ಪುಸ್ತಕನಿಧಿ-ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು'
ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ . ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕದ ಬಗೆ ಅಲ್ಲಲ್ಲಿ ಓದಿದ್ದೆ. ಪುಸ್ತಕದ ಅಂಗಡಿಯಲ್ಲಿ ನೋಡಿದಾಗ, ಓದೋಣವೆಂದು ಬಹುದಿನಗಳ ಹಿಂದೆ ಕೊಂಡಿದ್ದೆ. ಈಗ ಓದುತ್ತಿದ್ದೇನೆ . ಪುಸ್ತಕವು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ, ಅಂದಿನ ದಿನಮಾನಗಳ ಪರಿಚಯ ನಮಗಾಗುತ್ತದೆ. ಅದರಲ್ಲಿನ ಒಂದು ಪ್ರಸಂಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ಈ ಪುಸ್ತಕವು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ ಈ ಕೊಂಡಿಯಲ್ಲೂ ಇದೆ.
"ಒಬ್ಬ ಅಮಲ್ದಾರರು ಗ್ರಾಮವೊಂದರಲ್ಲಿ ಮೊಕ್ಕಾಂ ಮಾಡಿದಾಗ ಅವರಲ್ಲಿ ಕೆಲವರು ಬಹಳ ಪರಿತಾಪದಿಂದ ತಮಗೆಲ್ಲರಿಗೆ ವಕ್ಕರಿಸಿದ್ದ ಒಂದು ಅಸಹ್ಯವಾದ ಯಾತನೆಯನ್ನು ಹೇಳಿಕೊಂಡರು. ಹೊಳೆಯ ಆಚೆಯ ಕಡೆಯಿಂದ ಯಾವನೋ ಒಬ್ಬ ದುಷ್ಟ ಅನುಕೂಲ ಸಮಯ ಕಾಯ್ದು ಹೊಳೆ ದಾಟಿ ಬಂದು ಹೊಲಗದ್ದೆಗಳಲ್ಲಿ ಏಕಾಕಿಯಾಗಿ ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳನ್ನು ಕೆಣಕುತ್ತಿದ್ದನಂತೆ. ಇದನ್ನು ತಿಳಿದು ಅಮಲ್ದಾರರಿಗೆ ಬಹಳ ಸಂಕಟವಾಯಿತು. ಅವರು ಗ್ರಾಮಸ್ಥರಿಗೆ ಸಲಹೆಕೊಟ್ಟರು; ಹೊಂಚಿಕಾದು ಆ ದುಷ್ಟನನ್ನು ಹಿಡಿದುಕೊಂದು ಬನ್ನಿ, ಅವನಿಗೆ ಸರಿಯಾದ ಶಿಕ್ಷೆ ಮಾಡೋಣ ಎಂದು . ಆಯಿತು , ಅಮಲ್ದಾರರಲ್ಲಿ ಈ ವಿಚಾರದ ದೂರೇ ಮತ್ತೆ ಬರಲಿಲ್ಲ. ಸುಮಾರು ಒಂದು ವರುಷದ ನಂತರ ಅಮಲ್ದಾರರು ಅದೇ ಗ್ರಾಮದಲ್ಲಿ ಮೊಕ್ಕಾಂ ಮಾಡಿದಾಗ ಹಿಂದೆ ಕೇಳಿದ್ದನ್ನು ಜ್ಞಾಪಿಸಿಕೊಂಡು , ಪುನಃ ಆ ಪುಂಡ ಮನುಷ್ಯ ಮತ್ತೆ ಬರಲಿಲ್ಲವೇ ಎಂದು ವಿಚಾರಿಸಲಾಗಿ ಆ ಗ್ರಾಮಗಳ ಮುಖಂಡರು ಅಚ್ಚರಿಗೊಂಡವರಂತೆ
' ಓ! ಅದೋ ? ಹುಡುಗರ ಪೊಳ್ಳು ಮಾತು ಬುದ್ಧಿ , ಯಾರೋ ಮೀನು ಹಿಡಿಯುತ್ತಿದ್ದವನನ್ನು ನೋಡಿ ಚಿಕ್ಕ ಹುಡುಗಿ ಹೆದರಿಕೊಂಡು ಓಡಿಬಂದಿತಂತೆ; ಅದು ಬಾಯಿಂದ ಬಾಯಿಗೆ ಬೀಳುತ್ತಾ ಬೆಳೆದು ದೊಡ್ಡದೊಂದು ಪಂಚಾಂಗ ಆಗಿಹೋಯ್ತು, ಆ ಸುದ್ದೀನೇ ಕಾಣೆವು' - ಅಂದರು.
ಆಮೇಲೆ ವಿಚಾರಿಸಲಾಗಿ ಗುಟ್ಟಾಗಿ ವರ್ತಮಾನ ಬಂತು. ಆ ಪುಂಡನಿಗೆ ಹೊಂಚುಹಾಕಿ ಅವನನ್ನು ಅಕೃತ್ಯದ ಕೃತ್ಯದಲ್ಲೇ ಹಿಡಿದು , ಗ್ರಾಮ ಕೋರ್ಟಿನಲ್ಲೇ ರಹಸ್ಯವಾಗಿ ವಿಚಾರಣೆ ನಡೆಸಿ , ತಪ್ಪು ಸಾಬೀತಾಗಲು ಮರಣ ದಂಡನೆಯನ್ನು ವಿಧಿಸಿ , ಜಾರಿ ಮಾಡಿಸಿ , ಆಗ ಪ್ರವಾಹದಲ್ಲಿದ್ದ ಹೊಳೆಗೆ ಹೆಣವನ್ನು ಚಾಚಿ ಬಿಟ್ಟರೆಂದು ತಿಳಿದುಬಂತು. ಹೆಣವೂ ಜಲಚರಗಳಲ್ಲಿ ಜೀರ್ಣವಾಗಿ ಹೋಗಿ ಬಹುದಿನಗಳಾಗಿದ್ದವು. ಸಾಕ್ಷ್ಯ ದುರ್ಲಭ ಮಾತ್ರವಲ್ಲ, ಅಲಭ್ಯವಾಗಿತ್ತು. ಇಷ್ಟಾಗಿ ಆ ಪೋಕರಿಯನ್ನು ಹಿಡಿದು ಕ್ರಮವಾದ ನ್ಯಾಯಾಸ್ಥಾನಕ್ಕೆ ತಂದಿದ್ದರೆ ಅನೇಕ ಮರ್ಯಾದಸ್ಥ ಮನೆಯ ಮುಗ್ಧ ಹೆಣ್ಣುಮಕ್ಕಳ ಮಾತು ಬಯಲಿಗೆ ಬರುತ್ತಿತ್ತು; ಅಪರಾಧಿಗೆ ಜುಜುಬಿ ಶಿಕ್ಷೆ ಆಗುತ್ತಿತ್ತು. ಗ್ರಾಮಸ್ಥರು ಮಾಡಿದ್ದು ಕಾನೂನಿಗೆ ವಿರುದ್ಧ ಆದರೆ ನ್ಯಾಯಕ್ಕೆ ವಿರುದ್ಧವೆಂದು ಹೇಳಲಿಕ್ಕೆ ನನಗೆ ಧೈರ್ಯ ಸಾಲದು."