ಅ.ರಾ. ಸೇತುರಾಮರಾವ್

ಅ.ರಾ. ಸೇತುರಾಮರಾವ್

ಅ.ರಾ.ಸೇ. ಅವರ ಹಾಸ್ಯ ಸಾಹಿತ್ಯದ ಸೊಗಡನ್ನು ಸಂಪೂರ್ಣವಾಗಿ ಆಸ್ವಾದಿಸಬೇಕಾದರೆ ಓದುಗನು ಬಹುಶ್ರುತನಾಗಿರಬೇಕು .ಇವರ ಲೇಖನಿ ರಾಜಕೀಯ,ಸಾಹಿತ್ಯ ವಿಜ್ಞಾನ, ಇವೆಲ್ಲ ವಿಷಯಗಳ ಮೇಲೆ ಲೀಲಾಜಾಲವಾಗಿ ಹರಿದಾಡುತ್ತದೆ. ರಾ.ಶಿ. ಅವರು "ಅ.ರಾ.ಸೇ 'ನೀನು ಅಮೇರಿಕಾದಲ್ಲಿ ಹುಟ್ಟಿದ್ದರೆ ' ನ್ಯೂಯಾರ್ಕ್ರ್ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿರುತ್ತಿದ್ದೆ.," ಎಂದು ಪ್ರಶಂಶಿಸಿದ್ದರು.

ಬನ್ನಿ. ಅವರ ಬರಹದ ಕೆಲವು ಮಾದರಿಗಳನ್ನು ನೋಡೋಣ.

ಹಾಗೆ ಹೇಳಬೇಕೆಂದರೆ ಪರಿಸ್ಥಿತಿಯ ನಿಜವಾದ ಅರಿವು ಸಹದೇವನಿಗಿತ್ತು, " ನಿತ್ಯಂ ಸನ್ನಿಹಿತೋ ಮೃತ್ಯು: " ಎಂದಾತನು ಸಹಸ್ರಾರು ವಷ೯ಗಳ ಹಿಂದೆಯೇ ಹೇಳಿದ್ದರೂ ಅದನ್ನು ಗಮನಕ್ಕೆ ತಂದುಕೊಂಡವರು ಬಹಳ ಕಡಿಮೆ.

" ಜೀವನವು ದುಃಖಮಯ. ಆಶೆಯೇ ದುಃಖಕ್ಕೆ ಮೂಲ . ಪ್ರಾಪಂಚಿಕ ಸುಖದ ಆಸೆಯನ್ನು ಬಿಡುವುದೇ ನಿವಾ೯ಣಕ್ಕೆ ಹಾದಿ" ಎಂಬ ಸಂದೇಶವನ್ನು ನೀಡಬೇಕೆಂದಿದ್ದೆವು. ಆದರೆ ಅದನ್ನು ಬೇರೊಬ್ಬರು ಈ ಮೊದಲೇ ಹೇಳಿದ್ದಾರೆಂಬ ಸುದ್ದಿ ಇತ್ತೀಚೆಗೆ ತಿಳಿದುಬಂದಿದೆ.

( ಸರಕಾರಿ ಯೋಜನೆಗಳ ಕುರಿತಾಗಿ) ಷಹಜಹಾನ್, ಕೃಷ್ಣದೇವರಾಯ ಇವರ ಕಾಲದಲ್ಲಿ ಇಂಥ ಕೆಲಸಗಳು ಸುಲಭ. ಕಟ್ಟಲು ಆರಂಭಿಸಿದರೆ ಮುಗಿಯುವ ತನಕ ಬಿಡುತ್ತಿರಲಿಲ್ಲ. ಖಚು೯ ಕಡಿಮೆ ಕೆಲಸ ಹೆಚ್ಚು . ಆಗ ವಿದೇಶಿ ವಿನಿಮಯದ ಕೊರತೆಯೂ ಇರಲಿಲ್ಲ.
ಹುಡುಗರು ಆ ಪುಸ್ತಕವನ್ನು ತಂತೀ- ಪುಸ್ತಕ ಎನ್ನುತ್ತಾರೆ. ಅದು ತಂತಿಯಿಂದ ಬೈಂಡ್ ಆದ ಪುಸ್ತಕ. ಪಾರಿಭಾಷಿಕ ಶಬ್ದಗಳಿಗೆ ನಮ್ಮಲ್ಲೇನು ಕೊರತೆ?

ವೆಸ್ಟ್ ಪಾಯಿಂಟ್, ಮಧ್ಯಪ್ರಾಚ್ಯ, ಅಲ್ಜೀರಿಯಾರಿಯಾ, ಚಿಕಾಗೋ, ಟ್ರಿಪೋಲಿ, ಕೈರೋ, ಕರಾಚಿ,ಕಲ್ಕತ್ತಾ ಗಳಲ್ಲಿ ಶತಮಾನಗಳ ಕಾಲಾವಧಿಯಲ್ಲಿ ನಡೆದುದು ಮುಗಿಲು ಹಳ್ಳಿಯ ನೂರುದೊಂಬಿ ರಸ್ತೆಯಲ್ಲಿ ಹದಿನೈದೇ ನಿಮಿಷಗಳಲ್ಲಾಯಿತು. ಅಲ್ಲಿನ ದಂಗೆಗಳಿಗೆ ಕಾರಣಗಳಿದ್ದವು. ಮುಗಿಲು ಹಳ್ಳಿಯಲ್ಲೋ? ನಿರ್ ವ್ಯಾಜ್ಯ ದೊಂಬಿ .ಭಗವಂತನ ಕರುಣೆ. " ಗೊಂದಲ ಪುರ" ಬರೆಯುವ ಮೊದಲು ಅಡಿಗರು ಇಲ್ಲಿಗೆ ಬರಬೇಕಿತ್ತು.

ಅಲ್ಲಿ ಅನೇಕ ಅಮೇರಿಕನ್ ಆಫೀಸರುಗಳಿದ್ದರು. ಶೀನಣ್ಣ ಕೆಲ ಸಕ್ಕೆ ಸೇರಿದ ದಿನ ಅವರೆಲ್ಲ ಗಡಗಡ ನಡುಗಿದ್ದರು. ಏಕೆಂದರೆ ಅವರಿಗೆಲ್ಲ ಆ ದಿನವೇ ಸಾಮೂಹಿಕವಾಗಿ ಮಲೇರಿಯಾ ಬಂತು.

ಒಂದು ಬಿಂದಿಗೆ ನೀರು ತೆಗೆದುಕೊಂಡ. ಗುಡಿಗೆ ಹೋದ. ರಾಮೇಶ್ವರನ ಮೇಲೆ ಹೊಯ್ದ ."ಹೊಯ್ಕೋ ನೀರು, ಬಡ್ಕೋ ಗಂಧ, ಮುಡ್ಕೋ ಪತ್ರೆ, ಮೂಸ್ನೋಡು ಊದಿನಕಡ್ಡಿ".

ಶಿಷ್ಯಾ ಕೇಳು, ಜೀವನ ಮುನಿರಾಬಾದಿನ ಸೂಯಾ೯ತಪದಂತಿದೆ. ನಾವಿಂದು ಅಲೆದಂತೆ ಜೀವಿಗಳು ಜೀವನ ರಸವನ್ನು ಅರಸಿ ಅಲೆಯುವರು. ಜೀವನವು ಬೀರಿನಂತೆ ಕಹಿಯಾಗಿದೆ. ಕುಡಿಯದೆ ವಿಧಿಯಿಲ್ಲ. ಜೀವರಸ ಸಿಹಿಯಾಗಬೇಕಾದರೆ ಸತ್ಕರ್ಮ , ಸಂಸ್ಕಾರಗಳು ಅವಶ್ಯಕ. ಅರಿವಿಲ್ಲದೆ ನಿಶಾ ಏರುವದಿಲ್ಲ. ಏನಾದರೇನು ?  ಸ್ವಕರ್ಮನಿರತನಾಗಿರಲೇಬೇಕು. ಆಫೀಸಿಗೆ ಹೋಗಲೇ ಬೇಕು. ಇವತ್ತೇ ಊರಿಗೆ ಹೋಗಬೇಕು. ಚಾರ್ಜಿಗೆ ನಾಲ್ಕು ರೂಪಾಯಿ ಕೊಡು ನನ್ನ ನಿನ್ನ ಈ ಕರ್ಮ ಚಕ್ರ ಪ್ರವರ್ತನೆ ಆ ಚಂದ್ರಾರ್ಕವಗಿ ಬಾಳಲಿ.

ತೊಗರಿಬೇಳೆ ಖರೀದಿಗೆ ಆಗ್ರಾ ಕ್ಕೆ ಹೋದ ಮುಗಿಲು ಹಳ್ಳಿ ವತ೯ಕರು "ಎಂಥ ಹೊಲಸು ಊರು ಆಗ್ರಾ ? ಇಲ್ಲಿ ತೊಗರಿಬೇಳೆ ಬಿಟ್ಟರೆ ಬೇರೆ ಏನೂ ಇಲ್ಲವೆ?" ಅಂದುಕೊಂಡರು. "ತಾಜ್ಮಹಲ್ ಇದೆಯಲ್ಲಾ ? ನೋಡಿಕೊಂಡು ಬನ್ನಿ" ಅಂದರು ಯರೋ .'ಅದನೇನು ನೋಡೋದು ತಗ್ಯಲೇ ; ಏನು ನಮ್ಮೂರಿನ ಬಕ್ಕಪ್ಪನ ಗುಡಿಗಿಂತ ಛಂದ ಇದ್ದೀತೇ ?" ಅಂದ ಬಕ್ಕ.

'ಏನಂತತಲೇ ಮಂಗ್ಯಾ?' ಚಲನಚಿತ್ರದಲ್ಲಿ ನಾಯಕ ನಾಯಕಿಯನ್ನು ನೋಡಿದಾಗ ಏನು ಮಾಡಿದ?

ಶಂತನು ಬೇಟೆಗೆ ಹೋಗಿ ಯೋಜನಗಂಧಿಯನ್ನು ನೋಡಿದನಲ್ಲ , ಏನು ಮಾಡಿದ ? ಕೀಚಕನ ಹಾಗೆ 'ನುಡಿಸಲಾಗದೆ ತರಳೆ' ಎನ್ನಲಿಲ್ಲ. ವಿಂಡಿ ನಿಕೊಲಸಿನ ಹಾಗೆ Listen cutie ಎನ್ನಲಿಲ್ಲ. 'ನೀ ಬಾ ಪೆೋಪಂ' (ಪಂಪ ) ಅಥವಾ 'ಅರಮನೆಗೆ ನಡೆ '(ಕುಮಾರವ್ಯಾಸ) ಎಂದ. ಅದನ್ನೇ ನಮ್ಮ ನಾಯಕ ಹೇಳಿದ್ದು - ಬಾ ಹೋಗನ. ಸರಿ ಇಬ್ಬರೂ ಲಬೋ ಲಬೋ ಹೊಡೆದುಕೊಳ್ಳುತ್ತಾರೆ. ಆ ಸಂಗೀತವನ್ನೇ ನೀವು ಪ್ರತಿ ದಿನ ರೇಡಿಯೋದಲ್ಲಿ ಕೇಳುವುದು.

ಅ.ರಾ. ಸೇತುರಾಮರಾವ್ ಅವರು ಅ.ಕ . ವಿ. ಪ್ರೇ. ಪ (ಅಂದರೆ ಅಖಿಲ ಕನಾ೯ಟಕ ವಿಫಲ ಪ್ರೇಮಿಗಳ ಸಂಘ) ಸರಣಿಯಲ್ಲಿ, ಹಳೆಗನ್ನಡ ಸಾಹಿತ್ಯ ಸಂಶೋಧನೆಯು ಕುರಿತೂ ಅನೇಕ ಮರೆಯಲಾಗದಂಥ ಹಾಸ್ಯ ಬರಹಗಳನ್ನು ಬರೆದಿದ್ದಾರೆ. ಅವರು ಅನೇಕ ಆಧ್ಯಾತ್ವ ಗ್ರಂಥಗಳನ್ನು, ಪಾರಮಾರ್ಧಿಕ ಪದಕೋಶವನ್ನು ಬರೆದಿದ್ದಾರೆ. ಅವರು ನಿನ್ನ ನಮ್ಮನ್ನು ಅಗಲಿರುವರಾದರೂ ಅವರ ಸಾಹಿತ್ಯವು ಸದಾ ನಮ್ಮೆಂದಿಗೆ ಚಿರಕಾಲ ಇರುವುದು. ಪರಮಾತ್ಮನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ.

ಮತ್ತಷ್ಟು ಓದಿಗೆ:

ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು?

( ಅವರ ಬಗೆಗೆ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ನೋಡಿ -
kanaja.in/archives/dinamani/ಅ-ರಾ-ಸೇ-ಅ-ರಾ-ಸೇ)

ಚಿತ್ರ: ಕಣಜ‌

Comments