ನಿನಗೆ ಬೇರೆ ಹೆಸರು ಬೇಕೇ ??

Submitted by naveengkn on Mon, 04/28/2014 - 16:55

ನಗು ಮುಖದ ಮಗು ಆಕೆ 
ಹೆತ್ತವಳ ಮನೆಯ ಜಗುಲಿಯಲ್ಲಿ
ಹೆತ್ತದ್ದು ಹೆಣ್ಣೆಂದು ವ್ಯಂಗ್ಯವಿಟ್ಟಾಗಲೂ 

ನಗು ಮುಖದ  ವದು ಆಕೆ 
ಗುರಿ ಇರದ ಮದುವೆಯಲಿ
ವರನ ಕಡೆಯವರು ದಕ್ಷಿಣೆ ಭಕ್ಷಿಸುವಾಗಲೂ

ನಗು ಮುಖದ ಮಧು ಆಕೆ 
ಮಧುಚಂದ್ರ ಮುಗಿದೊರ್ಷದಲಿ
ಪತಿಯು  "ಮದ್ಯ"ದ ಮಜ್ಜನಗಯ್ಯುವಾಗಲೂ

ನಗು ಮುಖದ ತಾಯಿ ಆಕೆ 
ಹೆತ್ತು ಸಲಹಿದ ಜೀವಗಳಲಿ
ಯಾವೊಂದು ತನ್ನ ಅರ್ತೈಸಿಕೊಳ್ಳದಿದ್ದಾಗಲೂ

ನೋವುಂಡು ನಲಿವಿಕ್ಕಿದಾಕೆ 
ನೋವುಂಡು ಒಲವಿಕ್ಕಿದಾಕೆ
ನೋವುಂಡು ಬಲವಿಕ್ಕಿದಾಕೆ

ಕಲ್ಪಿಸಲೂ ಆಗದ ಕಲ್ಪವೃಕ್ಷ ಆಕೆ,

ನಿನ್ನನು ಪ್ರೇಮದ ಹೆಣ್ಣೆಂದರೆ ಸಾಕೆ ?
ನಿನಗೆ ಬೇರೆ ಹೆಸರು ಬೇಕೇ ??
 
-- ಜೀ ಕೇ ನ