ಭಾಗ - ೧೪ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿವಿಡಿ ೧.೧ ಜಗಜ್ಜ್ಯೋತಿ ಮನು

ಭಾಗ - ೧೪ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿವಿಡಿ ೧.೧ ಜಗಜ್ಜ್ಯೋತಿ ಮನು

ಚಿತ್ರ

ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ
(ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸಮರ್ಪಿಸಿದ ಪ್ರೌಡ ಪ್ರಬಂಧ - ಪಿ.ಎಚ್.ಡಿ. ಥೀಸಿಸಿನಲ್ಲಿರುವ ಕೆಲವು ಆಸಕ್ತಿಕರ ಅಂಶಗಳು)
***
ಪರಿವಿಡಿ ೧.೧: ಜಗಜ್ಜ್ಯೋತಿ ಮನು
          ನಮಗೆ ತಿಳಿದಿದ್ದರೂ, ತಿಳಿಯದೇ ಇದ್ದಾಗ್ಯೂ ಸಹ ಪ್ರಾಚೀನ ಮತ್ತು ಅರ್ವಾಚೀನ ಪ್ರಪಂಚದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿರುವ ಹೆಸರು ಮನುವಿನದು. ಋಗ್ವೇದದಲ್ಲಿ ವಿಶಿಷ್ಠ ಸ್ಥಾನದಲ್ಲಿರುವ ಮನುವಿನ ಹೆಸರನ್ನು ಆರ್ಯರು ತಾವು ಹೋದೆಡೆಯೆಲ್ಲೆಲ್ಲಾ ತಮ್ಮೊಡನೆ ಕೊಂಡು ಹೋಗಿದ್ದಾರೆ. 
          ಉತ್ತರ ಚೀನಾ ದೇಶದಲ್ಲಿ ಮನುಧರ್ಮ ಶಾಸ್ತ್ರದ ಕುರುಹುಗಳು ಕಂಡು ಬರುತ್ತವೆ. ಪೂರ್ವಕಾಲದಲ್ಲಿ ಭಾರತ, ಪರ್ಷಿಯಾ (ಇರಾನ್), ಸುಮೇರಿಯಾ, ಈಜಿಪ್ಟ್, ಬ್ಯಾಬಿಲೋನಿಯಾ, ಅಸ್ಸೀರಿಯಾ, ಅನಟೋಲಿಯಾ, ಪಾಲಸ್ತೀನಾ, ಗ್ರೀಸ್, ರೋಮ್, ಮೊದಲಾದ ದೇಶಗಳಲ್ಲಿ ಮನುವಿನ ಹೆಸರು ಸುಪರಿಚಿತವಾಗಿತ್ತು. 
         ಪೂರ್ವ ಹಾಗು ಆಗ್ನೇಯ ಏಷ್ಯಾ ಖಂಡದ ದೇಶಗಳಲ್ಲಿ ಮನುವಿಗೆ ಅತ್ಯಂತ ಗೌರವಯುತ ಸ್ಥಾನವಿದೆ. ಬರ್ಮಾ, ಸಯ್ಯಾಂ (ಥೈಲಾಂಡ್), ಮಲಯಾ (ಮಲೇಷ್ಯಿಯಾ), ಇಂಡೋಚೈನಾ, ಇಂಡೋನೇಷಿಯಾ, ಬಾಲಿ, ಫಿಲಿಪ್ಪೀನ್ಸ್ ದ್ವೀಪಗಳು, ಸಿಲೋನ್‌ಗಳಲ್ಲಿ ಮನುವಿನ ಗೌರವಾರ್ಥ ಮತ್ತು ಅವನ ಹೆಸರನ್ನು ಚಿರಸ್ಥಾಯಿಯಾಗಿರಿಸಲು ಈಗಲೂ ಮನುವಿನ ಧರ್ಮಶಾಸ್ತ್ರವನ್ನು ಅನುಸರಿಸಲಾಗುತ್ತಿದೆ. ಆ ದೇಶಗಳಲ್ಲಿನ ನ್ಯಾಯವಿಧಾನಗಳು, ಸಾಮಾಜಿಕ ವ್ಯವಸ್ಥೆಗಳು ಮನುವಿನ ಬೋಧನೆಗಳನ್ನು ಆಧರಿಸಿವೆ. 
ಸಮಾಜ ವಿಜ್ಞಾನದ ಭಾಗವಾದ ಮನುಧರ್ಮ ಶಾಸ್ತ್ರವನ್ನು ಮಾನವ ಚರಿತ್ರೆಯ ಆರಂಭಕಾಲದಲ್ಲೇ ಭಾರತೀಯರು ಅಧ್ಯಯನ ಮಾಡಿ ಅದನ್ನು ಅಳವಡಿಸಿಕೊಂಡಿದ್ದಾರೆ. ’ಯುಟೋಪಿಯಾ’ದ ಸೃಷ್ಟಿಕರ್ತರು ಅಂದರೆ ಆದರ್ಶ ರಾಜ್ಯದ ಕಲ್ಪನೆಯನ್ನುಳ್ಳ ಪಾಶ್ಚಾತ್ಯ ಚಿಂತಕರು ಮತ್ತು ನ್ಯಾಯ ಸಂಹಿತೆಗಳನ್ನು ರಚಿಸಿದ ಪಾಶ್ಚಾತ್ಯ ಸಮಾಜ ಸುಧಾರಕರೆಲ್ಲರೂ ವಾಸ್ತವವಾಗಿ ಮನುವಿನ ಮಾನಸಿಕ ಪುತ್ರರೇ! 
          ಮನುಧರ್ಮವನ್ನು ಹಲವು ಕೋನಗಳಿಂದ ಅಧ್ಯಯನ ಮಾಡಬಹುದು. ಮತ ಅಥವಾ ಧರ್ಮ (Religion), ತತ್ತ್ವಶಾಸ್ತ್ರ (Philosophy), ಮನಶ್ಶಾಸ್ತ್ರ (Psychology), ಜೀವಶಾಸ್ತ್ರ - ತಳಿವಿಜ್ಞಾನ ಹಾಗು ಅನುವಂಶೀಯತೆ (Biology & Genetics), ನೀತಿ ಶಾಸ್ತ್ರ (Ethics), ಚರಿತ್ರೆ (History), ನ್ಯಾಯಶಾಸ್ತ್ರ (Law), ರಾಜನೀತಿ ಶಾಸ್ತ್ರ (Political Science), ನ್ಯಾಯಶಾಸ್ತ್ರ (Jurisprudence), ಮೊದಲಾದ ವಿಷಯಗಳನ್ನು ಅಧ್ಯಯನ ಮಾಡಬಯಸುವ ವಿದ್ಯಾರ್ಥಿಗಳಿಗೆ ಆಯಾ ಅಂಶಗಳಿಗೆ ಸಂಬಂಧಿಸಿದ ಆಸಕ್ತಿಕರ ಅಂಶಗಳು ಮನುವಿನ ಬಳಿ ದೊರಕುತ್ತವೆ. ಹಲವಾರು ವಿಷಯಗಳಲ್ಲಿ ಪಾಶ್ಚಾತ್ಯರ ಸಾಮಾಜಿಕ ಚಿಂತನೆಗಳಿಗಿಂತಲೂ ಮನುವಿನ ಸಾಮಾಜಿಕ ಚಿಂತನೆ ಅದೆಷ್ಟೋ ಪಾಲು ಉನ್ನತವಾಗಿದೆ. 
         ಇತಿಹಾಸಕಾರರು ಚರಿತ್ರೆಯನ್ನು ಎಷ್ಟು ಹಿಂದಕ್ಕೆ ಬೇಕಾದರೂ ಕೊಂಡೊಯ್ಯಲಿ ಅವರಿಗೆ ಖಂಡಿತವಾಗಿ ಮನುವು ಎದುರಾಗುತ್ತಾನೆ.... ಒರಟನಾಗಿದ್ದ ಮಾನವನೆಂಬ ಕಚ್ಚಾಸಾಮಗ್ರಿಯನ್ನು ನೈತಿಕವಾಗಿ, ತಾತ್ತ್ವಿಕವಾಗಿ, ಪ್ರಗತಿಶೀಲನಾಗಿ ಮಾರ್ಪಡಿಸುವ ವ್ಯಕ್ತಿಯಾಗಿ! ಮನುವು ಮರೆತುಹೋದ ಗತಕಾಲದ ಚರಿತ್ರೆಯ ಪುಟಗಳಿಗೆ ಸೇರಿದವನಲ್ಲ, ನಾಗರೀಕನಾಗಿರುವ ಪ್ರತಿ ಮಾನವನ ಶರೀರದಲ್ಲಿಯೂ ಅವನು ಜೀವಸೆಲೆಯಾಗಿ ಇಂದಿನ ಭೂಮಂಡಲದ ಮುಖದ ಮೂಲಕ ಉಸಿರಾಡುತ್ತಾ ಜೀವಂತವಾಗಿದ್ದಾನೆ. 
         Manu is the only teacher among the elect of the human race, whose teachings have done the greatest good, to the greatest number of people, over the largest area of the world and for the longest period of time. 
         ಸಮಸ್ತ ಮಾನವಕೋಟಿಗೆ ಅದರ ಇತಿಹಾಸದಲ್ಲಿ ತನ್ನ ಉಪದೇಶಗಳ ಮೂಲಕ ಪ್ರಪಂಚದಲ್ಲಿ ಅತ್ಯಂತ ವಿಶಾಲವಾದ ವ್ಯಾಪ್ತಿ ಪ್ರದೇಶದಲ್ಲಿ, ಅತ್ಯಧಿಕ ಕಾಲಕ್ಕೆ, ಅತ್ಯಧಿಕ ಜನರಿಗೆ, ಅತ್ಯಂತ ಒಳಿತನ್ನು ಮಾಡಿದ ಏಕೈಕ ಬೋಧಕನಾಗಿದ್ದಾನೆ ಮನು ಮಹರ್ಷಿ. ಆದರೆ ದುರ್ದೈವವಶಾತ್ ಮಾನವನ ಇತಿಹಾಸದ ಪ್ರಚಲಿತ ದಶೆಯಲ್ಲಿನ ಚರಿತ್ರಕಾರರ ದೃಷ್ಟಿಯನ್ನು ಮನುವು ಆಕರ್ಷಿಸಲಿಲ್ಲ. ಪ್ರಪಂಚಾದ್ಯಂತ ಇರುವ ಶಾಲಾ ಕಾಲೇಜುಗಳ ಅಥವಾ ವಿಶ್ವವಿದ್ಯಾಲಯಗಳ ಇತಿಹಾಸದ ಪುಸ್ತಕಗಳಲ್ಲಿ ಪಾತಾಳಗರಡಿ ಹಾಕಿ ಹುಡುಕಿದರೂ ನೆಪ ಮಾತ್ರಕ್ಕಾಗಿಯಾದರೂ ಮನುವಿನ ಕುರಿತ ವಿಷಯಗಳ ಪ್ರಸ್ತಾವನೆ ಕಂಡುಬರದು. ಮನುವು ಯಾವುದೋ ಒಂದು ದೇಶಕ್ಕೆ ಪರಿಮಿತನಾದವನಲ್ಲ ಅವನು ಸಮಸ್ತ ವಿಶ್ವಕ್ಕೆ ಸೇರಿದವನು. ಆದರೆ, ಮನುವಿನ ಬೋಧನೆಗಳಿಗೆ ಪ್ರಸಾರ ಕೇಂದ್ರ ಮತ್ತು ಹಕ್ಕುದಾರರಾದ ಭಾರತೀಯರ ಮೇಲೆ ಅವನ ಸ್ಪೂರ್ತಿ ಮತ್ತು ದಾರ್ಶನಿಕತೆಗಳನ್ನು ಪುನರುಜ್ಜೀವನಗೊಳಿಸುವ ವಿಶೇಷವಾದ ಜವಾಬ್ದಾರಿಯಿದೆ. 
         ಮನುಧರ್ಮಶಾಸ್ತ್ರವನ್ನು - The Code of Manu; the Law Giver ಎಂದು ಸಾಮಾನ್ಯವಾಗಿ ಅನುವಾದವನ್ನು ಮಾಡುತ್ತಾರೆ. ಆದರೆ ಇದು ಸಮಂಜಸವಾದುದಲ್ಲ. ಏಕೆಂದರೆ ಭಾರತೀಯರ ಸಾಮಾಜಿಕ ಜೀವನ ಮತ್ತು ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅನಾದಿಕಾಲದಿಂದಲೂ ಮನುವು ನಿಯಂತ್ರಿಸಿದರೂ ಸಹ ಮನುವು ಭಾರತದ ಕಾನೂನು ಕಟ್ಟಳೆಗಳ ಸೂತ್ರದಾರನಲ್ಲ. ಅವನ ಉಪದೇಶಗಳಿಗೆ ಕಾನೂನಿಗೆ ಇರುವ ಶಾಸನಬದ್ಧ ಅಧಿಕಾರ (Legal Authority) ಇಲ್ಲ. ವ್ಯಕ್ತಿ ಹಾಗು ಸಮಾಜದ ನಡುವೆ ಸೌಹಾರ್ದಯುತ ಸಂಬಂಧಗಳು ನೆಲಗೊಳ್ಳಲು ಅವಶ್ಯವಿರುವ ಪೂರಕವಾದ ಧರ್ಮಸೂತ್ರಗಳನ್ನಷ್ಟೇ ಮನುವು ನಮಗೆ ಕೊಟ್ಟಿದ್ದಾನೆ. 
 
ದೂರಪ್ರಾಚ್ಯದಲ್ಲಿ ಮನುವಿನ ಪ್ರಭಾವ (Influence of Manu in the Far East) 
        ಪ್ರಾಚೀನ ಕಾಲದಲ್ಲಿ ಚಿನ್ ಇಜಾ ವಾಂಗ್ ಎನ್ನುವ ಚೀನಾ ದೇಶದ ಚಕ್ರವರ್ತಿ ಇದ್ದ. ಚರಿತ್ರೆ ಎನ್ನುವುದು ತನ್ನಿಂದಲೇ ಆರಂಭವಾಗಿದೆಯೆಂದೂ, ಚೀನಾ ದೇಶದ ನಾಗರೀಕತೆಯು ಸಾಧಿಸಿದ ಘನತೆಯೆಲ್ಲವೂ ತನ್ನಿಂದಲೇ ಸಾಧ್ಯವಾಯಿತೆಂದೂ ಮುಂದಿನ ತಲೆಮಾರುಗಳೆಲ್ಲವೂ ಹಾಗೆಯೇ ಭಾವಿಸಬೇಕೆಂದು ಅವನು ಹಂಬಲಿಸಿದ. ಈ ಆಲೋಚನೆ ಅವನ ತಲೆಯನ್ನು ಹೊಕ್ಕಿದ್ದೇ ತಡ, ಅವನು ತನಗೆ ಪೂರ್ವದಲ್ಲಿದ್ದ ಚಾರಿತ್ರಿಕ ಗ್ರಂಥಗಳನ್ನೆಲ್ಲಾ ಸುಟ್ಟು ಹಾಕಿಸಿದ. ಚೀನಾ ದೇಶದ ಗತವೈಭವವನ್ನು ಶ್ರುತಪಡಿಸಲು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಆ ಚಕ್ರವರ್ತಿ ನಾಶಪಡಿಸಿದ. ಆದರೆ ಆ ಸಮಯದಲ್ಲಿ ಚರಿತ್ರಕಾರನೊಬ್ಬ ತನಗೆ ತಿಳಿದಿದ್ದ ಚೀನಾ ದೇಶದ ಪೂರ್ವ ಇತಿಹಾಸವನ್ನೆಲ್ಲಾ ಬರೆದು ಲೋಹದ ಪೆಟ್ಟಿಗೆಯಲ್ಲಿ ಭದ್ರವಾಗಿರಿಸಿ ಭೂಮಿಯಲ್ಲಿ ಹೂತಿಟ್ಟ. ಯಾವ ಪರಿಸ್ಥಿತಿಯಲ್ಲಿ ತಾನು ಆ ಕೆಲಸವನ್ನು ಮಾಡಬೇಕಾಗಿ ಬಂದಿತೆನ್ನುವುದು ಮುನ್ನುಡಿಯಾಗಿ ಒಂದು ಪತ್ರದಲ್ಲಿ ಬರೆದಿಟ್ಟು ಅದನ್ನೂ ಸಹ ಆ ಪೆಟ್ಟಿಗೆಯೊಳಗೆ ಇರಿಸಿದ. 
        ಮೊದಲನೇ ಪ್ರಪಂಚ ಯುದ್ಧದ ಸಮಯದಲ್ಲಿ ಕ್ರಿ.ಶ. ೧೯೩೨ನೇ ಇಸವಿಯಲ್ಲಿ ಮಂಗೋಲಿಯಾ ಭಾಗದಲ್ಲಿರುವ ಚೀನಾದ ಮಹಾಗೋಡೆಯ ಒಂದು ಭಾಗವು ಜಪಾನೀಯರ ಬಾಂಬು ದಾಳಿಗೆ ಸಿಲುಕಿ ಧ್ವಂಸವಾಯಿತು. ಆ ಸ್ಥಳದಲ್ಲಿ ಗೋಡೆಯ ಕೆಳಗೆ ನೆಲದಲ್ಲಿ ಆಳವಾಗಿ ಉತ್ಖನನ ಮಾಡಿದಾಗ ಮೇಲೆ ಪ್ರಸ್ತಾಪಿಸಿರುವ ಲೋಹದ ಪೆಟ್ಟಿಗೆಯು ದೊರೆಯಿತು. ಅದರಲ್ಲಿ ಮುನ್ನುಡಿಯಾಗಿ ಬರೆದ ಬೆಲೆಬಾಳುವ ಆ ಲಿಖಿತ ಹಸ್ತ ಪ್ರತಿಯನ್ನು ಸರ್ ಅಗಸ್ಟಸ್ ಫ್ರಿಜ್ ಜಾರ್ಜ್ ಸಂಪಾದಿಸಿ ಅದನ್ನು ಲಂಡನ್ನಿಗೆ ತೆಗೆದುಕೊಂಡು ಹೋಗಿ ಚೀನಾ ಭಾಷೆಯ ನಿಪುಣರಾದ ಪ್ರೊಫೆಸರ್ ಅಂಥೋನಿ ಗ್ರೇಂ ಅವರಿಗೆ ತೋರಿಸಿದರು. ಪ್ರೊಫೆಸರ್ ಗ್ರೇಂ ತನ್ನ ಬೃಂದದೊಂದಿಗೆ ಬಹಳಷ್ಟು ಕಷ್ಟಪಟ್ಟು ಅದನ್ನು ಆಂಗ್ಲಕ್ಕೆ ಅನುವಾದ ಮಾಡುವಲ್ಲಿ ಸಫಲರಾದರೂ ಸಹ ಅದರಲ್ಲಿದ್ದ ಮಹತ್ವದ ಸಂಗತಿಗಳನ್ನು ಅರಿಯುವಲ್ಲಿ ಅವರು ವಿಫಲರಾದರು. ಪ್ರೊಫೆಸರ್ ಗ್ರೇಂ ಅವರು ತಮ್ಮ ಬೃಂದವು ಮಾಡಿದ್ದ ಅನುವಾದವನ್ನು ಬ್ರಿಟಿಷ್ ಮ್ಯೂಜಿಯಮ್ಮಿನ ಸರ್ ವ್ಯಾಲಿಸ್ ಬಡ್ಜ್ ಅವರಿಗೆ ತೋರಿಸಿದಾಗ ಆ ಮಹನೀಯರು ಅದರ ಮರ್ಮವನ್ನು ಭೇದಿಸಿ ಆ ಪತ್ರದ ಕುರಿತು ಹೀಗೆ ಅಭಿಪ್ರಾಯ ಪಟ್ಟರು, 
        "ಆ ದಾಖಲೆಯು Codex Siniaticus - ’ಕೋಡೆಕ್ಸ್ ಸಿನಿಯಾಟಿಕಸ್‌’ಗಿಂತಲೂ  (ಕ್ರೈಸ್ತರ ಮಹತ್ವವೆನಿಸುವ ಹೊಸ ಒಡಂಬಡಿಕೆ - New Testament ಗ್ರಂಥವನ್ನು ತೊಗಲು ಹಾಳೆಗಳಲ್ಲಿ ಬರೆಯಲಾಗಿರುವ ಅಂದಾಜು ಕ್ರಿ.ಶ. ನಾಲ್ಕನೆಯ ಶತಮಾನದ ಪ್ರಾಚೀನ ಕೃತಿ) ಮಹತ್ತರವಾದ ಬೆಲೆಯುಳ್ಳದ್ದಾಗಿದೆ. ಆ ಹಸ್ತಪ್ರತಿಯಲ್ಲಿ ಮೂಲತಃ (ಪ್ರಥಮವಾಗಿ) ಭಾರತದಲ್ಲಿ ವೈದಿಕ ಭಾಷೆಯಲ್ಲಿ ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಬರೆಯಲ್ಪಟ್ಟ ಮನುವಿನ ಧರ್ಮಸೂತ್ರಗಳನ್ನು ನೇರವಾಗಿ ಪ್ರಸ್ತಾಪಿಸಲಾಗಿದೆ." "ಆ ಕಾಲದಲ್ಲಿ ಭಾರತ, ಅಮೇರಿಕಾ ಮತ್ತು ಚೀನಾ, ದೇಶಗಳ ಮಧ್ಯೆ ವಿಶಿಷ್ಠವಾದ ಸಂಬಂಧಗಳಿದ್ದುದನ್ನು ನಾನು ಕಂಡುಕೊಂಡಿದ್ದೇನೆ ಮತ್ತು ಅದಕ್ಕೆ ಪುರಾವೆಗಳೂ ಸಿಕ್ಕಿವೆ.  ನಮಗೆ ಅದರಲ್ಲಿ ಪೆರು ದೇಶದ ಅರಣ್ಯಗಳ ಮಧ್ಯದಲ್ಲಿರುವ ನಾಶವಾಗಿರುವ ನಗರಗಳ ಕುರಿತೂ ಉಲ್ಲೇಖಗಳು ದೊರೆತಿವೆ". 
       Sir Wallis’s opinion was that the “manuscript was of even greater value than the Codex Siniaticus.  In the manuscript, I find direct references to the Laws of Manu which were first written in India in the Vedic language ten thousand years ago.”  Sir Wallis Budge adds: “We have also found and proved that in those days there was a distinct relationship between India, America and China.  We actually found references to ruined cities which have been found in the centre of Peruvian forests.”
*****
ಈ ಲೇಖನಕ್ಕೆ ಪೂರಕವಾದ ಹಳೆಯ ಲೇಖನ ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7-%E0%B2%AE...
*****
ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೧೩  ಮನುವಿನ ಧರ್ಮ: ದಲಿತರ ಪ್ರಸ್ತಾವನೆ ಎಲ್ಲಿದೆ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A9-...
 
ಚಿತ್ರಗಳ ಕೃಪೆ: ಗೂಗಲ್
 

Rating
No votes yet