ಭಾಗ - ೧೨ ಮನುವಿನ ಧರ್ಮ: ಹಂತಕ ರಾಮನ ಪಿತ!

ಭಾಗ - ೧೨ ಮನುವಿನ ಧರ್ಮ: ಹಂತಕ ರಾಮನ ಪಿತ!

ಚಿತ್ರ

       ಶ್ರೀರಾಮ ಇನ್ನೂ ಜನಿಸಿರಲೇ ಇಲ್ಲ, ಅವನ ತಂದೆ ದಶರಥನಿಗೆ ಇನ್ನೂ ವಿವಾಹವಾಗಿರಲಿಲ್ಲ. ಅವನು ಸಿಂಹಾಸನವನ್ನೂ ಅಧಿರೋಹಿಸಿರಲಿಲ್ಲ. ಯುವರಾಜನಾಗಿದ್ದ ಹದಿಹರೆಯದ ದಶರಥನು ಧನುರ್ಬಾಣಗಳನ್ನು ಧರಿಸಿ ಕತ್ತಲಿನ ಸಮಯದಲ್ಲಿ ಸರಯೂ ನದಿ ತಟಕ್ಕೆ ಹೋದ. ದೂರದಲ್ಲಿ ನೀರಿನಲ್ಲಿ ಕಮಂಡಲವನ್ನು (ಬಿಂದಿಗೆ) ಮುಳುಗಿಸಿದ ಬುಳುಬುಳು ಶಬ್ದವು ಕೇಳಿಬಂದಿತು. ಅದು ಕಾಡು ಪ್ರಾಣಿಗಳು ನೀರು ಕುಡಿಯಲು ಬರುವ ಸಮಯ. ಬಹುಶಃ ಆನೆಯೊಂದು ನೀರು ಕುಡಿಯುತ್ತಿರಬಹುದು ಎಂದು ಭಾವಿಸಿದ ದಶರಥನು; ಶಬ್ದವನ್ನು ಅನುಸರಿಸಿ ಎಷ್ಟು ದೂರದಲ್ಲಿರುವ ಲಕ್ಷ್ಯವನ್ನಾದರೂ ಬಾಣದಿಂದ ಭೇದಿಸಬಹುದಾದ, ತಾನು ಕಲಿತಿದ್ದ ಶಬ್ದವೇಧಿ ವಿದ್ಯೆಯನ್ನುಪಯೋಗಿಸಿ ಬಾಣವನ್ನು ಬಿಟ್ಟ. ಮದದಿಂದ ಕೂಡಿದ ಆನೆಯೊಂದು ಶರಾಘಾತಕ್ಕೆ ಸಿಲುಕಿ ದೊಪ್ಪನೆ ನೆಲಕ್ಕೊರಗುವ ಶಬ್ದದ ಬದಲಾಗಿ ಮನುಷ್ಯನೊಬ್ಬನ ಆಕ್ರಂದನವು ಆ ಕಡೆಯಿಂದ ಕೇಳಿ ಬಂತು. ಯುವರಾಜನಾದ ದಶರಥನು ಗಾಬರಿಗೊಂಡು ಏನೋ ಅನಾಹುತವಾಯಿತೆಂದು ಗ್ರಹಿಸಿ ಶಬ್ದ ಬಂದ ದಿಕ್ಕೆನೆಡೆಗೆ ಬಡಬಡನೆ ಧಾವಿಸಿದ. ಅಲ್ಲಿ ಅವನು ಕೆಳಗೆ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದ ಮುನಿಕುಮಾರನೊಬ್ಬನನ್ನು (ಶ್ರವಣಕುಮಾರ) ನೋಡಿದ. 
       "ವೃದ್ಧರೂ, ಅಂಧರೂ ಆದ ನನ್ನ ತಂದೆತಾಯಿಗಳ ದಾಹವನ್ನು ತೀರಿಸಲು ನೀರು ತರಲು ಬಂದ ನನ್ನನ್ನೇಕೆ ಸಾಯಿಸಿದೆ?" ಎಂದು ಮುನಿಕುಮಾರನು ಅವನನ್ನು ನಿಂದಿಸಿದ. ದಶರಥನನ್ನು ಪರಿಪರಿಯಾಗಿ ನಿಂದಿಸಿದ ನಂತರ, "ನನ್ನ ತಂದೆ ಶಾಪವಿತ್ತರೆ ನೀನು ನಾಶವಾಗುತ್ತಿ. ಅದಕ್ಕೂ ಮುಂಚೆ ನೀನೇ ಹೋಗಿ ಕ್ಷಮೆಯಾಚಿಸಿದಲ್ಲಿ ಜೀವವುಳಿಸಿಕೊಳ್ಳಬಹುದು. ಈ ಬಾಣದ ಬಾಧೆಯನ್ನು ತಾಳಲಾರದವನಾಗಿದ್ದೇನೆ ಮೊದಲು ಇದನ್ನು ಹೊರತೆಗೆದು ಪುಣ್ಯವನ್ನು ಕಟ್ಟಿಕೋ" ಎಂದು ಮುನಿಕುಮಾರನು ಹೇಳಿದ. 
         ಆಗ ದಶರಥನು ಸಂದಿಗ್ಧಕ್ಕೆ ಬಿದ್ದ. ಒಂದು ವೇಳೆ ಬಾಣವನ್ನು ಹೊರಗೆಳೆದರೆ ಈ ತಾಪಸಿಯು ಮರಣಿಸುತ್ತಾನೆ. ಆಗ ನನಗೆ ಬ್ರಹ್ಮಹತ್ಯಾ ದೋಷವು ತಗಲುತ್ತದೆ. ಅವನೇನೋ ನೋವನ್ನು ತಾಳಲಾರದೆ ಬಾಣವನ್ನು ಹೊರತೆಗೆ ಎಂದು ಹೇಳುತ್ತಿದ್ದಾನೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನೇನು ಮಾಡಲಿ? ಆ ತಾಪಸಿಯು ದಶರಥನ ತೊಳಲಾಟವನ್ನು ಗಮನಿಸಿ ಹೀಗೆ ಹೇಳಿದ:
ಬ್ರಹ್ಮಹತ್ಯಾಕೃತಂ ಪಾಪಂ ಹೃದಯಾದಪನೀಯತಾಮ್ ll
ನ ದ್ವಿಜಾತಿರಹಂ ರಾಜನ್ ಮಾ ಭೂತ್ತೇ ಮನಸೋ ವ್ಯಥಾ l
ಶೂದ್ರಾಯಾಮಸ್ಮಿ ವೈಶ್ಯೇನ ಜಾತೋ ಜನಪಾಧಿಪ ll
(ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ೬೩ನೇ ಸರ್ಗ, ೪೯ ಮತ್ತು ೫೦ನೇ ಶ್ಲೋಕಗಳು)
         ಭಾವಾರ್ಥ: ನಾನು ಮರಣಿಸಿದರೆ ನಿನಗೆ ಬ್ರಹ್ಮಹತ್ಯಾ ದೋಷವು ತಟ್ಟುವುದೆನ್ನುವ ಶಂಕೆಯನ್ನು ನಿನ್ನ ಮನಸ್ಸಿನಿಂದ ದೂರವಿರಿಸು. ನಾನು ಬ್ರಾಹ್ಮಣನಲ್ಲ, ಶೂದ್ರ ತಾಯಿ ಮತ್ತು ವೈಶ್ಯ ತಂದೆಗೆ ಜನಿಸಿದವನು. 
ಮುನಿಕುಮಾರನು ಹಾಗೆ ಹೇಳಿದ ನಂತರ ಅವನ ದೇಹದಿಂದ ದಶರಥನು ಬಾಣವನ್ನು ಹೊರಗೆಳೆದ. ಆ ಕೂಡಲೇ ಆ ಮುನಿಕುಮಾರನು ಅಸುನೀಗಿದನು. ದಶರಥನು ಬಿಂದಿಗೆಯಲ್ಲಿ ನೀರನ್ನು ತೆಗೆದುಕೊಂಡು ಋಷ್ಯಾಶ್ರಮಕ್ಕೆ ಹೋಗಿ, ತಮ್ಮ ಮಗನಿಗಾಗಿ ಎದುರು ನೋಡುತ್ತಿದ್ದ, ಕಣ್ಣು ಕಾಣಿಸದ ವೃದ್ಧ ದಂಪತಿಗಳಿಗೆ ದಾರುಣವಾದ ವಿಷಯವನ್ನು ತಿಳಿಸಿದನು. ವಿಷಯವನ್ನು ಕೇಳಿ ನಿಶ್ಚೇಷ್ಟಿತನಾದ ಆ ವೃದ್ಧ ಮುನಿಯು ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡು, "ನೀನೇ ಬಂದು ವಿಷಯವನ್ನು ಅರುಹಿದ್ದರಿಂದ ಬದುಕುಳಿದೆ. ಇಲ್ಲವೆಂದಾದಲ್ಲಿ ನನ್ನ ಶಾಪಕ್ಕೆ ಸಿಲುಕಿ ನಿನ್ನ ತಲೆಯು ಸಿಡಿದು ಸಾವಿರ ಹೋಳಾಗುತ್ತಿತ್ತು. ನಮ್ಮನ್ನು ಕೂಡಲೇ ನಮ್ಮ ಕುಮಾರನಿರುವ ಸ್ಥಳಕ್ಕೆ ಕರೆದೊಯ್ಯಿ" ಎಂದು ಹೇಳಿದನು. ಆ ಸ್ಥಳಕ್ಕೆ ಹೋದ ನಂತರ ಮಗನ ಮೃತದೇಹವನ್ನು ಮುಟ್ಟಿ ನೋಡುತ್ತಾ ಹೃದಯವಿದ್ರಾವಕವಾಗಿ ಆ ವೃದ್ಧ ಮುನಿಯು ಹೀಗೆ ಪ್ರಲಾಪಿಸಿದನು - 
ಕಸ್ಯ ವಾಪರರಾತ್ರೇsಹಂ ಶ್ರೋಷ್ಯಾಮಿ ಹೃದಯಂಗಮಂ l
ಅಧೀಯಾನಸ್ಯ ಮಧುರಂ ಶಾಸ್ತ್ರಂ ವಾ ಅನ್ಯಯದ್ವಿಶೇಷತಃ ll
ಕೋ ಮಾಂ ಸಂಧ್ಯಾಮುಪಾಸ್ತೈವ ಸ್ನಾತ್ವಾ ಹುತಹುತಾಶನಃ l
ಶ್ಲಾಘಯಿಷ್ಯತ್ಯುಪಾಸೀನಃ ಪುತ್ರಶೋಕಭಯಾರ್ದಿತಂll
(ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ೬೪ನೇ ಸರ್ಗ, ೩೩ ಮತ್ತು ೩೪ನೇ ಶ್ಲೋಕಗಳು)
        ಭಾವಾರ್ಥ: ಇನ್ನು ಮುಂದೆ ಯಾರು ಅಪರಾತ್ರಿ ವೇಳೆಯಲ್ಲಿಯೂ ಎಚ್ಚರವಿದ್ದು ಹೃದ್ಯವಾಗಿ, ಮಧುರವಾಗಿ ವೇದಶಾಸ್ತ್ರಗಳನ್ನೂ, ಪುರಾಣಗಳನ್ನೂ ಪಠಿಸುತ್ತಿದ್ದರೆ ಕೇಳಬಲ್ಲೆನು? ಯಾರು ಇನ್ನು ಮುಂದೆ ಸ್ನಾನಾನಂತರ ಸಂಧ್ಯಾವಂದನೆ ಮಾಡಿ, ಅಗ್ನಿಹೋತ್ರದ ಮೂಲಕ ಹೋಮ ಮಾಡಿ ಪುತ್ರಶೋಕದಿಂದ ಪೀಡಿತರಾಗಿರುವ ನಮಗೆ ಶುಶ್ರೂಷೆ ಮಾಡುವವರು?
ಹೀಗೆ ಪರಿಪರಿಯಾಗಿ ರೋಧಿಸಿದ ತಂದೆಯು ಮಗನಿಗೆ ಉತ್ತರಾಧಿಕ್ರಿಯೆಗಳನ್ನು ನೆರವೇರಿಸಿದನು. ರೆಕ್ಕೆ ಕತ್ತರಿಸಲ್ಪಟ್ಟ ಹಕ್ಕಿಯಂತಾಗಿರುವ ನಾವು ಕುಮಾರನಿಲ್ಲದೆ ಜೀವಿಸಲಾರೆವು ಎಂದು ಹೇಳಿ ಅಲ್ಲಿಯೇ ಚಿತೆಯನ್ನು ಹೊತ್ತಿಸಿ ಧರ್ಮಪತ್ನಿಯೊಂದಿಗೆ ಅಗ್ನಿಪ್ರವೇಶ ಮಾಡುತ್ತಾ ಆ ವೃದ್ಧ ಮುನಿಯು, "ನನ್ನ ಹಾಗೆ ನೀನೂ ಕೂಡಾ ಪುತ್ರಶೋಕದಿಂದ ಮರಣಿಸು" ಎಂದು ದಶರಥನಿಗೆ ಶಾಪವಿತ್ತನು. ಅದೇ ಸಮಯದಲ್ಲಿ ಆ ಮುನಿಯು ಇನ್ನೊಂದು ಮಾತನ್ನೂ ಸಹ ಹೇಳಿದನು -
ಅಜ್ಞಾನಾತ್ತು ಹತೋ ಯಸ್ಮಾತ್ ಕ್ಷತ್ರಿಯೇಣ ತ್ವಯಾ ಮುನಿಃ l
ತಸ್ಮಾತ್ವಾಮನಾವಿಶತ್ಯಾಶು ಬ್ರಹ್ಮಹತ್ಯಾ ನರಾಧಿಪ ll
(ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ೬೪ನೇ ಸರ್ಗ, ೫೬ನೇ ಶ್ಲೋಕ) 
       ಭಾವಾರ್ಥ: ರಾಜಾ! ಕ್ಷತ್ರಿಯನಾದ ನೀನು ಅಜ್ಞಾನದಿಂದಾಗಿ ಮುನಿಯನ್ನು ಕೊಂದಿರುವೆಯಾದ್ದರಿಂದ ನಿನಗೆ ಬ್ರಹ್ಮಹತ್ಯಾದೋಷವು ತಟ್ಟುವುದಿಲ್ಲ. 
 
       ಈಗಿನ ಲೆಕ್ಕದಂತೆ ಪರಿಶಿಷ್ಟ ಜನಾಂಗವಾದ ಬೇಡರ ಕುಲದಲ್ಲಿ ಜನಿಸಿ ಮಹರ್ಷಿಯಾದ ವಾಲ್ಮೀಕಿಯು ರಚಿಸಿದ ಆದಿಕಾವ್ಯದ ಈ ಘಟ್ಟವನ್ನು ಪರಿಶೀಲಿಸಿದಾಗ ನಮಗೆ ಕೆಲವೊಂದು ವಾಸ್ತವ ಸಂಗತಿಗಳು ಗೋಚರಿಸುತ್ತವೆ -
ನಮ್ಮ ಆಧುನಿಕ ವಿಜ್ಞಾನ ತನ್ನ ಬಳಿಯಿರುವ ಪರಿಕರಗಳ ಸಹಾಯದಿಂದ ಕಂಡುಕೊಂಡು ಹೇಳಿರುವ ಪ್ರಕಾರವೇ ರಾಮಸೇತುವು ಕನಿಷ್ಠ ಪಕ್ಷ ಏಳು ಸಾವಿರ ವರ್ಷಗಳ ಹಿಂದೆ ಕಟ್ಟಲ್ಪಟ್ಟಿದೆ. ಅದನ್ನು ಕಟ್ಟಿಸಿದ ರಾಮನು ಜನಿಸುವ ಹಲವಾರು ವರ್ಷಗಳ ಪೂರ್ವದಲ್ಲಿ ಭಾರತೀಯ ವೈದಿಕ ಆರ್ಯ ಸಮಾಜದಲ್ಲಿ...........
೧) ಶೂದ್ರ ಸ್ತ್ರೀಯನ್ನು ಮದುವೆಯಾದ ಒಬ್ಬ ವೈಶ್ಯನು ಋಷಿಯಾಗಿದ್ದ. ದೇಶವನ್ನಾಳುವ ರಾಜನನ್ನೇ ಶಪಿಸಬಲ್ಲಂತಹ ತಪಶ್ಶಕ್ತಿ ಸಂಪನ್ನನಾಗಿದ್ದ. ಆ ರಾಜ ಅವನನ್ನು ಕಾಲು ಹಿಡಿದು ಕ್ಷಮಾಪಣೆ ಕೇಳಿದ್ದರಿಂದ ಅವನ ತಲೆ ಹೋಳಾಗದಂತೆ ಕನಿಕರಿಸಿದ. 
೨) ವೈಶ್ಯ ಪತಿ ಮತ್ತು ಶೂದ್ರ ಪತ್ನಿಯರಿಗೆ ಜನಿಸಿದ ಕುಮಾರನು ಪ್ರತಿನಿತ್ಯ ಅಗ್ನಿಹೋತ್ರದಿಂದ ಹೋಮ ಮಾಡಿ, ವೇದಶಾಸ್ತ್ರಗಳನ್ನು ಪಠಿಸಿ. ಬ್ರಾಹ್ಮಣನಾಗಿ ಜನಿಸದವನು ಪ್ರತಿನಿತ್ಯ ಸಂಧ್ಯಾವಂದನೆ ಮಾಡಿ ತನ್ನ ವೈಶ್ಯ ತಂದೆಗೆ, ಶೂದ್ರ ತಾಯಿಗೆ ಸರಿರಾತ್ರಿಯವರೆಗೆ ವೇದ, ಪುರಾಣಗಳನ್ನು ಮಧುರ ಸ್ವರದಿಂದ ಶ್ರುತಪಡಿಸುತ್ತಿದ್ದ. ವೇದಗಳನ್ನು ಓದಿದರೆ ನಾಲಿಗೆ ಕತ್ತರಿಸುತ್ತಾರೆ, ಕೇಳಿದರೆ ಕಾದ ಸೀಸವನ್ನು ಕಿವಿಯಲ್ಲಿ ಸುರಿಯುತ್ತಾರೆನ್ನುವ ಭಯವು ಆ ಮುನಿಯ ಕುಟುಂಬದಲ್ಲಿ ಯಾರಿಗೂ ಇರಲಿಲ್ಲ. 
೩) ಜನ್ಮತಃ ಬ್ರಾಹ್ಮಣರಾಗದೇ ಇದ್ದರೂ ಸಹ ಅವರು ದೇಶವನ್ನಾಳುವ ದೊರೆಯಿಂದ ಪೂಜ್ಯ ತಪಸ್ವಿಗಳಂತೆ ಪಾದಾಭಿವಂದನೆಗಳನ್ನು ಸ್ವೀಕರಿಸಿದರು. 
೪) ತನ್ನ ತಾಯಿಯದು ಶೂದ್ರ ವರ್ಣ, ತಂದೆಯದು ವೈಶ್ಯ ವರ್ಣವಾಗಿದ್ದರಿಂದ ತಾನು ಬ್ರಾಹ್ಮಣನಲ್ಲವೆಂದು ಮುನಿಕುಮಾರನು ಭಾವಿಸಿದ್ದನು. ಆದ್ದರಿಂದ ನಿನ್ನಿಂದ ನನ್ನ ಪ್ರಾಣ ಹೋದರೂ ಸಹ ನಿನಗೆ ಬ್ರಹ್ಮಹತ್ಯಾ ದೋಷವು ತಗಲದು ಎಂದು ರಾಜನಿಗೆ ಅವನು ಆಶ್ವಾಸನೆಯನ್ನು ಕೊಡುತ್ತಾನೆ. ಆದರೆ ಗುಣ ಕರ್ಮಗಳ ಪ್ರಕಾರ ಅವನು ನೂರಕ್ಕೆ ನೂರರಷ್ಟು ಬ್ರಾಹ್ಮಣನೇ ಸರಿ. ಈ ವಿಷಯವು ಅವನಿಗಿಂತಲೂ ಹೆಚ್ಚು ಪ್ರಾಜ್ಞನೂ, ಧರ್ಮಜ್ಞನೂ ಆಗಿದ್ದ ಅವನ ತಂದೆಗೆ ತಿಳಿದಿತ್ತು. ವರ್ಣಾಶ್ರಮ ಪದ್ಧತಿಯಂತೆ ಅವರು ಬ್ರಾಹ್ಮಣರಾಗಿದ್ದರಿಂದ ಬ್ರಾಹ್ಮಣ ಕುಮಾರನ ಮರಣಕ್ಕೆ ಬ್ರಹ್ಮಹತ್ಯಾದೋಷವು ಸಾಮಾನ್ಯ ಪ್ರಸಂಗಗಳಲ್ಲಿ ತಗಲತಕ್ಕದ್ದೇ. ಆದರೆ ಈ ಸಂದರ್ಭದಲ್ಲಿ ಅದು ಅರಿಯದೆ ಮಾಡಿದ ತಪ್ಪಾಗಿದ್ದರಿಂದ ಮತ್ತು ಅಪರಾಧಿಯು ತನ್ನನ್ನು ಕ್ಷಮಿಸೆಂದು ಬೇಡಿಕೊಂಡದ್ದರಿಂದ,  ಬ್ರಹ್ಮಹತ್ಯಾದೋಷವು ತಗಲದಿರಲಿ ಎಂದು ಆ ವೃದ್ಧ ಮುನಿಯು ತನ್ನ ತಪಶ್ಶಕ್ತಿಯಿಂದ ರಾಜನಿಗೆ ವಿನಾಯತಿಯನ್ನು ನೀಡಿದ್ದ. 
         ಈಗಿನ ಕಾಲದಲ್ಲಿ ನಮ್ಮ ಮಹಾನ್ ಬುದ್ಧಿಜೀವಿಗಳು ನಮಗೆ ಉಣಬಡಿಸುತ್ತಿರುವ ಘೋರ ಸಾಮಾಜಿಕ ಚರಿತ್ರೆಯು ನಿಜವೇ ಆಗಿದ್ದಲ್ಲಿ........ ಈ ಘಟ್ಟದಲ್ಲಿ ದಶರಥನು ಏನು ಮಾಡಬೇಕಾಗಿತ್ತು? ಶೂದ್ರನು ವೇದಗಳನ್ನು ಓದಬಾರದು, ಕೇಳಬಾರದು, ಅಸಲಿಗೆ ತಪಸ್ಸನ್ನೇ ಮಾಡಬಾರದು ಎನ್ನುವ ಕ್ರೂರವಾದ ಮನುವಾದ ಆಕಾಂಕ್ಷೆಗಳು ಅಮಲಿನಲ್ಲಿದ್ದ ಕಾಲಘಟ್ಟವಲ್ಲವೇ ಅದು?! ಯಾವನೋ ಶೂದ್ರ ಅದೆಲ್ಲಿಯೋ ತಪಸ್ಸನ್ನಾಚರಿಸುತ್ತಿದ್ದಾನೆಂದು ಯಾವನೋ ಒಬ್ಬ ಬ್ರಾಹ್ಮಣನು ಚಾಡಿ ಹೇಳಿದ ಕೂಡಲೇ ದುಷ್ಟನಾದ ರಾಮನು ಆತುರಾತುದಿಂದ ಹೋಗಿ ಶಂಭೂಕನೆನ್ನುವ ಶೂದ್ರನ ತಲೆಯನ್ನು ಕತ್ತರಿಸಿ ಹಾಕಿದನಂತೆ, ಹೌದಲ್ಲವೇ? ಮಗನೇ ಇಂತಹ ಕೆಲಸ ಮಾಡಿದನೆಂದ ಮೇಲೆ ಅವನಿಗೆ ಮುಂದೆ ತಂದೆಯಾಗಲಿದ್ದ ದಶರಥನು ಅದೆಂತಹ "ಕಟ್ಟರ್ ಮನುವಾದಿ" ಆಗಿದ್ದಿರಬಹುದು? 
        ಶೂದ್ರ ಸಂತಾನವಾದವನು ಮುನಿಕುಟೀರದಲ್ಲಿ ತಪಸ್ಸನ್ನಾಚರಿಸುತ್ತಿದ್ದುದು ಅಪರಾಧವೇ ದಿಟ ಎಂದ ಬಳಿಕ  ಅವನ ತಲೆಯನ್ನು ಕತ್ತರಿಸಿ ಹಾಕಬೇಕಾದ್ದು ನ್ಯಾಯಬದ್ಧವಾದ್ದರಿಂದ ರಾತ್ರಿ ವೇಳೆಯಲ್ಲಿ ತನ್ನ ಬಾಣವು ತಗಲಿ ಅವನು ಸಾಯಬೇಕಾದ್ದು ನ್ಯಾಯಸಮ್ಮತವಾದುದೆಂದು ದಶರಥನು ಅವನನ್ನು ದಬಾಯಿಸಬೇಕಾಗಿತ್ತಲ್ಲವೇ? "ಶೂದ್ರನೇ ಸಾಯಿ!" ಎಂದು ಗರ್ಜಿಸಿ ಅವನು ಮಾತನಾಡುವುದಕ್ಕೆ ಮುಂಚೆಯೇ ಬಾಣವನ್ನು ಹೊರಗೆಳೆದು ಅವನನ್ನು ಸಾಯಿಸಬೇಕಾಗಿತ್ತಲ್ಲವೇ? ಅದರ ನಂತರ ಅವನ ತಂದೆತಾಯಿಗಳ ವಿಳಾಸವನ್ನು ತಿಳಿದುಕೊಂಡು ಅವರು ನಿವಾಸವಿದ್ದ ಋಷ್ಯಾಶ್ರಮಕ್ಕೆ ಹೋಗಿ, ಬ್ರಾಹ್ಮಣ ಕುಲದಲ್ಲಿ ಜನಿಸದೇ ಇರುವುದರಿಂದ ತಪ್ಪಸ್ಸನ್ನಾಚರಿಸುತ್ತಿರುವ ಅಪರಾಧಕ್ಕಾಗಿ ಆ ವೃದ್ಧ ದಂಪತಿಗಳ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ ಬಿಸಾಕಿ, ಸಾಮಾಜಿಕ ಸ್ಪೃಹೆಯನ್ನು ಉಂಟು ಮಾಡುತ್ತಿರುವ ಮಹಾನ್ ಬುದ್ಧಿಜೀವಿಗಳಿಗೆ ಮನುವಾದವನ್ನು ಅಡ್ಡವಾಗಿ ಕತ್ತರಿಸಿ ಚೆಂಡಾಡುವುದಕ್ಕೆ ಮತ್ತೊಂದು ಮಹತ್ತರವಾದ ಪ್ರಚಾರ ಆಯುಧವನ್ನೂ ಒದಗಿಸಬೇಕಾಗಿತ್ತಲ್ಲವೇ? 
       ಹಾಗಿರುವಾಗ ಹಂತಕ ರಾಮನ ತಂದೆಯು ಅಂತಹದುದೇನನ್ನೂ ಮಾಡಲೇ ಇಲ್ಲವಲ್ಲ? ಅಬ್ರಾಹ್ಮಣರು ವೇದಾಧ್ಯಯನ ಮಾಡುತ್ತಾ, ಯಜ್ಞಯಾಗಾದಿಗಳನ್ನೂ, ತಪಗಳನ್ನೂ ಆಚರಿಸುತ್ತಿದ್ದಾರೆಂದು ತಿಳಿದ ನಂತರವೂ ಕೋಪಾವಿಷ್ಠನಾಗದೆ, ಹೋಗಿ ಹೋಗಿ ......... ಅಂಥವರ ಕಾಲುಗಳ ಮೇಲೆ ಅಡ್ಡ ಬೀಳುವುದೆಂದರೇನು?.......
        ದಶರಥನ ಕಾಲಕ್ಕೆ ಮನುಧರ್ಮವು ಆಚರಣೆಯಲ್ಲಿಯೇ ಇರಲಿಲ್ಲ. ಅವನ ಮಗನ ಆಡಳಿತಾವಧಿಯಲ್ಲೇ ಮನುವಾದವು ಹುಟ್ಟಿಕೊಂಡಿತು ಎಂದು ಭಾವಿಸಿ ಸುಮ್ಮನಾಗೋಣವೇ?...... ಇದು ಸಾಧ್ಯವಿಲ್ಲದ ಮಾತು! .... ಏಕೆಂದರೆ ಮನುವು ದಶರಥನಿಗಿಂತಲೂ ಹಲವಾರು ತಲೆಮಾರು ಹಿಂದಿನವನು, ಇಕ್ಷ್ವಾಕು ವಂಶದ ಮೂಲ ಪುರುಷರಲ್ಲಿ ಒಬ್ಬನು! 
 ಬುದ್ಧಿಜೀವಿಗಳೇ........ ಸಾಕು ಮಾಡಿ, ಇನ್ನೂ ಎಷ್ಟು ದಿವಸ ಶಂಭೂಕನ ಕುರಿತ ತಪ್ಪು ಕಥೆಯನ್ನು ಪ್ರಚಾರಮಾಡುತ್ತೀರಿ........?!
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ "ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು" ಪುಸ್ತಕದ ಹನ್ನೆರಡನೆಯ ಅಧ್ಯಾಯ).
*****
ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೧೧ ಮನುವಿನ ಧರ್ಮ: ಮನು ಶೂದ್ರ ದ್ವೇಷಿಯೇ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A7-...
 
ಚಿತ್ರಗಳ ಕೃಪೆ: ಗೂಗಲ್
 
 
 
 
 

Rating
No votes yet

Comments