ಭಾಗ - ೧೪ ಭೀಷ್ಮ ಯುಧಿಷ್ಠಿರ ಸಂವಾದ: ಕುಟಿಲ ನೀತಿ!

ಭಾಗ - ೧೪ ಭೀಷ್ಮ ಯುಧಿಷ್ಠಿರ ಸಂವಾದ: ಕುಟಿಲ ನೀತಿ!

ಚಿತ್ರ

         ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
         ಯುಧಿಷ್ಠಿರನು ಕೇಳಿದನು,"ಪಿತಾಮಹಾ, ಸತ್ಯ, ತ್ರೇತಾ, ದ್ವಾಪರ ಯುಗಗಳು ಪರಿಸಮಾಪ್ತವಾಗಿವೆ. ಈಗ ಕಲಿಯ ಆರಂಭವಾಗುತ್ತಿದೆ. ಧರ್ಮವು ಕ್ಷಯಿಸುತ್ತಿದೆ. ದರೋಡೆಕೋರತನ, ಕಳ್ಳತನ, ಅತ್ಯಾಚಾರಗಳು ಆರಂಭವಾಗಿವೆ. ಅವಿನೀತಿ, ಆಮಿಷಗಳಿಗೆ ಕೈಯೊಡ್ಡುವುದು, ಸ್ವಜನ ಪಕ್ಷಪಾತ, ಮೊದಲಾದವು ತಾಂಡವವಾಡುತ್ತಿವೆ. ಇಂತಹ ಸ್ಥಿತಿಯಲ್ಲಿ ರಾಜನಾದವನು ಏನು ಮಾಡಬೇಕು? ಉಪಾಯವನ್ನು ಹೇಳಬೇಕಾಗಿ ಪ್ರಾರ್ಥಿಸುತ್ತಿದ್ದೇನೆ" 
         ಭೀಷ್ಮನು ಹೀಗೆ ಉತ್ತರಿಸಿದನು. "ಧರ್ಮನಂದನನೇ! ಇಂತಹ ಸಮಯದಲ್ಲಿ ಅವಲಂಬಿಸಬೇಕಾದ್ದದು ಆಪದ್ಧರ್ಮವನ್ನೇ. ಅನುಸರಿಸಬೇಕಾದ್ದು ಕುಟಿಲ ನೀತಿಯನ್ನೇ. ಇಂತಹ ಸಂದರ್ಭಗಳಲ್ಲಿ ದಯೆ ದಾಕ್ಷಿಣ್ಯಗಳನ್ನು ಸ್ವಲ್ಪ ಬದಿಗಿರಿಸಿ ವ್ಯವಹರಿಸಬೇಕಾಗುತ್ತದೆ. ಸಮಯೋಚಿತವಾದ ವಿಧಾನಗಳನ್ನು ಅವಲಂಬಿಸಬೇಕಾಗುತ್ತದೆ" 
         "ರಾಜನಾದವನು ಯಾವಾಗಲೂ ದಂಡನೀತಿಯನ್ನೇ ಪ್ರಯೋಗಿಸಲು ಸಂಸಿದ್ಧನಾಗಿ ಇರಬೇಕು. ಇದು ಮೊದಲನೆಯ ವಿಷಯ. ಸಾಮ, ದಾನ ಭೇದಗಳಿಗಿಂತ ದಂಡವೇ ಇಂತಹ ಪರಿಸ್ಥಿತಿಗಳಲ್ಲಿ ಸ್ವೀಕಾರಾರ್ಹವಾದುದು. ಇಲ್ಲದಿದ್ದರೆ ಮರದಲ್ಲಿರುವ ತಾಯಿ ಬೇರು ಹಾಳಾದರೆ ಹೇಗೆ ಪೂರ್ತಿ ಮರವೇ ಉರುಳುವುದೋ ಹಾಗೆ ಅಸಲಿಗೇ ಮೋಸವುಂಟಾಗುತ್ತದೆ."
         "ಸಂಕಟ ಸ್ಥಿತಿ ಏರ್ಪಟ್ಟಾಗ ರಾಜನಾದವನು ನೇರವಾಗಿ ಮಂತ್ರಿಗಳೊಂದಿಗೆ ಕುಳಿತು ಮಂತ್ರಾಲೋಚನೆ ನಡೆಸಬೇಕು. ಚೆನ್ನಾಗಿ ಶೌರ್ಯವನ್ನು ಪ್ರಕಟಿಸಬೇಕು. ಉತ್ಸಾಹದಿಂದ ಯುದ್ಧವನ್ನು ಮಾಡಬೇಕು. ಅವಶ್ಯಕತೆಯುಂಟಾದಲ್ಲಿ ಯಾರಿಗೂ ಸಿಗದಂತೆ ಕಾಲಿಗೆ ಬುದ್ಧಿಯನ್ನೂ ಹೇಳಬೇಕು; ಪಲಾಯನವನ್ನೂ ಮಾಡಬೇಕು, ಅದಕ್ಕೆ ಸಂದೇಹಿಸಕೂಡದು.”
         "ಧರ್ಮನಂದನನೇ! ರಾಜನಾದವನಿಗೆ ಮಾತಿನಲ್ಲಿ ವಿನಯವು ಸ್ಫುರಿಸುತ್ತಿರಬೇಕು, ಆದರೆ ಹೃದಯವು ಮಾತ್ರ ಕತ್ತಿಯ ಅಲಗಿನಂತೆ ಮೊನಚಾಗಿರಬೇಕು."
         "ರಾಜನಾದವನು ಶತ್ರುಗಳ ಎದುರಿನಲ್ಲಿ ಅವಶ್ಯಕತೆಯುಂಟಾದಾಗ ಕೈ ಎತ್ತಿ ನಮಸ್ಕರಿಸಬೇಕು, ಪ್ರತಿಜ್ಞೆ, ಶಪಥಗಳನ್ನು ಮಾಡಬೇಕು, ವಾಗ್ದಾನ ಮಾಡಬೇಕು, ಆಶ್ವಾಸನೆ ಕೊಡಬೇಕು, ತಲೆಬಾಗಿ ಪಾದಾಭಿವಂದನೆ ಮಾಡುತ್ತಾ ಸಂಭಾಷಿಸಬೇಕು. ಇಷ್ಟೇ ಅಲ್ಲ, ಧೈರ್ಯ ಹೇಳಿ ಅವರ ಕಣ್ಣೀರನ್ನು ಒರೆಸುವುದಕ್ಕೂ ಸಂಕೋಚಿಸಕೂಡದು."
         "ಸಮಯವು ಅನುಕೂಲಿಸದಿದ್ದರೆ ಶತ್ರುಗಳನ್ನು ತನ್ನ ಬೆನ್ನಮೇಲೆ ಕೂರಿಸಿಕೊಂಡು ತಿರುಗಬೇಕು, ಸಮಯಸಾಧಿಸಿ ಬಂಡೆಯ ಮೇಲೆ ಕುಂಡವನ್ನು ಒಡೆಯುವಂತೆ ಅವರನ್ನು ನಾಶ ಮಾಡಬೇಕು, ಇದಕ್ಕೆ ಸಂದೇಹ ಬೇಡ."
         "ಕೌಂತೇಯ! ಕೇವಲ ಎರಡೇ ಎರಡು ನಿಮಿಷಗಳಾದರೂ ಸಹ ತಾಳೆಗರಿಯಂತೆ ಉರಿದು ಬೀಳಬೇಕು. ಪರಾಕ್ರಮವನ್ನು ಚಟ್ ಚಟ್ ಎಂದು ಪ್ರದರ್ಶಿಸಬೇಕು. ಅಷ್ಟೇ ಹೊರತು ಯಾವಾಗಲೂ ಬೂದಿಮುಚ್ಚಿದ ಕೆಂಡದಂತೆ ನಿರಂತರವಾಗಿ ಹೊಗೆಯಾಡುತ್ತಲೇ ಇರಬಾರದು."
         "ಕೋಗಿಲೆಯಂತೆ ಮಧುರವಾಗಿ ಮಾತನಾಡು, ವರಾಹದಂತೆ ವಿಜೃಂಭಿಸಿ ಹೋರಾಡು, ಮೇರುಪರ್ವತದಂತೆ ಶಿರವೆತ್ತಿಕೊಂಡು ನಿಲ್ಲು, ಶೂನ್ಯಗೃಹದಂತೆ ಎಲ್ಲರಿಗೂ ಆಶ್ರಯದಾತನಾಗಿರು, ನಟನಂತೆ ನಾಲ್ವರನ್ನು ಮೆಚ್ಚಿಸು, ಮಿತ್ರನಂತೆ ಹಿತವನ್ನು ಬಯಸುವವನಾಗು."
         "ಬಕದಂತೆ ಏಕಾಗ್ರತೆಯನ್ನು ರೂಢಿಸಿಕೊ, ಸಿಂಹದಂತೆ ಹೋರಾಡುವುದನ್ನು ಕರಗತ ಮಾಡಿಕೊ, ತೋಳದಂತೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡು" 
         "ಧನುಸ್ಸಿನಂತೆ ಬಾಗು, ಹರಿಣದಂತೆ ಚುರುಕಾಗಿರು, ಇಷ್ಟವಿಲ್ಲದಿದ್ದರೆ ಕುರುಡನಂತೆ ವರ್ತಿಸು, ಕಿವುಡನಾಗು"
         "ನಿನ್ನನ್ನು ವೃಕ್ಷವೆಂದು ಭಾವಿಸಿಕೊ, ಆ ವೃಕ್ಷವು ಬಹಳಷ್ಟು ಹೂವುಗಳಿಂದ ಕೂಡಿರಬೇಕು, ಆದರೆ ಅದಕ್ಕೆ ಕಾಯಿಗಳಿರಬಾರದು. ಒಂದು ವೇಳೆ ಕಾಯಿಗಳಾದರೂ ಸಹ ಅವು ಮಾಗಬಾರದು, ಆದರೆ ಮಾಗಿದಂತೆ ಕಾಣಿಸಬೇಕು. ಹೇಗೆ ಇದ್ದರೂ ಸಹ ಕಾಯಿಗಳನ್ನು ಮರವೇರಿ ಕೊಯ್ಯುವುದು ಕಷ್ಟಸಾಧ್ಯವಾಗಿರಬೇಕು. ಸುತ್ತಲೂ ಮುಳ್ಳುಗಳಿದ್ದರೆ ಒಳಿತು" 
         "ಕುಂತೀಸುತನೇ, ಮೀನು ಹಿಡಿಯುವ ಬೆಸ್ತನಂತೆ ಎದುರಿನವರ ಬಲಹೀನತೆಯನ್ನು ಗ್ರಹಿಸಿ ಅವರಿಗೆ ಪ್ರಲೋಭನೆಯನ್ನು ತೋರಿಸಿ ಅವರನ್ನು ನಾಶಮಾಡಬೇಕು. ಕ್ರೂರವಾಗಿ ಪ್ರವರ್ತಿಸದಿದ್ದರೆ ಪ್ರಭುತ್ವಕ್ಕೆ ನಿಧಿ ಸಂಗ್ರಹವಾಗುವುದೆಂತು?" 
         “ಋಣಶೇಷವನ್ನು, ಅಗ್ನಿಶೇಷವನ್ನು, ಶತ್ರುಶೇಷವನ್ನು ಉಳಿಸಬೇಡ". 
         “ರಾಜನಿಗೆ ದೂರದೃಷ್ಟಿ ಇರಬೇಕು. ನಾಯಿಗಿರುವಂತೆ ಅಪ್ರಮತ್ತತೆ ಇರಬೇಕು, ಹಾವುಗಳಿರುವಂತೆ ಸರಸರನೆ ಬಿಲದಲ್ಲಿ ಸೇರಿಕೊಳ್ಳುವಂತಹ ರಂಧ್ರಾನ್ವೇಷಣ ಗುಣವಿರಬೇಕು".
         "ಶೌರ್ಯವಂತರಿಗೆ ಎರಡೂ ಕೈಗಳನ್ನೆತ್ತಿ ನಮಸ್ಕರಿಸಿ ಅವರನ್ನು ಗೆಲ್ಲು, ಹೇಡಿಗಳನ್ನು ಭಯದಿಂದ ನಿನ್ನ ಅಂಕೆಯಲ್ಲಿಟ್ಟುಕೊ, ಲೋಭಿಗಳನ್ನು ಹಣದ ಆಮಿಷವನ್ನು ಒಡ್ಡಿ ನಿನ್ನ ಕೈಕೆಳಗಿರಿಸಿಕೊ. ನಿನ್ನ ಸರಿಸಮಾನರನ್ನು ಹೋರಾಟದ ಮೂಲಕ ಜಯಿಸು". 
         "ರಾಜನಾದವನು ಬಹಳ ಮೃದುವಾಗಿ ಇರಬಾರದು, ಹಾಗಿದ್ದರೆ ಅವಹೇಳನ ಮಾಡುತ್ತಾರೆ. ಹಾಗೆಂದು ಅತೀ ಕಠಿಣನಾಗಿಯೂ ಇರಬಾರದು, ಇದ್ದರೆ ಕಾರ್ಕೋಟಕನೆನ್ನುತ್ತಾರೆ. ಸಮಯಾಸಮಯಗಳನ್ನು ಹಾಗು ಉಚಿತಾನುಚಿತಗಳನ್ನು ನೋಡಿ ಕೋಮಲವಾಗಿರುವುದನ್ನು ಕಲಿತುಕೊಳ್ಳಬೇಕು."
         "ದೇಶದಲ್ಲಿ ವಿದ್ವಾಂಸರಾದ ಅನೇಕ ಪುರುಷರಿರುತ್ತಾರೆ. ಅನೇಕಾನೇಕ ವಿಷಯಗಳನ್ನು ಬಲ್ಲವರು ಇರುತ್ತಾರೆ. ಅಂತಹ ಹಿರಿಯರಿಗೆ ನಿಲುಕದಷ್ಟು ನಾನು ಎತ್ತರದಲ್ಲಿದ್ದೇನೆ ಎಂದು ಭಾವಿಸಿ ಅವರಿಗೆ ಅಪಕಾರವನ್ನು ಮಾಡಬಾರದು. ಅವರ ಬಾಹುಗಳು ಬಹಳ ದೀರ್ಘವಾಗಿದ್ದು ಬಹುದೂರದವರೆಗೆ ತೆರಳಬಲ್ಲವು. ಅವರಿಗೆ ಅಪಕಾರವನ್ನು ಮಾಡಿದರೆ ಅವರು ಪ್ರತೀಕಾರವನ್ನು ಮಾಡಬಲ್ಲರು. ಆ ಪ್ರತೀಕಾರದ ಪ್ರಭಾವವು ಸುದೂರ ಪ್ರಯಾಣದಂತೆ ಬಹು ದೀರ್ಘವಾಗಿಹುದು. ಆದ್ದರಿಂದ ಮೇಧಾವಿ ವರ್ಗದೊಂದಿಗೆ ಸಂಘರ್ಷವನ್ನು ಏರ್ಪಡಿಸಿಕೊಳ್ಳಬೇಡ. ಅದು ನಿನ್ನ ನಾಶಕ್ಕೆ ಹಾದಿ ಮಾಡಿಕೊಡುತ್ತದೆ. ದಾಟಬಹುದಾದ ನದಿಗಳನ್ನಷ್ಟೇ ದಾಟಬೇಕು. ದಾಟಲಾರದ ನದಿಗಳಲ್ಲಿ ಈಜುವ ಪ್ರಯತ್ನವನ್ನು ಮಾಡುವುದು ಮೂರ್ಖತ್ವವೇ ಆಗುತ್ತದೆ"
         "ಕುಂತೀಸುತನೇ! ನಾನು ಹೇಳಿದ ಈ ವಿಷಯಗಳನ್ನೆಲ್ಲಾ ಜಾಗ್ರತೆಯಾಗಿ ಕೇಳಿಸಿಕೊಂಡಿದ್ದೀಯಲ್ಲವೇ? ಕುಟಿಲ ನೀತಿಗೆ ಸಂಬಂಧಿಸಿದ ಈ ಸೂತ್ರಗಳನ್ನು ಒಳ್ಳೆಯವರ ಮೇಲೆ ಪ್ರಯೋಗಿಸಬೇಡ, ಹಾಗೆ ಮಾಡಿದಲ್ಲಿ ನಿನಗೆ ಕೇಡುಂಟಾಗುತ್ತದೆ. ಶತ್ರುಗಳ ಮೇಲೆ ಗುರಿಯಿಟ್ಟು ಹೊಡೆಯಬೇಕಾದ ಆಯುಧಗಳಿವು. ಸಂಕಟ ಸ್ಥಿತಿಯಲ್ಲಿ ಉಪಯೋಗಿಸಬೇಕಾದ ತಂತ್ರಗಳಿವು ಎನ್ನುವುದನ್ನು ನೆನಪಿಟ್ಟುಕೊಂಡು ಜಾಗ್ರತೆಯಾಗಿ ವ್ಯವಹರಿಸು". 
*****
         (ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
ಹಿಂದಿನ ಲೇಖನ ಭಾಗ - ೧೩ ಭೀಷ್ಮ ಯುಧಿಷ್ಠಿರ ಸಂವಾದ: ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A9-...

Rating
No votes yet

Comments

Submitted by makara Wed, 10/10/2018 - 09:08

ಈ ಲೇಖನದ ಮುಂದಿನ ಭಾಗ - ೧೫ ಭೀಷ್ಮ ಯುಧಿಷ್ಠಿರ ಸಂವಾದ: ಕಪೋಲವ್ಯಾಖ್ಯಾನ ಅರ್ಥಾತ್ ಶರಣಾಗತ ರಕ್ಷಣ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AB-...