ತಾಯಿಯ ಮಡಿಲಲ್ಲಿ..

Submitted by naveengkn on Fri, 06/27/2014 - 07:01

(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕವಿತೆ )

ಕತ್ತಲೆಯಲಿ ಕಣ್ಮುಚ್ಚಿ
ಆತ್ಮ ಕಂಡ ದೇಶಕ್ಕೆ
ಯಾಕೆ ಬೇಕು ಬೆಳಕು
ಪಾಶ್ಚಾತ್ಯರ ತಳುಕು,

ಮೈ ಮುಚ್ಚಿ ಮನ ಬಿಚ್ಚಿ
ನನ್ನ ಸಾಕಿದವಳು
ಕತ್ತಲೆಯ ತಂಪಿನಲಿ
ಎದೆಹಾಲ ಕುಡಿಸಿದಳು
ಈಗ ಮೈ ಬಿಚ್ಚಿರುವಳು
ಮನವ ರೊಚ್ಚೆ ಎಬ್ಬಿಸಿ
ಬೆಳಕಿನಲೇ ಬೆತ್ತಲಾಗಿಹಳು

ದೊಚುತ್ತಿರುವರು ಆಕೆಯ ಮಾನವ,
ನಮ್ಮೆದೆಯ ಸ್ವಾಭಿಮಾನವ
ನಾವೆಲ್ಲ ನಗರದಲೇ ತಿಣುಕಾಡೊ
ನೆರಳಿಲ್ಲದ ನರ ಮಾನವರು

ಅನ್ನ ಬೆಳೆವವನು ತಿರುಕ
ಅನ್ಯರ ಚಾಕರಿ ಮಾಡುವವನು
ಧನಿಕ ಅತೀ ಧನಿಕ
ಸತ್ತಿದೆ ನನ್ನಂತವರ ಗಮಕ
ಬೆಳಕು ಕಾಣೊ ಆಸೆಯಲಿ
ಮಾರಿದೆವು ನಮ್ಮೆದೇ ಸ್ವಮುಖ
ಮುಖವಾಡ ಇನ್ನೀಗ
ಹಗಲು ಬೆಳಕಿನಲೇ ನಾಟಕ
ಇನ್ನೊಬ್ಬನ ಮನೆಯ
ನಾಯಾಗಿ ನಮ್ಮ ಕಾಯಕ

ಸೆಳೆದಿಹರು ನಮ್ಮನು
ಯಂತ್ರ-ಕುತಂತ್ರ ರಾಶಿಯೊಳಗೆ
ಮರೆತಿಹವು ನಾವು ನಮ್ಮನೊಡೆದ
ಪರ-ಮಂತ್ರವ,
ಇನ್ನಾವ ಹುನ್ನಾರ ಕಾದಿದೆಯೊ
ನನ್ನ ಜಗದ ಮಕ್ಕಳಿಗೆ
ಕರುಣಾಳು ಬೆಳಕೇ ಬಿಟ್ಟು ತೊಲಗು
ರಕ್ತ ಸುರಿಸಿ ಕಟ್ಟಿದ ನನ್ನ ದೇಶವ,
ಬದುಕಲು ಬಿಡು ಕತ್ತಲೆಯ
ತಂಪಿನೊಳಗೆ
ನನ್ನ ಭಾರತಾಂಬೆಯ
ಮಡಿಲಿನೊಳಗೆ.