ವರಕವಿಗೊಂದು ನಮನದ ಹೊತ್ತು..

Submitted by nageshamysore on Sat, 01/30/2016 - 21:14

(Photo source wikipedia: https://en.m.wikipedia.org/wiki/File:DRBendre.jpg)
 
ಜನವರಿ 31 ವರಕವಿ ದ.ರಾ.ಬೇಂದ್ರೆ ಜನ್ಮದಿನ. ಜನ್ಮತಃ ಕವಿಯಾಗಿ ಕಾವ್ಯಧಾರೆಯ ಸುಗ್ಗಿ ಹರಿಸಿದ ಈ ಕರ್ನಾಟಕ ಕುಲ ತಿಲಕರ ಎಲ್ಲಾ ಕವನಗಳನ್ನು ಓದಲು ಎಲ್ಲರಿಗು ಆಗದಿದ್ದರೂ ಹಾಡುಗಳ ರೂಪದಲ್ಲಿ, ಭಾವಗೀತೆಗಳ ಸಂಕಲದ ರೂಪದಲ್ಲಿ, ಪಾಠ ಪಠ್ಯಗಳ ನಡುವಲ್ಲಿ ಸುಳಿದಾಡಿದ ಗೀತೆಗಳು ಕನ್ನಡಿಗರೆಲ್ಲರಿಗು ಚಿರ ಪರಿಚಿತವೆ. ಧಾರವಾಡದ ಈ ದೈತ್ಯ ಪ್ರತಿಭೆಯಿಂದ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿಯ ಗರಿ ಸಿಗುವಂತಾಗಿದ್ದು (ನಾಕು ತಂತಿ) ಮಾತ್ರವಲ್ಲದೆ ಕನ್ನಡದ ದೊಡ್ಡ ಹೆಸರುಗಳ ಸಾಲಿನಲ್ಲಿ ಬೇಂದ್ರೆಯವರ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿ, ದಂತಕಥೆಯಾಗುವಂತೆ ಮಾಡಿದ್ದು ಅವರ ಅದ್ಭುತ ಕಾವ್ಯ ಪ್ರತಿಭೆಗೆ ಕನ್ನಡ ನಾಡು ಸಲ್ಲಿಸಿದ ಅರ್ಹ ಗೌರವ.. ಕಾವ್ಯದ ಹೊರತಾಗಿ ಸಾಹಿತ್ಯದ ಇತರ ಪ್ರಕಾರಗಳಲ್ಲು ಕೈಯಾಡಿಸಿದ್ದರೂ, ಈ ಕೆಳಗೆ ಅವರ ಕವನ ಸಂಕಲನಗಳೆಲ್ಲವನ್ನು ಅದು ಪ್ರಕಟವಾದ ಅನುಕ್ರಮಣಿಕೆಯಲ್ಲಿ ಹೊಂದಿಸಿ ಕವನದ ರೂಪದಲ್ಲಿ ಹೊಸೆದಿದ್ದೇನೆ - ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ, ಆ ಮಹಾನ್ ಜೀವಕ್ಕೊಂದು ಹೃತ್ಪೂರ್ವಕ ನಮನ ಸಲ್ಲಿಸುತ್ತ...

ವರಕವಿ ದ.ರಾ.ಬೇಂದ್ರೆ ಗೊತ್ತಾ ? ಹರಿಸಿದ್ದೆಲ್ಲ ಧಾರೆ ಘನ ಕಾವ್ಯಕುಸುರಿ 
'ಕೃಷ್ಣಾಕುಮಾರಿ' ಹಿಡಿದ 'ಗರಿ' ಮೂಡಿ 'ಮೂರ್ತಿ ಮತ್ತು ಕಾಮ ಕಸ್ತೂರಿ'
'ಸಖೀಗೀತ' ಹಾಡಿ 'ಉಯ್ಯಾಲೆ' ತೂಗೆ ಆಯ್ತಲ್ಲ 'ನಾದಲೀಲೆ' ಜನನ
'ಮೇಘದೂತ'ನದಂತೆ 'ಹಾಡುಪಾಡು' ಇಳೆಗೆ ಇಳಿದ 'ಗಂಗಾವತರಣ' ||

ಕುಡಿಕುಡಿದು ನಿತ್ಯ 'ಸೂರ್ಯಪಾನ' ತುಂಬಿಸಿ 'ಹೃದಯ ಸಮುದ್ರ'
'ಮುಕ್ತಕಂಠ'ದೆ ಮನ ಹಾಡಿತೆ 'ಚೈತ್ಯಾಲಯ'ದಿ ಕವಿತಾ ಸರಿತ್ಸಾಗರ
ಸೋಲೊಪ್ಪದ ಪರಿ 'ಜೀವಲಹರಿ', ಕಾಡಲುಂಟೆ 'ಅರಳು ಮರಳು' ?
ನಮಿಸೂ ಮುಗಿಯದ 'ನಮನ', ಸ್ಪೂರ್ತಿ 'ಸಂಚಯ' ಅಕ್ಷಯ ಬೆರಳು ||

'ಉತ್ತರಾಯಣ' ಸಂಕ್ರಮಣ ಯಾತ್ರೆ, ಹುಡುಕಿತ್ತೆ 'ಮುಗಿಲ ಮಲ್ಲಿಗೆ'
ಸಿಕ್ಕರಲ್ಲಿ 'ಯಕ್ಷ ಯಕ್ಷಿ', ನುಡಿಸೆ 'ನಾಕುತಂತಿ' ಜ್ಞಾನಪೀಠವದಾಗೆ
ಮೀರದ ಕವಿ 'ಮರ್ಯಾದೆ'ಗೆ, ಕರೆದಳೆ 'ಶ್ರೀಮಾತ' ನೀ 'ಬಾ ಹತ್ತರ'
ನಿಗರ್ವಿಮನಕೆ 'ಇದು ನಭೋವಾಣಿ', ಅಹಮಿಕೆಯಿಲ್ಲ 'ವಿನಯ' ಸ್ವರ ||

ಜೀವಋತುಗೆ 'ಮತ್ತೆ ಶ್ರಾವಣ ಬಂತು', ಹಾಡೆ 'ಒಲವೇ ನಮ್ಮ ಬದುಕು'
'ಚತುರೋಕ್ತಿ' ಜತೆಗೆ ಹಾಕುತೆ 'ಪರಾಕಿ', ಎಷ್ಟು 'ಕಾವ್ಯವೈಖರಿ' ಸರಕು !
'ತಾ ಲೆಕ್ಕಣಿಕೆ ತಾ ದೌತಿ' ಅನ್ನುತಲೆ ಮಾಡಿದ 'ಬಾಲಬೋಧೆ' ತಿರುಳು
ಮುಪ್ಪ ಪಳಗಿಸೆ 'ಚೈತನ್ಯದ ಪೂಜೆ', ಮಾಗಿದೆದೆಯಲು 'ಪ್ರತಿಬಿಂಬಗಳು' ||

ತಡೆಹಿಡಿವರಾರು 'ಶ್ರಾವಣ ಪ್ರತಿಭೆ' ? ನಿಂತ ಕೂತೆಡೆಯೆ ಬರೆವ ದೈತ್ಯ
ಕೂರಬಿಡದೆ 'ಕುಣಿಯೋಣು ಬಾ' ಎಂದೆಲ್ಲರನು ಕುಣಿದಾಡಿಸಿದಾ ನೃತ್ಯ 
ಮಾನವ ಬೇಂದ್ರೆ, ಚಿಂತಕ ಬೇಂದ್ರೆ, ತ್ರಿಮುಖಿ ಸೃಜನಶೀಲ 'ಬುದ್ಧ' ಬೇಂದ್ರೆ
ಪದ್ಮಶ್ರಿ ಅಂಬಿಕಾತನಯದತ್ತನ ಕಾವ್ಯತೋಟಕೊಂದು ನಮನದೀ ಮುದ್ರೆ ||

- ನಾಗೇಶಮೈಸೂರು

ಲೇಖನ ವರ್ಗ (Category)