ಒಲಿದುಬಿಡು ಸಂಕ್ರಾಂತಿಗಾದರು...

Submitted by nageshamysore on Thu, 01/14/2016 - 19:23

ನಭದಿ ದಿನಪನು ಬದಲಿಸಿಹನು
ಪಯಣ ಪಥ ಸಂಕ್ರಾಂತಿ ನೆಪದಲಿ
ಮಕರ ಸಂಕ್ರಮಣದ ತೇರನೇರಿ ಹೊರಟ
ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? ||

ಸುಡುಸುಡು ಕೆಂಡದವ ದಿನಕರನೆ
ಮಂಕಾಗುವಂತೆ ಮಾಡಿತೆ ಚಳಿಗಾಲ
ಮುಚ್ಚಿಡಲೆಷ್ಟು ಕಾಲ ? ಬೇಸತ್ತ ಓಲೈಸುತ್ತ
ಮುಖ ತಿರುಗಿಸಿ ನಡೆವಾಗ ಸುಮ್ಮನಿದ್ದರೆ ವ್ಯರ್ಥ ||

ಅರೆ ಮುಖ ತಿರುಗಿಸಿ ನಡೆದರು ನೋಡು
ಸಂದಿಗ್ದದಲಿನ್ನು ಅರೆ ಬಿಸಿಲು ಅರೆ ನೆರಳು
ಮುಸುಕಲಿ ಗುಸುಗುಸು ಯುದ್ಧ ಬರಿ ಮರುಳು
ಸರಿದು ಬಿಸಿಯಾಗುವ ಮೊದಲೆ ಅಪ್ಪಿಬಿಡೆ ಜಾಣೆ ||

ಬಿಗುಮಾನ ದುಮ್ಮಾನ ದೊಡ್ಡಸ್ತಿಕೆ ಬಿಡೆಲ್ಲ
ಬಂದಿದೆ ಸಂಕ್ರಾಂತಿ ನೆಪ ಬೀರು ಎಳ್ಳು ಬೆಲ್ಲ
ಎಳ್ಳು ಬೀರುವ ನೆಪದಲಿ ಕಣ್ಣ ರೆಪ್ಪೆ ಬಡಿಸೆ ವಿಚಲಿತ
ಆಗದ ದಿನಕರನೆಲ್ಲಿ ? ಕರಗಿ ತನ್ನ ಬಿಸಿಗೆ ತಾನಾಗಿಯೆ ||

ವೃದ್ಧ ಭೀಷ್ಮನು ಕಾದ ಗಳಿಗೆಯಿದು ಮುಹೂರ್ತ
ಉತ್ತರಾಯಣ ಪುಣ್ಯಕಾಲ ಸ್ವರ್ಗದ ಗಡಿ ಸನ್ನಿಹಿತ
ಬಿಟ್ಟೆಲ್ಲ ಕುಂಟುನೆಪ ಒಪ್ಪಿಕೊ ತಪ್ಪೊಪ್ಪಿಗೆ ಬಿನ್ನಹ
ಸರಿಯಿ ತಪ್ಪೊ ದುಃಖ ಬದಿಗಿಡು ಪ್ರೀತಿಗ್ಯಾವ ಲೆಕ್ಕ ?
 
(Picture courtesy from : http://cn.bing.com/images/search?q=love+angry&view=detailv2&&id=A891D1AB...)