ಭಾಗ - ೧೫ ಭೀಷ್ಮ ಯುಧಿಷ್ಠಿರ ಸಂವಾದ: ಕಪೋಲವ್ಯಾಖ್ಯಾನ ಅರ್ಥಾತ್ ಶರಣಾಗತ ರಕ್ಷಣ

ಭಾಗ - ೧೫ ಭೀಷ್ಮ ಯುಧಿಷ್ಠಿರ ಸಂವಾದ: ಕಪೋಲವ್ಯಾಖ್ಯಾನ ಅರ್ಥಾತ್ ಶರಣಾಗತ ರಕ್ಷಣ

ಚಿತ್ರ

        ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
 
      ಯುಧಿಷ್ಠಿರನು ಕೇಳಿದನು, "ಪಿತಾಮಹಾ! ತಾವು ಸಕಲ ಧರ್ಮ ರಹಸ್ಯಗಳನ್ನು ಅರಿತವರು. ನನಗೆ ಒಂದು ವಿಷಯದ ಕುರಿತು ಸಂಶಯವಿದೆ. ’ಶರಣಾಗತ ರಕ್ಷಣ’ ಎನ್ನುವ ಧರ್ಮವೊಂದಿದೆ ಎನ್ನುವುದನ್ನು ನಾನು ಕೇಳಿದ್ದೇನೆ. ಅದು ಏನು? ಶರಣಾಗತನಾದವನನ್ನು ರಕ್ಷಿಸಿದರೆ ಅಸಮಾನತೆಯು ಇರುವುದಿಲ್ಲವಷ್ಟೇ, ಅದನ್ನು ಸ್ವಲ್ಪ ವಿವರಿಸುವಂತಹವರಾಗಿ"
      ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯ. ಸುಖಪ್ರದವಾದ ಸಾಮಾಜಿಕ ಜೀವನ ಅಂದರೆ ಸಮಷ್ಟಿ ಹಿತವುಂಟಾಗಬೇಕೆಂದು ಹೇಳಿದಾಕ್ಷಣ ರಾಜ್ಯದಲ್ಲಿರುವ ಪ್ರಜೆಗಳೆಲ್ಲರನ್ನೂ ಪ್ರಭುತ್ವವೇ ಪ್ರತಿಕ್ಷಣವೂ ಪ್ರತಿವಿಷಯದಲ್ಲೂ ರಕ್ಷಿಸುತ್ತಾ ಇರಬೇಕೆಂದಲ್ಲ. ಎಲ್ಲವನ್ನೂ ರಾಜನಾದವನು ಮಾಡಲಾರ, ಮಾಡಬಾರದೂ ಸಹ. ರಾಜನಾದವನಿಗೆ ಕೆಲವು ಪರಿಮಿತಗಳಿರುತ್ತವೆ, ಕೆಲವು ಪರಿಧಿಗಳಿರುತ್ತವೆ. ವ್ಯಕ್ತಿಗಳು ವ್ಯಕ್ತಿಗತವಾಗಿಯೂ ಕುಟುಂಬಗಳು ಕುಟುಂಬದ ಮೂಲಕ ಕೈಗೊಳ್ಳಬೇಕಾದ ಅನೇಕಾನೇಕ ಕರ್ತವ್ಯಗಳಿವೆ. ಹಾಗೆ ಅವರು ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ರಾಜನಾದವನು ನೋಡಿಕೊಳ್ಳಬೇಕು. ನೀನು ಶರಣಾಗತ ರಕ್ಷಣೆಯ ಕುರಿತು ಕೇಳಿರುವುದರಿಂದ ಈ ವಿಷಯವಾಗಿ ಒಂದು ಪ್ರಾಚೀನ ಗಾಥೆಯಿರುವುದು. ಅದನ್ನು ಹೇಳುತ್ತೇನೆ, ಕೇಳುವಂತಹವನಾಗು"
      “ವ್ಯಾಧನೊಬ್ಬ ಅಡವಿಯಲ್ಲಿ ಪಕ್ಷಿಗಳಿಗೆ ಬಲೆಯನ್ನು ಬೀಸಿ ಅವನ್ನು ಹಿಡಿಯಲು ತಿರುಗುತ್ತಿದ್ದನು. ಒಂದು ದಿನ ದೊಡ್ಡದಾದ ಬಿರುಗಾಳಿ ಎದ್ದು, ಸಿಡಿಲು ಗುಡುಗುಗಳ ಸಮೇತ ಮಳೆ ಸುರಿಯಲಾರಂಭಿಸಿತು. ಬಲೆಯಲ್ಲಿ ಸಿಕ್ಕ ಹಕ್ಕಿಗಳೊಂದಿಗೆ ಆ ವ್ಯಾಧನು ಒಂದು ಮರದ ಕೆಳಗೆ ಬಂದು ಕುಳಿತುಕೊಂಡ. ಅವನು ಚಳಿಗೆ ಗಡಗಡ ನಡುಗುತ್ತಿದ್ದ. ಮರದ ಮೇಲೆ ಒಂದು ಗಂಡು ಕಪೋಲವಿತ್ತು (ಪಾರಿವಾಳ). ಅದು ಆ ವ್ಯಾಧನ ದುಃಸ್ಥಿತಿಯನ್ನು ನೋಡಿತು. "ಅಯ್ಯೋ! ಪಾಪ! ಇವನು ನನ್ನ ಮನೆಗೆ ಬಂದಿದ್ದಾನೆ. ಕಷ್ಟದಲ್ಲಿದ್ದಾನೆ. ನನ್ನ ಆಶ್ರಯಕ್ಕೆ ಬಂದಿದ್ದಾನೆ. ಇವನಿಗೆ ನಾನೇನು ಮಾಡಬಲ್ಲೆ? ಮನೆಗೆ ಬಂದ ಅತಿಥಿಯ ಸೇವೆಯನ್ನು ಮಾಡುವುದು ನನ್ನ ಧರ್ಮ. ಆದರೆ ಏನು ಮಾಡಲಿ? ನನ್ನ ಹೆಂಡತಿ ಮನೆಗೆ ಬಂದಿಲ್ಲ. ಅಡವಿಯಲ್ಲಿ ಎಲ್ಲಿ ಸಿಕ್ಕಿಕೊಂಡಿದೆಯೋ ಏನೋ?" ಆ ವ್ಯಾಧನ ಬಲೆಯಲ್ಲಿ ಆ ಹೆಣ್ಣು ಪಾರಿವಾಳವು ಸಿಕ್ಕಿಹಾಕಿಕೊಂಡಿತ್ತು. ತನ್ನ ಪತಿಯು ತನ್ನನ್ನು ಜ್ಞಾಪಿಸಿಕೊಂಡದ್ದನ್ನು ಗಮನಿಸಿ, ಅದು ಪತಿಗೆ ಹೇಳಿತು, "ನಾಥಾ! ಈ ವ್ಯಾಧನು ನಮ್ಮ ಶತ್ರು, ನನ್ನನ್ನು ಬಂಧಿಸಿದ್ದಾನೆ. ಆದರೂ ಇವನು ನಮ್ಮ ಅತಿಥಿ. ನೀನು ಅತಿಥಿಯನ್ನು ಸತ್ಕರಿಸುವುದು ಶಿಷ್ಠಾಚಾರ".
      "ಆಗ ಆ ಗಂಡು ಪಾರಿವಾಳವು ತನ್ನ ಸತಿಯ ಸ್ಥಿತಿಗೆ ಮರುಗಿತು. ಆದರೂ ಸಹ ಅದು ಆ ವ್ಯಾಧನನ್ನು ನೋಡಿ, "ಅಯ್ಯಾ, ನಿನಗೆ ಸ್ವಾಗತ! ಏನು ಬೇಕು ನಿನಗೆ? ಪ್ರೇಮದಿಂದ ಕೇಳುತ್ತಿದ್ದೇನೆ. ಶತ್ರುವೇ ಆಗಲಿ ಮನೆಗೆ ಬಂದವರನ್ನು ಆದರಿಸಬೇಕೆಂದು ಧರ್ಮವು ಹೇಳುತ್ತದೆ. ಮರವನ್ನು ಕತ್ತರಿಸಲು ಕೊಡಲಿ ಹಿಡಿದು ಬಂದವನಿಗೂ ಸಹ ಮರವು ನೆರಳನ್ನೀಯುತ್ತದೆ" ಎಂದು ಹೇಳಿತು. "ಚಳಿಯನ್ನು ಹೋಗಲಾಡಿಸುವ ಉಪಾಯವೇನಾದರೂ ಇದ್ದರೆ ನೋಡು" ಎಂದು ಆ ವ್ಯಾಧನು ಹೇಳಿದನು. ಆಗ ಆ ಪಾರಿವಾಳವು ಅದೆಲ್ಲಿಗೋ ಹೋಗಿ ಕೆಂಡವನ್ನು ತಂದಿತು. ಕಡ್ಡಿಗಳನ್ನು ತಂದು ಗುಡ್ಡೆ ಹಾಕಿತು. ಬೆಂಕಿಯನ್ನು ಉರಿಸಿ ಆ ವ್ಯಾಧನು ಚಳಿ ಕಾಸಿಕೊಂಡನು"
       "ಆಗ ಆ ಪಾರಿವಾಳವು, "ಅಯ್ಯಾ, ನಾನು ನಿನಗೆ ಇನ್ನೂ ಯಾವ ವಿಧವಾಗಿ ಸಹಾಯ ಮಾಡಬಲ್ಲೆ? ಗೃಹಸ್ಥನಾದವನು ಪಂಚ ಯಜ್ಞಗಳನ್ನು ಅನುಷ್ಠಾನ ಮಾಡಬೇಕು. ಹಾಗೆ ಮಾಡದೆ ಹೋದಲ್ಲಿ ಅವನಿಗೆ ಇಹಪರಗಳೆರಡರಲ್ಲೂ ಸೌಖ್ಯವಿರದು ಎಂದು ಹೇಳಲಾಗಿದೆ" ಎಂದು ಹೇಳಿತು. ಆಗ ಆ ವ್ಯಾಧನು "ನನಗೆ ಹಸಿವೆಯಾಗಿದೆ" ಎಂದನು. ಪಾರಿವಾಳವು ಆಲೋಚಿಸಿ ಒಂದು ನಿರ್ಣಯಕ್ಕೆ ಬಂದಿತು. ಸೊಯ್ಯೆಂದು ಮೇಲಿನಿಂದ ಕೆಳಕ್ಕೆ ಹಾರಿ ಬೆಂಕಿಯಲ್ಲಿ ಬಿದ್ದಿತು. ಬೀಳುತ್ತಾ, ಬೀಳುತ್ತಾ, "ಅಯ್ಯಾ, ನನ್ನ ಮಾಂಸವನ್ನು ತಿಂದು ನಿನ್ನ ಕ್ಷುದ್ಬಾಧೆಯನ್ನು ತೀರಿಸಿಕೊ" ಎಂದು ಹೇಳಿತು. ಆ ವ್ಯಾಧನು ಆಶ್ಚರ್ಯ ಚಕಿತನಾದನು. ಏನಿದು? ಒಂದು ಪಕ್ಷಿಯಲ್ಲಿ ಇಂತಹ ಉದಾರ ಸ್ವಭಾವವೇ? ಗೃಹಸ್ಥ ಧರ್ಮವನ್ನು ಒಂದು ಪಾರಿವಾಳವು ನನಗೆ ಉಪದೇಶಿಸಬೇಕಾಯಿತೆ? ನನ್ನ ಜೀವನವು ಎಷ್ಟು ನಿಕೃಷ್ಟವಾದದ್ದು? ಅವನಲ್ಲಿ ಆಲೋಚನೆಯ ತರಂಗಗಳೆದ್ದವು. ಅವನಲ್ಲಿ ವೈರಾಗ್ಯವು ಮೈದಳೆಯಿತು. ಅವನು ಒಂದು ದೃಢ ನಿಶ್ಚಯಕ್ಕೆ ಬಂದು ತನ್ನ ಬಲೆಯಲ್ಲಿ ಸಿಲುಕಿಕೊಂಡಿದ್ದ ಪಾರಿವಾಳಗಳನ್ನೆಲ್ಲಾ ಬಿಡುಗಡೆ ಮಾಡಿದನು. ಇನ್ನು ತಾನು ಜೀವದಿಂದ ಬದುಕಿರುವುದೇ ತಪ್ಪು ಎಂದು ಭಾವಿಸಿದನು. ಅವನು ತನ್ನ ಪ್ರಾಣವನ್ನು ತೊರೆಯಲು ಸಂಕಲ್ಪಿಸಿದನು. ಅವನು ಹಾಗೇ ಮುಂದೆ ಸಾಗಲಾರಂಭಿಸಿದ. "
        "ಇಷ್ಟರಲ್ಲಿ ಹೆಣ್ಣು ಪಾರಿವಾಳವು ಅಷ್ಟೆತ್ತರ ಮೇಲಕ್ಕೆ ಹಾರಿ ತನ್ನ ಪತಿಯೊಂದಿಗೆ ತಾನೂ ಸಹ ಬೆಂಕಿಯಲ್ಲಿ ಬಿದ್ದಿತು. ಇದನ್ನು ನೋಡಿದ ವ್ಯಾಧನು ದಿಗ್ಭ್ರಾಂತನಾಗಿ ಕಾಳ್ಗಿಚ್ಚನ್ನು ಪ್ರವೇಶಿಸಿ ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡನು" 
        "ಆದ್ದರಿಂದ ಧರ್ಮಜನೇ! ಶರಣಾಗತ ರಕ್ಷಣವೆನ್ನುವ ವ್ರತವನ್ನು ಸಮಾಜದಲ್ಲಿನ ಪ್ರತಿ ವ್ಯಕ್ತಿ ಅನುಸರಿಸಬೇಕಾದ್ದು ಧರ್ಮವಾಗಿದೆ" ಎಂದು ಭೀಷ್ಮ ಪಿತಾಮಹನು ಕಪೋಲ ವ್ಯಾಖ್ಯಾನವನ್ನು ಮುಕ್ತಾಯಗೊಳಿಸಿದ. 
       ಕುಟುಂಬ ವ್ಯವಸ್ಥೆಯಲ್ಲಿ ಅದರಲ್ಲೂ ಮುಖ್ಯವಾಗಿ ಗೃಹಸ್ಥಾಶ್ರಮದಲ್ಲಿ ಇರುವ ವ್ಯಕ್ತಿಗೆ ಕಾಮತೃಪ್ತಿಯೊಂದಿಗೆ ಋಣತ್ರಯ ವಿಮುಕ್ತಿ ಎನ್ನುವ ಲಕ್ಷ್ಯವೂ ಪ್ರಮುಖವಾದದು. ಋಣವಿಮುಕ್ತಿಗೆ ಪಂಚಯಜ್ಞಾನುಷ್ಠಾನವು ಮುಖ್ಯವಾದುದು. ಅದರಲ್ಲೂ ಅತಿಥಿ ಯಜ್ಞವು ಅತಿ ಮುಖ್ಯವಾದುದು. ಗೃಹಸ್ಥನಾದವನು ಪಕ್ಕದಲ್ಲಿರುವವನು ಊಟ ಮಾಡಿದ ನಂತರ ತಾನು ಊಟ ಮಾಡಬೇಕು. ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ಸಾಧಿಸಬೇಕಾದಲ್ಲಿ ಭಾರತೀಯ ಸಂಸ್ಕೃತಿಯು ಸೂಚಿಸುವ ಮಹತ್ವವಾದ ವಿಷಯವಿದು. ಈ ಕರ್ತವ್ಯವನ್ನು ನೇರವೇರಿಸಲು ಅನುಕೂಲಕರವಾದ ವಾತಾವರಣವನ್ನು ಉಂಟು ಮಾಡುವುದು ರಾಜನಾದವನು ಕೈಗೊಳ್ಳಬೇಕಾದ ಕಾರ್ಯವಾಗಿದೆ. ಇದಕ್ಕೆ ಹಿರಿಯರೂ ಸಹ ಮಾರ್ಗದರ್ಶನ ಮಾಡಬೇಕು. 
       ಮತ್ತೊಂದು ಅಂಶ “ವಿವಾಹ ವ್ಯವಸ್ಥೆ". ದಿನವೂ ಬಟ್ಟೆಗಳನ್ನು ಬದಲಿಸಿದಂತೆ ಗಂಡಂದಿರನ್ನು ಬದಲಾಯಿಸುವ ವ್ಯವಸ್ಥೆಯಲ್ಲಾಗಲಿ, ಅಸಲಿಗೆ ವಿವಾಹ ವ್ಯವಸ್ಥೆಯನ್ನೇ ರದ್ಧುಗೊಳಿಸುವ ವ್ಯವಸ್ಥೆಯಲ್ಲಾಗಲಿ ಅಂದರೆ ’ಲಿವಿಂಗ್ ಟು ಗೆದರ್’  ಎನ್ನುವ ’ಜೊತೆನಿವಾಸ ಪದ್ಧತಿ’ಯಲ್ಲಾಗಲಿ ವೈಭೋವೋಪೇತವಾದ ಸುಸ್ಥಿರವಾದ ಸಮಾಜ ನಿರ್ಮಾಣಕ್ಕೆ ಅವಕಾಶವಿಲ್ಲ. ಭಾರತೀಯ ವಿವಾಹ ವ್ಯವಸ್ಥೆಯ ಹಿರಿಮೆಯನ್ನೂ ಸಹ ಈ ಕಪೋಲವ್ಯಾಖ್ಯಾನದ ಮೂಲಕ ಭೀಷ್ಮನು ನಮಗೆ ವಿಶದಪಡಿಸಿದ್ದಾನೆ. 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
 
ಹಿಂದಿನ ಲೇಖನ ಭಾಗ - ೧೪ ಭೀಷ್ಮ ಯುಧಿಷ್ಠಿರ ಸಂವಾದ: ಕುಟಿಲ ನೀತಿ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AA-...
 

Rating
No votes yet

Comments

Submitted by makara Thu, 10/11/2018 - 05:11

ಈ ಲೇಖನದ ಮುಂದಿನ ಭಾಗ - ೧೬ ಭೀಷ್ಮ ಯುಧಿಷ್ಠಿರ ಸಂವಾದ: ನಾಡೀಜಂಘನ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AC-...