ಭಾಗ - ೪ ಮನುವಿನ ಧರ್ಮ: ಪರಂಗಿಗಳು ತಂದಿಟ್ಟ ಪಜೀತಿ
ಒಂದೇ ಸಮಾಜಕ್ಕೆ ಸೇರಿದ ಮನುಷ್ಯರ ಮಧ್ಯೆ ಉಚ್ಚ, ನೀಚ ಭೇದಗಳನ್ನು ಸೃಷ್ಟಿಸಿ ಪೋಷಿಸಿದ್ದು ಹಿಂದು ಧರ್ಮವೊಂದೇ...... ಅದು ಮಾಡದೇ ಇರುವ ಘೋರವಾದ ತಪ್ಪುಗಳಿಲ್ಲ. ರಾಜರಿಂದ ಮಾಡಿಸದೇ ಇರುವ ಘೋರವಾದ ಅಪರಾಧಗಳಿಲ್ಲ. ಸಾವಿರಾರು ವರ್ಷಗಳ ಪರ್ಯಂತ ಸಾಗಿದ ಆ ದುರಂತಗಳ ಛಾಯೆಯು ಇಂದಿಗೂ ಹಿಂದು ಸಮಾಜವನ್ನು ಆವರಿಸಿ ಪೀಡೆಯಂತೆ ಹಿಡಿದು ಅಲುಗಾಡಿಸುತ್ತಿದೆ. ಈ ಪರಿಸ್ಥಿತಿಯನ್ನು ಹುಟ್ಟುಹಾಕಿದ ಗ್ರಂಥಗಳಲ್ಲಿ ಮನುಸ್ಮೃತಿಯದೇ ಅಗ್ರಸ್ಥಾನ..... ಕಡೇ ಪಕ್ಷ ಒಂದು ಸಾವಿರ ವರ್ಷಗಳ ಕಾಲವಾದರೂ ಮನುಸ್ಮೃತಿ ಜಾರಿಯಲ್ಲಿತ್ತು.....ಸ್ಮೃತಿಗಳ ಅಧಿಕಾರವು ಅಲ್ಪ-ಸ್ವಲ್ಪ ವಿದೇಶಿ ಮತ ಪಾಲಕರ ಕಾಲದಲ್ಲಿ ತಗ್ಗುತ್ತಾ ಕ್ರಮೇಣ ಕನಿಷ್ಠ ಸ್ಥಾಯಿಗೆ ಸೇರಿತು........ ಈ ದೇಶವು ಒಂದು ವೇಳೆ ವಿದೇಶಿಯರ ಆಳ್ವಿಕೆಗೆ ಒಳಪಡದಿದ್ದರೆ, ಇಂದಿಗೂ ಸಹ ಮನಸ್ಮೃತಿಯಂತಹ ಘೋರವಾದ ಶಾಸನಗಳು ಜಾರಿಯಲ್ಲಿರುತ್ತಿದ್ದವೆನ್ನುವುದನ್ನು ನಾವು ಮರೆತು ಹೋಗಬಾರದು....
(ತೆಲುಗಿನಲ್ಲಿ ರಾವಿಪೂಡಿ ವೇಂಕಟಾದ್ರಿಯವರು ರಚಿಸಿರುವ, ಮನುಸ್ಮೃತಿ ಮೈನಸ್ ಅಶುದ್ಧಂ, ಪುಟ ೨, ೩೨).
ಈ ವಿಧವಾದ ಅಭಿಪ್ರಾಯವು ನಮ್ಮ ದೇಶದಲ್ಲಿನ ಬಹಳಷ್ಟು ಜನ ಮೇಧಾವಿಗಳಿಗೆ ಬಹಳ ಕಾಲದಿಂದಲೂ ಇದೆ. ಹಲವು ಸಾವಿರ ವರ್ಷಗಳಿಂದ ಈ ದೇಶದಲ್ಲಿನ ಬ್ರಾಹ್ಮಣ, ಪುರೋಹಿತಶಾಹಿ ವರ್ಗವು ತಮ್ಮ ಹಿಡಿತಲ್ಲಿಟ್ಟುಕೊಂಡಿದ್ದ ರಾಜರ ಮೂಲಕ ಕ್ರೂರಾತಿಕ್ರೂರವಾಗಿ, ನೀಚಾತಿ ನೀಚವಾಗಿ ಇಲ್ಲಿನ ಮೂಲನಿವಾಸಿಗಳನ್ನು (ಆದಿವಾಸಿಗಳು), ದಲಿತರನ್ನು, ಶೂದ್ರರನ್ನು, ಸ್ತ್ರೀಯರನ್ನು ಕಾಲಡಿ ತುಳಿದು ಹೊಸಕಿ ಹಾಕಿತೆಂದೂ..... ಅದೃಷ್ಟವಶಾತ್ ಈ ದೇಶಕ್ಕೆ ಬ್ರಿಟಿಷರು ಬಂದು ಚೊಕ್ಕಟವಾಗಿ ಪರಿಪಾಲನೆ ಮಾಡಲು ಆರಂಭಿಸಿದ ನಂತರ..... ನೀಚ ನಿಕೃಷ್ಟವಾದ ಮನುಸ್ಮೃತಿಯ ಪೀಡೆಯಿಂದ ದೇಶವು ಮುಕ್ತವಾಯಿತೆನ್ನುವುದು....... ಶುದ್ಧವಾದ ಬುದ್ಧಿಯನ್ನು ಪಡೆದುಕೊಂಡ ನಮ್ಮ ಬುದ್ಧಿಜೀವಿಗಳ ಬೃಹತ್ತಾದ ಭ್ರಮೆ.
ನಿಜ ಹೇಳಬೇಕೆಂದರೆ..... ನಂಬುತ್ತೀರೋ ಬಿಡುತ್ತೀರೋ, ಆದರೆ ಬ್ರಿಟಿಷರು ಮೋಸ ವಂಚನೆಗಳಿಂದ ನಮ್ಮ ದೇಶವನ್ನು ದುರಾಕ್ರಮಣ ಮಾಡಿದ ನಂತರವೇ ಮನುಸ್ಮೃತಿಗೆ ರಾಜಯೋಗವು ಬಂದೊದಗಿದ್ದು!
ಅದಕ್ಕೂ ಮುಂಚೆ ಹಲವು ಸಾವಿರ ವರ್ಷಗಳ ಪರ್ಯಂತ ಮನುಸ್ಮೃತಿಯು ನಿತ್ಯ ವ್ಯವಹಾರದಲ್ಲಿ ಪ್ರಚಲಿತವಿತ್ತು. ಸ್ಮೃತಿಗಳಲ್ಲೆಲ್ಲಾ ಅದು ಪ್ರಾಧಾನ್ಯತೆಯನ್ನು ಪಡೆದುಕೊಂಡು ಶ್ರೇಷ್ಠ ಗ್ರಂಥವೆನಿಸಿತ್ತಲ್ಲದೇ ವಿದ್ವಾಂಸರ ಮತ್ತು ಧಾರ್ಮಿಕವೇತ್ತರ ಮನ್ನಣೆಗೆ ಅದು ಪಾತ್ರವಾಗಿತ್ತು. ಆದರೆ ಪೂರ್ವದಲ್ಲಿ ಅದಕ್ಕೆ ಕಾನೂನುಬದ್ಧ ಅಥವಾ ರಾಜ್ಯಾಂಗಬದ್ಧ ಅಧಿಕಾರವು ಎಂದಿಗೂ ಇರಲಿಲ್ಲ. ಅಪರಾಧಗಳಿಗೆ ಶಿಕ್ಷೆಯು ಮನುಸ್ಮೃತಿಯಲ್ಲಿ ಹೇಳಿದಂತೆಯೇ ಜಾರಿಯಾಗಬೇಕೆಂದು ಯಾವುದೇ ರಾಜನು ಶಾಸನವನ್ನು ಮಾಡಲಿಲ್ಲ. ಯಾವುದೇ ಕಾಲದಲ್ಲಿ, ಯಾವುದೇ ನ್ಯಾಯಾಲಯದಲ್ಲಿ ಅಥವಾ ಯಾವುದೇ ರಾಜಾಸ್ಥಾನವಾಗಲಿ ಮನುಸ್ಮೃತಿಯನ್ನು ಪರಮಪ್ರಮಾಣ ಗ್ರಂಥವೆಂದೂ, ಅನುಲ್ಲಂಘನೀಯ ಶಾಸನವೆಂದೂ ಪರಿಗಣಿಸಿ ಅದನ್ನು ಅಮಲಿನಲ್ಲಿ ತಂದ ದಾಖಲೆಯು ನಮಗೆ ಚರಿತ್ರೆಯಲ್ಲಿ ಕಾಣಸಿಗದು. ನಮಗೆ ಲೆಕ್ಕವಿಲ್ಲದಷ್ಟು ಲಭ್ಯವಿರುವ ಸ್ಮೃತಿಗಳಲ್ಲಿ ಮನುಸ್ಮೃತಿಯೂ ಕೂಡಾ ಒಂದು ಧರ್ಮಸಂಹಿತೆಯಷ್ಟೆ. ನ್ಯಾಯ ಮತ್ತು ಧರ್ಮಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಬೇಕಾದಾಗ ಮನುಧರ್ಮವನ್ನು ಅನುಸರಿಸುವುದು ಐಚ್ಚಿಕವೇ ಹೊರತು ಚಾಚೂ ತಪ್ಪದೇ ಪಾಲಿಸಲೇಬೇಕಾದ ನಿರ್ಬಂಧವಾಗಿ ಎಂದಿಗೂ ಇರಲಿಲ್ಲ. ಈ ವಿಷಯವನ್ನು ಪಾಶ್ಚಾತ್ಯ ವಿದ್ವಾಂಸರೂ ಸಹ ಅಂಗೀಕರಿಸಿದ್ದಾರೆ.
“In the opinion of the best Contemporary Orientalists Manusmriti does not, as a whole, represent a set of rules ever actually administered in Hindustan. It is in great part an Ideal picture of that which, in the view of a Brahmin, ought to be law”
"ಮನುಸ್ಮೃತಿಯ ಕಟ್ಟಳೆಗಳು ಒಟ್ಟಾರೆಯಾಗಿ...... ಹಿಂದುಸ್ತಾನದಲ್ಲಿ ಯಾವ ಕಾಲದಲ್ಲೂ ಅಮಲಿನಲ್ಲಿ ಇರಲಿಲ್ಲ. ಶಾಸನವೆಂದರೆ ಯಾವ ವಿಧವಾಗಿ ಇರಬೇಕೆಂದು ಒಬ್ಬ ಬ್ರಾಹ್ಮಣನು ಭಾವಿಸುತ್ತಾನೆ ಎನ್ನುವುದನ್ನು ಮಾತ್ರವೇ ಅದು ಪ್ರಧಾನವಾಗಿ ಚಿತ್ರಿಸುತ್ತದೆ". ಪ್ರಾಚೀನ ನಾಗರಿಕತೆಯನ್ನು ಅಧ್ಯಯನ ಮಾಡಿದ ಮಹನೀಯರೆಲ್ಲರ ಅಭಿಪ್ರಾಯವು ಇದೇ...... ಎಂದು Family Law and Customary Law in Asia: A Contemporary Legal Perspective ಎನ್ನುವ ಗ್ರಂಥದಲ್ಲಿ ಡೇವಿಡ್ ಬಕ್ಸ್ಬ್ಹಾಮ್ ಬರೆದಿದ್ದಾನೆ. ಅದೇ ವಿಧವಾಗಿ......
"There is no Historical evidence for either an active propagation or implementation of Manusmrithi by a ruler or any state - as distinct from other forms of recognizing, respecting and using the text. Thinking of the Dharmasastra as a legal code and of its authors as lawgivers is thus a serious misunderstanding of its History"
ಮನುಸ್ಮೃತಿಗೆ ಪ್ರಾಧಾನ್ಯತೆಯನ್ನು ಕೊಡುವುದು, ಗೌರವಿಸುವುದು, ಉಲ್ಲೇಖ ಗ್ರಂಥವಾಗಿ ಅದನ್ನು ಉಪಯೋಗಿಸುವುದು ಬಿಟ್ಟರೆ.... ಯಾವೊಬ್ಬ ರಾಜನಾಗಲಿ, ಯಾವೊಂದು ರಾಜ್ಯವಾಗಲಿ ಮನುಸ್ಮೃತಿಯನ್ನು ತೀಕ್ಷ್ಣವಾಗಿ ತಮ್ಮ ರಾಜ್ಯದಲ್ಲಿ ಹರಡಿತ್ತೆಂದು ಹೇಳುವುದಕ್ಕಾಗಲಿ, ಜಾರಿಗೆ ತಂದಿತ್ತೆನ್ನುವುದಕ್ಕಾಗಲಿ ಯಾವುದೇ ಚಾರಿತ್ರಿಕ ದಾಖಲೆಗಳಿಲ್ಲ. ಈ ಧರ್ಮಶಾಸ್ತ್ರವನ್ನು ನ್ಯಾಯಸಂಹಿತೆಯಾಗಿ ಮತ್ತು ಅದನ್ನು ರಚಿಸಿದವರನ್ನು ಶಾಸನಕರ್ತರಾಗಿ ಭಾವಿಸುವುದು ಇತಿಹಾಸವನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಪ್ರಮಾದವೇ ಆಗುತ್ತದೆ" ಎಂದು The spirit of Hindu Law ಗ್ರಂಥದ ಪುಟ ೧೪ರಲ್ಲಿ ಅದರ ಕರ್ತೃವಾದ ಡೊನಾಲ್ಡ್ ಡೇವಿಸ್ (Donald Devis). ಮನುಸ್ಮೃತಿ ಒಂದು ಸೈದ್ಧಾಂತಿಕ ಸಂಪನ್ಮೂಲ ಗ್ರಂಥವಷ್ಟೆ (Theoretical resource) ಮಾತ್ರವೇ ಎಂದು ವೆರ್ನರ್ ಮೆನ್ಸ್ಕಿ (Werner Menski) Hindu Law: Beyond Tradition and Modernity ಎನ್ನುವ ತನ್ನ ಗ್ರಂಥದಲ್ಲಿ ಸ್ಪಷ್ಟಪಡಿಸಿದ್ದಾನೆ.
ಹಾಗಾದರೆ ಯಾವ ಕಾಲದಲ್ಲಿಯೂ ಕಾನೂನುಬದ್ಧ ಮನ್ನಣೆಯಿಲ್ಲದ ಮನುಸ್ಮೃತಿಗೆ ಹಿಂದೆಂದೂ ಕಂಡು ಕೇಳರಿಯದಂತಹ ಪ್ರಾಮುಖ್ಯತೆ, ಪ್ರಾಧಾನ್ಯತೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಹೇಗೆ ಬಂದಿತು ಎಂದು ಆಲೋಚಿಸುತ್ತಿದ್ದೀರಾ?
ಭಾರತದಲ್ಲಿ ಹಿಂದು ರಾಜರ ಪರಿಪಾಲನೆಯಲ್ಲಿ ಮನುಸ್ಮೃತಿಗೆ ಯಾವತ್ತೂ ಇಲ್ಲದ ಗ್ರಾಹಕರನ್ನು ಹುಡುಕಿ ತಗಲಾಕಿದ್ದು ಬಿಳಿಯರು. ಅವರು ಇದನ್ನು ಮಾಡಿದ್ದು ಮನುಧರ್ಮದ ಮೇಲಿನ ಶ್ರದ್ಧಾಭಕ್ತಿಗಳಿಂದ ಅಲ್ಲ, ಆದರೆ ಅವರ ಅವಶ್ಯಕತೆಗಳಿಗಾಗಿ! ಹೇಗೆಂದರೆ........
ಕ್ರಿ.ಶ. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಭರತಖಂಡದ ಬಹುಭಾಗ ಆಂಗ್ಲರ ಪ್ರಾಬಲ್ಯಕ್ಕೆ ಒಳಪಟ್ಟಿತು. ಮೊಘಲ್ ಚಕ್ರವರ್ತಿಗಳ ಪ್ರತಿನಿಧಿಗಳು (ಏಜೆಂಟರು) ತಾವೆಂದು ಮೇಲೆ ಹೇಳಿಕೊಂಡರೂ ಸಹ ವಾಸ್ತವವಾಗಿ ರಾಜ್ಯಾಧಿಕಾರವೆಲ್ಲಾ ಈಸ್ಟ್ ಇಂಡಿಯಾ ಕಂಪನಿಯ ಹಿಡಿತದಲ್ಲಿತ್ತು. ಅಲ್ಲಿಯವರೆಗೆ ಕೇವಲ ಲಾಭಾಪೇಕ್ಷಿಗಳಾಗಿದ್ದ ’ಕುಂಪಣಿ’ಯವರ ಮೇಲೆ ರಾಜ್ಯ ಪರಿಪಾಲನೆಯ ಭಾರವೂ ಬಿದ್ದಿತು. ರಾಜಕೀಯ, ಪರಿಪಾಲನೆಯ ವಿಷಯಗಳೊಂದಿಗೆ ಶಾಸನ ಮತ್ತು ನ್ಯಾಯ ಸಂಬಂಧಿತ ವ್ಯವಹಾರಗಳನ್ನೂ ಸಹ ಅವರೇ ನಿರ್ವಹಿಸಬೇಕಾಯಿತು. ಅದರ ಭಾಗವಾಗಿ ಆಸ್ತಿ ಹಕ್ಕುಗಳು, ಆಸ್ತಿ ವಿಕ್ರಯ, ಕುಟುಂಬ ಕಲಹಗಳು, ಮದುವೆ, ಮುಂಜಿ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತು ಮತಧರ್ಮಾಧಾರಿತ ಸಾಮಾಜಿಕ ವಿಷಯಗಳ ಕುರಿತ ಜನಸಾಮಾನ್ಯರ ತಗಾದೆಗಳನ್ನು ಸಹ ಅವರೇ ತೀರ್ಮಾನಿಸಬೇಕಾಗಿ ಬಂದಿತು.
ಏಕಾಏಕೀ ಲಾಭ ಪಡೆಯುವ ದೃಷ್ಟಿ ಮಾತ್ರವೇ ಬಿಳಿಯರಿಗಿತ್ತು. ಅಲ್ಪನಿಗೆ ಐಶ್ವರ್ಯ ಬಂದಂತೆ ತಮಗೆ ದಕ್ಕಿದ ಅಧಿಕಾರದಿಂದ ಇಲ್ಲಸಲ್ಲದ ಪಜೀತಿಗಳನ್ನು ಮೈಮೇಲೆ ಎಳೆದುಕೊಳ್ಳುವುದು ಕುಂಪಿಣಿ ಸರ್ಕಾರಕ್ಕಾಗಲಿ, ಬ್ರಿಟಿಷ್ ಮಹಾಪ್ರಭುಗಳಿಗಾಗಲಿ ಇಷ್ಟವಿರಲಿಲ್ಲ. ಸ್ಥಳೀಯರೊಂದಿಗೆ ಯಾವುದೇ ರೀತಿಯ ತಂಟೆ ತಕರಾರುಗಳು ಇಲ್ಲದೇ ಇರಬೇಕೆಂದರೆ ಅವರ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಮೂಗು ತೂರಿಸದೇ, ಸ್ಥಳೀಯರ ಮನೋಭಾವನೆಗಳಿಗೆ ಧಕ್ಕೆಯಾಗದಂತೆ ಪರಿಪಾಲನೆ ಮಾಡುತ್ತಿದ್ದೇವೆಂದು ನಟಿಸುವುದೊಳಿತು ಎಂದು ಅವರು ಭಾವಿಸಿದರು.
ಈ ವಿಷಯದಲ್ಲಿ ಮಹಮ್ಮದೀಯರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಿರಲ್ಲಿಲ್ಲ. ಏಕೆಂದರೆ ಅವರ ವ್ಯವಹಾರಗಳೆಲ್ಲಾ ಷರಿಯಾ ಪ್ರಕಾರವೇ ನಡೆಯುತ್ತವೆ. ಆಡಳಿತದಲ್ಲಿ ಅವನ್ನು ಹೇಗೆ ಅಮಲಿಗೆ ತರಬೇಕು ಎನ್ನುವ ವಿಷಯಗಳು ”ಅಲ್-ಸಿರಿಝಿಯಾಹ್’, ’ಫತ್ವಾ-ಈ-ಅಲಂಗಿರ್’ ಎನ್ನುವ ಗ್ರಂಥಗಳಲ್ಲಿ ಔರಂಗಜೇಬನ ಕಾಲದಲ್ಲಿಯೇ ಕ್ರೋಢೀಕರಿಸಲ್ಪಟ್ಟಿವೆ.
ಏನಿದ್ದರೂ ಅವರಿಗೆ ಸಮಸ್ಯೆಯುಂಟಾದದ್ದು ಹಿಂದುಗಳ ವಿಷಯದಲ್ಲೇ!
ಕ್ರೈಸ್ತ ಸಮಾಜದ ಆಚಾರವಿಚಾರಗಳಿಗೆ ಸಂಬಂಧಿಸಿದ ವ್ಯವಹಾರಗಳೆಲ್ಲವಕ್ಕೂ ಕ್ರೈಸ್ತ ಮತ ಸೂತ್ರ, ಸಂಪ್ರದಾಯಗಳ ಪ್ರಕಾರ ನಿರ್ಣಯಿಸಲ್ಪಡುತ್ತವೆ. ಅವಕ್ಕೆ ಸಂಬಂಧಿಸಿದಂತೆ Canonical Law ಎನ್ನುವುದಿದೆ. ಅವುಗಳ ಕುರಿತು ಅನುಮಾನವೇರ್ಪಟ್ಟರೆ ಅವನ್ನು ಬಗೆಹರಿಸಲು ಅವರಿಗೆ ಪಾದ್ರಿಗಳ (ಧರ್ಮಗುರುಗಳು) ವ್ಯವಸ್ಥೆ ಇದೆ. ಆದ್ದರಿಂದ ತಮ್ಮ ಹಾಗೆ ಹಿಂದು ಸಮಾಜಕ್ಕೂ ಕೂಡಾ ಅಂತಹುದೇ ವ್ಯವಸ್ಥೆ ಏರ್ಪಟ್ಟಿರಬಹುದು ಎಂದು ಪರಂಗಿ ದೊರೆಗಳು ಮೊದಲಿಗೆ ಭಾವಿಸಿದರು. ಆದರೆ ಅವರಿಗೆ ಬೈಬಲಿನಂತೆ ಹಿಂದುಗಳಿಗೆ ಒಂದು ಪವಿತ್ರ ಗ್ರಂಥವೂ ಇಲ್ಲ ಮತ್ತು ಮತೀಯ ಆಚರಣೆಗಳಿಗೆ ಸಂಬಂಧಿಸಿದಂತೆ ಒಂದೇ ಒಂದು ನ್ಯಾಯ ಶಾಸನವೂ ಇಲ್ಲ. ಪ್ರಾಮಾಣಿಕ ನ್ಯಾಯಸಂಹಿತೆ ಇದು ಎಂದು ಹೇಳುವುದಕ್ಕೆ ಯಾವ ಗ್ರಂಥವೂ ಇರಲಿಲ್ಲ. ಒಂದೊಂದು ಪ್ರಾಂತದಲ್ಲಿ ಒಂದೊಂದು ಆಚಾರ, ಒಂದೊಂದು ನ್ಯಾಯ ವಿಧಾನ! ಹಲವಾರು ಮತಗಳಿಂದ ಕೂಡಿರುವ ಧರ್ಮದಲ್ಲಿ ಪ್ರತಿಯೊಂದು ಮತದಲ್ಲಿಯೂ ಪಂಗಡಗಳು ಹಾಗು ಒಳಪಂಗಡಗಳು, ಒಂದೊಂದು ಒಳಪಂಗಡಕ್ಕೂ ಒಂದಕ್ಕೊಂದು ವೈರುಧ್ಯವೆನಿಸುವ ಆಚರಣೆಗಳು! ಧರ್ಮಸೂತ್ರಗಳು, ಸ್ಮೃತಿಗಳು ಹಲವಾರಿದ್ದರೂ ಸಹ ಅವುಗಳಲ್ಲಿ ಹೇಳಿರುವುದನ್ನು ಚಾಚೂ ತಪ್ಪದಂತೆ ವಿಧಿಬದ್ಧವಾಗಿ ಅನುಸರಿಸಲೇಬೇಕೆಂಬ ಶಾಸನಬದ್ಧ ಕಟ್ಟಳೆ ಅಥವಾ ಚಂಡಶಾಸನವಾಗಲಿ ಅಥವಾ ನಿರ್ಬಂಧವಾಗಿಲಿ ನಮ್ಮ ದೇಶದಲ್ಲಿ ಯಾವುದೇ ಕಾಲಕ್ಕೂ ಇರಲಿಲ್ಲ. ನಾನು ಈ ಕಟ್ಟಳೆಗಳನ್ನು ಅನುಸರಿಸುವುದಿಲ್ಲವೆಂದರೆ ಯಾರೂ ಏನೂ ಮಾಡುವಂತಿಲ್ಲ. ಕ್ರೈಸ್ತರಿಗೆ ಪೋಪ್ ಇರುವಂತೆ ಹಿಂದುಗಳಿಗೆ ಪ್ರತ್ಯೇಕವಾದ ಒಬ್ಬನೇ ಒಬ್ಬ ಪೀಠಾಧಿಪತಿಯೂ ಇಲ್ಲ. ಈ ಪರಿಸ್ಥಿತಿಯಲ್ಲಿ ವ್ಯಾಪ್ತಿಯಲ್ಲಿ ಬೃಹದಾಕಾರವಾಗಿದ್ದ ಸಮಸ್ತ ಭರತಖಂಡಕ್ಕೆಲ್ಲಾ ಅನ್ವಯಿಸುವಂತೆ ಒಂದೇ ವಿಧವಾಗಿ ನ್ಯಾಯ ಪರಿಪಾಲನೆ ಮಾಡುವುದು ಹೇಗೆಂದು ಆಲೋಚಿಸಿ, ಆಲೋಚಿಸಿ ಬಿಳಿ ದೊರೆಗಳ ತೆಲೆ ಕೆಟ್ಟು ಗೊಬ್ಬರವಾಯಿತು.
ವಾಸ್ತವವಾಗಿ ನ್ಯಾಯ ವಿಧಾನಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಯಾವ ಕಾಲದಲ್ಲೂ ಗೊಂದಲವಿರಲಿಲ್ಲ. ಆಯಾ ಊರಿಗೆ ಆಯಾ ಊರಿನ ಗ್ರಾಮ ಮುಖಂಡರಿಂದ ರಚಿಸಲ್ಪಟ್ಟ ಗ್ರಾಮ ಪಂಚಾಯತಿಗಳು ಊರ ಜನರ ನಡುವೆ ನಡೆಯುತ್ತಿದ್ದ ವ್ಯಾಜ್ಯಗಳನ್ನು ವಿಚಾರಿಸಿ ತೀರ್ಪುಗಳನ್ನು ಕೊಡುತ್ತಿದ್ದವು. ಆಯಾ ಜಾತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಯಾ ಜಾತಿಗಳ ಮುಖಂಡರು ಸೇರಿ ಪರಿಷ್ಕರಿಸಿಕೊಳ್ಳುತ್ತಿದ್ದರು. ಇವಕ್ಕೆ ಧಾರ್ಮಿಕ ಮುಖಂಡರ ಅವಶ್ಯಕತೆಯಾಗಲಿ, ಧರ್ಮ ಗ್ರಂಥದ ಅವಶ್ಯಕತೆಯಾಗಲಿ ಅಥವಾ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ವಿಶೇಷ ಗ್ರಂಥದ ಅವಶ್ಯಕತೆಯಾಗಲಿ ಇರಲಿಲ್ಲ. ಘೋರವಾದ ಅಪರಾಧಗಳಿಗೆ ರಾಜ್ಯವನ್ನಾಳುತ್ತಿದ್ದ ರಾಜರುಗಳೇ ನ್ಯಾಯ ವಿಚಾರಣೆ ನಡೆಸುತ್ತಿದ್ದರು. ಧರ್ಮಸೂತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಧರ್ಮಬದ್ಧವಾಗಿ ತೀರ್ಪನ್ನು ಕೊಡುತ್ತಿದ್ದರೇ ಹೊರತು ಪ್ರತ್ಯೇಕವಾಗಿ ಒಂದೇ ಒಂದು ಧರ್ಮಶಾಸ್ತ್ರದ ಗ್ರಂಥವನ್ನು ಆಧರಿಸಿ ರಾಜರು ತೀರ್ಪುಗಳನ್ನು ಕೊಡುತ್ತಿರಲಿಲ್ಲ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಅಂತರ್ಗತವಾಗಿದ್ದ ಸುನಾಯಾಸವಾಗಿ ನಡೆಯುತ್ತಿದ್ದ ಸ್ಥಳೀಯ ಸ್ವಯಂ ಪರಿಪಾಲನಾ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇಲ್ಲಿ ಏನೋ ಗೊಂದಲವಿದೆ ಎಂದು ಭಾವಿಸಿ ಪರಂಗಿ ದೊರೆಗಳೇ ದೊಡ್ಡ ಗೊಂದಲದಲ್ಲಿ ಸಿಲುಕಿಕೊಂಡರು.
ತಮ್ಮ ದೃಷ್ಟಿದೋಷ ಹಾಗು ತಿಳುವಳಿಕೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ ತಮ್ಮನ್ನು ಪಾರುಮಾಡಲು ವಾರೆನ್ ಹೇಸ್ಟಿಂಗ್ಸ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ೧೧ ಜನ ಹಿಂದು ಪಂಡಿತರನ್ನು ಉದ್ಯೋಗಕ್ಕೆ ನೇಮಿಸಿದ. ಧರ್ಮಶಾಸ್ತ್ರಗಳನ್ನೆಲ್ಲಾ ಕ್ರೋಢೀಕರಿಸಿ ಸಮಸ್ತ ದೇಶಕ್ಕೆಲ್ಲಾ ಒಂದೇ ಒಂದು ನ್ಯಾಯಶಾಸ್ತ್ರವನ್ನು ರೂಪಿಸುವ ಕೆಲಸವನ್ನು ಅವರಿಗೆ ವಹಿಸಿದ. ಈ ಅರೆಬೆಂದ ಪಂಡಿತರೆಲ್ಲಾ ಸೇರಿ ಮೇಲೆ ಕೆಳಗೆ ಬಿದ್ದು ಒದ್ದಾಡಿ, ಗುದ್ದಾಡಿ ಕಿಚಡಿಯೊಂದನ್ನು ತಯಾರಿಸಿ ಅದನ್ನೇ A Code of Gentoo Laws ಎನ್ನುವ ಹೆಸರಿನಲ್ಲಿ ೧೭೭೬ರಲ್ಲಿ ದೊಡ್ಡದಾಗಿ ಪ್ರಕಟಿಸಿದರು. ಆದರೆ ಅದರಲ್ಲಿ ಇರುವುದು ಜೊಳ್ಳು ಎನ್ನುವುದು ಅತಿ ಸ್ವಲ್ಪ ಕಾಲದಲ್ಲೇ ಬಟ್ಟಬಯಲಾಯಿತು. ಅದಕ್ಕೆ ಆಕ್ಷೇಪಗಳು, ಅಭ್ಯಂತರಗಳು ಮುಸುಕಿ ಪರಿಸ್ಥಿತಿ ಇನ್ನೂ ಅಯೋಮಯವಾಯಿತು. ಮೇಲಾಗಿ ಧರ್ಮಶಾಸ್ತ್ರ ಏನು ಹೇಳುತ್ತದೆ ಎನ್ನುವುದನ್ನು ಬಿಡಿಸಿ ಹೇಳಿ ನ್ಯಾಯನಿರ್ಣಯವು ಸರಿಯಾಗಿ ಅನುಷ್ಠಾನವಾಗಲು ಸಹಕರಿಸಬೇಕಾದ ಕಂಪನಿಯ ಆಸ್ಥಾನ ಪಂಡಿತರೇ ತಮ್ಮ ಸ್ವಾರ್ಥಕ್ಕೆ ಪಕ್ಷಪಾತ ಬುದ್ಧಿಯಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮಸೂತ್ರಗಳನ್ನು ವ್ಯಾಖ್ಯಾನಿಸುತ್ತಾ ಹೋದರು. ಒಬ್ಬ ಪಂಡಿತನು ಹೇಳಿದ್ದು ಪ್ರಾಮಾಣಿಕವೆಂದು ಇನ್ನೊಬ್ಬ ಪಂಡಿತನು ಒಪ್ಪಿಕೊಳ್ಳುತ್ತಿರಲಿಲ್ಲ. ಸ್ಮೃತಿಗಳು, ಧರ್ಮಸೂತ್ರಗಳು ಸಂಸ್ಕೃತದಲ್ಲಿ ಇರುತ್ತವೆಯಾದ್ದರಿಂದ ಇಂಗ್ಲೀಷ್ ನ್ಯಾಯಾಧೀಶರಿಗೆ ಅವು ಅರ್ಥವಾಗುತ್ತಿರಲಿಲ್ಲ. ದುಭಾಷಿಗಳನ್ನು ಅವಲಂಬಿಸಿದರೆ ಅವರು ಅವುಗಳನ್ನು ಸರಿಯಾಗಿ ತರ್ಜುಮೆ ಮಾಡುತ್ತಿದ್ದಾರೋ ಇಲ್ಲವೋ ಎಂದು ತಿಳಿಯುವ ಅವಕಾಶವೂ ಇರಲಿಲ್ಲ.
ಹೀಗೆ ತರಹೇವಾರಿ ಸಮಸ್ಯೆಗಳಿಂದ ಆವರಿಸಲ್ಪಟ್ಟು, ಆ ಗೊಂದಲಮಯ ಪರಿಸ್ಥಿತಿಯಿಂದ ಹೇಗೆ ಹೊರಬರಬೇಕೆಂದು ಆಲೋಚಿಸಿ ತಲೆ ಚಚ್ಚಿಕೊಂಡ ಪರಂಗಿ ದೊರೆಗಳಿಗೆ ಒಂದು ಪರಿಹಾರೋಪಾಯವು ಹೊಳೆಯಿತು. ಎಲ್ಲಾ ಸ್ಮೃತಿಗಳಲ್ಲಿ ಹೆಚ್ಚು ಪ್ರಚಲಿತವಿದ್ದದ್ದು, ಹೆಚ್ಚು ಪ್ರಾಧಾನ್ಯತೆ, ಹೆಚ್ಚು ಜನರ ಗೌರವ ಮನ್ನಣೆಗಳನ್ನು ಗಳಿಸಿದ್ದು ಮನುಸ್ಮೃತಿ ಎಂದು ಕೇಳಿಬರುತ್ತಿದ್ದುದರಿಂದ ಹಿಂದುಗಳೆಲ್ಲರಿಗೂ ಅನ್ವಯವಾಗುವಂತೆ ಸಮಸ್ತ ದೇಶಕ್ಕೆ ಅದನ್ನೇ ಪ್ರಮಾಣ ಗ್ರಂಥವೆಂದು ಪ್ರಕಟಿಸಿದರೆ ಸರಿಯಾಗುತ್ತದೆಂದು ಅವರು ಏಕಪಕ್ಷೀಯವಾಗಿ ತಮ್ಮಷ್ಟಕ್ಕೆ ತಾವೇ ಒಂದು ನಿರ್ಧಾರಕ್ಕೆ ಬಂದರು.
ಸರಿ ಹಾಗಾದರೆ ಮನುಸ್ಮೃತಿಗೆ ಸಂಬಂಧಿಸಿದಂತೆಯೂ ಬೇರೆ ಬೇರೆ ರೀತಿಯ ಪಾಠಾಂತರಗಳು ಪ್ರಚಲಿತವಾಗಿವೆಯಲ್ಲವೇ? ಅವುಗಳಲ್ಲಿ ಯಾವುದನ್ನು ನಿಶ್ಚಯಗೊಳಿಸಬೇಕು?
ಓಹ್ಞ್! ಅಷ್ಟೇನಾ? ಅದಕ್ಕೇನಿದೆ? ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ರಾಜಧಾನಿ ಕಲ್ಕತ್ತಾ ಅಲ್ಲವೇ? ಅಲ್ಲಿ ಪ್ರಚಲಿತವಾಗಿರುವುದು ಕುಲ್ಲೂಕ ಭಟ್ಟನ ವ್ಯಾಖ್ಯಾನವಿರುವ ಮನುಸ್ಮೃತಿಯಲ್ಲವೇ? ಆ "ಕಲ್ಕತ್ತಾ ಮ್ಯಾನುಸ್ಕ್ರಿಪ್ಟ್" ಅನ್ನು ಪಂಡಿತರ ಸಹಾಯದಿಂದ ಕಲ್ಕತ್ತಾದ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ (ಸುಪ್ರೀಂ ಕೋರ್ಟ್ ಜಡ್ಜ್) ಶ್ರೀಯುತ ವಿಲಿಯಂ ಜೋನ್ಸ್, ಹೊಸದಾಗಿ ಇಂಗ್ಲೀಷಿಗೆ ಅನುವಾದನ್ನೂ ಮಾಡಿದ್ದಾರಲ್ಲ? ಸೊಗಸಾದ ಇಂಗ್ಲೀಷಿನಲ್ಲಿರುವ ಆ ಪುಸ್ತಕವನ್ನೇ ಅಧಿಕೃತವಾಗಿ ಮಾನ್ಯ ಮಾಡಿದರೆ ಯಾವುದೇ ಚಿಂತೆಯಿರದು ಎಂದು ಬಿಳಿ ದೊರೆಗಳು ನಿರ್ಣಯಿಸಿದರು!
ಈ ವಿಧವಾಗಿ ಮನುಸ್ಮೃತಿಗೆ ಹಿಂದು ರಾಜರ ಆಡಳಿತಾವಧಿಯಲ್ಲಿ ಎಂದೂ ಇಲ್ಲದ "ವಿಚಿತ್ರ ಅಧಿಕೃತ ಮಾನ್ಯತೆ" ಇಂಗ್ಲೀಷರು ನಮ್ಮ ದೇಶದೊಳಕ್ಕೆ ಕಾಲಿಟ್ಟ ಮೇಲೆಯೇ....... ಅವರ ಅವಶ್ಯಕತೆಗಳಿಗೋಸ್ಕರವೇ ಯಾದೃಚ್ಛಿಕವಾಗಿ ಒದಗಿ ಬಂತು!
"That in all suits regarding inheritance, marriage, caste and other religious usages or institutions, the law of the Koran with respect to Mahometans (Muslims), and those of the Shaster with respect to Gentoos (Hindus) shall invariably adhered to."
"ವಾರಸತ್ವದ ಹಕ್ಕುಗಳು, ವಿವಾಹ, ಜಾತಿ ಹಾಗು ಇತರ ಮತಾಧಾರಿತ ವಿಷಯಗಳು ಅಥವಾ ಕಟ್ಟಳೆಗಳಿಗೆ ಸಂಬಂಧಿಸಿದ ಎಲ್ಲಾ ವ್ಯಾಜ್ಯಗಳಿಗೆ ಮಹಮ್ಮದೀಯರಿಗೆ ಕುರಾನ್, ಹಿಂದುಗಳಿಗಾದರೆ ಶಾಸ್ತ್ರದಲ್ಲಿ ಹೇಳಿರುವುದನ್ನು ಕಡ್ಡಾಯವಾಗಿ ಅನುಸರಿಸಲಾಗುವುದು" ಎಂದು ೧೭೭೨ರಲ್ಲಿ ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಆಗಿದ್ದ ವಾರೆನ್ ಹೇಸ್ಟಿಂಗ್ಸ್ ಪ್ರಕಟಿಸಿದ ನ್ಯಾಯವಿಧಾನವು ಈ ವಿಧವಾಗಿ ಮುಂದೆ ಸಾಗಿತು.
"ವಿಚಿತ್ರ ಅಧಿಕೃತ ಮಾನ್ಯತೆ" ಎಂದು ಈ ಮುಂಚೆ ಏಕೆ ಪ್ರತಿಪಾದಿಸಲಾಯಿತು ಎಂದರೆ.........
ಅಧಿಕಾರಿಕವಾಗಿ, ಶಾಸನಬದ್ಧವಾಗಿ ಮನುಸ್ಮೃತಿಗೆ ಪ್ರಾಮಾಣಿಕ ಗ್ರಂಥವೆನ್ನುವ ಮಾನ್ಯತೆಯನ್ನು ಪರಂಗಿ ದೊರೆಗಳು ಕೊಡಲಿಲ್ಲ. ಆದರೆ ಅದರಲ್ಲಿ ಹೇಳಿರುವ ಪ್ರಕಾರವೇ ಹಿಂದುಗಳಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳು, ಕೌಟುಂಬಿಕ, ಸಾಮಾಜಿಕ ವಿವಾದಗಳನ್ನು ಪರಿಷ್ಕರಿಸಿ ತೀರ್ಮಾನಗಳನ್ನು ಕೊಡಲಾಗುತ್ತದೆ ಎಂದು ಅವರು ಯಾವ ಕಾಲಕ್ಕೂ ಪ್ರಕಟಿಸಲಿಲ್ಲ. ಮನುಸ್ಮೃತಿಯಲ್ಲಿ ಹೇಳಿರುವ ಪ್ರಕಾರ ಆಯಾ ಅಪರಾಧಗಳಿಗೆ ಆಯಾ ಶಿಕ್ಷೆಗಳನ್ನು ವಿಧಿಸಬೇಕೆಂದು ಭಾರತೀಯ ನ್ಯಾಯ ಸಂಹಿತೆಯನ್ನು (Indian Penal Code - IPC) ಬದಲಾಯಿಸುವ ಹುಚ್ಚು ಕೆಲಸವನ್ನೂ ಅವರು ಮಾಡಲಿಲ್ಲ. ಅದಕ್ಕೆ ದೊಡ್ಡ ಸ್ಥಾನ ನೀಡಲಾಗುತ್ತದೆ ಎಂದು ಸರ್ಕಾರದ ಪರವಾಗಿ ಯಾರೂ ಎಂದಿಗೂ ಪ್ರಕಟಿಸಲಿಲ್ಲ. ಆದರೆ....... ನ್ಯಾಯ ವ್ಯವಸ್ಥೆಯಲ್ಲಿ ಸಾಮಾಜಿಕ ವ್ಯಾಜ್ಯಗಳಿಗೆ (CIVIL CASES) ಧರ್ಮ ಜಿಜ್ಞಾಸೆಯುಂಟಾದಾಗ ನ್ಯಾಯಾಧೀಶರು ವಿಲಿಯಂ ಜೋನ್ಸ್ ಅನುವಾದಿಸಿದ ಮನುಸ್ಮೃತಿಯನ್ನು ಆಕರ ಗ್ರಂಥವಾಗಿ ಬಳಸುತ್ತಿದ್ದರು. ಧರ್ಮಶಾಸ್ತ್ರದ ಕುರಿತಾದ ವಿಚಾರ ಬಂದಾಗಲೆಲ್ಲಾ ಮನುಸ್ಮೃತಿಯೊಂದೇ ಹಿಂದುಗಳಿಗೆ ಪರಮಪ್ರಮಾಣವಾದ ಧರ್ಮಶಾಸ್ತ್ರವೆನ್ನುವಂತೆ ಅವರು ಮಾತನಾಡುತ್ತಿದ್ದರು. ಅದಕ್ಕೆ ವಿರುದ್ಧವಾದ ಅಂಶಗಳನ್ನು ಇತರ ಸ್ಮೃತಿಗಳಿಂದ ಯಾರಾದರೂ ಎತ್ತಿ ತೋರಿಸಿದಾಗಲೂ ಸಹ ಸಾಮಾನ್ಯವಾಗಿ ಬ್ರಿಟಿಷ್ ನ್ಯಾಯಾಧೀಶರು ಮನುಸ್ಮೃತಿಯಲ್ಲಿ ಹೇಳಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕೊಡುತ್ತಿದ್ದ ಮಾನ್ಯತೆಯನ್ನು ಇತರ ಗ್ರಂಥಗಳ ಉಲ್ಲೇಖಗಳನ್ನು ಕೊಟ್ಟಾಗ ಒಪ್ಪುತ್ತಿರಲಿಲ್ಲ.
ಮುಸಲ್ಮಾನರಿಗೆ ಖುರಾನ್ ಹೇಗೋ ಹಾಗೆ ಹಿಂದುಗಳಿಗೆ ಮನುಸ್ಮೃತಿ ಎಂದುಕೊಂಡು ತಮ್ಮ ಕೆಲಸವಾಯಿತು ಎಂದು ಬ್ರಿಟಿಷರು ಭಾವಿಸಿದ್ದೇನೋ ಸರಿ. ಏಕೆಂದರೆ ಅದರಿಂದ ಅವರ ಕೆಲಸ ಸಲೀಸಾಯಿತು. ಆದರೆ ನೀತಿಸೂತ್ರಗಳಿಗೂ, ನ್ಯಾಯ ಶಾಸನಗಳಿಗೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳದೆ ಮನುಸ್ಮೃತಿಗೆ ಅಗ್ರಪೀಠವನ್ನು ಕೊಟ್ಟು ರಾಜಶಾಸನಕ್ಕೆ ಸಮಾನವಾದ ಪ್ರಾಧಾನ್ಯತೆ ಕೊಟ್ಟದ್ದರಿಂದ (ಅಥವಾ ಕೊಟ್ಟಂತೆ ಕಂಡು ಬಂದದ್ದರಿಂದ) ಅದು ಹೊಸ ಹೊಸ ಸಮಸ್ಯೆಗಳ ರಾಶಿಯನ್ನೇ ಹುಟ್ಟುಹಾಕಿತು. ಅದ್ಯಾವ ಕಾಲದಲ್ಲೋ ಅಟ್ಟದ ಮೂಲೆ ಸೇರಿದ್ದ ಮನುಸ್ಮೃತಿಗೆ ಬಿಳಿ ದೊರೆಗಳು ಕೊಟ್ಟ ಅತಿಯಾದ ಪ್ರಾಶಸ್ತ್ಯದಿಂದಾಗಿ ಅದಕ್ಕೆ ಅಸಾಧಾರಣವಾದ ಪ್ರಚಾರ ದೊರೆತು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡೆಸಿತು ಮತ್ತು ಕಾಲಾನುಕ್ರಮದಲ್ಲಿ ಅದು ವಿವಾದಕ್ಕೆ ಕಾರಣವಾಯಿತು.
ಅನಾದಿಕಾಲದಿಂದಲೂ ಅಮಲಿನಲ್ಲಿದ್ದ ಹಿಂದು ಧರ್ಮಸೂತ್ರಗಳ ಪ್ರಕಾರವೇ ತಾವು Hindu Jurisprudence - ಹಿಂದು ನ್ಯಾಯವ್ಯವಸ್ಥೆಯನ್ನು ರೂಪಿಸಿ ಅದನ್ನು ಸಾಂಪ್ರದಾಯಿಕವಾಗಿ ಜಾರಿಗೆ ತರುತ್ತಿದ್ದೇವೆಂದು ಪ್ರಪಂಚಕ್ಕೆ ಮಂಕುಬೂದಿ ಎರಚಿ ನಂಬಿಸುವುದಕ್ಕೆ ಬ್ರಿಟಿಷ್ ಆಡಳಿತಾರೂಢರಿಗೆ ಪುನರುಜ್ಜೀವನಗೊಂಡ ಮನುಸ್ಮೃತಿಯು ಕೆಲಸಕ್ಕೆ ಬಂದಿತು. ಪೂರ್ವದಲ್ಲಿ ಎಂದೂ ಇಲ್ಲದ ಅಧಿಕೃತವಾದ, ಶಾಸನಬದ್ಧ ಮಾನ್ಯತೆಯನ್ನು ಮನುಸ್ಮೃತಿಗೆ ಕೊಟ್ಟಂತೆ ಮಾಡಿ ಅದನ್ನು ಹಿಂದುಗಳ ವೈಯಕ್ತಿಕ ಕಾನೂನು (Personal Law) ಎಂದು ಪರಿಗಣಿಸುತ್ತೇವೆನ್ನುವ ಅಭಿಪ್ರಾಯವನ್ನು ಪ್ರಪಂಚಕ್ಕೆ ಉಂಟು ಮಾಡಿ ದೇಶಾದ್ಯಂತ ಇದರ ಪರಿಧಿಯೊಳಗೇ ಹಿಂದುಗಳಿಗೆಲ್ಲಾ ನ್ಯಾಯತೀರ್ಮಾನವನ್ನು ಕೊಡಲಾಗುತ್ತದೆ ಎಂದು ಇಲ್ಲಸಲ್ಲದ ಗೊಂದಲವನ್ನು ಹುಟ್ಟುಹಾಕಿದ್ದರ ಪರಿಣಾಮವಾಗಿ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಂಡವು. ಅಲ್ಲಿಯವರೆಗೂ ಸ್ತ್ರೀಯರಿಗೆ, ಶೂದ್ರ ಜಾತಿಗಳಿಗೆ ಸಂಬಂಧಿಸಿದ ವಿವಾದಗಳು ಸ್ಥಳೀಯ ಆಚಾರ ಮತ್ತು ಸಂಪ್ರದಾಯಗಳ ಪ್ರಕಾರ ಸ್ಥಾನಿಕ ಪಂಚಾಯತಿಗಳಲ್ಲಿ ಪರಿಷ್ಕರಿಸಲ್ಪಡುತ್ತಿದ್ದವು. ದಿಢೀರಾಗಿ ಪೂರ್ವದಲ್ಲಿಯೇ ತಯಾರಾಗಿದ್ದ ಮನುಸ್ಮೃತಿಯಲ್ಲಿ ಹೇಳಿದ, ಈ ಕಾಲಕ್ಕೆ ಸ್ವಲ್ಪವೂ ಅನುಗುಣವಲ್ಲದ, ಹಾಗೆ ನೋಡಿದರೆ ಯಾವ ಕಾಲಕ್ಕೂ ಯಾರೂ ಸಮರ್ಥಿಸಲಾಗದಂತಹ....... ಚರಿತ್ರೆಯಲ್ಲಿ ಎಂದೂ ಜಾರಿಯಲ್ಲಿಲ್ಲದ ವಿಚಿತ್ರ ನ್ಯಾಯ ತೀರ್ಪುಗಳು, ಅನಾಗರಿಕ ಶಿಕ್ಷೆಗಳನ್ನು ಅಮಲಿನಲ್ಲಿ ತರಲು ಹೋದಾಗ ಹಾಹಾಕಾರವುಂಟಾಯಿತು. ಇಸ್ಲಾಂ ಮತ್ತು ಲೌಕಿಕ ರಾಜ್ಯ (Islam and the Secular State) ಗ್ರಂಥದಲ್ಲಿ ಅಬ್ದುಲ್ಲಾ ಅಹ್ಮದ್ ಅನ್-ನಯೀಮ್ (Abdullah Ahmed An-Na-'im) ಹೇಳಿದಂತೆ, British Colonial administrators reduced centuries of vigorous development of total ethical, religious and social systems to fit their own pre-conceived European notions of what Muslim and Hindu "Law" should be.
"ಮುಸ್ಲಿಮರಿಗೆ ಮತ್ತು ಹಿಂದುಗಳಿಗೆ ನ್ಯಾಯವು ಯಾವ ವಿಧವಾಗಿ ಇರಬೇಕು ಎನ್ನುವುದನ್ನು ತಮ್ಮ ಐರೋಪ್ಯ ಚಿಂತನೆಗಳಿಗೆ ಅನುಗುಣವಾಗಿ ಪೂರ್ವಾಗ್ರಹ ಪೀಡಿತರಾಗಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದ ಬ್ರಿಟಿಷ್ ವಲಸೆಗಾರರು ಶತಮಾನಗಳ ಕಾಲ ಉಧೃತವಾಗಿ ಅಭಿವೃದ್ಧಿಗೊಂಡ ನೈತಿಕ, ಮತೀಯ (ಧಾರ್ಮಿಕ) ಆಚರಣೆಗಳು ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಹಾಳುಗೆಡವಿದರು."
ಅನಾದಿಕಾಲದಿಂದಲೂ ಆಚರಣೆಯಲ್ಲಿದ್ದುದನ್ನೇ ತಾವು ಪ್ರಜ್ಞಾಪೂರ್ವಕವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಬಿಳಿಯರು ಡಂಗುರಸಾರಿಸಿಕೊಂಡು ಬಂದದ್ದರಿಂದ ಅವರು ಹೊಸದಾಗಿ ತಲೆಯ ಮೇಲೆ ಹೊತ್ತುಕೊಂಡು ಮೆರೆಸಿದ ಬೀದಿಯಲ್ಲಿ ಹೋಗುತ್ತಿದ್ದ ಮನುಸ್ಮೃತಿ ಎಂಬ ಮಾರಮ್ಮನ ಪುಣ್ಯದಿಂದ ಅದರಲ್ಲಿ ಜಿಗುಪ್ಸೆ ಹುಟ್ಟಿಸುವ ಸಾಮಾಜಿಕ ಭೇದಭಾವಗಳು ಸಾವಿರಾರು ವರ್ಷಗಳಿಂದ ಅಮಲಿನಲ್ಲಿ ಇದ್ದಿರಬಹುದೆಂಬ ಭ್ರಮೆಯು ಇಂಗ್ಲೀಷರ ಮೆಕಾಲೆ ಪಾಠಶಾಲೆಯ ಕುಲುಮೆಯಲ್ಲಿ ತಯಾರಾದ ನಮ್ಮ ಬುದ್ಧಿಜೀವಿಗಳ ಬಳಗದಲ್ಲಿ ಉಲ್ಬಣಿಸಿತು. ನಮ್ಮ ಸೌಭಾಗ್ಯದಿಂದಾಗಿ ಬ್ರಿಟಿಷರು ನಮ್ಮ ದೇಶಕ್ಕೆ ದೇವರಂತೆ ಬಂದು ನಮ್ಮನ್ನು ಕಾಪಾಡಿದ್ದರಿಂದ ಸರಿಹೋಯಿತು; ಇಲ್ಲದಿದ್ದರೆ ಸ್ತ್ರೀಯರ ಮೇಲೆ, ಶೂದ್ರರ ಮೇಲೆ, ದಲಿತರ ಮೇಲೆ ಬ್ರಾಹ್ಮಣ ರಾಕ್ಷಸರ ಅಮಾನುಷ ಕ್ರೌರ್ಯಗಳು ಇನ್ನೂ ಮಿತಿಮೀರಿರುತ್ತಿದ್ದವು ಎಂದು ಎದೆ ಎದೆ ಬಡಿದುಕೊಂಡರು. ಇದು ಖಂಡಿತವಾಗಿಯೂ ದಿಟವಾದದ್ದು ಎಂದು ಬಿಳಿಯರು ಮತ್ತು ಅವರ ಮಾನಸ ಪುತ್ರರಾದ ಮೆಕಾಲೆ ಪಂಡಿತರು ಜಿದ್ದಿಗೆ ಬಿದ್ದವರಂತೆ ಪ್ರಚಾರಮಾಡಿ ಆ ಸುಳ್ಳನ್ನು ನಿಜ ಮಾಡಿದರು.
ಕೇವಲ ಎರಡು ಶತಮಾನಗಳ ಹಿಂದೆ ಹುಟ್ಟಿಕೊಂಡ ಈ ಹಸಿ ಸುಳ್ಳು ಅಕ್ಷರಶಃ ನಿಜವಾದುದೆಂದೂ ಅದು ನಿರ್ವಿವಾದವಾದ ಚಾರಿತ್ರಿಕ ಸತ್ಯವೆಂದು ಇಂದಿಗೂ ಸಹ ನಮ್ಮಲ್ಲನೇಕರು ನಂಬುತ್ತಿದ್ದಾರೆ ಎನ್ನುವುದೇ ಅತಿ ದೊಡ್ಡ ದುರಂತ!
ಈ ಸರಣಿಯ ಹಿಂದಿನ ಲೇಖನ ಭಾಗ - ೩ ಮನುವಿನ ಧರ್ಮ: ಮನುಸ್ಮೃತಿಯನ್ನು ಸುಟ್ಟು ಹಾಕಲೇಬೇಕೆ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%AE...
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು ಪುಸ್ತಕದ ನಾಲ್ಕನೆಯ ಅಧ್ಯಾಯ).
*****
ಚಿತ್ರಗಳ ಕೃಪೆ: ಗೂಗಲ್
ಚಿತ್ರ - ೧: ರಾವಿಪೂಡಿ ವೇಂಕಟಾದ್ರಿ
ಚಿತ್ರ -೨: ಡೇವಿಡ್ ಬಕ್ಸ್ಬ್ಹಾಮ್
ಚಿತ್ರ - ೩: ಡೊನಾಲ್ಡ್ ಡೇವಿಸ್
ಚಿತ್ರ - ೪:ವೆರ್ನರ್ ಮೆನ್ಸ್ಕಿ
ಚಿತ್ರ - ೫:ವಾರೆನ್ ಹೇಸ್ಟಿಂಗ್ಸ್
ಚಿತ್ರ - ೬: ವಿಲಿಯಂ ಜೋನ್ಸ್
ಚಿತ್ರ - ೭:ಅಬ್ದುಲ್ಲಾ ಅಹ್ಮದ್ ಅನ್-ನಯೀಮ್
ಚಿತ್ರ - ೮: The spirit of Hindu Law
ಚಿತ್ರ - ೯: Hindu Law: Beyond Tradition and Modernity
ಚಿತ್ರ - ೧೦: Family Law and Customary Law in Asia
ಚಿತ್ರ - ೧೧: A Code of Gentoo Laws
ಚಿತ್ರ - ೧೨: Islam and the Secular State
Comments
ಉ: ಭಾಗ - ೪ ಮನುವಿನ ಧರ್ಮ: ಪರಂಗಿಗಳು ತಂದಿಟ್ಟ ಪಜೀತಿ
ಈ ಸರಣಿಯ ಮುಂದಿನ ಲೇಖನ ಭಾಗ - ೫ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಶತ್ರುವೆ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%AE...
ಉ: ಭಾಗ - ೪ ಮನುವಿನ ಧರ್ಮ: ಪರಂಗಿಗಳು ತಂದಿಟ್ಟ ಪಜೀತಿ
ಮನುಧರ್ಮ - ನಮಗೆ ಬೇಡವಾದ ಮನು : ಈ ಸರಣಿಯ ನಾಲ್ಕೂ ಬರಹಗಳನ್ನು ವಾರದ ವಿಶೇಷ ಲೇಖನಗಳಲ್ಲೊಂದಾಗಿ ಆಯ್ಕೆ ಮಾಡಿರುವ ಶ್ರೀಯುತ ಹರಿಪ್ರಸಾದ್ ನಾಡಿಗರು ಮತ್ತು ಸಂಪದದ ನಿರ್ವಾಹಕ ಮಂಡಳಿಗೆ ನಾನು ಆಬಾರಿಯಾಗಿದ್ದೇನೆ. ಈ ಮಾಲಿಕೆಯನ್ನು ನಿರಂತರವಾಗಿ ಓದಿ ಪ್ರೋತ್ಸಾಹಿಸುತ್ತಿರುವ ಸಂಪದ ಬಳಗದ ವಾಚಕರಿಗೂ ನಾನು ಚಿರಋಣಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)