DLI ಪುಸ್ತಕನಿಧಿ - - ಜನ್ನನ ಚಂಡಶಾಸನ ಕಥಾಸಂಗ್ರಹದ ವಿವರಣೆ
ಪಂಪ, ರನ್ನರ ಸಾಲಿನಲ್ಲಿ ಜನ್ನನ ಹೆಸರು ಕೇಳಿದ್ದೆನಷ್ಟೆ. ಇತ್ತೀಚೆಗೆ ಈ ಪುಸ್ತಕವನ್ನು - DIGITAL LIBRARY OF INDIA ತಾಣದಿಂದ ಹಿಂದೆಂದೋ ಇರಿಸಿಕೊಂಡದ್ದು - ಓದಿದೆ.
( ಈ ಪುಸ್ತಕ http://oudl.osmania.ac.in/handle/OUDL/3107 ಕೊಂಡಿಯಲ್ಲಿ ಸಿಗುತ್ತದೆ. - ಆ ತಾಣ ಕೆಲಸ ಮಾಡುವಾಗ. ಪ್ರಯತ್ನಿಸುತ್ತ ಇರಿ. ಕನ್ನಡ ಪುಸ್ತಕಗಳನ್ನು Pustaka.sanchaya.net ತಾಣದಲ್ಲಿ ಹುಡುಕಬಹುದು )
ಯಶೋಧರ , ಅಮೃತಮತಿ , ಅಷ್ಟಾವಕ್ರರ ಕಥೆ - ಗಿರೀಶ್ ಕಾರ್ನಾಡ್ ಅವರ "ಹಿಟ್ಟಿನ ಹುಂಜ" ನಾಟಕದ ಕಥೆ - ಇದೇ ಜನ್ನನ ಯಶೋಧರಚರಿತೆಯಲ್ಲಿದೆ. ( ಈ ಕಥೆಯ ಬಗ್ಗೆ ಹಿಂದೆ ಸಂಪದದಲ್ಲಿಯೇ ಬರೆದಿದ್ದೆ.
ಈ ಯಶೋಧರೆಯ ಕುರಿತಾದ ಮೂರು ಪುಸ್ತಕಗಳು DLI ನಲ್ಲಿ ಇವೆ. )
ಈ ಚಂಡಶಾಸನ ನ ಕಥೆಯು ಜನ್ನನ ಅನಂತನಾಥ ಪುರಾಣದ ಕೊನೆಯಲ್ಲಿ ಬರುವದಂತೆ. ಯಶೋಧರಚರಿತೆಯ ಕತೆಯನ್ನು ಓದಿದವರು ಇದನ್ನೂ ಓದಬೇಕಂತೆ. ಇವು ಒಂದಕ್ಕೊಂದು ಪೂರಕವಂತೆ.
ಈ ಪುಸ್ತಕವು ಹಳೆಗನ್ನಡದ ಕಥೆಯನ್ನು ಪ್ರತಿ ಶಬ್ದವನ್ನು ಬಿಡಿಬಿಡಿಸಿ ಅರ್ಥವನ್ನು ಕೊಡುತ್ತದೆ.
ಈ ಕಥಾಸಂಗ್ರಹದ ಸಂಗ್ರಹ ( :) ) ಹೀಗಿದೆ.
ವಸುಶೇಣನು ಒಬ್ಬ ಶೂರ ರಾಜ. ಅವನಿಗೆ ಸುಂದರ ಮಡದಿ ಸುನಂದೆ . ಆತನ ಪ್ರೀತಿಪಾತ್ರಳು. ಅವನನ್ನು ತುಂಬಾ ಪ್ರೀತಿಸುವಳು.
ಈತನ ಗೆಳೆಯ ಚಂಡಶಾಸನನು ಇವನ ಅರಮನೆಗೆ ಅತಿಥಿಯಾಗಿ ಬಂದಾಗ ಸುನಂದೆಯನ್ನು ನೋಡಿ ಮೋಹಕ್ಕೆ ಒಳಗಾಗಿ ಅವಳನ್ನು ಬಯಸುವನು. ವಸುಶೇಣನು ಇಲ್ಲದಾಗ ಅವಳನ್ನು ಕದ್ದುಕೊಂಡು ಹೋಗುವನು. ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುವನು.
ವಸುಶೇಣನು ಸುನಂದೆಗಾಗಿ ದಂಡೆತ್ತಿ ಬರುವನು.
ಇತ್ತ ಚಂಡಶಾಸನನು ಸುನಂದೆಯನ್ನು ಒಲಿಸಿಕೊಳ್ಳುವ ಯತ್ನದ ಭಾಗವಾಗಿ ವಸುಶೇಣನ ನಕಲಿ ರುಂಡವನ್ನು ಅವಳಿಗೆ ತೋರಿಸುವನು. ಪ್ರಾಣಕಾಂತನ ಸಾವಿನ ಆಘಾತದಿಂದ ಆ ಪತಿವ್ರತೆಯು ಸತ್ತು ಹೋಗುವಳು.
ಅವಳನ್ನು ತುಂಬಾ ಪ್ರೀತಿಸುತ್ತಿದ್ದ ಚಂಡಶಾಸನನು ಅವಳ ಚಿತೆಯನ್ನೇ ಏರಿ ಅವಳೊಂದಿಗೆ ಸಹಗಮನ ಮಾಡುವನು.
ಲೋಕದಲ್ಲಿ ಗಂಡನು ಸತ್ತಾಗ ಅವನೊಡನೆ ಸಹಗಮನ ಮಾಡುವದನ್ನು ನೋಡಿದ್ದೇವೆ. ಆದರೆ ಸುನಂದೆ ಪರಸ್ತ್ರೀ. ಅವಳೊಂದಿಗೆ ಬೆಂಕಿಗೆ ಬೀಳುವ ಚಂಡಶಾಸನನನ್ನೂ ಮೆಚ್ಚಬೇಕಲ್ಲವೇ ?
ನಂತರ ಚಂಡಶಾಸನನ ರಾಣಿಯರೂ ಅದೇ ಚಿತೆಯನ್ನೇರಿದರು. ನಂತರ ಅಲ್ಲಿಗೆ ತಲುಪಿದೆ ವಸುಶೇಣನು ಸುನಂದೆಗಾಗಿ ದುಃಖಿಸಿದನು. "ನಾನು ಸತ್ತೆ ಎಂಬ ಸುಳ್ಳು ಸುದ್ದಿಯನ್ನು ಕೇಳಿ ಪ್ರಾಣ ಬಿಟ್ಟೆ. ನಾನಾದರೋ ನಿನ್ನ ಸಾವನ್ನು ನೋಡಿಯೂ ಬದುಕಿದ್ದೇನೆ" ಎಂದು ತನ್ನನ್ನೇ ಹಳಿದುಕೊಂಡನು. ಇನ್ನು ತಾನಿದ್ದರೇನು , ಬಿದ್ದರೇನು , ತನ್ನ ಮಡದಿಯನ್ನು ಕಾಪಾಡದ ರಾಜ್ಯ ಮತ್ತು ಆಯುಧಗಳಿಂದ ಏನು ? ಎಂದು ರಾಜ್ಯವನ್ನು ಬಿಟ್ಟುಕೊಟ್ಟು ವೈರಾಗ್ಯ ಜೇವನ ನಡೆಸಿ ಉಗ್ರ ತಪಸ್ಸು ಮಾಡಿ ಸತ್ತು ಮುಂದೆ ದೇವನಾಗಿ ಹುಟ್ಟಿದನು.