ಪುಸ್ತಕನಿಧಿ- 'ಮನು' ಅವರ 'ಮಹಾಸಂಪರ್ಕ' ಕಾದಂಬರಿ- ದೇವತೆಗಳು.ಋಷಿಗಳು ಯಾರು?

ಪುಸ್ತಕನಿಧಿ- 'ಮನು' ಅವರ 'ಮಹಾಸಂಪರ್ಕ' ಕಾದಂಬರಿ- ದೇವತೆಗಳು.ಋಷಿಗಳು ಯಾರು?

ಮಹಾಭಾರತವು ಸುಮಾರು ೫೦೦೦ ಸಾವಿರ ವರ್ಷಗಳ ಹಿಂದೆ ನಡೆದಿದ್ದು , ವ್ಯಾಸಮಹರ್ಷಿಯು ಅದರಲ್ಲಿ ಪ್ರಾರಂಭಕ್ಕೆ ವಿಶ್ವಸೃಷ್ಟಿಯ ಸಂಗತಿಗಳನ್ನು ತಿಳಿಸಿದ್ದಾನೆ. ' ಜ್ಯೋತಿರ್ವಿಜ್ಞಾನ' ದಲ್ಲಿ ಭಾರತೀಯರ ತಿಳುವಳಿಕೆ ಅಗಾಧವಾಗಿತ್ತು, ಸೂರ್ಯೋದಯ್ಯ , ಸೂರ್ಯಾಸ್ತ , ಗ್ರಹಣಗಳ ಸಮಯ , ನಕ್ಷತ್ರಗಳ ಚಲನೆಯನ್ನು ಕುರಿತು ಸಾವಿರಾರು ವರ್ಷಗಳಿಂದ ನಮ್ಮ ಪಂಚಾಂಗಕರ್ತರು ಸರಿಯಾಗಿ ಲೆಕ್ಕ ಹಾಕುತ್ತಿದ್ದಾರೆ, ಗಣಿತದಲ್ಲಿ ಪಶ್ಚಿಮದ ದೇಶಗಳವರು ೧೬-೧೭ನೇ ಶತಮಾನದಲ್ಲಿ ತಲುಪಿದ ಮಟ್ಟವನ್ನು ಭಾರತೀಯರು ಸಾವಿರ ವರ್ಷಗಳ ಹಿಂದಿನ ಗ್ರಂಥಗಳು ತೋರುತ್ತವೆ. ರಾಮಾಯಣ ಮತ್ತು ಮಹಾಭಾರತಗಳಲ್ಲಿ ಅನೇಕ ಅಸ್ತ್ರಗಳ ಮತ್ತು ವಿಮಾನಗಳ ಉಲ್ಲೇಖ ಇದೆ. ಅದು ಕಲ್ಪನೆ ಮಾತ್ರ ಎಂದು ಹೇಳಬಹುದಾದರೂ ಕಲ್ಪನೆಗೆ ಏನಾದರೂ ವಾಸ್ತವದ ಆಧಾರ ಇರಲೇಬೇಕಲ್ಲವೇ? ವೈದ್ಯಕೀಯ ಜ್ಞಾನವೂ ಸಾಕಷ್ಟು ಮುಂದುವರೆದ ಮಟ್ಟದಲ್ಲಿತ್ತು. ಅಂಥ ಜ್ಞಾನ ಜನರ ಬಳಿ ಇದ್ದದ್ದೇ ಆದರೆ ನಂತರ ಏಕೆ ಮೂಲೆಗುಂಪಾಯಿತು?

ಇಂಗ್ಲೀಷಿನಲ್ಲಿ ಇಂಥ ಸಮಸ್ಯೆಗಳನ್ನು ಚರ್ಚಿಸುವ Chariots of Gods ಮತ್ತು Return to the Stars ನಂತಹ ಪುಸ್ತಕಗಳು ಬಂದಿವೆ, ಅವುಗಳು ಹೇಳುವ ಪ್ರಕಾರ ಬೇರೆ ಗ್ರಹಗಳ ನಿವಾಸಿಗಳು ನಮಗಿಂತ ತುಂಬ ಮುಂದುವರೆದವರಾಗಿದ್ದು ಭೂಮಿಗೆ ಆಗಾಗ ಭೇಟಿ ಕೊಟ್ಟರು , ಅವರುಗಳನ್ನೇ ಜಗತ್ತಿನಾದ್ಯಂತ ಶಕ್ತಿಶಾಲಿ ದೇವರುಗಳು ಎಂದು ಭಯ ಭಕ್ತಿಯಿಂದ ಜನರು ಗೌರವಿಸಿದರು.

ಈ ತರ್ಕವನ್ನೇ ಆಧರಿಸಿ ಮಹಾಭಾರತ ಮತ್ತು ಋಗ್ವೇದಗಳ ಅಧ್ಯಯನ ಮಾಡಿ ಭಾರತ ಭೂಖಂಡದ ಹಿನ್ನೆಲೆಯಲ್ಲಿ ಮಹಾಭಾರತದ ಕತೆಯು ಇಂಥ ಒಂದು ಮಹಾಸಂಪರ್ಕದ ಘಟನೆ ಎಂದು ತೋರಿಸುವ ಮಹಾಗ್ರಂಥವನ್ನು 'ಮನು' ಎಂಬ ಕಾವ್ಯನಾಮದಿಂದ ಪರಿಚಿತರಾಗಿರುವ ಇತ್ತೀಚೆಗೆ ನಮ್ಮನ್ನು ಅಗಲಿದ ಶ್ರೀ ಪಿ.ಎನ್. ರಂಗನ್ ಅವರು ಬರೆದಿದ್ದಾರೆ. ಇದು ೨೦೦೨ ರಲ್ಲಿ ಎರಡು ಭಾರೀಗಾತ್ರದ ಸಂಪುಟಗಳಲ್ಲಿ ಪ್ರಕಟವಾಗಿತ್ತು , ಬೆಲೆಯೂ ಸಾಮಾನ್ಯನ ಜೇಬಿಗೆ ಭಾರಿಯೇ ಆಗಿತ್ತು , ಸುಮಾರು ೭೦೦ ಇದ್ದ ಹಾಗೆ ನೆನಪು . ನಂತರ ಇದು ಇಂಗ್ಲೀಷಿನಲ್ಲೂ ಪ್ರಕಟವಾಯಿತು. ನಂತರ ೨೦೦೯ ರಲ್ಲಿ ಕಡಿಮೆ ಬೆಲೆಯ ಆವೃತ್ತಿಯಾಗಿ ಬಂದಿದೆ. ಈ ಪರಿಷ್ಕೃತ ಆವೃತ್ತಿಯ ಗಾತ್ರ ೭೦೦ ಪುಟಗಳು , ಬೆಲೆ ೩೫೦.

ಇದು ಎರಡು ಭಾಗ ಹೊಂದಿದೆ. ಮೊದಲ ಭಾಗ 'ತರ್ಕ' , ಆಶ್ಚರ್ಯಕರ ವಾಸ್ತವ ಸಂಗತಿಗಳು , ಮಹಾಭಾರತ , ಋಗ್ವೇದಗಳ ಅಸಕ್ತಿ ಕೆರಳಿಸುವ ಸಂಗತಿಗಳ ವಿಶ್ಲೇಷಣೆ ಇಲ್ಲಿದೆ. ಎರಡನೇ ಭಾಗದಲ್ಲಿ ಈ ಸಂಗತಿಗಳ ಬಗ್ಗೆ ಊಹೆ ಮಾಡಿಕೊಂಡು ಇದೆಲ್ಲ ಹೀಗೆ ಅಗಿರಬಹುದು , ಇದು ಸಾಧ್ಯ , ಎಂದು ಮಹಾಭಾರತವನ್ನು ಆ ಬೆಳಕಿನಲ್ಲಿ ಮತ್ತೆ ಹೇಳಲಾಗಿದೆ. ದೇವತೆಗಳು, ಋಷಿಗಳು ಬಾಹ್ಯಾಕಾಶದಿಂದ ಬಂದು ಭಾರತದಲ್ಲಿ ಇಳಿದವರು , ತಮ್ಮ ಇಲ್ಲಿನ ವಸತಿಯ ಕಾಲದಲ್ಲಿ , ಭೂಮಿಯ ಜನಕ್ಕೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಬಯಸಿದರು , ಜೀವ ತಂತ್ರಜ್ಞಾನ ಕ್ಕೆ ಸಂಬಂಧಿಸಿದ ಹಾಗೆ ಬಲಿಷ್ಠವಾದ ಆದರ್ಶಪ್ರಾಯವಾದ ಒಂದು ಹೊಸ ಜನಾಂಗವನ್ನು ಹುಟ್ಟು ಹಾಕಲು ಅನೇಕ ಪ್ರಯೋಗಗಳನ್ನು ಕೈಗೊಂಡ ಇವರೇ ದೇವರುಗಳು , ಋಷಿಗಳು. ಸಂಸ್ಕೃತವೇ ಇವರ ಭಾಷೆ , ನಾವು ದೇವಭಾಷೆ ಎಂದು ಕರೆಯುವ ಇದನ್ನು ಇಲ್ಲಿಯ ಜನಕ್ಕೆ ಕಲಿಸಲು ಯತ್ನಿಸಿದರು , ವೇದಗಳ ಮೂಲಕ ಜ್ಞಾನವನ್ನು ತಲುಪಿಸಲು ಯತ್ನಿಸಿದರು. ಇಲ್ಲಿ ಕೃಷ್ಣನು 'ದೇವಾಂಶ' ಸಂಭೂತನು, , ದೇವತೆಗಳು , ಋಷಿಗಳು , ಕೌರವರು , ಪಾಂಡವರ ಕತೆಯನ್ನು ಹೊಸ ರೀತಿಯಲ್ಲಿ ನಿರೂಪಿಸಲಾಗಿದೆ .

ಮಹಾಭಾರತ , ರಾಮಾಯಣಗಳಲ್ಲಿ ಆಸಕ್ತಿ ಇದ್ದವರು , ಕುತೂಹಲಕಾರಿ ರಹಸ್ಯಮಯ ಥ್ರಿಲ್ಲರ್ ಗಳಲ್ಲಿ ರುಚಿ ಹೊಂದಿದವರು ಓದಲೇ ಬೇಕಾದ ಪುಸ್ತಕ ಇದು. ಮಹಾಭಾರತವನ್ನು ಈ ತನಕ ಓದದವರು ಕೂಡ ಈ ಪುಸ್ತಕವನ್ನು ಓದುವುದು ಒಳ್ಳೆಯದು.

Rating
No votes yet

Comments

Submitted by nageshamysore Sun, 06/29/2014 - 18:03

ನಾನು ಓದಿರುವ ಮನುರವರ ಅನೇಕ ಪುಸ್ತಕಗಳಲ್ಲಿ ಇದೊಂದು 'ಅದ್ಭುತ' ಕೃತಿ. 'ತರ್ಕ' ದಲ್ಲಿ ಲೇಖಕರೆ ವಿವರಿಸಿರುವ ಹಾಗೆ ಕೆಲವು ಆಧಾರಗಳನ್ನು ಸ್ವಯಂ ತಾವೆ ಕಣ್ಣಾರೆ ಕಂಡು ತಾಳೆ ನೋಡಿ ಬಂದ ವಿವರಗಳು (ಉದಾಹರಣೆಗೆ ವ್ಯಾಸರ ಗುಹೆಗೆ ಭೇಟಿಯಿತ್ತು ಬಂದದ್ದು), ಮತ್ತು ಹಲವಾರು ಆಧಾರ ಗ್ರಂಥ, ಮೂಲಗಳಿಂದ ವಿಷಯ ಸೋಸಿ, ಸಂಗ್ರಹಿಸಿ ವೈಜ್ಞ್ನಾನಿಕ ಹಿನ್ನಲೆಯ ಮೂಸೆಯಲ್ಲಿ ಒದಗಿಸಿರುವ ರೀತಿ - ಇದೆಲ್ಲವೂ ಸೇರಿ ಯಾವ ಥ್ರಿಲ್ಲರಿಗೂ ಕಡಿಮೆಯಿರದ ಕೃತಿಯೆನಿಸಿಬಿಡುತ್ತದೆ. ಈಗ ಕಡಿಮೆ ಮೇಲೆಯ ಆವೃತ್ತಿಯಲ್ಲಿ ಸಿಗುವುದೆಂದರೆ ಇನ್ನು ಹೆಚ್ಚು ಜನರು ಓದುವ ಅವಕಾಶ. ನಿಜ ಹೇಳುವುದಾದರೆ ಆ ಪುಸ್ತಕದ ಮೌಲ್ಯಕ್ಕೆ ರೂ 350 ತೀರಾ ಕಡಿಮೆಯೆ ಎನ್ನಬೇಕು!

Submitted by makara Thu, 07/10/2014 - 20:33

ಉತ್ತಮ ಕೃತಿಯೊಂದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು, ಮಿಶ್ರಿಕೋಟಿಗಳೆ. ಧೃತರಾಷ್ಟ್ರ ಭೌತಿಕವಾಗಿ ಕುರುಡನಾಗಿದ್ದಕ್ಕಿಂತ ಮಗನ ಮೋಹದಿಂದ ಕುರುಡಾಗಿದ್ದ ಎಂದು ಸ್ವಾಮಿ ಸೋಮನಾಥಾನಂದರು ಮತ್ತು ರಾಜಾಜಿಯವರೂ ಸಹ ಬರೆದಂತೆ ನೆನಪು. ಹೀಗೆ ಮಾನವನ ವಿವಿಧ ಆಯಾಮಗಳನ್ನು ಅಥವಾ ಗುಣಗಳನ್ನು ಕಥಾ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುವ ಗ್ರಂಥವೇ ಮಹಾಭಾರತ. ಅದನ್ನು ಚಾರಿತ್ರಿಕವಾಗಿಯೂ ನಿರೂಪಿಸಲು ಸಾಧ್ಯವಾದರೆ ಇನ್ನೂ ಒಳಿತು. ಹಲವಾರು ಸಿನಿಮಾಗಳನ್ನು ನೋಡಿದಾಗ ಅವುಗಳು ನಿಜವಾಗಿಯೂ ನಡೆದಿವೆಯೇ ಎಂದು ಪ್ರಶ್ನಿಸುವ ಬದಲು ಅದರ ಸಾರವನ್ನು ಆನಂದಿಸುತ್ತೇವೆ, ಒಂದು ವೇಳೆ ಅದು ನಿಜಕ್ಕೆ ಹೆಚ್ಚು ಸಮೀಪವಾಗಿದೆ ಎಂದಾಗ ಅದಕ್ಕೇ ಇನ್ನೂ ಹೆಚ್ಚಿನ ಪ್ರಶಂಸೆಗಳು ದೊರೆಯುತ್ತವೆ. ಅದೇ ಸಾಲಿನಲ್ಲಿ ಮನುರವರ ಪುಸ್ತಕವನ್ನು ಓದಬಹುದೆಂದುಕೊಳ್ಳುತ್ತೇನೆ.

ಈ ಪುಸ್ತಕವು ಎಲ್ಲಿ ಲಭ್ಯ ಎಂಬ ಮಾಹಿತಿಯನ್ನು ಗೊತ್ತಿದ್ದವರು ತಿಳಿಸಿದರೆ ಉಪಯುಕ್ತ.

Submitted by ಶ್ರೀನಿವಾಸ ವೀ. ಬ೦ಗೋಡಿ Fri, 07/11/2014 - 15:59

In reply to by hariharapurasridhar

ಸಪ್ನಾದಲ್ಲಿ ಸಿಗುತ್ತದೆ, ಶ್ರೀಧರವರೆ. onlineನಲ್ಲೂ order ಮಾಡಬಹುದು.
https://sapnaonline.com/mahasamparka-manu-bharathi-prakashana-312022

Submitted by manjunath gunaga Tue, 07/29/2014 - 00:06

In reply to by ಶ್ರೀನಿವಾಸ ವೀ. ಬ೦ಗೋಡಿ

I stay in abu dhabi is there any delivery service to abu dhabi or Dubai? if there please let me know..