ಭಾಗ - ೧೧ - ೧ ವೇದ ಗಣಿತ ಕಿರು ಪರಿಚಯ: ವೈದಿಕ ಸಂಖ್ಯಾ ಸಂಜ್ಞೆಗಳು ಅಥವಾ ಬೀಜಗಣಿತ ಸಂಕೇತಗಳು
ಭಾಗ - ೧೧ - ೧ ವೇದ ಗಣಿತ ಕಿರು ಪರಿಚಯ: ವೈದಿಕ ಸಂಖ್ಯಾ ಸಂಜ್ಞೆಗಳು ಅಥವಾ ಬೀಜಗಣಿತ ಸಂಕೇತಗಳು
ಸಂಕೇತ ರೂಪದಲ್ಲಿ ಜ್ಞಾನವನ್ನು ಪ್ರತಿಪಾದಿಸುವ ಅವಶ್ಯಕತೆ ಹಾಗು ಉಪಯುಕ್ತತೆಯನ್ನು ಭಾರತೀಯರು ಬಹುಹಿಂದೆಯೇ ಅಂದರೆ ಸಾವಿರಾರು ವರ್ಷಗಳ ಹಿಂದೆಯೇ ಮನಗಂಡಿದ್ದರು. ಇದಕ್ಕಾಗಿ ಎರಡು ವಿಧವಾದ ಸಂಖ್ಯಾ ಸಂಕೇತಗಳು ಬಳಕೆಯಲ್ಲಿ ಬಂದವು - ಭೂತ ಸಂಖ್ಯಾ ಪದ್ಧತಿ ಮತ್ತು ಕಟಪಯಾದಿ ಪದ್ಧತಿ. ಮೂರು ವಿಧವಾದ ಕಪಟಯಾದಿ ಪದ್ಧತಿಗಳನ್ನು ಹಿಂದಿನ ಲೇಖನಗಳಲ್ಲಿ ನೋಡಿದ್ದೇವೆ. ಈಗ ಭೂತ ಸಂಖ್ಯಾ ಪದ್ಧತಿಯನ್ನು ತಿಳಿದುಕೊಳ್ಳೋಣ. ಈ ಪದ್ಧತಿಯಲ್ಲಿ ಅಂಕೆಗಳನ್ನು ಸಾಂಪ್ರದಾಯಿಕವಾಗಿ ನಿರ್ಧಿಷ್ಟ ಸಂಖ್ಯೆಗಳೊಂದಿಗೆ ಅನುಬಂಧ ಹೊಂದಿರುವ ವಸ್ತುಗಳನ್ನು ಆಧರಿಸಿ ನಿಷ್ಪತ್ತಿಗೊಳಿಸಲಾಗಿದೆ. ಭೂತ ಸಂಖ್ಯಾ ಪದ್ಧತಿಯು ಸಂಜ್ಞಾ ನಿಘಂಟನ್ನು ಒಳಗೊಂಡಿದೆ ಅದರ ವಿವರಗಳು ಈ ಕೆಳಗಿನಂತೆ ಇವೆ.
ಸಂಜ್ಞಾ ನಿಘಂಟನ್ನು ಕೆಳಗಿನ ಶ್ಲೋಕಗಳು ವಿವರಿಸುತ್ತವೆ:
ಶಶಿ ಸೋಮಶ್ಶಶಾಂಕಶ್ಚ ಇಂದುಶ್ಚನ್ದ್ರಃ ಕಲಾನಿಧಿಃ l
ರಾಜಾ ವಿಧುಸ್ಸುಧಾಂಶುಶ್ಚ ಯಮ ಏಕಜನಸ್ತಥಾ ll
ಅಕ್ಷಿ ಚಕ್ಷುಃ ಕರೋ ನೇತ್ರಂ ಲೋಚನಂದ ಬಾಹುಕರ್ಣಕಾಃ l
ಪಕ್ಷ ದೃಷ್ಟಿ ದ್ವಯಂ ಯುಗ್ಮಮಂಬಕೌ ನಯನೇಕ್ಷಣೆ ll
ವಹ್ನೀ ರಾಮಶ್ಶಿಖೀ ಚಾಗ್ನಿಃ ಪಾವಕೋ ದಹನಾನಲೌ l
ಶಂಕರಾಕ್ಷಿಪುರೀಲೋಕಾಸ್ತ್ರೀಣಿ ಕಾಲಸ್ತ್ರಯೋಗುಣಾಃ ll
ಅಬ್ಧಿ ಸಾಗರ ಚತ್ವಾರೀ ವನರಾಶಿರ್ಯುಗೋಂಬುಧಿಃ l
ಚತುರ್ವಾದ್ಧಿಗತಿಶ್ಚಾಪಿ ಜಲಧೀರ್ನೀರಧಿಸ್ತಥಾ ll
ಇಂದ್ರಿಯಂ ಪಂಚಮಂ ಜ್ಞಾನಮಿಷುರ್ಬಾಣಶ್ಚ ಮಾರ್ಗಣಃ l
ವ್ರತಂ ಭೂತಂ ಶರಃ ಪರ್ವಾ ಪ್ರಾಣಶ್ಚ ವಿಷಯಸ್ತಥಾ ll
ಶಾಸ್ತ್ರಂ ಷಟ್ಚ ರುಚಿಶ್ಚೈವ ಕಾಲಶ್ಚ ಋತುಸಂಜ್ಞಿಕಮ್ l
ರಸದ್ರವ್ಯಂ ಚ ಕೋಶಶ್ಚ ಷಡ್ದರ್ಶನಷಡಾಗಮೌ ll
ಶೈಲೋsದ್ರಿರ್ದ್ವೀಪಪಾಯುಶ್ಚ ಮುನಿಸ್ಸಪ್ತಾಚಲೋ ಗಿರಿಃ l
ತುರಗಾಶ್ವನಗೋ ಗೋತ್ರಮಹೀಧ್ರ ಋಷಿಸಂಜ್ಞಿಕಾಃ ll
ಅಷ್ಟಮಂ ಗಜಕರ್ಣೀ ಚ ದಿಗ್ಗಜೋ ದಂತಿ ಹಸ್ತಿ ಚ l
ಸಾಮಜೋ ಮತ್ತಮಾತಂಗಃ ದಿಕ್ಪಾಲವಸುವಾರಣಾಃ ll
ನವಮಂ ನವರತ್ನಂ ಚ ಬ್ರಹ್ಮಾ ಚ ಕಮಲಾಸನಃ l
ನಿಧಿರ್ಗ್ರಹಶ್ಚ ಖಂಡಂ ಚ ರಂಧ್ರೋ ಭಾವಶ್ಚ ಲಬ್ದಕಃ ll
ಆಕಾಶಂ ಗಗನಂ ಶೂನ್ಯಮಂತರಿಕ್ಷಂ ಮರುತ್ಪಥಮ್ ll
ಮೇಲಿನ ಶ್ಲೋಕಗಳನ್ನಾಧರಿಸಿ ವಿವಿಧ ವಸ್ತುಗಳು ಸೂಚಿಸುವ ಸಂಖ್ಯೆಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು. (ಚಿತ್ರ ೧೧-೧)
ಚಿತ್ರ ೧೧-೧ ರಲ್ಲಿ ಕೊಟ್ಟಿರುವ ವಿವರಗಳು ಈ ಕೆಳಗಿನಂತೆ ಇವೆ
ಸಂಖ್ಯೆ- ಸಾಮಾನ್ಯ ಶಬ್ದ - ಪರ್ಯಾಯ ಶಬ್ದಗಳು/ ಪರ್ಯಾಯ ವಸ್ತುಗಳು
0 - ಆಕಾಶ - ಅಂಬರ, ಗಗನ, ಶೂನ್ಯ
1 - ಚಂದ್ರ - ಇಂದು, ಹಿಮಕರ, ಶಶಿ, ಸೋಮ, ಕಳಾನಿಧಿ, ರಾಜ, ವಿಧು, ಸುಧಾಂಶು
1 - ಭೂಮಿ –ಕ್ಷ್ಮಾ
1 - ಯಮ, ಏಕಜನ
2 - ನೇತ್ರಗಳು ಮೊll ಕೈಗಳು, ಬಾಹುಗಳು, ಕಿವಿಗಳು, ಪಕ್ಷಗಳು (ಶುಕ್ಲ, ಕೃಷ್ಣ)
3 – ಅಗ್ನಿಗಳು - ತ್ರೇತಾಗ್ನಿಗಳು - ಆಹವನೀಯ, ಗಾರ್ಹಪತ್ಯ, ದಕ್ಷಿಣಾಗ್ನಿ
3 – ರಾಮರು - ಮೂರು ಪ್ರಸಿದ್ಧ ರಾಮರು - ಪರಶುರಾಮ, ಶ್ರೀರಾಮ, ಬಲರಾಮ
3 – ಪುರ - ತ್ರಿಪುರ - ಬ್ರಹ್ಮ, ವಿಷ್ಣು ಹಾಗು ರುದ್ರರ ಅಂಶಗಳ ತ್ರಿದೇಹವನ್ನುಳ್ಳ ಶಿವ
3 – ಲೋಕಗಳು - ತ್ರಿಲೋಕಗಳು - ಸ್ವರ್ಗಲೋಕ, ಭೂಲೋಕ, ಪಾತಾಳ ಲೋಕ
3 – ಕಾಲಗಳು - ಭೂತ, ವರ್ತಮಾನ, ಭವಿಷ್ಯತ್
3 – ಗುಣಗಳು - ಸತ್ವ, ರಜೋ, ತಮೋ ಗುಣಗಳು
4 - ವೇದಗಳು - ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ
4 - ಯುಗಗಳು - ಸತ್ಯ, ತ್ರೇತಾ, ದ್ವಾಪರ, ಕಲಿ
4 - ಸಾಗರಗಳು - ಚತುಸ್ಸಾಗರಗಳು - ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ
4 - ಗತಿಗಳು (ದಿಶೆಗಳು) - ಹಿಂದೆ, ಮುಂದೆ, ಮೇಲೆ, ಕೆಳಗೆ
5 - ಭೂತಗಳು - ಪಂಚ ಮಹಾಭೂತಗಳು - ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ
5 - ಬಾಣಗಳು - ಮನ್ಮಥನ ಪಂಚ ಬಾಣಗಳು - ಕಮಲ, ಅಶೋಕ, ಮಾವು ಹೂವಿನ ಚಿಗುರು, ಮಲ್ಲಿಗೆ ಮತ್ತು ನೀಲಿ ಕಮಲ (ನೈದಿಲೆ)
5 - ಪರ್ವದಿನಗಳು - ಪಂಚ ಪರ್ವಗಳು - ಹುಣ್ಣಿಮೆ, ಅಮವಾಸ್ಯೆ, ಕೃಷ್ಣ ಪಕ್ಷದಲ್ಲಿನ ಅಷ್ಟಮಿ, ಚತುರ್ದಶಿ, ರವಿ ಸಂಕ್ರಮಣದ ದಿನ
5 - ಪ್ರಾಣಗಳು - ಪಂಚ ಪ್ರಾಣಗಳು - ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ
5 - ಇಂದ್ರಿಯಗಳು - ಪಂಚ ಕರ್ಮೇಂದ್ರಿಯಗಳು - ಕೈ, ಕಾಲು, ಬಾಯಿ, ಜನನಾಂಗ, ವಿಸರ್ಜನಾಂಗ
- ಪಂಚ ಜ್ಞಾನೇಂದ್ರಿಯಗಳು - ಕಿವಿ, ನಾಲಗೆ, ಕಣ್ಣು, ಮೂಗು ಮತ್ತು ಚರ್ಮ
6 - ಶಾಸ್ತ್ರಗಳು - ವೇದಾಂಗಗಳು - ಶಿಕ್ಷ, ವ್ಯಾಕರಣ, ಕಲ್ಪ, ನಿರುಕ್ತ, ಜ್ಯೋತಿಷ್ಯ, ಛಂದಸ್ಸು
6 - ರುಚಿಗಳು - ಷಡ್ರುಚಿಗಳು (ಷಡ್ರಸಗಳು) - ಸಿಹಿ, ಉಪ್ಪು, ಹುಳಿ, ಕಹಿ, ಕಾರ, ಒಗರು
6 - ಋತುಗಳು - ಷಡೃತುಗಳು - ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ
6 - ದರ್ಶನಗಳು - ಷಡ್ದರ್ಶನಗಳು - ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮೀಮಾಂಸ, ಉತ್ತರ ಮೀಮಾಂಸ
6 - ಆಗಮಗಳು - ಷಡಾಗಮಗಳು –
೧.ಶೈವ (ಕಾಮಿಕಾಗಮ, ವಾತುಲಾಗಮ , ಅನಲಾಗಮ ಸುಪ್ರಭೇದಾಗಮ),
೨. ವೈಷ್ಣವ (ಪಾಂಚರಾತ್ರ, ವೈಖಾನಸ),
೩. ಶಾಕ್ತ (ಉತ್ತರದಲ್ಲಿ: ರುದ್ರಯಾಮಳ, ಕಾಲಿಕಾಗಮ, ತಂತ್ರಸಾರ, ಕುಲಾರ್ಣವ,
ದಕ್ಷಿಣದಲ್ಲಿ: ಶಾರದಾ ತಿಲಕ, ಮೇರು, ಮಾನಸಾರ, ವಿಜಯಾಗಮ )
೪. ಸೌರ (ಅರುಣಾಗಮ, ಸಮರಾಂಗ, ನಾರದಾಗಮ)
೫..ಜೈನ (ಆಚಾರಂಗ, ಸ್ಥಾನಾಂಗ... )
೬. ಬೌದ್ಧ (ಮಧ್ಯಮಾಗಮ, ಧೀರ್ಘಾಗಮ, ಸಂಯುಕ್ತಾಗಮ)
7 - ಋಷಿಗಳು - ಸಪ್ತರ್ಷಿಗಳು* - ೧) ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ವಸಿಷ್ಠ ಮತ್ತು ವಾಮದೇವ
- ೨) ಗೋತಮ, ಭರಧ್ವಾಜ, ವಿಶ್ವಾಮಿತ್ರ, ಜಮದಗ್ನಿ, ವಶಿಷ್ಠ, ಕಶ್ಯಪ ಮತ್ತು ಅತ್ರಿ
(*ಸಪ್ತರ್ಷಿಗಳ ಪಟ್ಟಿಯು ಗ್ರಂಥದಿಂದ ಗ್ರಂಥಕ್ಕೆ ಭಿನ್ನವಾಗಿದೆ)
7 - ಪರ್ವತಗಳು - ಸಪ್ತ ಪರ್ವತಗಳು/ನಗ/ಅದ್ರಿ/ಶೈಲ
7 - ದ್ವೀಪಗಳು - ಸಪ್ತ ದ್ವೀಪಗಳು - ಜಂಬೂ, ಪ್ಲಕ್ಷ, ಕುಶ, ಕ್ರೌಂಚ, ಶಾಕ, ಶಾಲ್ವಲ, ಪುಷ್ಕರ
8 - ಗಜಗಳು - ಅಷ್ಟದಿಗ್ಗಜಗಳು - ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಪ್ಷ ದಂತ, ಸಾರ್ವಭೌಮ, ಸುಪ್ರತೀಕ
8 - ವಸುಗಳು - ಅಷ್ಟ ವಸುಗಳು - ಆಪ, ಧ್ರುವ, ಸೋಮ, ಅಥರ್ವ, ಅನಿಲ, ಪ್ರತ್ಯೂಷಣ, ಅನಲ, ಪ್ರಭಾಸ
8 - ದಿಕ್ಪಾಲಕರು - ಅಷ್ಟ ದಿಕ್ಪಾಲಕರು - ಇಂದ್ರ, ಅಗ್ನಿ, ಯಮ, ನಿರುತ, ವರುಣ, ವಾಯು, ಕುಬೇರ, ಈಶಾನ
9 - ಗ್ರಹಗಳು - ನವಗ್ರಹಗಳು - ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು
9 - ರತ್ನಗಳು - ನವರತ್ನಗಳು - ವಜ್ರ, ವೈಡೂರ್ಯ, ಮಾಣಿಕ್ಯ, ಮುತ್ತು, ಹವಳ (ಪ್ರವಳ), ಗೋಮೇಧಿಕ, ಪುಷ್ಯರಾಗ, ಇಂದ್ರನೀಲ, ಮರಕತ (ಪಚ್ಚೆ)
9 - ನಿಧಿಗಳು - ನವ ನಿಧಿಗಳು - ಪದ್ಮ, ಮಹಾಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ ಮತ್ತು ಖರ್ವವೆಂಬ ಕುಬೇರನ ಒಂಬತ್ತು ನಿಧಿಗಳು
9 - ಪ್ರಜಾಪತಿಗಳು - ನವ ಪ್ರಜಾಪತಿಗಳು/ನವ ಬ್ರಹ್ಮರು - ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು, ದಕ್ಷ, ಭೃಗು, ವಸಿಷ್ಠ
9 - ರಂಧ್ರಗಳು - ನವರಂಧ್ರಗಳು - ಬಾಯಿ, ಎರಡು ಮೂಗಿನ ಹೊಳ್ಳೆಗಳು, ಎರಡು ಕಿವಿ ರಂಧ್ರಗಳು, ಎರಡು ಕಣ್ಣುಗಳು, ಮೂತ್ರ ರಂಧ್ರ ಮತ್ತು ಅಪಾನ ರಂಧ್ರ
10 - ಅವತಾರಗಳು - ದಶಾವತಾರಗಳು - ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಬುದ್ಧ/ಹಲಧಾರಿ (ಬಲರಾಮ?), ಕೃಷ್ಣ, (ಬುದ್ಧ) ಮತ್ತು ಕಲ್ಕಿ
11 - ರುದ್ರರು - ಏಕಾದಶ ರುದ್ರರು - ಭೀಮ, ಶಂಭು, ಗಿರೀಶ, ಅಜೈಕಪಾದ, ಅಹಿರ್ಬುಧ್ನಿ, ಪಿನಾಕಿ, ವಿಶಾಂಪತಿ, ಭುವನಾಧೀಶ್ವರ, ಸ್ಥಾಣು, ಕಪಾಲಿ, ಅಪರಾಜಿತ
12 - ಆದಿತ್ಯರು - ದ್ವಾದಶಾದಿತ್ಯರು - ಮಿತ್ರ, ರವಿ, ಸೂರ್ಯ, ಭಾನು, ಖಗ, ಪೂಷ, ಹಿರಣ್ಯಗರ್ಭ, ಮರೀಚಿ, ಆದಿತ್ಯ, ಸವಿತೃ, ಅರ್ಕ, ಭಾಸ್ಕರ
ಮುಂದುವರೆಯುವುದು.......
****
ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ -೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4 (PUBLISHED BY SHRI VEDA BHARATHI, AUTHOR: Dr. Remella Avadhanulu)
ಈ ಸರಣಿಯ ಹಿಂದಿನ ಲೇಖನಕ್ಕೆ "ಭಾಗ - ೧೦ ವೇದ ಗಣಿತ ಕಿರು ಪರಿಚಯ: ವಾರಗಳ ಹೆಸರಿನ ಹಿಂದಿರುವ ವೈಜ್ಞಾನಿಕತೆ" ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...