ವೈಪರೀತ್ಯ

ವೈಪರೀತ್ಯ

ಒಂದೊಮ್ಮೆ ಮನದಲ್ಲಿ.......

 

ಕೃಷ್ಣ ಪಕ್ಷದ ಕೊನೆಯಲಿ

ಕಗ್ಗತ್ತಲ ಕಂದರದೊಳು

ಕಾರ್ಮೋಡವು ನುಸುಳಿ

ಕಪ್ಪಗಿನ ದಪ್ಪನೆಯ ಹನಿಗಳನು

ಧಾರಾಕಾರವಾಗಿ  ಸುರಿಸುವಂತೆ

ಮನದ ಕಂದರದಲಿ

ಗಾಢಾಂಧಕಾರದಲಿ

ನಿರಾಶೆಯ ಕರಿಮುಗಿಲು

ನಿರುತ್ಸಾಹದ ಬೆನ್ನೇರಿ

ಕಳ್ಳತನದಲಿ ಇಣುಕಿ,

ವ್ಯಾಕುಲದ ವೃಷ್ಟಿಯನು

ಸುರಿಯುತಿದೆ, ಎರೆಯುತಿದೆ.

            

ಅದೇ ಮನದಲ್ಲಿ, ಮತ್ತೊಮ್ಮೆ.....

 

         ಮನದಲೆಲ್ಲೋ ಮೊಳೆತ

         ಭಾವ ಬೀಜವು ತಾನು

        ಜೀವನೋತ್ಸಾಹದ ವೃಕ್ಷದಡಿಯಲಿ

        ಹಸಿರು ಚಿಗುರಾಗಿ ಬೆಳೆದು

        ಮಹಾ ವೃಕ್ಷವಾಗುವ,

        ನವ ಫಲವ ಜನಿಸುವ

        ಹೊಸ ಕನಸು ಕಾಣುವ ತೆರದಿ

        ಮನದಾಳದ ಸದಾಶಯ,

        ಹೊಂಬಿಸಿಲಿನ ಹೊನ್ನ ಮಳೆಯಲಿ

        ಕಾಮನ ಬಿಲ್ಲಾಗುವ, ಚಿರಂತನ ನಲಿವಿಗೆ

        ತುಂತುರು ಹನಿಸುತಿದೆ

        ಕಂಪನು ಬೀರುತಿದೆ

Comments

Submitted by nageshamysore Thu, 03/20/2014 - 20:42

ನಮಸ್ಕಾರ ವಸಂತ್,

ಮನಸಿನ ಜಂಜಾಟ, ದ್ವಂದ್ವದ ದ್ವೈತವನ್ನು ಸೊಗಸಾಗಿ ಬಿಂಬಿಸುವ ಕವನ ವೈಪರೀತ್ಯ. ವಿಪರೀತಗಳ ನಡುವೆಯೂ ಅಸ್ಥಿತ್ವವನು ಬಿಡದೆ ಎರಡು ತುದಿಗಳಲ್ಲೂ ತೂಗಾಡುವ ಶಕ್ತಿ ಬಹುಶಃ ಮನಸಿಗೆ ಮಾತ್ರ ಸಾಧ್ಯವೆಂದು ಕಾಣುತ್ತದೆ :-)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Submitted by Vasant Kulkarni Fri, 03/21/2014 - 10:47

In reply to by nageshamysore

ನಾಗೇಶ್ ಅವರೆ, ನಿಮ್ಮ ಸಕಾರಾತ್ಮಕ ವಿಮರ್ಶೆ ಮತ್ತು ಅನಿಸಿಕೆಗಳಿಗೆ ಧನ್ಯವಾದಗಳು. ಕೆಲವು ತಿಂಗಳುಗಳ sabaatical ನಂತರ ಮತ್ತೆ ಬರಹ ರಂಗಕ್ಕೆ ಮರಳಿದ್ದೇನೆ. ನಿಮ್ಮ ಅನೇಕ ಬರಹಗಳನ್ನು ಓದಿದ್ದರೂ ಅನಿಸಿಕೆಗಳನ್ನು ಬರೆಯುವದಾಗಿರಲಿಲ್ಲ. ಇನ್ನು ಮುಂದೆ ಹೆಚ್ಚು ಕ್ರಿಯಾಶೀಲನಾಗಿರಲು ಆಗಿರಲು ಪ್ರಯತ್ನಿಸುತ್ತೇನೆ.

Submitted by kavinagaraj Fri, 03/21/2014 - 08:15

ಕಾರ್ಮೋಡದ ನಡುವಣ ಮಿಂಚು ಕೋರೈಸುತ್ತದೆ! ಶುಭವಾಗಲಿ.

Submitted by Vasant Kulkarni Fri, 03/21/2014 - 10:51

In reply to by kavinagaraj

ಧನ್ಯವಾದಗಳು ಕವಿ ನಾಗರಾಜ ಅವರೆ. ನಿಮ್ಮ ಪ್ರೋತ್ಸಾಹ ನಮ್ಮನ್ನು ಇನ್ನೂ ಚೆನ್ನಾಗಿ ಬರೆಯಲು ಪ್ರೇರೇಪಿಸುತ್ತದೆ.

Submitted by Vasant Kulkarni Fri, 03/21/2014 - 10:57

ನನ್ನ ಮತ್ತೊಂದು ಕವನ "ನಸುಗತ್ತಲು" ಅನ್ನು ಕವನ ವಿಭಾಗದಲ್ಲಿ ಸೇರಿಸಿದ್ದೇನೆ. ಸಾಧ್ಯವಾದರೆ ಓದಿ ನಿಮ್ಮ ಅಭಿಪ್ರಾಯ ತಿಳಿಸಬೇಕು. ಅದು ಯಾಕೆ ಕವನ ವಿಭಾಗದ ಕವನಗಳು ಸಂಪದದ ಮುಖಪುಟಗಳಲ್ಲಿ ಕಾಣಸಿಗುವದಿಲ್ಲವೋ ಗೊತ್ತಿಲ್ಲ. ಆದ್ದರಿಂದ ಅವು ಅಜ್ಞಾತವಾಗಿಯೇ ಉಳಿದುಬಿಡುವ ಸಂಭವವಿದೆ.