ಭಾರತದ ಆರ್ಠಿಕ ಸ್ಥಿತಿಗೆ ಮದ್ದೇ ಇಲ್ಲವೇನೋ ಎಂದು ಚಿಂತಿತನಾಗಿದ್ದೆ; ಮನಮೋಹನ ಸಿಂಘರನ್ನು ತೆಗಳಿದ್ದೆ. ಆದರೆ ರಿಸರ್ವ್ ಬ್ಯಾಂಕಿನ ಹೊಸ ಗವರ್ನರ್ ರಘುರಾಮ ರಾಜನ್ ರ ಬಗ್ಗೆ ಸುದ್ದಿ ಓದಿದ ಮೇಲೆ ಖುಷಿಯಾಗಿದೆ. http://www.moneycont... ರಾಜನ್ ರನ್ನು ನೇಮಕಮಾಡಿದ ಮನಮೋಹನ್ ಸಿಂಘರ ಆಯ್ಕೆ ಅತ್ಯುತ್ತಮವಾಗಿದೆ.
Submitted by ಗಣೇಶ Fri, 09/06/2013 - 23:40

In reply to by Shreekar

ಶ್ರೀಕರ್‌ಜಿ, ರಾಜನ್ ರನ್ನು ನೇಮಕಮಾಡಿದ ಮನಮೋಹನ್ ಸಿಂಘರ ಆಯ್ಕೆ ಅತ್ಯುತ್ತಮವಾಗಿದೆ. :) ರುಪಾಯಿ ಬೆಲೆ ಏರಲಿ ಆಗ ಹೇಳಿ, ಇಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಡಿ. ರಾಜನ್ ಬದಲು "RAMMOHAN" ರನ್ನು ರಿಸರ್ವ್ ಬ್ಯಾಂಕಿನ ಗವರ್ನರ್ ಮಾಡಿರುತ್ತಿದ್ದರೆ ತಿಂಗಳೊಳಗೆ ರುಪೀ ವ್ಯಾಲ್ಯು ರಿವರ್ಸ್ ಆಗಿರುತ್ತಿತ್ತು. :)