ಪುಸ್ತಕನಿಧಿ - ವಿ.ಎಂ. ಇನಾಮದಾರರ 'ಸ್ಪರ್ಗದ ಬಾಗಿಲು'

ಪುಸ್ತಕನಿಧಿ - ವಿ.ಎಂ. ಇನಾಮದಾರರ 'ಸ್ಪರ್ಗದ ಬಾಗಿಲು'

ಈ ವಿ.ಎಂ. ಇನಾಮದಾರ್ ಅವರ ಹೆಸರನ್ನು ನಾನು ಗಮನಿಸಿದ್ದು , ಮರಾಠಿಯ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವಿ.ಎಸ್ . ಖಾಂಡೇಕರ್ ಅವರ ಕಾದಂಬರಿ ಯಯಾತಿ ಅನ್ನು ಕನ್ನಡದಲ್ಲಿ ಸುಮಾರು 35 ವರ್ಷಗಳ ಹಿಂದೆ ಓದಿದಾಗ, . ಅದರ ಅನುವಾದಕರಾಗಿ, ಅವರು ಕನ್ನಡದ ಪ್ರಮುಖ ಕಾದಂಬರಿಕಾರರು ಎಂದು ಓದಿದ್ದೆ.

ಇತ್ತೀಚೆಗೆ ಮೈಸೂರು ವಿ.ವಿ.ಯ ಕನ್ನಡ ವಿಶ್ವಕೋಶದ
' ಕನ್ನಡದಲ್ಲಿ ಕಾದಂಬರಿ ಸಾಹಿತ್ಯ ' ಎಂಬ ಲೇಖನದಲ್ಲಿ ಮತ್ತೆ ಅವರ ಹೆಸರನ್ನು ನೋಡಿದೆ. (ಇದು https://kn.wikipedia.org/wiki/ಕನ್ನಡದಲ್ಲಿ_ಕಾದಂಬರಿ_ಸಾಹಿತ್ಯ#ಇತರರು ಕೊಂಡಿಯಲ್ಲಿ ಲಭ್ಯ ಇದೆ)

ನಾನು ಎಷ್ಟೋ ವರುಷಗಳ ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡಿದ್ದ ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಲ್ಲಿ ಇವರ ಪುಸ್ತಕಗಳು ಇದ್ದದ್ದು ನೆನಪಾಗಿ ನನ್ನ ಮೊಬೈಲಿನಲ್ಲಿ ಹುಡುಕಿದಾಗ ಎರಡು ಕಾದಂಬರಿಗಳು - ಒಂದು 'ಸ್ಪರ್ಗದ ಬಾಗಿಲು' , ಇನ್ನೊಂದು 'ಕನಸಿನ ಮನೆ' - ಸಿಕ್ಕವು.

ಅದೇ ಸಮಯಕ್ಕೆ ನಾನು ಕೈಗೊಂಡ ನಾಲ್ಕು ಗಂಟೆಯ ವಿಮಾನ ಪ್ರಯಾಣ ದ ಸಮಯದಲ್ಲಿ ಬೇರೇನೂ ಮಾಡಲು ಇಲ್ಲದೆ ಇದನ್ನು ಓದಿ ಮುಗಿಸಿದೆ.

'ಸ್ಪರ್ಗದ ಬಾಗಿಲು' - ಕಾದಂಬರಿಯ ಕತೆ ತುಂಬ ಸಹಜವಾಗಿದೆ. ಈ ಕಾದಂಬರಿ 1951 ರಲ್ಲಿ ಪ್ರಕಟವಾಗಿದ್ದು, ಆ ಸಮಯದ ಕತೆ ಎನ್ನಬಹುದು. ಆ ಕಾಲದಲ್ಲಿ , ಗಂಡು ಮಗ ಬೇಕೇ ಬೇಕು, ಮಗ ಇಲ್ಲದವನಿಗೆ ಈ ಲೋಕದಲ್ಲಿ ಸುಖವಿಲ್ಲ; ಸತ್ತ ಮೇಲೆ ಸ್ಪರ್ಗ ಸಿಗುವದಿಲ್ಲ , ಗಂಡು ಮಗ ಇಲ್ಲದವರಿಗೆ ಸ್ಪರ್ಗದ ಬಾಗಿಲು ತೆರೆಯುವದಿಲ್ಲ ಎಂಬ ನಂಬಿಕೆ ಸಮಾಜದಲ್ಲಿ, ಜನರ ಮನದಾಳದಲ್ಲಿ ಬೇರೂರಿತ್ತು. ಮಕ್ಕಳಿಲ್ಲದವರು ಗಂಡು ಮಗುವನ್ನು ಬಯಸಿ ಮತ್ತೊಂದು ಮದುವೆಯನ್ನು ಕೂಡ ಆಗುತ್ತಿದ್ದರು. ಈ ಕಾದಂಬರಿಯಲ್ಲಿ ಇಂತಹ ಸಾಮಾಜಿಕ ನಂಬುಗೆ ಹೇಗೆ ಒಂದು ದುರಂತದಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಚಿತ್ರಿಸುತ್ತದೆ. ಮಗುವನ್ನು ಹೆರದ ತಾಯಿ ಒಬ್ಬಳು ಗಂಡನ ಹಿತ ಬಯಸಿ, ಗ೦ಡನ ಹಿತವನ್ನೇ ಒಂದು ಹೆಣ್ಣು ಸಾಧಿಸಬೇಕು ಎ೦ದು ನಂಬಿ , ಅದರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಕಾದಂಬರಿಯ ಕೊನೆಯಲ್ಲಿ ಕಾದಂಬರಿಕಾರರ ವಿಸ್ತೃತವಾದ ಹಿನ್ನುಡಿಯನ್ನು ಓದದೆ ಇರಬಾರದು.

ನನ್ನ ಹತ್ತಿರ ಇರುವ ಇನ್ನೊಂದು ಅವರದೇ ಕಾದಂಬರಿ - - - 'ಕನಸಿನ ಮನೆ ' ನನ್ನ ಮುಂದಿನ ಓದು ಆಗಲಿದೆ. ನೀವು ಆ ಬಗ್ಗೆ ಕೂಡ ಒಂದು ಪುಟ್ಟ ಬರವಣಿಗೆಯನ್ನು ಬರುವ ದಿನಗಳಲ್ಲಿ ನನ್ನಿಂದ ಬಹುಶಃ ನೋಡಬಹುದು.

Rating
No votes yet