ಭಾಗ - ೧೬ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೩ ಮನುವಿನ ವಿಶ್ವರೂಪ

ಭಾಗ - ೧೬ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೩ ಮನುವಿನ ವಿಶ್ವರೂಪ

ಚಿತ್ರ

ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ
(ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದ ಪ್ರೌಡ ಪ್ರಬಂಧ - ಪಿ.ಎಚ್.ಡಿ. ಥೀಸಿಸಿನಲ್ಲಿರುವ ಕೆಲವು ಆಸಕ್ತಿಕರ ಅಂಶಗಳು)
***
ಪರಿಚ್ಛೇದ ೧.೩ ಮನುವಿನ ವಿಶ್ವರೂಪ
(ಡಾl ಕೇವಲ್ ಮೊಟ್ವಾನಿ, ಫ್ರೊll ಆರ್. ಸುರೇಂದ್ರಕುಮಾರ್) 
          ಏಷಿಯಾ ಹಾಗು ಆಫ್ರಿಕಾ ಖಂಡಗಳಲ್ಲಿ ಕ್ರಿ.ಪೂ. ೫೦೦೦-೩೦೦೦ ಮಧ್ಯದಲ್ಲಿ ವಿರಾಜಿಸಿದ್ದ ಪ್ರಾಚೀನ ನಾಗರೀಕತೆಗಳಿಗೆಲ್ಲಾ ಮನುವಿನ ಕುರಿತು ಚೆನ್ನಾಗಿ ತಿಳಿದಿತ್ತು. ಆದರೆ ಬೇರೆ ಬೇರೆ ಹೆಸರುಗಳಲ್ಲಿ! ಪ್ರಾಚೀನ ಇರಾನಿನಲ್ಲಿ (ಪರ್ಷಿಯಾ) ಅವನ ಹೆಸರು, "ವೈವಹಂತ್"! ಈಜಿಪ್ಟ್ ವಾಸಿಗಳಿಗೆ "ಮಿನಾ: ಆಗಿ, ಕ್ರೀಟ್ ದೇಶದಲ್ಲಿ (ಗ್ರೀಸ್ ಸಾಮ್ರಾಜ್ಯದ ಒಂದು ರಾಜ್ಯ) "ಮಿನೋಸ್‌" ಆಗಿ ಪರಿಚಿತನಾಗಿದ್ದ. ಪ್ರಾಚೀನ ಸುಮೇರಿಯನ್ನರೂ ಸಹ ಮನುವಿನ ಬಗ್ಗೆ ತಿಳಿದಿದ್ದರು ಎನ್ನುವುದಕ್ಕೆ ಅನೇಕ ಆಧಾರಗಳು ದೊರೆಯುತ್ತವೆ. ಮನುವಿನ ಕುಮಾರಿ ಇಳಾ ಮತ್ತು ಅವನ ಕುಮಾರನ ಕುರಿತ ಪ್ರಸ್ತಾವನೆಯು ಕ್ರಿ.ಪೂ. ೧೬೦೦ರಲ್ಲಿ ಅಸ್ಸೀರಿಯಾದಲ್ಲಿ ಕಂಡು ಬರುತ್ತದೆ. ಕ್ರಿ.ಪೂ. ೧೨೦೦ರ ಸಮಯಕ್ಕಾಗಲೇ ಅಯೋನಿಯಾದಲ್ಲಿ (Ionia - central part of the western coast of present Anatolia) ಮನುವಿನ ಹೆಸರು ಮಾನೆಸ್, ಮೆನ್ಸ್ ಎಂದು ರೂಪಾಂತರಗೊಂಡಿತು. ಪ್ಯಾಲೆಸ್ತೇನಿನ ಮೋಜಸ್ ವಾಸ್ತವವಾಗಿ ಮನುವೇ ಎಂದು ಕೆಲವು ವಿದ್ವಾಂಸರ ನಿಶಿತ ಅಭಿಪ್ರಾಯ!
          ಈಗ ನಾವು ಪ್ರಸ್ತಾಪಿಸುತ್ತಿರುವ ಕಾಲಘಟ್ಟದಲ್ಲಿ ಮಧ್ಯ ಪ್ರಾಚ್ಯವೆಲ್ಲಾ (Middle East) ಆರ್ಯಮಯವೇ ಆಗಿತ್ತು. ಆರ್ಯನ್ನರ ಉಪಶಾಖೆಯಾದ ಹಿಟ್ಟೈಟಸ್ (Hittites) ಬುಡಕಟ್ಟು ಏಷಿಯಾ ಮೈನರ್, ಅನಟೋಲಿಯಾಗಳನ್ನು ಜಯಿಸಿ ವಿಸ್ತೃತವಾದ ಸಾಮ್ರಾಜ್ಯವನ್ನು ಸ್ಥಾಪಿಸಿತ್ತು. ಮಿತ್ತಾನಿ (Mittani) ಎನ್ನುವುದು ಆರ್ಯರ ಮತ್ತೊಂದು ಸಾಮ್ರಾಜ್ಯವಾಗಿತ್ತು; ಅದರ ಪೂರ್ವಕ್ಕೆ ಪರ್ಷಿಯಾ (ಇಂದಿನ ಇರಾನ್) ದೇಶವಿತ್ತು. 
          ಸೋಮವಂಶದ ಪ್ರಪ್ರಥಮ ರಾಜನಾದ ವಿಶ್ವಾಮಿತ್ರನೊಡನೆ ನಡೆದ ಐದು ದಿನಗಳ ಯುದ್ಧದಲ್ಲಿ ಪ್ರಾಚೀನ ರಾಜವಂಶಸ್ಥನಾದ ವೇನನು ಪರಾಜಯಗೊಂಡು ತನ್ನ ಅನುಚರರೊಡನೆ ಮಾಶ್ರಾ ತೀರವನ್ನು ದಾಟಿ ಈಜಿಪ್ಟ್ ದೇಶಕ್ಕೆ ವಲಸೆ ಹೋದನೆಂದು, ’ಕಲ್ಕತ್ತಾ ಮಾನ್ಯುಸ್ಕ್ರಿಪ್ಟ್’ ಎಂದು ಪ್ರಖ್ಯಾತವಾಗಿರುವ ಮನುಸ್ಮೃತಿಯ ಕೃತಿಕಾರನಾದ ಕುಲ್ಲೂಕಭಟ್ಟನ ಅಭಿಪ್ರಾಯ. ವೇನನು ಈಜಿಪ್ಟಿನಲ್ಲಿ ಅಡಿಯಿಡುವವರೆಗೆ ಅಂದರೆ, ಕ್ರಿ.ಪೂ. ೩೪೦೦ ದವರೆಗೆ ಈಜಿಪ್ಟ್ ಅನಾಗರೀಕ ದೇಶವಾಗಿತ್ತು. ಮನು ಎಂದು ಬಿರುದಾಂಕಿತ ವೇನನು ಅಲ್ಲಿಗೆ ಕಾಲಿರಿಸಿದ ಮೇಲೆಯೇ ಆ ದೇಶದಲ್ಲಿ ನಾಗರೀಕತೆ ನೆಲೊಗೊಂಡಿತೆಂದು ಈಜಿಪ್ಟಿನ ಚರಿತ್ರೆಯಲ್ಲಿ ಪರಿಣಿತರಾದ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಮಿನಾ ಅಥವಾ ಮಿನ್ಸ್ (Menes) ಎಂದು ಕರೆಯಲ್ಪಡುವ ಮನುವಿನ ಹೆಸರಿನಲ್ಲೇ ಪ್ರಾಚೀನ ಈಜಿಪ್ಟಿನಲ್ಲಿ ನೈಲ್ ನದಿ ತೀರದಲ್ಲಿ ಮೆಂಫಿಸ್ (Menouphis or Memphis) ಎನ್ನುವ ರಾಜ್ಯವು ಏರ್ಪಟ್ಟಿತು. 
         ಕ್ರಿ.ಪೂ. ೫೨೨-೪೮೬ರ ಮಧ್ಯಕಾಲದಲ್ಲಿ ಪ್ರಾಚೀನ ಇರಾನನ್ನು ಪರಿಪಾಲಿಸಿದ 'ಡೇರಿಯಸ್ ದ ಗ್ರೇಟ್ (Darius the Great)' ತನ್ನ ಸಾಮ್ರಾಜ್ಯಕ್ಕೆ ನ್ಯಾಯಸೂತ್ರವೊಂದನ್ನು ತಯಾರಿಸಬೇಕೆಂದು ನಿರ್ಣಯಿಸಿದಾಗ ಅವನು ಮನುಧರ್ಮ ಶಾಸ್ತ್ರವನ್ನೇ ಮಾದರಿಯಾಗಿ ತೆಗೆದುಕೊಂಡಿದ್ದಾನೆ. ವರ್ಣ ಅಥವಾ ವರ್ಗಗಳ ಹೆಸರಿನೊಂದಿಗೆ ಮನುವು ಹೇಳಿದ ಸಾಮಾಜಿಕ ವ್ಯವಸ್ಥೆಯನ್ನು ಅಲ್ಲಿಯವರು ಅನುಮೋದಿಸಿದರು. ಜೊರಾಷ್ಟ್ರಿಯನ್ನರ ಮೂಲಕ ಮನುಧರ್ಮ ಶಾಸ್ತ್ರವು ಪಶ್ಚಿಮ ಏಷಿಯಾ ಮತ್ತು ಯೂರೋಪಿನ ಇತರ ಪ್ರಾಚೀನ ನಾಗರೀಕತೆಗಳಿಗೆ ಪರಿಚಯವಾಯಿತು. 
        ಒಟ್ಟಾರೆಯಾಗಿ ಆ ಪ್ರಾಂತದಲ್ಲೆಲ್ಲಾ ನೆಲಗೊಂಡದ್ದು ವೈದಿಕ ಭಾರತದಿಂದ ಪ್ರತ್ಯೇಕಗೊಂಡ ಆರ್ಯರ ಸಂಸ್ಕೃತಿಯೇ! ಉದಾಹರಣೆಗೆ ಬ್ಯಾಬಿಲೋನನ್ನು ತೆಗೆದುಕೊಂಡರೆ ಅದನ್ನು ಪರಿಪಾಲಿಸಿದ ನಾಭಾನೇದಿಷ್ಟನು  (Nebuchadnezzar - ಈಜಿಪ್ಟ್ ಭಾಷೆಯಲ್ಲಿ) ತನ್ನನ್ನು ತಾನು ಮನುವಿನ ಪುತ್ರನೆಂದು ಅಭಿವರ್ಣಿಸಿಕೊಂಡಿದ್ದಾನೆ. ಪ್ರಪಂಚದ ಸೃಷ್ಟಿ, ಮಾನವ ಜನಾಂಗ ಮತ್ತು ಯುಗಗಳಿಗೆ ಸಂಬಂಧಿಸಿದ ಬ್ಯಾಬಿಲೋನಿಯನ್ನರ ಲೆಕ್ಕಾಚಾರಗಳು ಮನುವು ಹೇಳಿದ್ದಕ್ಕೆ ಕರಾರುವಾಕ್ಕಾಗಿ ಸರಿಹೋಗುತ್ತವೆ. ಬ್ಯಾಬಿಲೋನಿಯನ್ನರ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳು ಮನುವಿನ ಮೂಸೆಯಲ್ಲೇ ಮೂಡಿಬಂದಂತಹವು. ಅದೇ ವಿಧವಾಗಿ ಅಸ್ಸೀರಿಯನ್ನರೂ ಸಹ ಆರ್ಯ ಸಂಪ್ರದಾಯಗಳನ್ನು ಪಾಲಿಸುತ್ತಿದ್ದವರು, ಅವರು ಮನುಧರ್ಮವನ್ನು ಆಧರಿಸಿಯೇ ತಮ್ಮ ಸಾಮಾಜಿಕ ಜೀವನವನ್ನು ರೂಪಿಸಿಕೊಂಡಿದ್ದಾರೆ. ೯೦ ಅಧಿಕರಣಗಳಿರುವ ಅವರ ನ್ಯಾಯಸೂತ್ರಕ್ಕೆ ಮತ್ತು ಮನುಧರ್ಮಶಾಸ್ತ್ರಕ್ಕೆ ಬಹಳ ಸಮೀಪದ ಹೋಲಿಕೆಯಿದೆ. 
        ದಕ್ಷಿಣ ಏಷಿಯಾ ಮತ್ತು ಆಗ್ನೇಯೇಷಿಯಾದ ಅನೇಕ ದೇಶಗಳಲ್ಲಿ ಮನು ಮತ್ತು ಅವನ ಧರ್ಮಶಾಸ್ತ್ರವು ಇಂದಿಗೂ ಸಜೀವವಾಗಿ ಇವೆ. ಆ ದೇಶಗಳಿಗೆ ಬೌದ್ಧಧರ್ಮಕ್ಕಿಂತ ಮೊದಲೇ ಮನುಧರ್ಮವು ಹೋಗಿತ್ತು. ಅಲ್ಲಿಯ ವಿವಾಹ, ದತ್ತತೆ, ವಾರಸತ್ವ, ಆಸ್ತಿಹಕ್ಕುಗಳು, ಭೂಮಿಯ ಮಾಲಿಕತ್ವ, ಆಚಾರಗಳು, ಆಡಳಿತ, ಸಾಮಾಜಿಕ ವ್ಯವಸ್ಥೆಗಳು, ಮೊದಲಾದ ಅಂಶಗಳಲ್ಲಿ ಮನುಧರ್ಮದ ಪ್ರಭಾವವು ಗಾಢವಾಗಿ ಕಂಡುಬರುತ್ತದೆ. ಅದು ಎಷ್ಟರಮಟ್ಟಿಗೆ ಎಂದರೆ.... ಭರತ ಖಂಡದ ವಿಸ್ತೃತ ಸಾಂಸ್ಕೃತಿಕ ಸಾಮ್ರಾಜ್ಯದಲ್ಲಿ ಈ ದೇಶಗಳು ಹೊರಭಾಗಗಳು ಎಂದು ಚರಿತ್ರಕಾರರು ಭಾವಿಸುವಷ್ಟರಮಟ್ಟಿಗೆ! ಈ ಸಾಂಸ್ಕೃತಿಕ ಸಾಮ್ರಾಜ್ಯಕ್ಕೆ ಬುನಾದಿಯನ್ನು ಮನುವು ಹಾಕಿದರೆ, ಗೌತಮ ಬುದ್ಧನು ಅದರ ಮೇಲೆ ಸೌಧವನ್ನು ಕಟ್ಟಿದನೆಂದು ಹೇಳಬಹುದು. ಮಾನವ ಜನಾಂಗದ ಚರಿತ್ರೆಯಲ್ಲಿ ಸಾಮಾಜಿಕ ಚಿಂತನೆಗೆ ಸಂಬಂಧಿಸಿದಂತೆ ಯೋಜನಾಬದ್ಧವಾದ ವ್ಯವಸ್ಥಿತ ನಿರ್ಮಾಣವೆಂದು ಹೇಳಬಹುದಾದದ್ದು ಮನುಧರ್ಮಶಾಸ್ತ್ರ. ತದನಂತರ ಬಂದ ಸಾಮಾಜಿಕ ತತ್ತ್ವವೇತ್ತರಿಗೆ, ಶಾಸನಕರ್ತರಿಗೆ ಅದು ಮಾದರಿಯಾಯಿತು. 
        Emigrants from India, who laid foundations of a new world in tropical East, took with them their law book, The Code of Manu. Everywhere throughout the region, Manu has left his mark, in Burma, in Siam, in Cambodia, Java and Bali.
(Manu in Burma, J.S. Furnival in Burmese Research Society Journal, 1940) 
       "ಉಷ್ಣವಲಯಕ್ಕೆ ಸೇರಿದ ಉತ್ತರ ಪ್ರಾಂತಗಳಲ್ಲಿ ನವೀನ ವಿಶ್ವಕ್ಕೆ ಬುನಾದಿ ಹಾಕಿದ ಭಾರತೀಯ ವಲಸೆದಾರರು ತಮ್ಮೊಂದಿಗೆ ಮನುಧರ್ಮ ಶಾಸ್ತ್ರವನ್ನು ತೆಗೆದುಕೊಂಡು ಹೋದರು. ಬರ್ಮಾ, ಸಯಾಮ್, ಕಾಂಬೋಡಿಯ, ಜಾವಾ ಮತ್ತು ಬಾಲಿಯನ್ನೊಳಗೊಂಡ ಪ್ರಾಂತದೆಲ್ಲೆಡೆ ಮನುವು ತನ್ನ ಮುದ್ರೆಯನ್ನೊತ್ತಿದ್ದಾನೆ" ಎಂದು ಖ್ಯಾತ ಪಾಶ್ಚಾತ್ಯ ವಿದ್ವಾಂಸರಾದ ಜೆ. ಎಸ್. ಫರ್ನಿವಾಲ್ ಅವರು ಕ್ರಿ.ಶ. ೧೯೪೦ರಲ್ಲಿ ಬರ್ಮಾದ ಸಂಶೋಧನಾ ಸಮಾಜದ ವಿದ್ವತ್ಪತ್ರಿಕೆಯ ನಿಯತಕಾಲಿಕೆಯಲ್ಲಿ "ಬರ್ಮಾದಲ್ಲಿ ಮನು" ಎನ್ನುವ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. 
ಬರ್ಮಾದಲ್ಲಿನ ಹಿಂದಿನ ನ್ಯಾಯ ಗ್ರಂಥಗಳು ಮನುಧರ್ಮಶಾಸ್ತ್ರಕ್ಕೆ ತಾವು ಋಣಿಯಾಗಿರುವುದಾಗಿ ಬಹಿರಂಗವಾಗಿ ಅಂಗೀಕರಿಸಿವೆ. ಬರ್ಮಾದಲ್ಲಿ ಪಾಳಿ ಭಾಷೆಯಲ್ಲಿ ರಚಿಸಿದ "ನೀತಿಸಾರ"ದಲ್ಲಿರುವ ಅನೇಕ ಅಂಶಗಳಲ್ಲಿ ಮನುಸ್ಮೃತಿಯ ಸಾಮತ್ಯೆಯಿದೆ. ಬರ್ಮಾ, ಕಾಂಬೋಡಿಯಾಗಳಂತೆ ಸಯಾಂ ದೇಶದ ಪ್ರಾಚೀನ ನ್ಯಾಯ ಶಾಸನಗಳು ಮನುಸ್ಮೃತಿಗೆ ಹತ್ತಿರವಾಗಿವೆ ಎಂದು ಸಯಾಂ, ಸಂಪುಟ ೧ (Siam, Vol. 1) ಗ್ರಂಥದಲ್ಲಿ  ಡಬ್ಲ್ಯೂ. ಎ. ಗ್ರಹಾಂ (W.A. Graham) ಅವರು ಉಲ್ಲೇಖಿಸಿದ್ದಾರೆ. 
        ಬಾಲಿ ದ್ವೀಪ, ಬರ್ಮಾ, ಫಿಲಿಪ್ಪೀನ್ಸ್, ಥೈಲಾಂಡ್, ಚಂಪಾ (ವಿಯತ್ನಾಮ್), ಕಾಂಬೋಡಿಯಾ, ಇಂಡೋನೇಷಿಯಾ, ಮಲೇಷಿಯಾ, ಶ್ರೀಲಂಕ, ನೇಪಾಳಗಳಲ್ಲಿ ಲಭಿಸಿರುವ ಚಾರಿತ್ರಿಕ ಆಧಾರಗಳ ಮೇಲೆ ಆಯಾ ದೇಶಗಳಲ್ಲಿ ಮನುವು ಹೇಳಿದ.... ವೃತ್ತಿಯನ್ನಾಧರಿಸಿದ ವರ್ಣವ್ಯವಸ್ಥೆಯು ಅಮಲಿನಲ್ಲಿ ಇತ್ತು. ಮನುವಿನ ಸೂತ್ರಗಳಿಗೆ ಅತ್ಯಂತ ಪ್ರಾಧಾನ್ಯತೆಯನ್ನು ಕೊಟ್ಟು, ತೀರ್ಪುಗಳನ್ನು ಅವುಗಳನ್ನು ಆಧರಿಸಿ ಜಾರಿಗೊಳಿಸಲಾಗುತ್ತಿತ್ತು. ರಾಜರು, ಚಕ್ರವರ್ತಿಗಳು ತಾವು ಮನುವಿನ ಅನುಯಾಯಿಗಳೆಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ಮನುವಿಗೆ ಸಂಬಂಧಿಸಿದ ಹೆಸರುಗಳನ್ನು ತಮ್ಮ ಬಿರುದುಬಾವಲಿಗಳಲ್ಲಿ ಸೇರಿಸಿಕೊಳ್ಳಲು ಉತ್ಸಾಹ ತೋರುತ್ತಿದ್ದರು. 
        ಚಂಪಾ (ವಿಯಟ್ನಾಂ) ದೇಶದಲ್ಲಿ ದೊರೆತ ಒಂದು ಶಿಲಾಶಾಸನವನ್ನು ಆಧರಿಸಿ ರಾಜಾ ಜಯೇಂದ್ರವರ್ಮನು ಮನುವಿನ ಅನುಯಾಯಿ ಎನ್ನುವುದು ತಿಳಿದುಬರುತ್ತದೆ. ಮನುಸ್ಮೃತಿಯನ್ನು ಆಧರಿಸಿ ರೂಪುಗೊಂಡ "ಮನು ನೀತಿಸಾರ"ದ ಪ್ರಸ್ತಾವನೆಯು ರಾಜಾ ಉದಯನವರ್ಮನ ಶಿಲಾಶಾಸನದಲ್ಲಿ ಕಂಡುಬರುತ್ತದೆ. ಅದೇ ವಿಧವಾಗಿ ಯಶೋವರ್ಮನ ಶಿಲಾಶಾಸನದಲ್ಲಿ ಮನುಸ್ಮೃತಿಯಲ್ಲಿನ ಒಂದು ಶ್ಲೋಕವನ್ನು ಯಥಾವತ್ತಾಗಿ ಕೆತ್ತಲಾಗಿದೆ. ರಾಜಾ ಜಯವರ್ಮನ ಶಿಲಾಶಾಸನದಲ್ಲಿ ಮನುಸ್ಮೃತಿಗೆ ಸಂಬಂಧಿಸಿದಂತೆ ಪ್ರಾವೀಣ್ಯತೆಯನ್ನು ಪಡೆದಿದ್ದ ಅಮಾತ್ಯನೊಬ್ಬನ ಪ್ರಸ್ತಾವನೆಯಿದೆ. ಬಾಲಿ ದ್ವೀಪದಲ್ಲಿ ಮನುಸ್ಮೃತಿಯನ್ನು ಆಧರಿಸಿದ ಸಾಮಾಜಿಕ ವ್ಯವಸ್ಥೆ ಈಗಲೂ ಪ್ರಚಲಿತವಿದೆ. ದಕ್ಷಿಣ ಏಷಿಯಾ ಖಂಡದ ಇತರ ದೇಶಗಳಿಗಿಂತ ಇಂಡೋನೇಷಿಯಾದಲ್ಲಿ ಮನುಧರ್ಮಶಾಸ್ತ್ರದ ಪ್ರಭಾವವು ಅತ್ಯಂತ ಗಾಢವಾಗಿ ಇದೆ. ಇಂಡೋನೇಷಿಯಾದ ’ಲಾ ಕೋಡ್’ಗೆ ಅದೇ ಮಾತೃ ಗ್ರಂಥ. ಆ ದೇಶದ ಗ್ರಂಥಗಳಲ್ಲೆಲ್ಲಾ ಪ್ರಾಚೀನವಾದುದೆಂದು ಭಾವಿಸಲ್ಪಡುವ ಕುಟಾರಾ ಮಾನವದಲ್ಲಿ (Kutara Manawa) ಪ್ರಸ್ತಾವಿಸಿರುವ ನ್ಯಾಯಸೂತ್ರಗಳು ಇಪ್ಪತ್ತನೆಯ ಶತಮಾನದ ಆರಂಭದವರೆಗೆ ಅಲ್ಲಿ ಜಾರಿಯಲ್ಲಿದ್ದವು; ಮತ್ತು ಆ ಗ್ರಂಥವು ಮನುಧರ್ಮವನ್ನು ಆಧರಿಸಿದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆ ದೇಶದ ಇತರೇ ನ್ಯಾಯ ಗ್ರಂಥಗಳಾದ ದೇವಾಗಮಕ್ಕೆ (Dewagama) ಮನುಸ್ಮೃತಿಯ ಏಳನೆಯ ಅಧ್ಯಾಯ ಮತ್ತು ಸ್ವರಜನಿಬುವಿಗೆ (Swarajanibu) ಮನುಸ್ಮೃತಿಯ ಎಂಟನೆಯ ಅಧ್ಯಾಯಗಳು ಆಧಾರವಾಗಿವೆ. ಇನ್ನು ಫಿಲಿಪ್ಪೀನ್ಸ್ ದೇಶದ ಪ್ರಜೆಗಳು ಮನುವನ್ನು ಎಷ್ಟು ಎತ್ತರದ ಸ್ಥಾನದಲ್ಲಿಟ್ಟಿದ್ದಾರೆಂದು ಅವರ ರಾಷ್ಟ್ರೀಯ ಶಾಸನಸಭೆಯ (Parliament) ಪ್ರತಿನಿಧಿಗಳ ಕಲಾ ಪ್ರಾಂಗಣದಲ್ಲಿ (Senators Art Gallery) ಮನುವಿನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. (ಇದರ ವಿವರಗಳನ್ನು ಈ ಮಾಲಿಕೆಯ ಮೊದಲನೆಯ ಲೇಖನದಲ್ಲಿ ಕೊಡಲಾಗಿದೆ). 
       ಬ್ರಿಟಿಷ್, ಅಮೇರಿಕನ್ ಮತ್ತು ಜರ್ಮನ್ ವಿಶ್ವಕೋಶಗಳು (Enclyopedia) ಮಾನವರಲ್ಲಿ ಅಗ್ರಗಣ್ಯನಾಗಿ, ಮೊದಲನೇ ಶಾಸನಕರ್ತನಾಗಿ, ನ್ಯಾಯವೇತ್ತರಲ್ಲಿ ಅಗ್ರಸ್ಥಾನ ಪಡೆದ, ಸಾಮಾಜಿಕ ತತ್ತ್ವಶಾಸ್ತ್ರಜ್ಞನಾಗಿ ಮನುಮಹರ್ಷಿಯನ್ನು ವರ್ಣಿಸಿವೆ. ಎ.ಎ. ಮೆಕ್ಡೊನ್ನೆಲ್, ಎ.ಬಿ. ಕೀಥ್, ಪಿ. ಥಾಮಸ್, ಲೂಯಿ ರೆನೊವ್ ಮೊದಲಾದ ಪಾಶ್ಚಾತ್ಯ ಗ್ರಂಥಕರ್ತರು ಮನುಸ್ಮೃತಿಯನ್ನು ಕೇವಲ ಧರ್ಮಾಚರಣೆಯ ಗ್ರಂಥವಾಗಿಯಲ್ಲದೇ, ಮಾನವ ಜನಾಂಗಕ್ಕೆ ಒಳಿತುಂಟು ಮಾಡಿದ ಒಂದು ನ್ಯಾಯ ಗ್ರಂಥವಾಗಿ ಪರಿಗಣಿಸಿದ್ದಾರೆ. The Cambridge History of India, The Enclyopedia of Social Sciences (USA), Keith's History of Sanskrit Literature, ಭಾರತರತ್ನ ಪಿ.ವಿ.ಕಾಣೆ (P.V. Kane) ರಚಿಸಿದ A History of Dharma Sastra ಗ್ರಂಥಗಳಲ್ಲಿ ಪ್ರಪಂಚದ ಮೇಲೆ ಮನುಸ್ಮೃತಿಯ ಪ್ರಭಾವವನ್ನು ಕುರಿತು ಪ್ರಸ್ತಾವಿಸಿರುವ ವಿಷಯಗಳನ್ನು ಓದುತ್ತಿದ್ದರೆ ಪ್ರತಿ ಭಾರತೀಯನೂ ಸಹ ತನ್ನ ಉಜ್ವಲ ವಾರಸತ್ವವದ ಕುರಿತು ಹೆಮ್ಮೆ ಪಡುತ್ತಾನೆ. 
        ಮಾನವ ಜನಾಂಗವು ತನ್ನ ಚರಿತ್ರೆಯನ್ನು ದಾಖಲು ಮಾಡುವುದಕ್ಕೆ ಪೂರ್ವದಲ್ಲಿಯೇ ಮಾನವರ ಸಾಮಾಜಿಕ, ಆಧ್ಯಾತ್ಮಿಕ ಚಿಂತನಗಳ ಮೇಲೆ ಮನುವು ಪ್ರಭಾವ ಬೀರಿದ್ದಾನೆ. ಮನು ಮತ್ತು ಆತನ ಬೋಧನೆಗಳ ಪ್ರಭಾವವನ್ನು ಆಧರಿಸಿ ಮಾನವ ಚರಿತ್ರೆಯನ್ನು ಪುನಃ ಬರೆಯುವ ಅವಶ್ಯಕತೆಯಿದೆ. ಪ್ರಾಚ್ಯ, ಪಾಶ್ಚಾತ್ಯ ಸಾಮಾಜಿಕ ತತ್ತ್ವವೇತ್ತರಲ್ಲಿ ಮನುವಿಗೆ ಸಮುಚಿತವಾದ ಅಗ್ರಸ್ಥಾನವನ್ನು ಕೊಡಬೇಕು. ಮಾನವ ಜನಾಂಗಕ್ಕೆ ಸೇವೆ ಸಲ್ಲಿಸಿದ ತಾತ್ತ್ವಿಕರು ಹಾಗು ಆದರ್ಶಪುರುಷರಲ್ಲೆಲ್ಲಾ ಅತ್ಯುನ್ನತ ಚಿಂತಕ ಮತ್ತು ಆದರ್ಶ ಮಹರ್ಷಿಯಾಗಿ ಮನುವಿನ ಸ್ಥಾನವು ಸುಸ್ಥಿರ ಮತ್ತು ಶಾಶ್ವತವಾದುದು. 
       (ಕೇವಲ್ ಮೊಟ್ವಾನಿಯವರ Manu Dharma Shastra ಗ್ರಂಥದೊಂದಿಗೆ ಫ್ರೊll ಸುರೇಂದ್ರಕುಮಾರ್ ಅವರು ಬರೆದ "Opposition to Manu - Why?" ಪುಸ್ತಕದಲ್ಲಿನ ಕೆಲವು ವಿಷಯಗಳು ಈ ಲೇಖನಕ್ಕೆ ಉಪಯುಕ್ತವಾಗಿವೆ). 
*****
       ಈ ಲೇಖನಕ್ಕೆ ಪೂರಕವಾದ ಹಳೆಯ ಲೇಖನ ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7-%E0%B2%AE...
*****
      ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೧೫  ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೨ ಗ್ರೀಕರ ಗುರು ಮನು ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AB-...
 
ಚಿತ್ರಗಳ ಕೃಪೆ: ಗೂಗಲ್

Rating
Average: 4 (3 votes)

Comments