ಭಾಗ - ೧౨ ಭೀಷ್ಮ ಯುಧಿಷ್ಠಿರ ಸಂವಾದ: ಸಮುದ್ರಸರಿತ್ಸಂವಾದ ಅಥವಾ ಜೊಂಡು ಹುಲ್ಲಿನ ವೃತ್ತಾಂತವು!
ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಪವಡಿಸಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಸೂಚಿಸುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.
ಯುಧಿಷ್ಠಿರನು ಪ್ರಶ್ನಿಸಿದನು, "ಪಿತಾಮಹಾ! ದುರ್ಲಭವಾದ ರಾಜ್ಯವು ನನಗೆ ಲಭಿಸಿದೆ. ಆದರೆ ರಾಜ್ಯವು ಲಭಿಸಿದ ಮಾತ್ರಕ್ಕೆ, ಅಧಿಕಾರ ಯಂತ್ರಾಂಗವು ಆಧೀನದಲ್ಲಿದ್ದ ಮಾತ್ರಕ್ಕೆ ಏನಾಗುತ್ತದೆ? ಸೈನ್ಯ ಬಲ, ಧನ ಬಲ, ತೋಳ್ಬಲ ಯಾವುದೂ ಇಲ್ಲದೆ ಧರ್ಮವನ್ನು ನಾನು ಯಾವ ವಿಧವಾಗಿ ರಕ್ಷಿಸಬಲ್ಲೆ? ಕೋಶಾಗಾರದಲ್ಲಿ ಸಾಕಷ್ಟು ಧನವಿಲ್ಲದೆ, ವಿಪುಲವಾಗಿ ನಿಧಿಯನ್ನು ಸಂಗ್ರಹಿಸಿಕೊಳ್ಳದೆ ಪ್ರಜಾಸಂಕ್ಷೇಮ ಕಾರ್ಯಗಳನ್ನು ನಾನು ಯಾವ ವಿಧದಲ್ಲಿ ಕೈಗೊಳ್ಳಬಲ್ಲೆ? ಸತ್ಯವಾಕ್ಯಪರಿಪಾಲಕನೆನ್ನುವ ನನ್ನ ಬಿರುದನ್ನು, ನನ್ನ ವಾಗ್ದಾನಗಳನ್ನು ನಾನು ಹೇಗೆ ತಾನೆ ಕಾಪಾಡಿಕೊಳ್ಳಬಲ್ಲೆ? ಇಂತಹ ಪರಿಸ್ಥಿತಿಯಲ್ಲಿ ಅಂದರೆ ಸೈನ್ಯ ಬಲ, ಧನ ಬಲ, ತೋಳ್ಬಲಗಳಾವುವೂ ಇಲ್ಲದೆ ಬಲಹೀನನಾದ ರಾಜನನ್ನು ನಾಲ್ದೆಸೆಯಿಂದಲೂ ಶತ್ರುಗಳು ಮುತ್ತಿಗೆ ಹಾಕಿದರೆ ಆ ರಾಜನು ಆಗ ಏನು ಮಾಡಬೇಕು? ಅವನ ಕರ್ತವ್ಯವೇನು? ಶತ್ರುಗಳ ಮುಂದೆ ಅಂತಹ ರಾಜನು ಏನು ಮಾಡಬೇಕು?"
ಭೀಷ್ಮನು ಉತ್ತರಿಸಿದನು, "ಧರ್ಮನಂದನನೇ, ಈ ವಿಷಯದಲ್ಲಿ ಪ್ರಾಜ್ಞರು ‘ಸಮುದ್ರಸರಿತ್ಸಂವಾದ (ಸಮುದ್ರ ಮತ್ತು ನದಿಗಳ ಸಂವಾದ)’ ಎನ್ನುವ ಉಪಾಖ್ಯಾನವನ್ನು ಹೇಳುತ್ತಿರುತ್ತಾರೆ. ಅದನ್ನು ಕೇಳುವಂತವನಾಗು" ಸಮುದ್ರರಾಜನು ಒಮ್ಮೆ ನದಿಗಳನ್ನೆಲ್ಲಾ ಒಂದೆಡೆ ಸೇರಿಸಿ ಕುಶಲೋಪರಿ ವಿಚಾರಿಸುತ್ತಾ ಕುಳಿತಿದ್ದನು. ಆಗ ಸಮುದ್ರ ರಾಜನಿಗೆ ಒಂದು ಸಂಶಯವು ಉಂಟಾಯಿತು. ಅವನು ನದಿಗಳನ್ನುದ್ದೇಶಿಸಿ, "ನಾನು ಗಮನಿಸುತ್ತಾ ಇರುತ್ತೇನೆ. ಪ್ರವಾಹವುಕ್ಕಿ ಹರಿಯುವ ಸಮಯದಲ್ಲಿ ನೀವು ನದೀ ತಟಗಳನ್ನು ಕೊರೆಯುತ್ತಾ ದಡದ ಮೇಲಿರುವ ಮಹಾ ಮಹಾ ವೃಕ್ಷಗಳನ್ನೆಲ್ಲಾ ಉರುಳಿಸಿ ಅವು ಸಮೂಲಾಗ್ರವಾಗಿ (ಬೇರು ಸಮೇತ) ಕೊಚ್ಚಿಕೊಂಡು ಹೋಗುವಂತೆ ಮಾಡುತ್ತೀರಿ. ಆದರೆ ವೇತಸವು (ಜೊಂಡು ಹುಲ್ಲು) ಮಾತ್ರ ಚಕ್ಕುಚದರದೆ ಇದ್ದ ಜಾಗದಲ್ಲೇ ಇರುತ್ತದೆ. ಅವುಗಳ ಪರಿಮಾಣವನ್ನು ನೋಡಿದರೆ ಅವೇನೋ ಬಹಳ ಕಿರಿದಾದವು, ಅವು ಇದ್ದೂ ಇಲ್ಲದಂತೆ ಗಾಳಿಗೆ ತೊನೆದಾಡುತ್ತಾ ಇರುತ್ತವೆ. ಮೇಲಾಗಿ ಅವಕ್ಕೆ ತ್ರಾಣವೂ ಇರುವುದಿಲ್ಲ. ಹಾಗೆ ನೋಡಿದರೆ ವೃಕ್ಷಗಳು ನದಿಯ ದಡಕ್ಕೆ ದೂರವಾಗಿ ಇರುತ್ತವೆ ಆದರೆ ಈ ಜೊಂಡು ಹುಲ್ಲು ಒಡ್ಡಿನ ಮೇಲೆ ನೀರಿಗೆ ಅಂಟಿಕೊಂಡು ಇರುತ್ತವೆ. ಆದರೆ ನೀವು ಎಷ್ಟು ರಭಸವಾಗಿ ಹರಿದರೂ ಸಹ ಅವಕ್ಕೆ ಏನನ್ನೂ ಮಾಡಲಾರದೆ ಹೋಗುತ್ತೀರಿ. ದೊಡ್ಡ ದೊಡ್ಡ ತಲೆಗಳನ್ನು ನೆಲಕ್ಕುರುಳಿಸುವ ಶಕ್ತಿ ನಿಮಗಿದೆ. ಆದರೆ ಈ ಜೊಂಡು ಹುಲ್ಲಿನಂತಹ ಚಿಕ್ಕಪುಟ್ಟ ಗಿಡಗಳು ನಿಮಗೆ ಸೋಲುವುದಿಲ್ಲವಲ್ಲ? ಅವೇನು ಮಾಡಬಲ್ಲವು ಎಂದು ನೀವು ಅವನ್ನು ಉಪೇಕ್ಷಿಸುತ್ತಿದ್ದೀರೋ ಅಥವಾ ಅವೇನಾದರೂ ನಿಮಗೆ ಉಪಕಾರವನ್ನು ಮಾಡಿವೆಯೋ ಏನೋ? ಅದಕ್ಕೇ ಅಷ್ಟೊಂದು ಗೌರವವನ್ನು ಕೊಟ್ಟು ಅವನ್ನು ಉಳಿಸುತ್ತಿದ್ದೀರೇನೋ?!"
ಆಗ ಗಂಗಾನದಿಯು ಸಮುದ್ರರಾಜನಿಗೆ ಹೀಗೆ ಉತ್ತರವನ್ನು ಕೊಟ್ಟಳು - "ಸರಿತ್ಪತೀ! ಆ ಮರಗಳು ತಾವಿರುವ ಸ್ಥಳದಲ್ಲಿ ತಲೆಯೆತ್ತಿ ಬೀಗುತ್ತಾ ನಿಂತುಕೊಂಡು ತಲೆಬಾಗಲು ಸಿದ್ಧವಾಗವು. ಅವುಗಳಿಗೆ ಅಹಂಕಾರ ಮತ್ತು ಗರ್ವಗಳೆರಡೂ ಹೆಚ್ಚು. ಇತರರ ಶಕ್ತಿ ಸಾಮರ್ಥ್ಯಗಳೇನು ಎನ್ನುವುದನ್ನು ಗಣನಗೆ ತೆಗೆದುಕೊಂಡರೆ ಆ ಮರಗಳು ಹಾಗೆ ಪ್ರವರ್ತಿಸಲಾರವು. ಅವುಗಳ ವರ್ತನೆಯೇ ಅವು ಸ್ಥಾನಪಲ್ಲಟಗೊಳ್ಳಲು ಕಾರಣವಾಗುವುದಲ್ಲದೆ ಪ್ರವಾಹ ಸಮಯದಲ್ಲಿ ಅವು ನಾಶವಾಗುವುದಕ್ಕೆ ಕಾರಣವಾಗುತ್ತದೆ. ಆದರೆ ಜೊಂಡು ಹುಲ್ಲುಗಳು ಹಾಗೆ ಮಾಡವು. ಅವು ನದಿಯು ರಭಸವಾಗಿ ಹರಿಯುವುದನ್ನು ಗ್ರಹಿಸುತ್ತವೆ, ಪ್ರವಾಹವು ಉಕ್ಕುವುದನ್ನು ಗಮನಿಸಿದ ಕೂಡಲೇ ಅವು ತಲೆಗಳನ್ನು ಬಾಗಿಸುತ್ತವೆ"
"ಅವುಗಳ ತಲೆಯು ಬಾಗಿದೆ ಎಂದ ಮಾತ್ರಕ್ಕೆ ಅವು ಶರಣಾಗಿವೆ ಎಂದು ಅರ್ಥವಲ್ಲ. ನದಿಯ ವೇಗವು ಶಾಂತವಾಗುತ್ತಿದ್ದಂತೆ ಆ ಜೊಂಡು ಹುಲ್ಲು ಮತ್ತೆ ತಮ್ಮ ಸ್ಥಾನಗಳಲ್ಲಿ ತಲೆಯೆತ್ತಿ ನಿಂತುಕೊಳ್ಳುತ್ತವೆ. ಪೂರ್ವಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ".
"ಜೊಂಡು ಹುಲ್ಲಿಗೆ ಸಮಯಾಸಮಯದ ವಿವೇಕವು ಇದೆ. ದೇಶಕಾಲಗಳಿಗೆ ತಕ್ಕಂತೆ ಅವು ವ್ಯವಹರಿಸುತ್ತವೆ. ಅಷ್ಟೇ ಅಲ್ಲ ಅವು ನಮಗೆ ಅನುಕೂಲವಾಗುವಂತೆಯೇ ವರ್ತಿಸುತ್ತವೆ. ಅವು ನಮ್ಮ ವಶದಲ್ಲಿದ್ದರೂ ಸಹ ಉದ್ದಟತನವನ್ನು ತೋರಿಸವು. ಹಾಗಿರುವಾಗ ಅವುಗಳಿಗೆ ನಮ್ಮಿಂದ ಯಾವ ವಿಧವಾದ ಪ್ರಮಾದವುಂಟಾಗುತ್ತದೆ? ಅವುಗಳಿಗೆ ಸ್ಥಾನಭ್ರಷ್ಠತೆಯು ಏತಕ್ಕಾಗಿ ಉಂಟಾಗುತ್ತದೆ? ಅವುಗಳನ್ನು ನಾವು ಪ್ರವಾಹದಲ್ಲಿ ಏಕಾಗಿ ಕೊಚ್ಚಿಕೊಂಡು ಹೋಗುತ್ತೇವೆ?"
"ಕುಂತೀನಂದನನೇ! ಈ ವಿಧವಾಗಿ ಬಲಿಷ್ಠನಾದ ಶತ್ರುವಿನ ಪ್ರಥಮ ವೇಗಕ್ಕೆ, ಆರಂಭಶೂರತ್ವಕ್ಕೆ ತಲೆಬಾಗದೆ ಎದುರಿಸಿ ನಿಲ್ಲುವವನು ನಾಶವಾಗುತ್ತಾನೆ. ಶತ್ರುವಿನ ಬಲಾಬಲಗಳನ್ನು ಸಮೀಕ್ಷಿಸಿದ ನಂತರ ಅದಕ್ಕನುಸಾರವಾಗಿ ಪ್ರವರ್ತಿಸುವವನು ಎಂದಿಗೂ ಪರಾಜಯವನ್ನು ಹೊಂದುವುದಿಲ್ಲ"
ಇದು ಕೇವಲ ಒಬ್ಬ ರಾಜನು ಮಾತ್ರವೇ ಶತ್ರುಗಳೊಂದಿಗೆ ವ್ಯವಹರಿಸುವಾಗ ಅನುಸರಿಸಬೇಕಾದ ನೀತಿಯಲ್ಲ, ಇದು ಎಲ್ಲರಿಗೂ, ಎಲ್ಲ ಕಾಲಕ್ಕೂ ಅನ್ವಯಿಸುವ ನೀತಿ!
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ಜೊಂಡು ಹುಲ್ಲಿನ ಚಿತ್ರಕೃಪೆ: ಗೂಗಲ್
ಹಿಂದಿನ ಲೇಖನ ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು? ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A7-...
Comments
ಉ: ಭಾಗ - ೧౨ ಭೀಷ್ಮ ಯುಧಿಷ್ಠಿರ ಸಂವಾದ: ಸಮುದ್ರಸರಿತ್ಸಂವಾದ ಅಥವಾ...
ಈ ಲೇಖನದ ಮುಂದಿನ ಭಾಗ - ೧೩ ಭೀಷ್ಮ ಯುಧಿಷ್ಠಿರ ಸಂವಾದ: ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A9-...