ಕಟ್ಟಯ್ಯಾ ಮಂಗಳ ಸೂತ್ರವಾ
ಕವನ
ಭತ್ತದ ಗದ್ದೇಲಿ ತೆನೆ ತುಂಬಿ ತೂಗ್ಯಾವೋ
ನನ್ನ ಎದೆಯೊಲದಾಗ ನೀ ತುಂಬಿ ॥ ನನ ಗೆಳೆಯಾ
ಒಲವು ಹಣ್ಣಾಗಿ ಮಾಗೈತೆ ॥
ಕೈ ಮೇಲಿನ ಹಚ್ಚೇಲಿ ಹೆಸರಾಗಿ ಉಳಿದೋನೆ
ಬೆಚ್ಚಗೆ ಮನದೊಳಗೆ ಉಳಿಬಾರೋ ॥ ನನ ಗೆಳೆಯಾ
ಇಚ್ಚೆಯ ಪೂರೈಸು ಬಾರಯ್ಯ ॥
ದೇವರ ಗುಡಿಯಲ್ಲಿ ಕರ್ಪೂರ ಘಮಲಂತೆ
ನನ್ನೊಡಲ ಗುಡಿಯಲ್ಲಿ ನೀ ಘಮಲು ॥ ನನ ಗೆಳೆಯಾ
ಗಂಧದ ಕೊರಡೇನೋ ನಿನ್ನ ಪ್ರೀತಿ ॥
ಬಳ್ಳಿಯ ಹೂವೆಲ್ಲ ವಾಲಾಡಿ ಬಿರಿದಾವೋ
ಚೆಲುವು ಮೈತುಂಬಿ ನಿಂತಾವೋ ॥ ನನ ಗೆಳೆಯಾ
ಮಲ್ಲಿಗೆ ಮಾಲೆಯ ಮುಡಿಸಯ್ಯ ॥
ಹಟ್ಟಿಯ ಮುಂದೆ ಹಸಿರು ಚಪ್ಪರ ಹಾಕಿ
ಬಾಳೆಯ ದಿಂಡು ಬಳುಕಾಡಿ ॥ ನನ ಗೆಳೆಯಾ
ಕರೆದಾವು ಹಸೆಮಣೆಗೆ ಬಾರಯ್ಯ ॥
ಜರಿಯ ಅಂಚಿನ ಸೀರೆ ಹಸಿರು ಗಾಜಿನ ಬಳೆ
ಉಟ್ಕೊಂಡು ತೊಟ್ಕೊಂಡು ನಾ ಕಾದೆ ॥ ನನ ಗೆಳೆಯಾ
ಕಟ್ಟಯ್ಯ ಮಂಗಳ ಸೂತ್ರವಾ ॥
-ರೂಪಾ ಹೊಸದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
