ಅಲೆಗಳು -ಲಕ್ಷ್ಮೀಕಾಂತ ಇಟ್ನಾಳ

ಅಲೆಗಳು -ಲಕ್ಷ್ಮೀಕಾಂತ ಇಟ್ನಾಳ

ಅಲೆಗಳು      -ಲಕ್ಷ್ಮೀಕಾಂತ ಇಟ್ನಾಳ

 

ದಂಡೆಗಿಂದು ದಂಡು ಸಹಿತ ಹೋಗಿದ್ದೆವು

ಬಿಳಿಹಲ್ಲು ತೆರೆದು, ತೆರೆಗಳೆಲ್ಲ ಒಂದರ ಹಿಂದೊಂದು

ಬಾಹುಗಳ ಅಗಲಿಸಿ ನಮ್ಮನ್ನು ನೋಡಿ,

ಗುರುತು ಹಿಡಿದು, ದಂಡೆತ್ತಿ ಬಂದು ನಕ್ಕು

ಹಿಂದೆ ಸರಿಯುತ್ತಿದ್ದವು,

ಕೆಲ ಹಿರಿ ತೆರೆಗಳು, ನನ್ನವಳನ್ನು ಕಂಡು,

ನನ್ನೆಡೆಗೆ ನೋಡಿ, ಅಂದು ಬಂದಿದ್ದಳಲ್ಲ

ಅವಳೇ ತಾನೇ, ಎನ್ನುವಂತೆ ನನ್ನತ್ತ ನೋಡುತ್ತ

ಬೆಳ್ನೊರೆಯ ನಗುವಲಿ, ನಮ್ಮ ಕಾಲಡಿಯವರೆಗೂ ಬಂದು

ಕಾಲುಗಳ ಚುಂಬಿಸಿ, ಹಿಂದೆ ಸರಿಯುತ್ತಿದ್ದವು

ಅಂದೊಮ್ಮೆ, ನನ್ನವಳೊಡನೆ ಹೋದಾಗ

ಅಂದೊಂದು ಮಾನ್ಸೂನ್ ಕಾಲ,

ತೆರೆಗಳಿಗೂ ಮದಭರಿತ, ಯೌವನದ ಕಾಲ,

ಅಬ್ಬರಿಸುತ್ತ, ಎತ್ತರೆತ್ತರದ, ಮತ್ತೇರಿದ ತೆರೆಗಳು

ನನ್ನವಳತ್ತ ನೋಡಿ, ಬಾಹುಗಳ ಚಾಚಿ, ನಕ್ಕು ಹೋಗುತ್ತಿದ್ದವು

ಇವಳು ಅಂಜುತ್ತ, ನನ್ನನ್ನು, ಗಟ್ಟಿಯಾಗಿ ಹಿಡಿದುಬಿಟ್ಟಿದ್ದಳು

ಇಂದು, ನಮ್ಮನ್ನು ನೋಡಲು, ತೆರೆಗಳ ದಂಡೇ ಬಂದು

ಮಗಳೊಂದಿಗೆ ಪ್ರೀತಿಯಿಂದ, ಆಟವಾಡಲು ನೋಡುತ್ತಿದ್ದವು

ಅವಳು ಬರೆದ ಹೆಸರನ್ನು, ತೆವಳಿ ಬಂದು ಅಳಿಸುತ್ತಿದ್ದವು,

ಮಗಳೊಮ್ಮೆ ಸಿಟ್ಟಿನಲ್ಲಿ, ಮರಳುವ ತೆರೆಗಳತ್ತ, ಕೋಲು ಎಸೆದರೂ,

ಬೆಳ್ನೊರೆಯ ನಗುವಲ್ಲಿ, ಭುಜಗಳಿಂದ ದೂಡಿ, ದಂಡೆಗೆ ತಂದು ಕೊಡುತ್ತಿದ್ದವು

ಆದರೂ, ಮಗಳ ಕಾಲು ಬುಡದ ಮಣ್ಣು ಕೆರೆದು, ಕೀಟಲಿಸಿದವು

ಮರಳುವಾಗ ಕೆಲ ತೆರೆಗಳು, ಗೋಣೆತ್ತರಿಸಿ, ಚಿಮ್ಮಿ ಬಂದು

ಕಾಲುಗಳಿಗೆ ತೆಕ್ಕೆಬಿದ್ದು, ನಮ್ಮನ್ನು ಆಲಿಂಗಿಸಿದವು

ಅದರ ಹನಿಯೊಂದು, ನಾಲಿಗೆಗೆ ಸಿಡಿದಾಗ, ಅದು ಉಪ್ಪಾಗಿದ್ದು,

ಖುಷಿಯ ಕಣ್ಣುಗಳಿಂದ, ಆನಂದಭಾಷ್ಪ ಚಿಮ್ಮಿದ್ದು ಗೊತ್ತಾಯಿತು

ವಿದಾಯ ಹೇಳಿ ಬರಬೇಕಾದರೆ, ತೆರೆಗಳೆಲ್ಲ ದಂಡೆಗೆ ಬಂದು,

ಭೋರೆಂದು ಹಟಮಾಡುತ್ತಿರುವುದು, ದೂರದವರೆಗೂ ಕೇಳುತ್ತಿತ್ತು

Rating
No votes yet

Comments

Submitted by H A Patil Thu, 12/19/2013 - 19:32

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಅಲೆಗಳು' ಸಾಗರದ ಸಮಗ್ರ ದರ್ಶನ ಮಾಡಿಸುವ ಒಂದು ಸುಂದರ ಕವನ. ಕಡಲು ದರ್ಶಕರನ್ನು ನೋಡುವುದು ನಗುವುದು ತೋಳ್ದೆರೆದು ಸ್ವಾಗತಿಸುವುದು ಒಂದು ಮಧುರ ಪರಿಕಲ್ಪನೆ, ಕವನದ ಮೂಲಕ ಕಡಲ ದರ್ಶನ ಮಾಡಿಸಿದ್ದೀರಿ ಧನ್ಯವಾದಗಳು.

Submitted by nageshamysore Fri, 12/20/2013 - 04:40

ಇಟ್ನಾಳ್ ಜಿ, ಕಾಲಕಾಲಕು ಅದೆ ದಂಡೆ, ಅದೆ ಸಮುದ್ರ, ಅದೆ ಧೀಮಂತ ನಡುವಳಿಕೆ. ಆದರೆ ಪ್ರತಿ ಪೀಳಿಗೆಗಳು ಅದನ್ನು ನೋಡುವ ರೀತಿ ಅರ್ಥೈಸುವ ರೀತಿ ಅನುಭವಿಸುವ ರೀತಿ ಬೇರೆ, ಬೇರೆ. ಅಲೆಗಳ ಗಾಂಭಿರ್ಯ, ಧೀಮಂತಿಕೆ, ಚೆಲ್ಲಾಟದ ತುಂಟತನಕ್ಕೆ ಸಂವಾದಿಯಾಗಿ ಪೀಳಿಗೆಯ ಎಲ್ಲಾ ಸ್ತರಗಳೂ ಒಟ್ಟಾಗಿ ಎದುರಾದರೂ, ಅವರವರ ಭಾವಕ್ಕೆ ತಕ್ಕ ಹಾಗೆ ಸ್ಪಂದಿಸುವ ಅಲೆಗಳ ಚಿತ್ರಣ ಚೆನ್ನಾಗಿ ಬಂದಿದೆ. ಕಡಲ ದಂಡೆಯಲೆ ಕೂತಂತ ಅನಿಸಿಕೆ ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by sri.ja.huddar Fri, 12/20/2013 - 16:02

ಅಂದೊಂದು ಮಾನ್ಸೂನ್ ಕಾಲ,................. ಕವಿತೆಗೆ ಹೊಸ ಭಾಷೆ ನಿಡುತ್ತಿದ್ದೀರಿ ವಂದನೆಗಳು, ಇಟ್ನಾಳರವರೆ, ಉಳಿದಂತೆ ಕಡಲ ದಶಱನ ಅಂದವಾಗಿದೆ

Submitted by lpitnal Fri, 12/20/2013 - 23:13

In reply to by sri.ja.huddar

ಮುಂಗಾರು, ಮಳೆಗಾಲ ಇವೆಲ್ಲ ಸವಕಲು ಆಗಿವೆ ಎಂದು ಮಾನ್ಸೂನ್ ಬಳಸಿದೆ, ಮತ್ತೇನಿಲ್ಲ. ಹಾಗೆಯೇ ಇದು ಗುಲ್ಜಾರ್ ಶೈಲಿ ಎಂಬುದನ್ನು ನಿಮಗೆ ಹೇಳಲೇಬೇಕು. ಅಂದಹಾಗೆ ಸಂಪದಕ್ಕೆ ವೆಲ್ ಕಮ್ ಹುದ್ದಾರರಿಗೆ. ಧನ್ಯವಾದಗಳು