ಈ ಸಂಪದ

ಈ ಸಂಪದ

ಸಂಪದದಲ್ಲಿ ಬರುವ / ಬಂದಿರುವ ಎಷ್ಟೋ ರೀತಿಯ ಬರಹ, ಲೇಖನಗಳ ವೈವಿಧ್ಯತೆ ನಿಜಕ್ಕೂ ಅಗಾಧವಾದದ್ದು. ಆದರೆ ಸಂಪದ, ಸಂಪದಿಗ, ಸಂಪದ ಆಡಳಿತದ ನೆನಪಿನ ಕುರುಹಾಗಿ ಬಂದ ಬರಹಗಳು ಹೆಚ್ಚಿರಲಾರದೆಂದು ನನ್ನ ಅನಿಸಿಕೆ. ಪ್ರತಿ ವರ್ಷ ವಾರ್ಷಿಕೋತ್ಸವದ ರೀತಿಯ ಆಚರಣೆಯಿದೆಯೋ ಏನೊ ಗೊತ್ತಿಲ್ಲ. ಕೆಲ ದಿನದ ಹಿಂದೆ ಈ ಅನಿಸಿಕೆ ಮನಸಿಗೆ ಬಂದಾಗ ಹಾಗೆ ಕೆಲವು ಸಾಲುಗಳನ್ನು ಗೀಚಿದ್ದರ ಪರಿಣಾಮ ಈ ಸರಳ ಕವನ. ಸಂಪದ ಸಿದ್ದಾಂತದ ವೈಶಿಷ್ಠ್ಯ , ಸಂಪದಿಗರ ಅಲಿಖಿತ ನೀತಿ ಸಂಹಿತೆ, ಅದರ ಬೆನ್ನೆಲುಬಾಗಿರುವ ಕಾರ್ಯ ನಿರ್ವಾಹಕ ತಂಡ ಮತ್ತು ಆಡಳಿತ ವರ್ಗ, ಸರಳ ಮಾದರಿಯ ನಮೂನೆ, ಭವಿಷ್ಯಾತ್ಮಕ ದೃಷ್ಟಿಕೋನ - ಎಲ್ಲವು ಸ್ಪೂರ್ತಿಯ ಸರಕಾಗಿ ಇಲ್ಲಿ ಸಾಲಾಗಿ ಸೇರಿಕೊಂಡಿದೆ. ಪ್ರಾಯಶಃ ಇಷ್ಟು ವರ್ಷಗಳ ಪುಟ್ಟ ಇತಿಹಾಸದಲ್ಲಿ ಅನೇಕ ಸಿಹಿ-ಕಹಿ ಅನುಭವಗಳಿರಬಹುದಾದರೂ, ಪರಿಮಿತ ಮಟ್ಟ ಮೀರದೆ ತಂತಾನೆ ಸಂತುಲಿಸಿಕೊಂಡು ಮುನ್ನಡೆದಿದೆ ಎನ್ನುವುದಕ್ಕೆ ಸಾಕ್ಷಿ, ಈಗಲೂ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿರುವುದು.  ಹೀಗಾಗಿ ಇದೊಂದು ಯಶಸ್ವಿ ಮಾದರಿ ನಮೂನೆಯೆಂದು ಪರಿಗಣಿಸಲು ಅಡ್ಡಿಯಿಲ್ಲವೆಂದೆ ನನ್ನ ಭಾವನೆ. 
.
ಸಂಪದದಲ್ಲಿ ಮೇಲ್ನೋಟಕ್ಕೆ ಕಾಣದ ಹಲವಾರು ವೈಶಿಷ್ಠ್ಯಗಳಿವೆ. ಬೋರಾಗದಂತೆ ಇರಿಸಲು ಬಾಹ್ಯರೂಪ ಸತತ ರೂಪಾಂತರವಾಗುತ್ತಿದ್ದರು ಸಂಪದಿಗರಿಗೆ ಅದರ ಪರಿಣಾಮ ಗಾಢವಾಗಿ ತಟ್ಟದ ಹಾಗೆ ಸಮಾನಾಂತರವಾಗಿ ಸಂಭಾಳಿಸಿಕೊಂಡು ಹೋಗುವುದು ದೊಡ್ಡ ಪಂಥವೆ ಸರಿ (ಐಟಿಯಲ್ಲಿ ಕೆಲಸ ಮಾಡುವವರಿಗೆ ಸಿಸ್ಟಂ ಡೌನ್ ಟೈಮುಗಳ ಪರಿಚಯವಿರುವುದರಿಂದ ಅವರಿಗೆ ಇದನ್ನು ಊಹಿಸಲು ತುಂಬಾ ಸುಲಭ). ಹಾಗೆಯೆ ದಿನೆದಿನೆ ಬೆಳೆಯುತ್ತಿರುವ ಮಾಹಿತಿಯ ಗಾತ್ರವನ್ನು ಸಂಭಾಳಿಸಿಕೊಂಡು ಹೋಗಬೇಕು. ನೇರ ಜಾಹೀರಾತುಗಳ ಹಂಗಿಲ್ಲದೆ ಖರ್ಚು ವೆಚ್ಚ ಭರಿಸಿಲೊಂಡು ತೂಗಿಸಬೇಕು. ಇಪ್ಪತನಾಲ್ಕು ಗಂಟೆಗಳು ಬಳಕೆದಾರನ ಬಳಕೆಗೆ  ದೊರಕುವ ಹಾಗೆ ಸಂತುಲಿಸಬೇಕು; ಜತೆಜತೆಯೆ ಕನಿಷ್ಠ ಅಗತ್ಯದ ತಾಂತ್ರಿಕ ಸಹಾಯವನ್ನು ಕೊಡುವ ಕೈಂಕರ್ಯ. ಇದೆಲ್ಲವನ್ನು ನಡೆಸುವ ಶಕ್ತಿಮೂಲ ಬರುತ್ತಿರುವುದು ನಾಡಿನ ಮತ್ತು ಭಾಷೆಯ ಬಗೆಗಿನ ಅಭಿಮಾನ, ಆರಾಧನೆ, ನಿಸ್ವಾರ್ಥತೆ ಮತ್ತು ಸಮೂಹ ಕಾಳಜಿಗಳಂತಹ ಉನ್ನತ ಧ್ಯೇಯೋದ್ದೇಶಗಳಿಂದ. ಇದೆಲ್ಲದರ ಜತೆಗೆ ಈ ಜಾಗತಿಕ ಗೋಮಾಳದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ, ನಿಖರವಾಗಿ ದಾಖಲಿಸಿಡುವ ಹವಣಿಕೆ. ಇನ್ನೂ ಇಲ್ಲಿ ಬರೆಯದ, ಹೇಳದ ಅದೆಷ್ಟೊ ಕಾರಣಗಳಿರಬಹುದು.
.
ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ - ಸಂಪದ ಒಂದು ವೇದಿಕೆಯಾಗಿ ಮುಖ್ಯವಾಹಿನಿಯಲ್ಲಾಗಲಿ ಅಥವಾ ಜನಪ್ರಿಯ ಮುದ್ರಣ ಮಾಧ್ಯಮದಲ್ಲಾಗಲಿ ಅವಕಾಶವಿಲ್ಲದೆ ತೊಳಲುತ್ತಿರುವ ಎಷ್ಟೋ ಹಿರಿಯ, ಕಿರಿಯ ಬರಹಗಾರರಿಗೆ ಹಾಗೂ ಈ ಹಾದಿಯಲ್ಲಿ ಪ್ರಯತ್ನಿಸಿ ನೋಡಲು ಹವಣಿಸುತ್ತಿರುವವರಿಗೆ ಒಂದು ಮುಕ್ತ ಮಾಧ್ಯಮವಾಗಿ ಬಾಗಿಲು ತೆರೆದಿಟ್ಟಿದೆ - ಅದೂ ಯಾವ ಅನಗತ್ಯ ನಿಯಂತ್ರಣವೂ ಇರದ ಹೆಬ್ಬಾಗಿಲು. ಸಂಪದಿಗರು ಸಂಪದಿಗರನ್ನು ತಲುಪುವ ಸುಲಭ ಪಥ ತೆರೆದಿಟ್ಟ ಕಾರಣ ಜಾಗತಿಕ ನೆಲೆಯ ಗಣನೆಯಿಲ್ಲದೆ ಎಲ್ಲರೂ ಒಂದೆಡೆ ಸೇರಬಲ್ಲ ಅವಕಾಶ ಒದಗಿಸಿಕೊಟ್ಟಿದೆ. ಇದು ಸಂಪದದ ಒಂದು ಅತ್ಯಮೂಲ್ಯ ಕಾಣಿಕೆ ಎಂದೆ ಹೇಳಬೇಕು. ಇಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತ ಇಡಿ ಪ್ರಕ್ರಿಯೆಯನ್ನು ಜೀವಂತವಾಗಿಟ್ಟಿರುವ ಸಂಪದಿಗರ ಪಾತ್ರವೂ ಅಷ್ಟೆ ಮಹತ್ವದ್ದು.
.
ಅಂತೆಯೆ, ಸಂಪದದಂತಹ ಮಾದರಿ-ಸ್ವರೂಪ ಪ್ರಯೋಗವೆ ಅತ್ಯಂತ ವಿಶೇಷ ತರದ್ದು, ಅಪರೂಪದ್ದು ಹಾಗು ವೈಶಿಷ್ಠ್ಯಪೂರ್ಣವಾದದ್ದು. ವಿಕಸನವಾಗುತ್ತಿರುವ ಜಾಗತಿಕ ಗೋಮಾಳದಲ್ಲಿ ಉಳಿದು ಸೆಣೆಸಲು ಬೇಕಾದ ಹೊಸರೀತಿಯ ಸಂವಹನ, ಸಹಕಾರ, ಇರುವ ಸ್ಥಳದ ತೊಡಕಿಲ್ಲದೆ ಯಾವ ಮೂಲೆಯಿಂದಾದರೂ ಭಾಗವಹಿಸಿ ಕಾಣಿಕೆ ನೀಡುವ ಅಥವಾ ಜ್ಞಾನ ವೃದ್ಧಿಸಿಕೊಳ್ಳುವ ಅವಕಾಶ - ಇಡಿ ಪ್ರಕ್ರಿಯೆಯಲ್ಲಿ ತಮ್ಮ ಅರಿವಿಲ್ಲದೆ ಹೊಸದಾಗಿ ಉದ್ಭವವಾಗುತ್ತಿರುವ, ಆಗಬಹುದಾದ ಹೊಸ ವಾಣಿಜ್ಯ ನಮೂನೆಯ (ಬಿಜಿನೆಸ್ ಮಾಡಲ್) ಭಾಗವಾಗುವ, ಪಾಲ್ಗೊಳ್ಳುವ, ಸಾಕ್ಷೀಭೂತರಾಗುವ ಅವಕಾಶ. ಇದಕ್ಕೆಲ್ಲ ಕೇಂದ್ರ ವೇದಿಕೆಯಾಗಿ, ಸಮಷ್ಟಿಯ ಕೊಂಡಿಯಾಗಿರುವ 'ಸಂಪದಕ್ಕೆ' ಕೃತಜ್ಞತೆಯನ್ನರ್ಪಿಸುವ ಕಿರುಕಾಣಿಕೆಯಾಗಿ ಈ ಬರಹ - ಸಂಪದಿಗರ ಪರವಾಗಿ, ಸಂಪದಿಗರಿಗಾಗಿ ಮತ್ತು ಸಂಪದಿಗರಿಂದ, ಈ ರಾಜ್ಯೋತ್ಸವದ ತಿಂಗಳಿನಲ್ಲಿ :-)
.
ಇನ್ನು ಅದೆಷ್ಟೊ ವಿಷಯಗಳಿರಬಹುದು ಬರೆಯಹೊರಟರೆ - ಅದರ ಅಂತದ್ದೆಲ್ಲ ವಿವರಗಳನ್ನು ಹೆಕ್ಕಿ ದಾಖಲಿಸುವ ಹುನ್ನಾರವನ್ನು ಬದಿಗಿರಿಸಿ, ಸಂಪದ ಬಳಗದ - ಸಂಪದಿಗ ಓದುಗರೂ ಸೇರಿದಂತೆ - ಎಲ್ಲರಿಗು ಕೃತಜ್ಞತೆ, ಅಭಿನಂದನೆ ಹಾಗೂ ನಮನಗಳನ್ನು ಈ ಕವಿತೆಯ ಮೂಲಕ ಸಲ್ಲಿಸೋಣ ಮತ್ತು ಈ ಕನ್ನಡ ಅಭಿಯಾನ ರಥ ಹೀಗೆ ಉರುಳಿರಲಿ ಸತತ ಎಂದು ಮನಸಾರೆ ಹಾರೈಸೋಣ.
.
ಧನ್ಯವಾದಗಳೊಂದಿಗೆ 
- ನಾಗೇಶ ಮೈಸೂರು 
.
.
ಈ ಸಂಪದ 
________________
.
ಈ ಸಂಪದ 
ತೆರೆಸೊಳಗಿನ ಕದ
ಎಳೆದೆಲ್ಲ ಎದೆ ಮಾತು
ಹೊರಗೆ ಹಾಕಿದ್ದಷ್ಟೆ ಗೊತ್ತು ||

ಈಗ ಸಂಪದಿಗ
ತಾನೆ ಲೇಖಕ ಓದುಗ
ವಿಮರ್ಶೆಗೂ ವಿಮರ್ಶಿಸುತ
ಅವನನವನೆ ಸರಿ ಪ್ರಕಟಿಸುತ ||
.
ಬೇಡದು ಅರ್ಜಿ
ಹಿಡಿಯದೆ ಯಾರ ಮರ್ಜಿ
ಬಿಚ್ಚಿದರೆ ಸರಿ ನಿನ್ನಯ ಪ್ರವರ
ಟೀಕೆ ಟಿಪ್ಪಣಿ ಮೆಚ್ಚುಗೆ ಭರಪೂರ ||
.
ಕಾಯುವ ತವಕ
ಪ್ರಕಟಿಸಲಲ್ಲ ಸರಕ
ಕ್ಲಿಕ್ಕೆಷ್ಟು ಕಿಕ್ಕೆಷ್ಟು ನೇರಾ
ಸದ್ದಿದ್ದರೆ ತಂತಾನೆ ಪ್ರಚಾರ ||

ತಂಡವೇ 'ಶೂನ್ಯ'
ಅದೃಶ್ಯ ಜಗ ಮಾನ್ಯ
ಕಾರ್ಯಗಳಾಗಷ್ಟೆ ಬಿತ್ತರ
ಕಾರಣ ನೇಪಥ್ಯದಾ ವಿಸ್ತಾರ ||
.
ಸ್ವನೀತಿ ಸಂಹಿತೆ
ಎಲ್ಲೆ ದಾಟದ ಸಹಿಷ್ಣುತೆ
ನಿಯಂತ್ರಣವಿಲ್ಲದ ಕಡಿವಾಣ
ಅನುಸರಿಸುತ ಸಂಪದಿಗ ಜಾಣ ||
.
ಇಲ್ಲದ ಜಾಹೀರಾತು
ಪುಕ್ಕಟೆ ಹಂಚಿದ ಕನಸು
ನನಸಾಗಿಸಲೆಷ್ಟಿರಬೇಕು ಕಸು
ಹಿಂದಿರುವವರ ನಮಿಸಷ್ಟೇ ಹರಸು ||
.
ಎಚ್ಚರವಿರಲಿ ಸದ
ಈ ಮಾದರಿ ಸಮೃದ್ಧ
ಇದು ಸರಳತೆಯಲಿಹ ಭವ್ಯ
ಸಂಕೀರ್ಣಿಸದೆ ರಥವುರುಳೆ ಕಾವ್ಯ ||
.
ಸಂಪದಿಗರು ನಾವೆಲ್ಲ
ಬೆಳೆಸಬೇಕಿ ಸಸ್ಯಶಾಮಲ
ಅಳಿಲು ಸೇವೆಯಾದರು ಚಿತ್ತ
ಹನಿಹನಿಗೂಡಿದರೆ ತಾನೆ ಮೊತ್ತ ||
.
.
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು

Comments

Submitted by kavinagaraj Wed, 11/13/2013 - 10:08

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಸಂಪದಕ್ಕೆ, ಸಂಪದಿಗರಿಗೆ ಶುಭವಾಗಲಿ. ಸಾಹಿತ್ಯ ಸಂಪತ್ತು ವೃದ್ಧಿಸಲಿ.

Submitted by nageshamysore Thu, 11/14/2013 - 02:52

In reply to by kavinagaraj

ಕವಿಗಳಿಗೆ ಧನ್ಯವಾದಗಳು. ಸಂಪದದ ಯಶಸ್ಸಿನ ಮುಖ್ಯನಾಡಿ ಸಂಪದಿಗ ಸಮೂಹದ ಸಕ್ರೀಯ, ಧನಾತ್ಮಕ ಹಾಗೂ ಕ್ರಿಯಾತ್ಮಕ ಪಾಲ್ಗೊಳ್ಳುವಿಕೆ. ಸಂಪದದ 'ಸಂಪದ' ನಿರಂತರವಾಗಿ ವೃದ್ಧಿಸಲಿ ಎಂದು ಹಾರೈಸೋಣ.

Submitted by naveengkn Wed, 11/13/2013 - 12:33

ಹೌದು,,,,, ಸಂಪದಿಗರು ನಾವೆಲ್ಲಾ,,,
ನಾಚಿಕೆಯನು ಬದಿಗಿತ್ತು
ದುಡಿಯುವೆವು ಕನ್ನಡಕ್ಕೆ,,
ಕನ್ನಡದ ಸಂಪದಕ್ಕೆ,

ದಿಕ್ಕು ತೊರಲು ಇಲ್ಲುಂಟು, ನಮ್ಮ ಜನರ ನಂಟು,,
ತಪ್ಪಿದ್ದರೆ ತಿದ್ದುವವರುಂಟು,,
ಸರಿ ಇದ್ದರೆ ಹಿಗ್ಗುವವರುಂಟು,,,

ಎಲ್ಲರೆದೆಯಲ್ಲೂ ಬೆಳಕುಂಟು,,,,
ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲರ ಒಲವುಂಟು,,,,

Submitted by nageshamysore Thu, 11/14/2013 - 03:03

In reply to by naveengkn

ಕವನ ನಮನಕ್ಕೆ ಧನ್ಯವಾದಗಳು ನವೀನರೆ. ಕನ್ನಡದ ಅಳಿಲು ಸೇವೆಗೆ ಮನಸಿದ್ದರೆ, ಜಗದ ಯಾವ ಮೂಲೆಯಿಂದಾದರೂ ಸರಿ, ಅದನ್ನು ಸಾಕಾರಗೊಳಿಸಲು ಸಾಧ್ಯವಾಗಿಸಿದೆ ಸಂಪದ. ಅದರ ಬೆನ್ನ ಹಿಂದಿನ ಶಕ್ತಿಗೆ ಧನ್ಯವಾದ ಹೇಳಿ, ಕೃತಜ್ಞತೆಯ ಮುಖೇನ ಬೆನ್ನು ತಟ್ಟುವುದು ಸಂಪದಿಗರ ಕನಿಷ್ಠ ಕರ್ತವ್ಯ. ಅದರ ಒಂದು  ತುಣುಕಾಗಿ ಈ ಲೇಖನ ಮತ್ತು ಪ್ರತಿಕ್ರಿಯೆಗಳು ಸಂಪದಿಗರ ಆಶಯವನ್ನು ಪ್ರತಿಬಿಂಬಿಸಲಿ.

Submitted by H A Patil Wed, 11/13/2013 - 18:45

ನಾಗೇಶ ಮೈಸೂರು ರವರಿಗೆ ವಂದನೆಗಳು
" ಈ ಸಂಪದ " ಸಾಂಧರ್ಭಿಕ ಸಕಾಲಿಕ ಲೇಖನ, ಸಂಪದ ಕನ್ನಡ ಬ್ಲಾಗಿನ ಯಶೋಗಾಥೆಯನ್ನು ಸಾರುವ ಲೇಖನ, ಸಂಪದ ನನ್ನಂತಹ ಶ್ರೀ ಸಾಮಾನ್ಯನೂ ಸಹ ಕನ್ನಡದ ಚಟುವಟಿಕೆಯಲ್ಲಿ ಭಾಗವಹಿಸಬಹುದು ಎಂಬುದನ್ನು ತೋರಿಸಿ ಯಾವುದೇ ಸಾಹಿತ್ಯಿಕ ಹಿನ್ನೆಲೆಯಿಲ್ಲದ ನನ್ನಂತಹವನ ಬರವಣಿಗೆಯ ಹವ್ಯಾಸವನ್ನು ಪ್ರೋತ್ಸಾಹಿಸಿದ ರೀತಿ ಅನನ್ಯ, ನನ್ನನ್ನು ಸಂಪದ ಬ್ಲಾಗಿಗೆ ಪರಚಯಿಸಿದ ರಮೇಶ ಕಾಮತ ರಿಗೂ ನನ್ನ ಎಲ್ಪ ಬರವಣಿಗೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ ಸಂಪದದ ಆಡಳಿತ ವರ್ಗ ಮತ್ತು ಓದುಗರಿಗೂ ಈ ಕನ್ನಡ ರಾಜ್ಯೋತ್ಸವದ ಸುಸಂಧರ್ಭದಲ್ಲಿ ಧನ್ಯವಾದಗಳನ್ನರ್ಪಿಸುವೆ. ಅತ್ಯುತ್ತಮ ಲೇಖನ ನಾಗೇಶ ರವರೆ ಧನ್ಯವಾದಗಳು.

Submitted by nageshamysore Thu, 11/14/2013 - 03:12

In reply to by H A Patil

ಪಾಟೀಲರಿಗೆ ನಮಸ್ಕಾರ. ತಮ್ಮ ಪ್ರತಿಕ್ರಿಯೆ ಬಹುತೇಕ ಸಂಪದಿಗರ ಅನಿಸಿಕೆಗಳ ಪ್ರತಿಬಿಂಬ. ಭಾಷೆ ಗೊತ್ತಿರುವ, ಕಾಳಜಿಯಿರುವ ಎಲ್ಲರಿಗು ಯಾವುದೆ ಭೇಧಭಾವಲೆಣಿಸದೆ ಸಮಾನಾವಕಾಶ ನೀಡಿದ್ದೆ ಅಲ್ಲದೆ ನಿರಂತರ ಕಲಿಕೆಯಲ್ಲಿ ಪ್ರಬುದ್ಧತೆಯತ್ತ ಬೆಳೆಸುವ ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡಿದ್ದು ವಿಶೇಷ. ಆ ಯಾನದಲ್ಲಿ ಬರಿ ಹೊಸ ಚಿಗುರುಗಳಿಗೆ ಮಾತ್ರವಲ್ಲದೆ ಹಳೆ ಬೇರುಗಳನ್ನು ಸಂಕಲಿಸುವ ಯತ್ನ ಸಂಪದ ಸಮಷ್ಟಿಯ ಆಶಯವನ್ನು ಸಮಗ್ರವಾಗಿಸುವ ಸದಾಶಯ. ನಿರಂತರವಾಗಿರಲಿ ಸಂಪದದ ಸಂಪದ!

Submitted by swara kamath Wed, 11/13/2013 - 19:07

ನಾಗೇಶರಿಗೆ ನಮಸ್ಕಾರ,
ನಿಮಗಿರುವ ' ಸಂಪದ 'ದ ಕುರಿತು ಇರುವ ಕಳಕಳಿ ಮೆಚ್ಚುವಂತದ್ದು.ಅಂತಯೇ ನಿರಂತರ ಲೇಖನ, ಕವನ ಗಳನ್ನು ತಾವು ಬರೆದು 'ಸಂಪದ" ಕ್ಕೆ ಇನ್ನಷ್ಟು ಮೆರಗನ್ನು ನೀಡಿ ಸಂಪದ ಓದುಗರಿಗೆ ಹರ್ಷಿತರನ್ನಾಗಿಸಿರುವಿರಿ.ನೀವಂದಂತೆ" ಸಂಪದ"ವನ್ನು ನಮಗೆ ನೀಡಿ ಯಾವ ಪಲಾಪೇಕ್ಷೆಯನ್ನು ಕೇಳದೆ ನಿರ್ವಹಿಸುತ್ತಿರುವ ನಿರ್ವಾಹಕರನ್ನು ಎಷ್ಟು ನೆನೆದರೂ ಸಾಲದು.ನಾನೊಮ್ಮೆ" ಸಂಪದ "ಕ್ಕೆ ಏಳು ವರುಷ ತುಂಬಿ ಎಂಟಕ್ಕೆ ಅಡಿಇಟ್ಟ ಆ ಕ್ಷಣಗಳನ್ನು ನೆನಪಿಸಿಕೊಂಡು ನಿಮ್ಮ ಹಾಗೆ ನಾನೆರಡು ಸಾಲನ್ನು ಬರೆದಿದ್ದೆ. ಅದರ ಲಿಂಕ ಇಲ್ಲಿದೆ. http://sampada.net/blog/ (21/7/2012)

Submitted by swara kamath Wed, 11/13/2013 - 19:25

In reply to by swara kamath

ಕ್ಷಮಿಸಿ, ನಾನು ಬರೆದ ಲಿಂಕ್ ತಪ್ಪಾಗಿದೆ, ಸರಿಯಾದ ಲಿಂಕ್ ಇಲ್ಲಿದೆ . .....

" ಸಂಪದ '' ನಿನಗೆ ಹುಟ್ಟು ಹಬ್ಬದ ಶುಭಾಶಯಗಳು! | ಸಂಪದ - Sampada
http://sampada.net/blog/%E0%B2%B8%E0%B2%82%E0%B2%AA%E0%B2%A6-%E0%B2%A8%E...

Submitted by ashoka_15 Wed, 11/13/2013 - 22:02

In reply to by swara kamath

ಸದಾ ಮಿನುಗುವ‌ ನಕ್ಷತ್ರ
ಗೋಚರಿಸುವುದು ರಾತ್ರಿ ಮಾತ್ರ,

ಸದಾ ಮಿನುಗುವ‌ ನಕ್ಷತ್ರ
ಸದಾ ಗೋಚರಿಸುವುದು ಸಂಪದದಲ್ಲಿ ಮಾತ್ರ.

ಸಂಪದವನ್ನು ಸಕಾಲ‌ ಪ್ರೋತ್ಸಾಹಿಸಲು
ಪ್ರತಿಕ್ರಿಯಿಸುವರ‌ ಸಂಖ್ಯೆ ಹೆಚ್ಚಬೇಕಿದೆ

ಹಾಗಾದರೆ *******ಗಳು ಹೆಚ್ಚುತ್ತವೆ
ಸಂಪದದಲ್ಲು ಅದರ‌ ಪ್ರತಿಕ್ರಿಯೆಯಲ್ಲು.

ದನ್ಯವಾದಗಳು ಸರ್
ಸಂಪದದ‌ ಹುಟ್ಟು ಹಬ್ಬ ತಿಳಿಸಿದ್ದಕ್ಕೆ,,,

Submitted by nageshamysore Thu, 11/14/2013 - 03:27

In reply to by swara kamath

ಕಾಮತ್ ಸಾರ್,

ನಮಸ್ಕಾರಗಳು. ನೀವು ಕೊಟ್ಟ ಲಿಂಕಿನಲ್ಲಿರುವ ಸೊಗಸಾದ ಕವನದ ಹಾರೈಕೆ ನೋಡಿದೆ. ನೀವಲ್ಲಿ ಅರಳಿಸಿದ ಮೊಗ್ಗು ಹೊಸಹೊಸ ಗುಲಾಬಿಗಳಾಗಿ ಇನ್ನು ಅರಳುತ್ತಲೆ ಸಾಗಿದೆ - ಹೊಸ ಚಿಗುರು ಹಳೆಬೇರಿನ ಸಾಂಗತ್ಯದಲ್ಲಿ. ಜತೆಗೆ ಈ ಬರಹದ ಮುಖೇನ / ನಿಮ್ಮಿಂದಾಗಿ, ಸಂಪದದ ನಿಖರ ಜನ್ಮರಾಶಿಯ ಮುಹೂರ್ತಗಳು ತಿಳಿದಂತಾಯ್ತು :-)

ಇತರೆ ಸಂಪದಿಗರಂತೆ ನಾನೂ ಆಗಾಗ ಸೇರಿಸುವ ಬರಹಗಳನ್ನು ಸಂಪದಿಗರು ಅಷ್ಟೆ ಪ್ರೀತಿ, ವಿಶ್ವಾಸದಿಂದ ಪ್ರೋತ್ಸಾಹಿಸುತ್ತಿದ್ದಾರೆ. ಪ್ರತಿಕ್ರಿಯೆಗಳ ಮುಖೇನ ತಿದ್ದಿ ತೀಡಿ ಬೆಳೆಸುತ್ತಿದ್ದಾರೆ. ಅದೆಷ್ಟೊ ಹಿರಿಯ ಸಂಪದಿಗರು ಸಹನೆಯಿಂದ ನೀರೆರೆದು ಪೋಷಿಸಿದ ಸಸಿ ಬೆಳೆದು ಗಿಡವಾಗಿ, ಮರವಾಗಿ, ಹೆಮ್ಮರವಾಗುವತ್ತ ದಾಪುಗಾಲಿಕ್ಕುತ್ತಿದೆ. ಆ ನಿರಂತರ ಯಾನದಲ್ಲಿ ಸಂಪದದ ಮೂಲ ಆಶಯ 'ಹಳೆ ಬೇರು, ಹೊಸ ಚಿಗುರು' ಎಂದಿಗೂ ಕಳುವಾಗದೆ, ಸಂಗತವಾಗಿಯೆ ಮುಂದುವರೆಯಲೆಂಬ ಆಶಯ, ಕಾಳಜಿ.

@ ಅಶೋಕರಿಗೆ, ತಮ್ಮ ಕವನ ನಮನ ಪ್ರತಿಕ್ರಿಯೆಗೂ ಧನ್ಯವಾದಗಳು :-)

Submitted by venkatb83 Thu, 11/14/2013 - 17:06

In reply to by nageshamysore

ನಾಗೇಶ್ ಅವರೇ -ನೀವ್ ಹೇಳಿದ್ದು ನಿಜ .. ವರ್ಷಕ್ಕೊಮ್ಮೆ ಸಂಪದ ಹುಟ್ಟು ಹಬ್ಬದ ಸಂದರ್ಭದಲ್ಲಿ (ಕೆಲವೊಮ್ಮೆ ಅದ್ರ ಮಧ್ಯೆಯೂ )ಸಂಪದದ ಬಗ್ಗೆ ಕವನ - ಬರಹ ಬರುವವು . ಆದ್ರೆ ಅವುಗಳ ಸಂಖ್ಯೆ ಕಡಿಮೆಯೇ .. !
ಸಂಪದದ ಹಿರಿಯ ಓದುಗರು (ಸಂಪದ ಶುರು ಆದ ದಿನಗಳಲ್ಲಿ ನಂತರದ ಕೆಲವು ದಿನಗಳಲ್ಲಿ ಸದಸ್ಯರಾದವರು ಎಂಬ ಅರ್ಥದಲಿ ಹಾಗೂ ವಯಸ್ಸಿನಲ್ಲಿ ) ಆಗಾಗ ಆ ಬಗ್ಗೆ ಬರೆದಿರುವರು .. ನಂಗೆ ನೆನಪಿರುವ ಹಾಗೆ ಹಿರಿಯರಾದ ಪಾಟೀಲರು -ಕಾಮತ್ ಸರ್ ಮತ್ತು ಶ್ರೀಯುತ ಪಾರ್ಥ ಸಾರಥಿ ಅವರು ಈ ಬಗ್ಗೆ ಬರೆದಿರುವರು .. (ಅದರಲ್ಲೂ ಶ್ರೀಯುತ ಪಾರ್ಥ ಸಾರಥಿ ಅವರ ಒಂದು ಬರಹ ಸಂಪದದ ಹಿರಿಮೆ ಗರಿಮೆ ವಿಶೇಷತೆ ಎಲ್ಲವನ್ನೂ ಬಹು ಚೆನ್ನಾಗಿ ಮನದಟ್ಟು ಮಾಡಿಸುತ್ತದೆ )..

ಗುರುಗಳ ಬರಹ ಒಂದು ಇಲ್ಲಿ ಕಣ್ಣಿಗೆ ಬಿತ್ತು . ಅದು ಈ ಸಂದರ್ಭಕ್ಕೆ ತಕ್ಕುದಾಗಿದೆ ಅನಿಸುತ್ತಿದೆ .>!!

http://sampada.net/blog/%E0%B2%95%E0%B2%B5%E0%B2%A8-%E0%B2%8F%E0%B2%A8%E...

ಹಾಗೆ ಇದು

http://sampada.net/blog/%E0%B2%87%E0%B2%B7%E0%B3%8D%E0%B2%9F%E0%B2%B5%E0...

http://sampada.net/blog/%E0%B3%A8%E0%B3%A6%E0%B3%A7%E0%B3%A7-%E0%B2%B8%E...
ನಾನೂ ಒಮ್ಮೆ ಬರೆದಿದ್ದೆ -ಆದರೆ ನಾ ಬರೆದದ್ದು ಸಂಪದವನ್ನ ನಾ ಹೇಗೆ ಓದುವೆ ಅಂತ .. http://sampada.net/blog/%E0%B2%B8%E0%B2%82%E0%B2%AA%E0%B2%A6%E0%B2%B5%E0... ಅದರಲ್ಲಿ ಹಲವು ಜನ ತಾವ್ ಸಂಪದ ಓದುವ ಬಗೆಯನ್ನ ವಿವರಿಸಿರುವರು ..

ಇನ್ನು ಸಂಪದ ಆಗಾಗ ಬದಲಾಗುತ್ತಲೇ ಇರುತ್ತದೆ -ಆದರೆ ಅದರಿಂದ ಕೆಲವೇ ಜನರಿಗೆ ಅನನುಕೂಲ ಆಗಿದೆ ಎಂದು ಅವರ ಪ್ರತಿಕ್ರಿಯೆಗಳಲ್ಲಿ ತಿಳಿದು ಬಂದಿದೆ . . ಜಾಹೀರಾತು ಹಂಗಿಲ್ಲದೆ -ದಿನ ನಿತ್ಯ ಹೆಚ್ಚುವ ಓದುಗರು -ಬರಹಗಳ ಶೇಖರಣೆ -ವಿಂಗಡಣೆ- ವ್ಯವಸ್ಥೆಗೆ ತಗುಲುವ ವೆಚ್ಹ ಅಧಿಕ . ಅದನು ಅವರು ಹೇಗೆ ಸರಿದೂಗಿಸುತ್ತಿರುವರು ಎಂದು ಅವರು ಹೇಳಿದ್ದು ಕಡಿಮೆ . .
. ಕನ್ನಡದ ಮೇಲಿನ ಪ್ರೀತಿ ಅಭಿಮಾನ -ನಾಡು ನುಡಿಗೆ ಸಂಪದ ತಂಡ ಸಲ್ಲಿಸುತ್ತಿರುವ ಈ ಸೇವೆಗೆ ಹ್ಯಾಟ್ಸಾಫ್ ...

ಓದುಗರು-ಬರಹಗಾರರು-ಪ್ರಕಾಶಕರು ಸಂಪಾದಕರು ಈ ಎಲ್ಲ ಜವಾಬ್ಧಾರಿಯನ್ನು ನಾವೇ ವಹಿಸ್ಕೊಂಡಿರುವೆವು ..!!
ದಿನ ನಿತ್ಯ ಸಹಸ್ರ ಜನ ಭೇಟಿ ನೀಡುವ -ಸದಸ್ಯರಾಗುವ -ಈ ಜಾಲ ತಾಣದಲ್ಲಿ ಹಲವು ಜನರ ವಿಭಿನ್ನ ಶೈಲಿಯ ಬರಹಗಳ - ಧ್ರುಸ್ಟಿ ಕೋನದ ಪರಿಚಯ ಆಗಿದೆ ..

ಅಂತರ್ಜಾಲದಲ್ಲಿ ಕನ್ನಡದ ಹಲವು ಜಾಲ ತಾಣಗಳಿವೆ ಎಲ್ಲವೂ ಕನ್ನಡ ಸಾಹಿತ್ಯ ಬೆಳವಣಿಗೆಗೆ -ಅದರ ಜೀವಂತಿಕೆಗೆ ಶ್ರಮಿಸುತ್ತಿವೆ
ಅವುಗಳಲ್ಲಿ ಕೆಲವು ಇಲ್ಲಿ

ಕೆಂಡ ಸಂಪಿಗೆ
ಪಂಜು
ವಿಸ್ಮಯನಗರಿ
ಇತ್ಯಾದಿ ..

ಅವುಗಳ ಬಗೆಗಿನ ಲಿಸ್ಟ್ ಇಲ್ಲಿದೆ
http://creativepot.blogspot.in/2009/06/kannada-websites-patti-list_17.html

ಹೊಸ ಚಿಗುರು ಹಳೆ ಬೇರು -ಅಡಿ ಬರಹ ಸಂಪದಕ್ಕೆ ತಕ್ಕುದಾಗಿದೆ ..

ಶುಭವಾಗಲಿ
\। /

Submitted by nageshamysore Thu, 11/14/2013 - 20:14

In reply to by venkatb83

ಸಪ್ತಗಿರಿಗಳೆ, ಹಿರಿಯ ಸಂಪದಿಗರ ಹಳೆ ಬೇರು, ಚಿಗುರುವ ಹೊಸಸಸಿಗಳಿಗೆ ಸತತ ನೀರೂಡುತ್ತಾ ಪೋಷಿಸುತ್ತಿರುವುದರಿಂದಲೊ ಏನೊ, ಈ ವೃಕ್ಷದ ಶಾಖೆಗಳು ವೃದ್ಧಿಸುತ್ತಲೆ ಹೋಗುತ್ತಿವೆ ಅಕ್ಷಯವಾಗಿ. ನೀವೆಲ್ಲಾ ಹಳೆಯ ನೆನಪು, ಕೊಂಡಿಗಳನ್ನು ತಂದು ಸೇರಿಸುತ್ತಿರುವ ಪರಿಣಾಮ ಹೊಸದಾಗಿ ಸೇರಿದವರಿಗೂ ಹಳೆಯ ತುಣುಕುಗಳ ಪರಿಚಯವಾಗಿ ಇತಿಹಾಸದ ವೈಭವದ ಚಿತ್ರಣವನ್ನು ಕಟ್ಟಿಕೊಡುತ್ತಿದೆ. ಒಂದು ಸಮುದಾಯ ಯಾವುದೆ ಕಟ್ಟಳೆಗಳಿಲ್ಲದೆ, ನಿರ್ಬಂಧಗಳಿಲ್ಲದೆ ಹೇಗೆ ಸಂವಹಿಸುತ್ತಲೆ, ಕಾರ್ಯನಿರತ ಜಾಗತಿಕ ಅದೃಶ್ಯ ಸಮೂಹದ ನಿರ್ಮಾಣ ಮಾಡಬಹುದೆಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ ಈ ಪ್ರಕ್ರಿಯೆ. ನೀವು ಸೇರಿಸಿದ 'ಸಂಪದ ಹೇಗೆ ಬಳಸುತ್ತೀರಿ' ಬರಹವೆ ಆಗಲಿ, ಪಾರ್ಥರ ಕವನವೆ ಆಗಲಿ - ಸಂಪದದಲ್ಲಿರುವ ವಸ್ತು ವೈವಿಧ್ಯತೆಗೆ ಸಾಕ್ಷಿ. ಒಂದೆಡೆ ಇವೆಲ್ಲಾ ಹಳತಾಗುತ್ತ ಹೋದಂತೆ, ಹೊಸದಾಗಿ ಸೇರಿದ ಹೊಸಬರ ಬರಹಗಳು ಆ ಜಾಗವನ್ನು ತುಂಬತೊಡಗುತ್ತವೆ. ಇದು ಸತತ ನಡೆಯಬೇಕಾದ ಪ್ರಕ್ರಿಯ. ಹೊಸ ನೀರು-ಹೊಸ ಚಿಗುರು,  ಹಳೆ ಬೇರು-ಹಳೆ ನೀರು ಎರಡು ಸಮತೋಲನದ ಸಮಷ್ಟಿಯಲ್ಲಿದ್ದರೆ ಸರಿ, ಮಿಕ್ಕಿದ್ದೆಲ್ಲಾ ತಂತಾನೆ ನಡೆದುಕೊಂಡುಹೋಗುತ್ತದೆ. ಕೊಂಡಿಗಳಿಗೆಲ್ಲ ಮತ್ತು ಅದರ ಮುಖೇನ ಹಳೆಯ ಸಂಪದದ ತುಣುಕುಗಳ ಪರಿಚಯಿಸಿದ್ದಕ್ಕೆ, ಮತ್ತೆ ಧನ್ಯವಾದಗಳು.

Submitted by makara Fri, 11/15/2013 - 07:28

ನಾಗೇಶರೆ,
ಸಂಪದದ ಕುರಿತ ಅರ್ಥಪೂರ್ಣ ಬರಹಗಳಲ್ಲಿ ನಿಮ್ಮದೂ ಒಂದು. ಸಪ್ತಗಿರಿಯವರು ಹೇಳಿದಂತೆ ಇನ್ನೂ ಒಂದು ಅತ್ಯುತ್ತಮವಾದ ವಿಶ್ಲೇಷಣಾತ್ಮಕ ಬರಹವೊಂದನ್ನು ಪಾರ್ಥಸಾರಥಿಗಳು ಬರೆದಿದ್ದರು. ಅದು ಸಂಪದಿಗರ ನಾಡಿ ಮಿಡಿತದ ಕುರಿತಾಗಿ ಇತ್ತು. ಅದರಲ್ಲಿ ಸಂಪದದ ಕುರಿತ ಓದುಗರ ಮತ್ತು ಬರಹಗಾರರ ಕುರಿತ ಮತ್ತು ಬರಹಗಳಿಗೆ ಪ್ರತಿಕ್ರಿಯಿಸುವವರ ಹಾಗೂ ಪ್ರತಿಕ್ರಿಯೆ ನೀಡದೇ ಇರುವವರ ಮನೋಧರ್ಮದ ಕುರಿತಾಗಿಯೂ ಬಹಳ ಸೊಗಸಾದ ವಿವರಣೆಯಿತ್ತು. ಆ ಲೇಖನದ ಕೊಂಡಿ ದೊರೆಯುತ್ತಿಲ್ಲ, ಬಹುಶಃ ಪಾರ್ಥಸಾರಥಿಗಳು ಈ ಪ್ರತಿಕ್ರಿಯೆಯನ್ನು ನೋಡಿದರೆ ಅವರೇ ಕೊಡಬಹುದೆನಿಸುತ್ತದೆ. ಇರಲಿ ಬಿಡಿ, ನನ್ನ ಮಟ್ಟಿಗಂತೂ ಕರ್ನಾಟಕದ ಹೊರಗಿದ್ದುಕೊಂಡೂ ಕರ್ನಾಟಕದಲ್ಲೇ ಇದ್ದೇನೆಂದು ಭಾವಿಸುವಂತೆ ಮಾಡಿರುವುದು ಈ ಸಂಪದವೊಂದೇ. ನೀವೆಂದಂತೆ ಸಂಪದದಿಂದಾಗಿ ಬರವಣಿಗೆಯನ್ನೇ ಕೈಗೊಳ್ಳದ ನನ್ನಂತಹವರು ಇಂದು ಕನ್ನಡದಲ್ಲಿ ನಿಯಮಿತವಾಗಿ ಬರೆಯುವಂತಾಗಿರುವುದು ಸಂಪದದ ಪುಣ್ಯವಿಶೇಷದಿಂದಾಗಿಯೇ; ಇದಕ್ಕಾಗಿ ನಾವು ನಾಡಿಗರಿಗೆ ಕೃತಜ್ಞತೆಗಳನ್ನರ್ಪಿಸೋಣ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 11/15/2013 - 19:15

In reply to by makara

ಶ್ರೀಧರರೆ, ನಿಮ್ಮ ಮಾತು ನಿಜ. ಮಾಹಿತಿ ಕ್ರಾಂತಿಯ ಪರಿಣಾಮ ಮತ್ತು ಅಂತರ್ಜಾಲ ಸ್ಪೋಟದ ಪರಿಣಾಮ ಇಡಿ ಜಗವೆ ಒಂದು ಪುಟ್ಟಹಳ್ಳಿಯಂತಾಗಿ, ಜಾಗತಿಕ ಗೋಮಾಳದ ವಾತಾವರಣ ಹುಟ್ಟುಹಾಕಿಬಿಟ್ಟಿದೆ. ಅದೆಷ್ಟೊ ಅಡ್ಡ ಪರಿಣಾಮಗಳ ಜತೆಗೆ ಈ ಅಂತರ್ಜಾಲ ಮಾಯಾಜಾಲದ ಒಂದು ಧನಾತ್ಮಕ ಪರಿಣಾಮವೆಂದರೆ - ಈ ಕ್ರಾಂತಿಯೊದಗಿಸಿ ಕೊಟ್ಟ 'ಸರ್ವಸಮತಲ ಮೈದಾನ' ( ಲೆವೆಲ್ ಪ್ಲೇಯಿಂಗ್ ಫೀಲ್ಡ್ ). ದೊಡ್ಡ ಕಂಪನಿಗಳಿಂದ ಹಿಡಿದು, ಸಾಮಾನ್ಯ ವ್ಯಕ್ತಿಯತನಕ ಎಲ್ಲರೂ ಒಂದೆ ತರಹದ 'ಸ್ಪರ್ಧಾನುಕೂಲತೆ'ಯೊಡನೆ (ಕಾಂಪಿಟಿಟಿವ್ ಅಡ್ವಾಂಟೇಜ್) ಸೆಣೆಸಬಹುದಾದ ಅವಕಾಶ. ಈ ಸಂಕ್ರಣ ಸಮಯದಲ್ಲಿ ಅದೆಷ್ಟು ಬದಲಾವಣೆಗಳು ಇನ್ನೂ ಬರಲಿದೆಯೊ, ಇನ್ನೆಷ್ಟು ಹೊಸ ತರದ ವಾಣಿಜ್ಯ ನಮುನೆಗಳು ಹುಟ್ಟಲಿವೆಯೊ (ಇನ್ನೆಷ್ಟು ಧ್ವಂಸವಾಗಲಿವೆಯೊ) ಹೇಳಬರದು. ಈ ಸಂಯೋಜನೆಯ ಒಂದು ಫಲಿತವೆ ಹೊರಗಿನ ಯಾವುದೊ ಜಾಗದಲಿದ್ದರೂ ಕೊಂಡಿ ಕಳಚದಂತೆ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಮಾತ್ರವಲ್ಲದೆ, ಅದರ ಅಂಗವಾಗಿ ಪಾಲ್ಗೊಳ್ಳಲೂ ಸಾಧ್ಯವಾದದ್ದು. ಇದೆಲ್ಲದನ್ನು ಸುಲಭ ಸಾಧ್ಯವಾಗಿಸುವ ವೇದಿಕೆಯಾಗಿ ಸಂಪದ ಹುಟ್ಟಿಕೊಂಡಿದ್ದು, ಕನ್ನಡನಾಡಿನ ಈಚಿನ ಇತಿಹಾಸದಲ್ಲಿನ ಒಂದು ಅದ್ಭುತ ಮತ್ತು ಮಹತ್ವಪೂರ್ಣ ಮೈಲಿಗಲ್ಲು. ಹೀಗಾಗೀ ನಾವೆಲ್ಲಾ ಸಂಪದಿಗರೂ ಅವಿರತ, ತಡೆರಹಿತ ಸಂವಹಿಸಲು ಸಾಧ್ಯವಾಗಿದ್ದು. ನನ್ನ ಅನಿಸಿಕೆಯಂತೆ, ಇದೊಂದು ಬತ್ತದ ತೊರೆಯಂತೆ, ಆರದ ದೀವಿಗೆಯಂತೆ; ಒಬ್ಬರಾದ ಮೇಲೊಬ್ಬರಂತೆ ಬಂದು ದೀವಿಗೆ ಹಚ್ಚುತ್ತಲೆ ಇರುತ್ತಾರೆ. ಹಳೆ ಬೇರಿಗೆ ಹೊಸ ಚಿಗುರು ಸೇರಿದಂತೆಯೆ, ಹೊಸನೀರು ಹಳೆಯದರ ಜತೆ ಬೆರೆತು ನಿರಂತರ ಪ್ರವಾಹವಾಗಿ ಹರಿಯುತ್ತಿರುತ್ತದೆ. ನಿನ್ನೆ ಯಾರೊ, ಇಂದು ಯಾರೊ, ನಾಳೆ ಇನ್ನಾರೊ - ರಥವಂತೂ ಉರುಳುತ್ತಿರುತ್ತದೆ :-)

Submitted by venkatb83 Fri, 11/15/2013 - 14:26

ಜೀ ನಾನು ಗುರುಗಳ‌ ಅ ಬರಹವನ್ನು ನಿನ್ನೆ ಹುಡುಕಿದೆ(ಅವರ‌ ಎಲ್ಲಾ ಬರಹಗಳು ಅಪ್ಛನ್ ಉಪಯೊಗಿಸಿ) ಆದರೆ ಆ ಬರಹ‌ ಎಲ್ಲೋ ಅಡಗಿದ‌ ಹಾಗಿದೆ.>!!

ಆದ್ರೂ ನೀವ್ ಅದೇ ಬರ್ಹದ‌ ಬಗ್ಗೆ ಉದಾಹರಿಸುವಿರಿ ಎಂದುಕೊಂಡೆ, ಹಾಗೆಯೇ ಆಯ್ತು..!!
ಬಹುಷ‌ ಆ ಬರ್ಹದ‌ ಹೆಸರು ' ಸಂಪದದಲ್ಲಿ ಆರ್ತನಾದಗಳು' ಎಂದು ಎನೋ ಇದ್ದ ಹಾಗೆ ನೆನಪು ..
ಆ ಬರಹವನ್ನು ಇಲ್ಲಿ(ಸಂಪದದಲ್ಲಿ) ಹುಡುಕಬಹುದು ( ಹುಡುಕಿ ಅಪ್ಛನ್ ಉಪಯೋಗಿಸಿ)...
ಅಥವಾ

http://sampada.net/blog/partha1059

ಶ್ಹುಭವಾಗಲಿ/..

\|/

Submitted by makara Fri, 11/15/2013 - 16:50

In reply to by venkatb83

ಸಪ್ತಗಿರಿಗಳೆ,
ನಾನು ನೀವು ಸೂಚಿಸಿರುವ ಕೊಂಡಿಯಲ್ಲಿ ಜಾಲಾಡಿಸಿದ ನಂತರವೇ ಕೈಚಲ್ಲಿ ಕುಳಿತದ್ದು. ಅದನ್ನು ಯಾವ ಪಾತಾಳ ಗರಡಿ ಹಾಕಿ ಹುಡುಕಬೇಕೋ ತಿಳಿಯದು :) ಅದಕ್ಕೆ ಸೂಕ್ತ ಕೊಂಡಿಯನ್ನು ಆ ಪಾರ್ಥಸಾರಥಿಗಳೇ ಕೊಡಬೇಕಷ್ಟೇ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 11/15/2013 - 17:19

In reply to by makara

ಶ್ರೀಧರರೆ, ಸಪ್ತಗಿರಿಗಳೆ,

ನಿಮ್ಮ ಮಾತು ಕೇಳಿ ನಾನು ಒಂದು ಕೈ ನೋಡೋಣವೆಂದು ಹುಡುಕಲೆತ್ನಿಸಿದರೆ - ಶಿವನೆ! ಎಂದು ಮೂಗಿನ ಮೇಲೆ ಬೆರಳಿಡುವಂತಾಯ್ತು!! ಆ 'ಪಾರ್ಥ ಸಾಗರ'ದಲ್ಲಿ ಹುಡುಕುವುದಾದರೂ ಎಲ್ಲಿ? ಹುಡುಕುತ್ತ ಹೋದರೆ ಅಲ್ಲೆ ಬೇರಾವುದೊ ಲೇಖನ ಗಮನ ಸೆಳೆದು ಅದನ್ನು ಓದುವ ಹಾಗಾಗುತ್ತದೆ. ಕೊನೆಗೆ ಗಂಟೆಗಟ್ಟಲೆ ಬಲೆ ಬೀಸಿ ನೋಡಿದ್ದಷ್ಟೆ ಲಾಭ :-)

ಆದರೆ ಅದೆಲ್ಲಾ ನೋಡಿದ ಮೇಲೆ ಇಷ್ಟೊಂದು ಬರೆದು ಹಾಕಿದ ಪಾರ್ಥ ಸಾಗರದ ಶಕ್ತಿ ಮೂಲ ಏನು ಅನ್ನುವ ಕುತೂಹಲವು ಹುಟ್ಟಿದೆ. ಜತೆಗೆ ಏನೆ ಬರೆಯ ಹೊರಟರೂ ಈಗಾಗಲೆ ಅದರ ಪಾರ್ಟ್ 01, ಆಗಲೆ ಆ ಸಾಗರದಲ್ಲಿ ಬಂದು ಸೇರಿಬಿಟ್ಟಿರುತ್ತದೆ!

ಆದರೂ ಕೆಟ್ಟ ಕುತೂಹಲಕ್ಕೆ ಪಾರ್ಥರಿಗೊಂದು ಪ್ರಶ್ನೆ - ಈ ಶಕ್ತಿ ಬರಲು ಏನು ತಿಂಡಿ, ಏನು ಊಟ, ಏನು ಟಾನಿಕ್ , ಯಾವ ಲೇಹ್ಯ ತೆಗೆದುಕೊಳ್ಳುತ್ತಾರೆ ಎಂದು? (ಕನ್ನಡಾಭಿಮಾನದ ಹೊರತಾಗಿ) :-)

Submitted by partha1059 Fri, 11/15/2013 - 17:31

In reply to by nageshamysore

ನಾಗೇಶ, ಶ್ರೀದರ ಭಂಡ್ರಿಯವರೆ, ಹಾಗು ಸಪ್ತಗಿರಿಯವರೆ ನಿಮ್ಮ ಅಭಿಮಾನ ನನಗೆ ನಿಜಕ್ಕು ಖುಷಿ ಅನಿಸಿತು.
ಬರೆಯಲು ಒಂದೆ ಶಕ್ತಿ ನಾಗೇಶ್ ಮೈಸೂರ್ ತಾನು ಬರೆದುದ್ದನ್ನು ಯಾರಾದರು ಓದುತ್ತಾರೆ ಎಂಬ ನಂಭಿಕೆ. ಸಂಪದದ ಆ ಓದುಗರೆ ಸಂಪದಲ್ಲಿ ಬರೆಯುವ ಎಲ್ಲರಿಗೂ ಶಕ್ತಿ ಅಲ್ಲವೆ
ನೀವು ಯಾವ ಲಿಂಕ್ ಹುಡುಕುತ್ತಿರುವಿರಿ ಗೊತ್ತಾಗಲಿಲ್ಲ ನಾನು ಎರಡನ್ನು ಹಾಕಿರುವೆ ಅದೆ ಇರಬಹುದುಮ್ ಮೌನದದ್ವನಿ-ಸಂಪದ ಎನ್ನುವ ಬರಹ ಹಾಗು ಒಂದು ವರ್ಷ ಸಂಪದದ ಜೊತೆ ನನ್ನ ಒಡನಾಟ ಎನ್ನುವ ಬರಹ
ಮೌನದ ದ್ವನಿ ಸಂಪದ

ಮತ್ತೊಂದು ಬರಹ

ಸಂಪದ - ನನ್ನ ಒಡನಾಟ

Submitted by venkatb83 Fri, 11/15/2013 - 19:05

In reply to by partha1059

ಮೌನದ ದ್ವನಿ ಸಂಪದ

ಅದನ್ನೇ ನಾವ್ ಹುಡುಕಿದ್ದು..>!!
ಅಂತೂ ಸಿಕ್ತು...>!!!!
ನಿಮ್ಮ ಅಸ್ಟು ಬರಹಗಳನ್ನು ನೋಡಿದ‌ ಮೇಲೆ ಅಬ್ಬ್ಬಬ್ಬಾ ಅನ್ನಿಸದೆ ಇರದು..
ಅದ್ಕೆ ಇರ್ಬೇಕು ಜೀ ಮತ್ತು ನಾಗೇಶ್ಹ್ ಅವರು ....!!! ಉದ್ಘಾರ‌ ತೆಗೆದದ್ದು..!!

ಶ್ಹುಭವಾಗಲಿ..

\|/

Submitted by venkatb83 Fri, 11/15/2013 - 19:06

In reply to by venkatb83

ಶ್ಹೀರ್ಶ್ಹಿಕೆ ನೆನಪು ಸರ್ಯಾಗಿ ಇರಲಿಲ್ಲ, ಈಗ‌ ನೀವ್ ಕೊಟ್ಟ ಶ್ಹೀರ್ಶ್ಹಿಕೆ ಹಾಕಿ ಇಲ್ಲಿ ಹುಡುಕಿದಾಗ‌ (ಇಲ್ಲಿ ಹುಡುಕಿ ಅಪ್ಛನ್ ಉಪಯೋಗಿಸಿ) ಸಿಕ್ತು .>!!

\|/

Submitted by makara Fri, 11/15/2013 - 19:10

In reply to by partha1059

ಮಕ್ಕಳ ಬಗ್ಗೆ ಹೆತ್ತಮ್ಮನಿಗೇ ಗೊತ್ತು ಆದ್ದರಿಂದ ನಿಮ್ಮ ಲೇಖನವನ್ನು ನೀವೇ ಗುರುತಿಸುವಲ್ಲಿ ಸಫಲರಾಗಿದ್ದೀರಿ ಪಾರ್ಥಸಾರಥಿಗಳೆ. ನಾನು ಜ್ಞಾಪಿಸಿಕೊಂಡದ್ದು, 'ಮೌನದ ಧ್ವನಿ ಸಂಪದ' ಲೇಖನವನ್ನೇ. ನೀವು ಕೊಟ್ಟ ಕೊಂಡಿಯಿಂದಾಗಿ ಅದನ್ನು ಮತ್ತೊಮ್ಮೆ ಓದಿ ಖುಷಿಪಡುವಂತಾಯಿತು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 11/15/2013 - 19:57

In reply to by makara

ಶ್ರೀಧರರೆ ಮತ್ತು ಸಪ್ತಗಿರಿಗಳೆ, ನಿಮ್ಮಿಬ್ಬರ ನೆನಪಿಂದ ಕೆದಕಿ ಹೆಕ್ಕಿಟ್ಟ ಸರಕಿನ ಲಾಭ, ನನಗೂ ಆಯ್ತು - ಅವೆಲ್ಲ ಓದುತ್ತಿದ್ದರೆ ವೈಭವ, ವಿಜೃಂಭಣೆಯ ಇತಿಹಾಸದ ಪುಟಗಳನ್ನು ಓದಿದಂತೆ ಭಾಸವಾಗುತ್ತದೆ.  ಇದೆ ನೋಡಿ ನಿಜವಾದ ಅರ್ಥದಲ್ಲಿ ಹಳೆ ಬೇರು ಹೊಸ ಚಿಗುರುಗಳು ಕೊಂಡಿಯಾಗಿ ಬೆಸೆಯುವ ಪರಿ :-)