-ನೆನಪು-
ನನಗೂ
ಹಾಗು
ಹಳೇ ನೆನಪುಗಳಿಗೂ
ಮಹಾ ಸಮರ
ನಾನು ಅವುಗಳನ್ನು ಕೊಲ್ಲಲ್ಲು
ಕತ್ತಿ, ಚೂರಿ, ಖಡ್ಗಗಳನ್ನು
ಮಸೆದು ದಿನವೂ ಇರಿಯುತ್ತೇನೆ,
ಅವು ಸಾಯುವ ಯಾವ
ಸೂಚನೆಯೂ ಇಲ್ಲ.
ಆ ನೆನಪುಗಳೋ,
ಯಾವ ಹತಾರೆಯೂ ಇಲ್ಲದೇ
ನನ್ನೆದೆಯನ್ನು ಒಂಚೂರು
ಗಾಯಗೊಳಿಸದೆ,
ವಿಚಿತ್ರ ನೋವನ್ನಿಡುತ್ತವೆ.
ನಾನು ನೆನಪುಗಳನ್ನು
ಅಗಿದು ಅಗಿದು
ಉಗಿಯಲೆತ್ನಿಸುತ್ತೇನೆ.
ಉಗಿದಷ್ಟು, ಮತ್ತೆ ಹುಟ್ಟಿ
ಹೃದಯಕ್ಕೆ ಅಂಟಿ ಕುಳಿತುಬಿಡುತ್ತವೆ.
ನನ್ನ ವಾಸ್ತವವನ್ನು ಸುಟ್ಟು,
ಭವಿಷ್ಯವನ್ನು ಬಗೆದು ತಿಂದು,
ಬದುಕನ್ನು ಬಣ್ಣಗೇಡಿತನಕ್ಕೆ ತಳ್ಳುವ
ನೆನಪುಗಳ ಅಟ್ಟಹಾಸಕ್ಕೆ
ಕಾರಣ ಬೇರಾರು ಅಲ್ಲ,
ನನ್ನದೇ ಇತಿಹಾಸ,,,,,,,
ಕಳೆದು ಹೋದ ದಿನದ
ತಪ್ಪುಗಳನ್ನೆಲ್ಲ ತನ್ನೊಳಗೆ
ತುಂಬಿಟ್ಟುಕೊಂಡಿದೆ,
ಈ ನೆನಪಿನ ಚೀಲ,
ಸಮಯ ಸಿಕ್ಕಾಗೆಲ್ಲ
ಆ ತಪ್ಪುಗಳಿಂದ ನನ್ನನ್ನು
ಹಪ ಹಪಿಸುವಂತೆ ಮಾಡುತ್ತದೆ,
ನೆನಪುಗಳ ಚೀಲದೊಳಗೆ
ಒಂದೆರಡು ಉಲ್ಲಾಸದ ಕ್ಷಣಗಳನ್ನಾದರು
ತುಂಬಬೇಕು,,,,,
ಮತ್ತೆ ಅದು ನನ್ನನು ಕೊಲ್ಲದಂತೆ.
Comments
ಉ: -ನೆನಪು-
ಮೆದುಳನ್ನು ಟ್ಯೂನ್ ಮಾಡಿ ಸವಿನೆನಪುಗಳಿಗೂ ಅವಕಾಶ ಮಾಡಿಕೊಟ್ಟು ಪ್ರಯತ್ನಿಸಿ. ಒಳ್ಳೆಯದಾಗುವುದು.
In reply to ಉ: -ನೆನಪು- by kavinagaraj
ಉ: -ನೆನಪು-
ಖಂಡಿತಾ ಕವಿಗಳೇ,,,,,,,, ಪ್ರತಿಕ್ರಿಯೆಗೆ ಧನ್ಯವಾದಗಳು,,,