ಮಂಗಳ ಗ್ರಹಕ್ಕೊಂದು ಕಲ್ಲು
ಇಸ್ರೋ ಈ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದೆ. ಪಟಾಕಿಯ ರಾಕೆಟ್ಟು ಬಿಟ್ಟು ಭೂಮಿಯ ಹದಗೆಟ್ಟ ವಾತಾವರಣವನ್ನು ಮತ್ತಷ್ಟು ಹದಗೆಡಿಸುವ ಬದಲು ನಿಜವಾದ ರಾಕೆಟ್ಟೊಂದನ್ನು ನೆರೆಮನೆಯ ಮಂಗಳನತ್ತ ಹಾರಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿಬಿಟ್ಟಿದೆ. ಜತೆಗೆ ಎಲ್ಲೆಡೆ ವಾದ, ಸಂವಾದ, ವಿವಾದಗಳನ್ನು ಹುಟ್ಟುಹಾಕಿದೆ - ನಮ್ಮ ದೇಶದ ಈಗಿನ ಸ್ಥಿತಿಯಲ್ಲಿ ಇದು ಸಂಗತವೆ, ಅಸಂಗತವೆ, ಸಾಧುವೆ - ಇತ್ಯಾದಿ. ಇದರ ನಡುವೆ ವಿದೇಶಿ ಮಾಧ್ಯಮಗಳೂ ಸಹ ಎಚ್ಚರಿಕೆಯಿಂದ ಪ್ರತಿಕ್ರಿಯಿಸುತ್ತ ಈ 'ಅಲ್ಪ ವೆಚ್ಚದ' ಮಂಗಳಯಾನದ ಕುರಿತು ಶಭಾಶಗಿರಿ, ಅಚ್ಚರಿ ವ್ಯಕ್ತಪಡಿಸಿವೆ. ನಡುವೆ ವಿಜ್ಞಾನಿ ಸಮೂಹಗಳು ಇದರ ತಾಂತ್ರಿಕತೆಯ ನಾವೀನ್ಯತೆಯ ಕುರಿತು ಮೂಗು ಮುರಿಯುತ್ತ, ನೇರ ಉಡಾವಣೆಯಲ್ಲದ ಪರೋಕ್ಷ ವಿಧಾನಕ್ಕೆ ಆಕ್ಷೇಪಣೆಯೆತ್ತಿವೆ (ಉಡವಾಣೆಯಾದ ಮೊದಲ ತಿಂಗಳಷ್ಟು ಕಾಲ ಭೂಮಿಯ ಪರಿಧಿಯಲ್ಲೆ ಸುತ್ತುತ್ತ, ನಂತರ ಸರಿದು ಮಂಗಳನ ಕಕ್ಷೆಯತ್ತ ಸಾಗುವ ವಿಧಾನದಿಂದಾಗಿ ಸಮಯವೂ ಹೆಚ್ಚು ಹಿಡಿಯುತ್ತದೆಂಬ ವಾದ).
.
ಆದರೆ ಇದೆಲ್ಲವನ್ನು ಮೀರಿ ನಾವು ನೋಡಬೇಕಾದ ಮಹತ್ತರ ಅಂಶವೆಂದರೆ - ಅಂತಿಮ ಫಲಿತ. ಇದು ಸಂಪೂರ್ಣ ಯಶಸ್ವಿಯಾಗುವುದೊ ಇಲ್ಲವೊ ತಿಳಿಯಲು ಇನ್ನು ಒಂಭತ್ತು ತಿಂಗಳು ಕಾಯಬೇಕು. ಆ ಲೆಕ್ಕದಲ್ಲಿ ಹೇಳಬೇಕಾದರೆ ಈಗ ಸಿಕ್ಕಿರುವ ಯಶಸ್ಸು, ಅಭಿನಂದನೆಯೆಲ್ಲವು ಕೇವಲ ಬಸಿರಾದ ಸುದ್ದಿಗೆ ಮಾತ್ರ. ಗರ್ಭಪಾತವಾಗದೆ, ಯಾವುದೆ ಅವಘಡಕ್ಕೆ ಒಳಗಾಗದೆ ಮಂಗಳನ ಕಕ್ಷೆ ದಾಟಿ ಅವನಂಗಳಕ್ಕೆ ಇಳಿದ ಪ್ರಸವದ ಸುದ್ದಿ ಬರುವತನಕ ಇದು ಅರೆಬರೆ ಜಯ ಮಾತ್ರ. ಇಳಿದ ಮೇಲೂ ಶೈಶವಾವಸ್ಥೆಯಿಂದ ಬಾಲಾವಸ್ಥೆ ದಾಟಿ ನಡೆದು ನಿಂತಾಡುವ ಕೆಲಸವೂ ಬಾಕಿಯುಂಟು. ಅಂದರೆ ಇದನ್ನೆಲ್ಲವನ್ನು ಮುಂದಿನ ದಿನಗಳಲ್ಲಿ ನಮ್ಮ ವಿಜ್ಞಾನಿಗಳ ತಂಡ ದಕ್ಷತೆ, ಕಾರ್ಯಕ್ಷಮತೆ, ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಈ ಹಂತದಲ್ಲಿ ಅವರಿಗೆ ನೀಡಬೇಕಾದ್ದು ಬೆನ್ನು ತಟ್ಟಿ ಪ್ರೋತ್ಸಾಹಿಸುವ ದನಿ; ಆತ್ಮವಿಶ್ವಾಸ ಕುಗ್ಗಿಸಿ, ಸ್ಥೆರ್ಯಗೆಡಿಸುವ ಅವಹೇಳನವಾಗಲಿ, ಕಾಲೆಳೆಯುವಿಕೆಯಾಗಲಿ ಅಲ್ಲ. ಈ ಮಾತುಗಳಿಂದ ಅವರಲ್ಲಿ ಸೋಲಬಾರದೆಂಬ ಛಲವೂ ಹುಟ್ಟುವುದಾದರೂ ತೀರಾ ಅತಿಯಾದ ತೆಗಳಿಕೆ, ಕೀಳು ನುಡಿಗಳು ಗಮ್ಯದಿಂದ ವಿಚಲಿತರಾಗುವಂತೆ ಗಲಿಬಿಲಿಗೊಳಿಸುವ ಸಾಧ್ಯತೆಯೂ ಇಲ್ಲದಿಲ್ಲ.
.
ಇದೆಲ್ಲಾ ಹಿನ್ನಲೆಯಲ್ಲಿ ಈ ಉಡ್ಡಯನ ಯಾನವನ್ನು ನೋಡಬೇಕಿದೆ. ಇದರಿಂದೇನು ಪ್ರಯೋಜನವೆನ್ನುವ ಮಾತು ಸಾಕಷ್ಟು ಕೇಳಿಬಂದಿದೆ. ಆದರೆ ನೆನಪಿರಲಿ - ಇಂದು ಎಲ್ಲರು ಚೀನಿ ಪದಾರ್ಥಕ್ಕೆ ಮುಗಿಬಿಳಲೊಂದು ಮುಖ್ಯ ಕಾರಣ ಅಗ್ಗದ ಸರಕು ಎಂದು. ಈ ತಾಂತ್ರಿಕತೆಯು ಹೋಲಿಕೆಯಲ್ಲಿ ಬಲು ಅಗ್ಗದ ಯಾನ. ಇದನ್ನೆ ಸಮರ್ಥವಾಗಿ ಸೂಕ್ತ ಮಾರುಕಟ್ಟೆಯಲ್ಲಿ ಮಾರುವ ಸಾಧ್ಯತೆಗಳೂ ಇದ್ದೆ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾದದ್ದು - ಈಗಿನ ಜಾಗತಿಕ ಗೋಮಾಳದಲ್ಲಿ ಈ ಯಾನದ ದೆಸೆಯಿಂದ ಎದೆಯೆತ್ತಿ, ತಲೆಯೆತ್ತಿ ನಿಲ್ಲುವಂತೆ ಮಾಡಿದೆ, ಹತ್ತಲವಾರು ಸಂಕಟಗಳ ನಡುವೆಯೆ. ಅದಕ್ಕೆಂದೆ ಸದ್ಯಕ್ಕೊಂದು ಎಚ್ಚರಿಕೆಯ ಅಭಿನಂದನೆ ಹೇಳುವ ಪುಟ್ಟ ಯತ್ನ ಈ ಕವನದ್ದು.
.
.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
.
.
ಮಂಗಳ ಯಾನ, ಅಗ್ಗದ ಜಾಣ !
_____________________
.
ಮಂಗಳನ ಅಂಗಳಕೆ ಕಳಿಸಿದ್ದು ಪಾತ್ರೆ
ಜೋಮು ಹಿಡಿದ ಮನಗಳಿಗಿತ್ತ ಮಾತ್ರೆ
ಹತಾಶೆ ನಿರಾಶೆ ನಿರಭಿಮಾನದ ಮಧ್ಯೆ
ಚಿಮ್ಮಿತಾಕಾಶಕೆ ಅಂಗಾರಕನರಸಿ ವಿದ್ಯೆ ||
.
ಕುಜದೋಷವೆಂದರು ಮಂಗಳ ಕೆಂಪಣ್ಣ
ಕೆಂಪಿನೊಳಗೇನಿದೆ ಅರಿಯಲೀ ಪಯಣ
ಕೆಂಪು ಗ್ರಹ ಕೋಪದಲಿ ಬೀರಿ ಕೆಂಗಣ್ಣು
ವಿಫಲವಾಗಿಸದಿರಲಿ ಕುಜಯಾನವನ್ನು ||
.
ತಿರುಪತಿಯಲಿ ಪ್ರತಿಕೃತಿ ಇಟ್ಟೆ ಪೂಜೆ
ವಿಜ್ಞಾನದಾ ಪ್ರಗತಿ ಯಾಕದರ ಗೋಜೆ
ಎಂದವರ ಭಾವ ಅನ್ನದವರ ಅನುಭವ
ಕೈಲ್ಲಾದು ಮಾಡಿ ಕೈಚೆಲ್ಲೊ ವೈದ್ಯ ಶಿವ ||
.
ತಡಕಾಡಿದೆ ಹೊಟ್ಟೆ, ನೂರೆಂಟು ತಪನೆ
ಬೇಕಿತ್ತೆ ಜುಟ್ಟಿಗೆ ಮಲ್ಲಿಗೆ ಹೂ ಯಾತನೆ
ಎಂದವರದು ಸತ್ಯ, ಅನದವರದೆ ನಿತ್ಯ
ತಪನೆಗಳ ನಡುವೆ ಹುಡುಕುವ ವೈಚಿತ್ರ್ಯ ||
.
ಪಾತಾಳಕಿಳಿದಾ ಪ್ರತಿಷ್ಟೆ ನಮ್ಮ ಮಾತೆ
ಅತ್ಯಾಚಾರ ಅಪಮೌಲ್ಯ ಭ್ರಷ್ಟ ಸಂಹಿತೆ
ನೋಡುಗ ಜಗದಾ ಕಣ್ಣಲ್ಲಿ ನಗೆ ಪಾಟಲು
ಆಗುವ ನಡುವೆ ಇದಲ್ಲವೆ ಬೆನ್ನು ತಟ್ಟಲು ||
.
ಸಿಕ್ಕಲಿ ಬಿಡಲಿ ಕಲ್ಲುಮಣ್ಣಿನ ಚೂರುಗಳು
ಜ್ಞಾನಹಾದಿಯಲೇನಿದೆಯೊ ಅಳತೆಗಳು
ಸಿಕ್ಕರೂ ಸಿಗಬಹುದು ಹಿರಣ್ಯಗರ್ಭ ನಿಧಿ
ಏನಿಲ್ಲದಿದ್ದರೂ ನೆರೆಹೊರೆ ಗ್ರಹದ ಸನ್ನಿಧಿ ||
ತಾಂತ್ರಿಕತೆ ಹಳತೊ ಹೊಸತೊ ಅಮುಖ್ಯ
ಗುರಿ ಮುಟ್ಟಿದರೆ ಯಶಸ್ಸೆ ಜೀವನದ ಸತ್ಯ
ಕನಿಷ್ಠ ವೆಚ್ಚದಲಿ ಹಾರಲಿಲ್ಲವೆ ಉಡ್ಡಯನ
ಏನಿಲ್ಲವೆನ್ನಿ ತಾಂತ್ರಿಕತೆಯನೆ ಮಾರೋಣ ||
.
ಜಡ್ಡುಹಿಡಿದ ಮನಸುಗಳಿಗೊಂದು ಊಸಿ
ಕೊಟ್ಟಿದ್ದಂತು ನಿಜ ಇಸ್ರೋದ ಈ ಪ್ರವಾಸಿ
ಸುಖಪ್ರದವಾಗಿರಲಯ್ಯ ನಿನ್ನೀ ಪ್ರಯಾಣ
ಮರೆಯದಿರು ಬರೆಯಲು ಇತಿಹಾಸವನ್ನ ||
.
ಇನ್ನು ತಿಂಗಳುಗಳಿವೇ ಬಾಕಿ ನವ ಮಾಸ
ಈಗ ಗರ್ಭಿಣಿಯಾದ ಸುದ್ದಿ ತಿಳಿದ ಹರ್ಷ
ಬಾಣಂತಿಯಾಗುವತನಕ ಬಸಿರ ಆತಂಕ
ಜತನದಲಿ ಸಾಗಲಿ ಮೇರೆ ಮೀರದೆ ಲೆಕ್ಕ ||
.
ಸಹನೆಯಿಂದ ಕಾದು ನೋಡಲೆ ಸುದಿನ
ಟೀಕೆ ಟಿಪ್ಪಣಿ ಸದ್ಯಕೆ, ಪಕ್ಕಕೆ ಸರಿಸೋಣ
ಪೂರ್ಣವಾಗಲಿ ಯಾನ ಯಶಸಿನ ಧ್ಯಾನ
ಸ್ತಿಮಿತದೆ ಸೋಲುಗೆಲುವ ಸ್ವೀಕರಿಸೋಣ ||
.
.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
.
Comments
ಉ: ಮಂಗಳ ಗ್ರಹಕ್ಕೊಂದು ಕಲ್ಲು
ನಾಗೇಶರೆ,
ಮಂಗಳಯಾನದ ಕುರಿತು ಸುಂದರ ವಿವರಣೆ ಮತ್ತು ಅದಕ್ಕಿಂತಲೂ ಸುಂದರ ಕವನ. ಈಗ ಮದುವೆಯಾಗಿದೆಯಷ್ಟೆ; ಶೋಭನವಾಗಲು ಇನ್ನೂ ಒಂದು ತಿಂಗಳು ಅದಕ್ಕೇ ಭೂಮಿಯ ಸುತ್ತು ಗಿರಿಕಿ ಹೊಡೆಯುತ್ತಿರುವುದು :) ಆಮೇಲೆ ಶೋಭನವಾದ ಮೇಲೆ ಬಸಿರು, ಬಯಕೆ, ಬಾಣಂತನ, ಎಲ್ಲಾ. ಎಲ್ಲವೂ ಶುಭವಾಗುತ್ತದೆ; ಅದಕ್ಕೇ ಏನೋ ಉಡ್ಡಾಯನವೂ ಮಂಗಳವಾರದಂದೇ ಪ್ರಾರಂಭಮಾಡಿದ್ದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by makara
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಶ್ರೀಧರರೆ ಸುತ್ತಾಟದಲ್ಲೆ ಹನಿಮೂನ್ ಮುಗಿಸಿ, ಸುಖಪ್ರಸವ ಅಂಗಾರಕನ ನೆಲದ ಮೇಲೆ ಮಂಗಳವಾರವೆ ಆದರೆ ಎಲ್ಲವೂ ಮಂಗಳಕರವಾಗಿ ಮುಕ್ತಾಯವಾದಂತೆ ಲೆಕ್ಕ. ಸದ್ಯಕ್ಕೆ ಅಲ್ಲಿಗೆ ತೊಟ್ಟಿಲು ಕಳಿಸುವುದು ಹೇಗೆ ಎಂಬ ಆಲೋಚನೆ ಹಚ್ಚಿಕೊಳ್ಳೋಣ :-)
ಉ: ಮಂಗಳ ಗ್ರಹಕ್ಕೊಂದು ಕಲ್ಲು
ನಾಗೇಶ ಮೈಸೂರು ರವರಿಗೆ ವಂದನೆಗಳು
ಮಂಗಳ ಗ್ರಹಕ್ಕೊಂದು ಕಲ್ಲು, ಅಂತರೀಕ್ಷಯಾನದ ಕುರಿತು ಅದರಲ್ಲಿಯೂ ಭಾರತದ ಸಾಧನೆಯ ಎಲ್ಲ ಮಗ್ಗಲುಗಳನ್ನು ಸಂಕ್ಷೀಪ್ತವಾಗಿ ಆದರೆ ಕೂಲಂಕುಷವಾಗಿ ಚರ್ಚಿಸಿದ್ದೀರಿ. ಅದರಲ್ಲಿಯೂ ಈ ಕುರಿತು ಚತುಷ್ಪದಿಯಲ್ಲಿ ಕವನ ಬಹಳ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಧನ್ಯವಾದಗಳು.
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by H A Patil
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಪಾಟೀಲರಿಗೆ ನಮಸ್ಕಾರಗಳು. ನಿಮ್ಮ ಅನುಭವಪೂರ್ಣ ಮೆಚ್ಚುಗೆಗೆ ಧನ್ಯವಾದಗಳು. ಮಂಗಳನ ಅಂಗಳದಲಿಳಿಯುವ ಸಾಹಾಸವೆ ಅಭೂತಪೂರ್ವಕವಾದದ್ದು. ಪೂರ್ಣ ಯಶಸ್ವಿಯಾದಲ್ಲಿ ಇದೊಂದು ಹೊಸ ಇತಿಹಾಸವನ್ನೆ ಬರೆಯಲಿದೆ ಬಾಹ್ಯಾಕಾಶಯಾನ ನಿರತ ವಲಯಗಳಲ್ಲಿ. ಆ ದಿನಕ್ಕಾಗಿ ಎದುರು ನೋಡುವ :-)
ಉ: ಮಂಗಳ ಗ್ರಹಕ್ಕೊಂದು ಕಲ್ಲು
"ಸಹನೆಯಿಂದ ಕಾದು ನೋಡಲೆ ಸುದಿನ
ಟೀಕೆ ಟಿಪ್ಪಣಿ ಸದ್ಯಕೆ, ಪಕ್ಕಕೆ ಸರಿಸೋಣ
ಪೂರ್ಣವಾಗಲಿ ಯಾನ ಯಶಸಿನ ಧ್ಯಾನ
ಸ್ತಿಮಿತದೆ ಸೋಲುಗೆಲುವ ಸ್ವೀಕರಿಸೋಣ ||"
ಅನ್ಯ ದೇಶಗಳು (ಅದರಲ್ಲೂ ಪಾಕ್ ಮತ್ತು ಚೀನಾ )ಕುತೂಹಲಿಗಳಾಗಿ -ನಮಗಿಂತ ಹೆಚ್ಚೇ .. ಆ ನವ ಮಾಸದ ನಂತರದ ಫಲಿತಾಂಶಕ್ಕಾಗಿ ಕಾಯ್ತಿರುವರು ..
ಹಿಂದಿನ ಅದ್ಯಕ್ಷ ಮಾಧವನ್ ನಾಯರ್ ಅವರು ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದು ಖೇದಕರ ..
ಇದಕ್ಕಾಗಿ ಖರ್ಚು ಮಾಡಿದ ೪೫೦ +ಕೋಟಿ .........
ಹಣವನ್ನ ,ಬೇರೆಯದೇ ಕೆಲಸಗಳಿಗಾಗಿ - ಯೋಜನೆಗಳಿಗೆ -ಉಪಯೋಗಿಸಿದ್ದಾರೆ ಚೆನ್ನಿತ್ತು ಹೀಗೆ ಹೀಗೆ ಏನೇನೋ ಹೇಳುತ್ತಿರುವ ಜನರೂ ಇರುವರು .. ಅದರಲ್ಲಿ ಸತ್ಯ ಇದೆ , ಆದ್ರೆ ಭೂಮಿ ,ಆಕಾಶ ,ನೀರು ಸಹಾ ಬಿಡದೆ ಅಲ್ಲಿ ನಾವ್ ಕಾಲೂರಬೇಕು -ನಮ್ ನೆಲೆ ಇರ್ಬೇಕು ಎಂದು ಭವಿಷ್ಯ್ಯತ್ತಿನ ಭಯದಿಂದ ಸ್ಪರ್ಧೆಗೆ ಬಿದ್ದು ಸಾವಿರಾರು ಕೋಟಿ ಸುರಿಯುತ್ತಿರುವ ಅನ್ಯ ದೇಶಗಳಿಗೆ ಹೋಲಿಸಿದರೆ ನಮ್ದು ಮಾತು ಕಡಿಮೆ -ಸಾಧನೆ ಜಾಸ್ತಿ ..
ಈ ಬಗ್ಗೆ ಒಳ್ಳೆ ಬರಹ ..
ಶುಭವಾಗಲಿ
\।/
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by venkatb83
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಹಿಂದಿನ ಅದ್ಯಕ್ಷ ಮಾಧವನ್ ನಾಯರ್ ಅವರು ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದು ಖೇದಕರ .. ...
ಹೌದು ವೆಂಕಟೇಶ್ ಇದೇ ಮಾಧವನ್ ನಾಯರ್ ರವರು ಅಧ್ಯಕ್ಶ್ಹರಾಗಿದ್ದಾಗ ಚಂದ್ರಯಾನ_1 ಕಾರ್ಯಕ್ರಮ ನಡೆದಿತ್ತು ಆವ ಅವರಿಗೆ ಅದು ವ್ಯರ್ಥ ಖರ್ಚು ಅನ್ನಿಸಲಿಲ್ಲ ಈಗ ವ್ಯರ್ಥ ಅನ್ನುತ್ತಿರುವುದು ಏಕೆ ? ಕಡೆಗೆ ಅವರು ಯಾವುದೋ ವಿವಾದದಲ್ಲಿಯೆ ಕೆಳಗೆ ಇಳಿದರು ತಮ್ಮ ಸ್ಥಾನದಿಂದ ಅನ್ನಿಸುತ್ತೆ.
ನಾಗೇಶ್ ಎಂದಿನಂತೆ ನಿಮ್ಮ ಕವನ ಚೆನ್ನಾಗಿದೆ :)
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by partha1059
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಪಾರ್ಥ ಸಾರ್, ಚಂದ್ರಯಾನಕ್ಕಿಂತ ಮಂಗಳಯಾನ ದೊಡ್ಡದಾದ ಕಾರಣ ಹೆಚ್ಚಿನ ಕ್ರೆಡಿಟ್ ಅದಕ್ಕೆ ದೊರಕಿಬಿಡುತ್ತಿದೆಯೆಂಬ ಆತಂಕವಿರಬಹುದೊ ಏನೊ. ಮಸಲಾ ಚಂದ್ರಯಾನದಿಂದಾದ ಪ್ರಯೋಜನಕ್ಕೂ, ಮಂಗಳನಿಂದಾಗಬಹುದಾದ ಪ್ರಯೋಜನಕ್ಕೂ ತೀರಾ ಅಗಾಧ ವ್ಯತ್ಯಾಸವೇನೂ ಇರಲಾರದು. ಹೀಗಾಗಿ ಆಲಾಪವೆಲ್ಲ 'ಗಾಜಿನ ಮನೆಯಲ್ಲಿ ಕೂತು ಕಲ್ಲೆಸೆಯುವ ವ್ಯಾಪಾರದಂತೆ ಕಾಣುತ್ತದೆ'. ತಮ್ಮ ಎಂದಿನ ಮೆಚ್ಚುಗೆಗೂ ಧನ್ಯವಾದಗಳು :-)
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by venkatb83
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಸಪ್ತಗಿರಿಗಳೆ ನಿಮ್ಮ ಮಾತು ನಿಜ. ವೆಚ್ಚವಾಗಿರುವ ಖರ್ಚು ನಿಜವೆ ಆದರೂ ದೇಶದ ಬಡತನ ಅಳಿಸುವತನಕ ಆಕಾಶಯಾನ ಬೇಡವೆಂದು ಕುಳಿತುಬಿಟ್ಟರೆ, ಆ ದಿನ ಪ್ರಾಯಶಃ ಎಂದೂ ಬರುವುದಿಲ್ಲ. ಇದೊಂದು ರೀತಿಯಲ್ಲಿ ಸಮಾನಾಂತರ ಸರಣಿಯಲ್ಲಿ ಓಡಬೇಕಾದ ಪಂಥ. ಇದರಿಂದ ಉದ್ಭವಿಸುವ ಪ್ರಗತಿಯ ಪ್ರಜ್ಞೆಯೆ, ಎಷ್ಟೊ ಜನರ ಜೀವನದಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿ ಅವರನ್ನು ಈ ತರಹದ ಧ್ಯೇಯೊದ್ದೇಶಗಳತ್ತ ಹುರಿದುಂಬಿಸಿದರೆ ಅದಕ್ಕಿಂತ ಬೇರೆ ಆದಾಯ ಬೇಕಿಲ್ಲವೆನಿಸುತ್ತದೆ. ಅದನ್ನು ಅಳತೆಯಲ್ಹಿಡಿಯಲಾಗದಿದ್ದರೂ, ಆ ಪ್ರಜ್ಞೆಯ ಹಿನ್ನಲೆಯಾಗಿರುವ ದೇಶಪ್ರೇಮ, ಭಾವೋದ್ವೇಗದ ರೂಪದಲ್ಲಾದರೂ ಜನಮಾನಸವನ್ನು ಎಚ್ಚರಿಸುವುದು ಸತ್ಯ. ಹೀಗಾಗಿ ಎಷ್ಟೆ ಶಂಕೆಯ ದನಿಗಳೆದ್ದರೂ ಈ ಸಾಧನೆಯನ್ನು ನಿರ್ಲಕ್ಷಿಸಬಾರದು - ಅದರೆ ಅದಕ್ಕಾಗಿ ಕೊನೆಯ ಹಂತದ ವರೆಗೂ ಕಾಯಬೇಕಷ್ಟೆ :-) ಹಾಗೆಯೆ, ಇದು ಯಾವುದೆ ಪಕ್ಷದ ಅಥವಾ ರಾಜಕೀಯ ವ್ಯಕ್ತಿತ್ವದ ಸಾಧನೆಯಾಗಿ ಗುರುತಿಸಬಾರದು - ಇದು ಈ ದೇಶದ ವಿಜ್ಞಾನಿಗಳ ಸಾಧನೆಯೆಂದಷ್ಟೆ ಗುರುತಿಸಬೇಕು!
ಉ: ಮಂಗಳ ಗ್ರಹಕ್ಕೊಂದು ಕಲ್ಲು
ನಾಗೇಶರೆ ನಮಸ್ಕಾರ.
ಮಂಗಳ ಯಾನದ ಕುರಿತ ತಮ್ಮ ಈ ಲೇಖನ ದ ಜೊತೆಗೆ ಕವನವೂ ಸಹ ಸುಂದರ.ಮಂಗಳ ಯಾನಕ್ಕ ತಗಲವ ವೆಚ್ಚದ ಬಗ್ಗೆ ವಾದ ವಿವಾದಗಳು ಎನೇ ಇರಲಿ , ಕರ್ಚಾದ ಹಣಕ್ಕೆ ಮಂಗಳಗ್ರಹದ ದೂರದಿಂದ ಭಾಗಿಸಿದರೆ ಕಿಲೋಮಿಟರ್ ಗೆ ಕೇವಲ 12 ರೂಪಾಯಿ ,ಅಷ್ಟೆ!
ಆಟೋ ಮಿನಿಮಮ್ ಚಾರ್ಜಕಿಂತ ಕಡಿಮೆ!! ಅಲ್ಲವೆ? ಹಹ್ಹಾ ;))
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by swara kamath
ಉ: ಮಂಗಳ ಗ್ರಹಕ್ಕೊಂದು ಕಲ್ಲು
ರಮೇಶ ಕಾಮತರೆ ನಮಸ್ಕಾರ. ನೀವು ಕೊಟ್ಟ ಹೋಲಿಕೆ ಲೆಕ್ಕಾಚಾರ ಅದ್ಭುತ - ಆದರೆ ಅದಕ್ಕೊಂದು ಪುಟ್ಟ ತಿದ್ದುಪಡಿ ಮಾಡೋಣ. ನಾವು ಶಾರ್ಟ್ ಕಟ್ಟಿನಲ್ಲಿ ಹೋಗದೆ ಲಾಂಗ್ ರೂಟ್ ಹಿಡಿಯುತ್ತಿರುವುದರಿಂದ ಹೋಗಬೇಕಾದ ದೂರ ಹೆಚ್ಚಿರುತ್ತದಲ್ಲವೆ? ಹೀಗಾಗಿ ಕಿಲೊಮೀಟರಿಗೆ 12 ರೂಪಾಯಿಗಿಂತಲೂ ಕಡಿಮೆಯೆ ಆಗಬೇಕಲ್ಲವೆ? ಪ್ರಾಯಶಃ ಐದಾರು ರೂಪಾಯಿಗೆ ಇಳಿದುಬಿಡುತ್ತದೆಂದು ಕಾಣುತ್ತದೆ. ಇನ್ನು ಹಣದುಬ್ಬರ, ವಿನಿಮಯ ದರದ ಏರಿಳಿತವೆಲ್ಲ ಪರಿಗಣಿಸಿ ನೋಡಿದರೆ ಮಂಗಳನನ್ನು ತಲುಪುವ ಹೊತ್ತಿಗೆ ಒಂದೆರೆಡೆ ರೂಪಾಯಿಗೆ ಇಳಿದುಬಿಡುತ್ತದೊ ಏನೊ? ಅದೇನೆ ಆದರೂ ನಿಮ್ಮ ಅನಾಲಜಿ ಮಾತ್ರ ಸುಪರ್:-)
ಉ: ಮಂಗಳ ಗ್ರಹಕ್ಕೊಂದು ಕಲ್ಲು
ನಿಮ್ಮೊಡನೆ ನಾನೂ ಶುಭ ಕೋರುವೆ.
ಖರ್ಚಿನ ಬಗ್ಗೆ ಹೇಳಬೇಕೆಂದರೆ ರಾಜಕೀಯ ಅದಿಕಾರಸ್ಥ ಪಕ್ಷದವರು ತಮ್ಮ ಸಾಧನೆಗಳನ್ನು ಜಾಹಿರಾತು ಮೂಲಕ ಕೊಚ್ಚಿಕೊಳ್ಳಲು ಖರ್ಚು ಮಾಡುತ್ತಿರುವ ಸಾರ್ವಜನಿಕರ ಹಣಕ್ಕಿಂತ ಇದಕ್ಕೆ ಮಾಡಿರುವ ವೆಚ್ಚ ಕಡಿಮೆಯೇ!
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by kavinagaraj
ಉ: ಮಂಗಳ ಗ್ರಹಕ್ಕೊಂದು ಕಲ್ಲು
ನಿಜ ಕವಿನಾಗರಾಜರೆ. ಸರಿಯಾದ ರೀತಿ ಖರ್ಚು ಮಾಡದೆ ಪೋಲು ಮಾಡುವ ಹಣ ಇದಕ್ಕೆ ನೂರು, ಸಾವಿರ ಪಟ್ಟಿರುತ್ತದೆ - ಅದರ ಲೆಕ್ಕ ಕೇಳುವವರಾರು? ಇದು ಬಂಡವಾಳ ಹೂಡಿ ಲಾಭ ಗಳಿಸುವ ವ್ಯಾಪಾರವಲ್ಲ. ಆ ಮಾನದಂಡದಲ್ಲಿ ಇದನ್ನು ಅಳೆಯುವುದು ತರವಲ್ಲ. ಬದಲಿಗೆ ಮನೋವೈಜ್ಞಾನಿಕವಾಗಿ ಈ ತರಹದ ಸಾಧನೆ ತರುವ ಹೆಮ್ಮೆ, ಆದರ ಭಾವಗಳನ್ನು ಹೇಗೆ ಉತ್ಪಾದಕತೆಯತ್ತ (ಪ್ರೊಡಕ್ಟಿವಿಟಿ) ತಿರುಗಿಸಬೇಕೆಂದು ಆಲೋಚಿಸಬೇಕು.
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಮಂಗಳಯಾನದೊಂದು ಮುಖ್ಯ ಮೈಲಿಗಲ್ಲು - ಭೂಮಿಯ ಕಕ್ಷೆಯಿಂದಾಚೆಗೆ ದೂಡಿ ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿರಿಸುವಲ್ಲಿ ಯಶಸ್ವಿಯಾಗಿದ್ದಾರೆ ಇಸ್ರೋ ವಿಜ್ಞಾನಿಗಳು. ಇನ್ನು ಮುಂದಿನ ಪ್ರಮುಖ ಹೆಜ್ಜೆ ಮಂಗಳನ ಕಕ್ಷೆಗೆ ಹತ್ತಿರವಾದಾಗ ಅದರೊಳಗೆ ದೂಡುವುದು. ಯಶಸ್ಸಿನತ್ತ ಇಟ್ಟ ಒಂದು ಪ್ರಮುಖ ಹೆಜ್ಜೆ ಭೂಮಿಯ ಕಕ್ಷೆಯಿಂದ ಬಿಡುಗಡೆ ಮಾಡಿಸಿದ್ದು :-)
.
http://in.reuters.com/article/2013/12/01/india-mars-mangalyaan-idINDEE9B...
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಮಂಗಳಯಾನದೊಂದು ಮುಖ್ಯ ಮೈಲಿಗಲ್ಲು - ಭೂಮಿಯ ಕಕ್ಷೆಯಿಂದಾಚೆಗೆ ದೂಡಿ ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿರಿಸುವಲ್ಲಿ ಯಶಸ್ವಿಯಾಗಿದ್ದಾರೆ ಇಸ್ರೋ ವಿಜ್ಞಾನಿಗಳು. ಇನ್ನು ಮುಂದಿನ ಪ್ರಮುಖ ಹೆಜ್ಜೆ ಮಂಗಳನ ಕಕ್ಷೆಗೆ ಹತ್ತಿರವಾದಾಗ ಅದರೊಳಗೆ ದೂಡುವುದು. ಯಶಸ್ಸಿನತ್ತ ಇಟ್ಟ ಒಂದು ಪ್ರಮುಖ ಹೆಜ್ಜೆ ಭೂಮಿಯ ಕಕ್ಷೆಯಿಂದ ಬಿಡುಗಡೆ ಮಾಡಿಸಿದ್ದು :-)
.
http://in.reuters.com/article/2013/12/01/india-mars-mangalyaan-idINDEE9B...
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by nageshamysore
ಉ: ಮಂಗಳ ಗ್ರಹಕ್ಕೊಂದು ಕಲ್ಲು
ನಾಗೇಶರೆ, ಕವನ ಮತ್ತು ಪ್ರತಿಕ್ರಿಯೆಗಳು ಸೂಪರ್. ಇಷ್ಟೆಲ್ಲಾ ಕಷ್ಟಪಡಬೇಕಾಗಿರಲೇ ಇಲ್ಲ. ನನ್ನ ಮೊದಲ ಮನೆಯಲ್ಲಿ ಮಂಗಳ ಇದೆ ಎಂದು ಜ್ಯೋತಿಷಿಗಳು ಹೇಳಿದ್ದರು.. :)
In reply to ಉ: ಮಂಗಳ ಗ್ರಹಕ್ಕೊಂದು ಕಲ್ಲು by ಗಣೇಶ
ಉ: ಮಂಗಳ ಗ್ರಹಕ್ಕೊಂದು ಕಲ್ಲು
ಗಣೇಶ್ ಜಿ,
ಅಂಗಾರಕ ದೋಷ ಮನೆಗೆಳೆದುಕೊಳ್ಳುವುದು ಬೇಡ ಎಂದು ಅಲ್ಲಿಗೆ ಕಳಿಸುತ್ತಿದ್ದಾರೆ. ನಿಮ್ಮ ಕೇಸು ಬಿಡಿ, ಹೇಳಿ ಕೇಳಿ ಗಣೇಶರಲ್ಲವೆ? ಶನಿದೇವರಿಗೆ 'ನಾಳೆ ಬಾ' ಎಂದು ಆಟವಾಡಿಸಿದವರು ನೀವು. ಇನ್ನು ಮಂಗಳನು ಕಮಕ್ ಕಿಮಕ್ ಅನ್ನದೆ ಹೇಳಿದ ಮಾತು ಕೇಳಿಕೊಂಡು ಬಿದ್ದಿರಬೇಕು!
.
ಏನಿವೆ, ಮಂಗಳಯಾನದ ಪೂರ್ಣ ಫಲಿತದ ಸುದ್ದಿಗೆ ಮುಂದಿನ ಸೆಪ್ಟಂಬರಿನ ತನಕ ಕಾಯಬೇಕು :-)
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು