ಭಾಗ - ೨೧ ಭೀಷ್ಮ ಯುಧಿಷ್ಠಿರ ಸಂವಾದ: ದ್ಯುಮತ್ಸೇನ ಮತ್ತು ಸತ್ಯವಾನರ ಸಂವಾದ

ಭಾಗ - ೨೧ ಭೀಷ್ಮ ಯುಧಿಷ್ಠಿರ ಸಂವಾದ: ದ್ಯುಮತ್ಸೇನ ಮತ್ತು ಸತ್ಯವಾನರ ಸಂವಾದ

ಚಿತ್ರ

         ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
     ಯುದಿಷ್ಠಿರನು ಕೇಳಿದನು, "ಪಿತಾಮಹಾ! ಮತ್ತೊಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ರಾಜನಾದವನು ಪ್ರಜೆಗಳನ್ನು ರಕ್ಷಿಸಬೇಕು. ಪ್ರಜೆಗಳನ್ನು ರಕ್ಷಿಸಬೇಕಾದರೆ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಹಿಂಸಿಸಬೇಕಾಗುತ್ತದೆ. ಆದರೆ ಯಾರನ್ನೂ ಹಿಂಸಿಸದೆ ಪರಿಪಾಲನೆಯನ್ನು ಮಾಡಲು ಸಾಧ್ಯವೇ? ಅಂತಹ ಮಾರ್ಗವು ನನಗೆ ಪ್ರಿಯವಾದುದು. ಅಂತಹ ಸಂಗತಿ ಯಾವುದಾದರೂ ಇದ್ದರೆ ದಯಮಾಡಿ ವಿವರಿಸುವಂತವರಾಗಿ ಎಂದು ವಿನಂತಿಸುತ್ತಿದ್ದೇನೆ"
         ಅದಕ್ಕೆ ಪ್ರತಿಯಾಗಿ ಪಿತಾಮಹ ಭೀಷ್ಮನು ಹೀಗೆ ಹೇಳಿದನು, "ಧರ್ಮನಂದನ, ಈ ವಿಷಯದಲ್ಲಿ ದ್ಯುಮತ್ಸೇನ ಮತ್ತು ಸತ್ಯವಾನರ ಸಂವಾದವೊಂದು ನನ್ನ ನೆನಪಿಗೆ ಬರುತ್ತಿದೆ. ಅದನ್ನು ಕೇಳುವಂತವನಾಗು". 
ದ್ಯುಮತ್ಸೇನನ ಮಗ ಸತ್ಯವಾನ. ಒಂದು ಬಾರಿ ಸತ್ಯವಾನನು ದ್ಯುಮತ್ಸೇನನ ಬಳಿಗೆ ಬರುತ್ತಿದ್ದಾಗ ಒಂದು ದೃಶ್ಯವು ಕಣ್ಣಿಗೆ ಬಿತ್ತು. ದಾರಿಯಲ್ಲಿ ರಾಜಭಟರು ಅಪರಾಧಿಗಳನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದರು. ಅವರನ್ನು ಶೂಲಕ್ಕೇರಿಸಿ ವಧಿಸಬೇಕೆಂದು ದ್ಯುಮತ್ಸೇನ ಮಹಾರಾಜನ ಆಜ್ಞೆಯಾಗಿತ್ತು. ಈ ದೃಶ್ಯವನ್ನು ನೋಡಿದ ಸತ್ಯವಾನನು ತಂದೆಯ ಬಳಿ ಸಾರಿ ಹೀಗೆ ಹೇಳಿದನು - 
        "ತೀರ್ಥರೂಪರಿಗೆ ನಮಸ್ಕಾರ! ಕೆಲವೊಂದು ವಿಷಯಗಳು ಮೇಲ್ನೋಟಕ್ಕೆ ಧಾರ್ಮಿಕವಾಗಿ ಕಾಣಿಸುತ್ತವೆ. ಆದರೆ ಆಲೋಚಿಸಿ ನೋಡಿದಾಗ ಅವು ಅಧರ್ಮವೆನಿಸುತ್ತವೆ. ಅದೇ ವಿಧವಾಗಿ ಅಧರ್ಮವಾಗಿ ಕಂಡು ಬರುವುದು ಧರ್ಮವಾಗಿ ಬದಲಾವಣೆಯಾಗುವುದನ್ನೂ ಸಹ ಕಾಣುತ್ತೇವೆ. ಆದರೆ ಒಂದು ಪ್ರಾಣಿಯನ್ನು ಕೊಲ್ಲುವುದು, ಒಬ್ಬನ ಬಾಯಿಂದ ಅನ್ನವನ್ನು ಕಸಿದುಕೊಳ್ಳುವುದು, ಒಬ್ಬನ ಹೊಟ್ಟೆಯ ಮೇಲೆ ಹೊಡೆಯುವುದು - ಇವು ಎಂದಿಗೂ ಯಾವ ವಿಧದಲ್ಲಿ ನೋಡಿದರೂ ಸಹ ಧರ್ಮವೆನಿಸಿಕೊಳ್ಳಲಾರವು!"
        ಆಗ ದ್ಯುಮತ್ಸೇನನು ತನ್ನ ಕುವರನಾದ ಸತ್ಯವಾನನೊಡನೆ ಹೀಗೆ ಹೇಳಿದನು, ’ಕುಮಾರ, ಅಪರಾಧಿಗಳನ್ನು ದಂಡಿಸದೇ ಹೋದರೆ ಪ್ರಜೆಗಳನ್ನು ರಕ್ಷಿಸುವುದಾದರೂ ಹೇಗೆ ಸಾಧ್ಯವಾಗುತ್ತದೆ?"
      ಸತ್ಯವಾನನು, "ಅಯ್ಯಾ! ದುಷ್ಟರೂ ಸಹ ಸಜ್ಜನರ ಸಾಂಗತ್ಯದಿಂದ ಸೌಶೀಲ್ಯವಂತರಾಗಲು ಸಾಧ್ಯವಿದೆಯಲ್ಲವೇ? ಅಷ್ಟೇ ಅಲ್ಲದೆ ದುರ್ಜನರ ಹೊಟ್ಟೆಯಲ್ಲಿಯೂ ಸಹ ಸಜ್ಜನರು ಜನಿಸುವುದನ್ನು ಸಹ ನಾವು ನೋಡುತ್ತಿದ್ದೇವೆ. ಆದ್ದರಿಂದ ಒಂದುವೇಳೆ ಶಿಕ್ಷಿಸಿದರೂ ಸಹ ಎಳೆಯ ಎಲೆಗಳನ್ನು ಉಗುರಿನಿಂದ ಚಿವುಟಿ ಹಾಕುವಂತಹ ಶಿರಚ್ಛೇದನ ಶಿಕ್ಷೆಯನ್ನು ಮಾತ್ರ ಕೊಡಬೇಡಿ ಎಂದು ನಾನು ಭಿನ್ನವಿಸುತ್ತಿದ್ದೇನೆ. ಏಕೆಂದರೆ ಅದು ಧರ್ಮವಲ್ಲವೆನ್ನುವುದು ನನ್ನ ಅಭಿಪ್ರಾಯ" ಎಂದು ತಂದೆಯೊಂದಿಗೆ ನುಡಿದನು.
       ದ್ಯುಮತ್ಸೇನನು, "ಕುಮಾರ! ಪ್ರಜೆಗಳನ್ನು ದೋಚುವ ದುಷ್ಟರು ತಯಾರಾಗಿರುವಾಗ ಅವರನ್ನು ವಧಿಸದಿದ್ದರೆ ಹೇಗೆ? ಮೊದಲು ಎಲ್ಲರೂ ಸತ್ಯವಂತರಾಗಿ ಇರುತ್ತಿದ್ದರು. ಆಗ ಅಪರಾಧ ಮಾಡಿದವನಿಗೆ ಒಂದು ಮಾತು ಹೇಳಿದರೆ ಸಾಕಾಗುತ್ತಿತ್ತು. ಅದೇ ದೊಡ್ಡ ಶಿಕ್ಷೆ ಎಂದು ಅವರು ಭಾವಿಸುತ್ತಿದ್ದರು. ಆಮೇಲೆ ತಪ್ಪು ಮಾಡಿದವನನ್ನು ಗಟ್ಟಿಯಾಗಿ ಬೈದು ಬುದ್ಧಿ ಹೇಳುವುದರ ಅವಶ್ಯಕತೆಯುಂಟಾಯಿತು ಅಂದರೆ ವಾಗ್ದಂಡನೆಯ ಅವಶ್ಯಕತೆಯು ಏರ್ಪಟ್ಟಿತು. ಇನ್ನೂ ಕೆಲವು ಕಾಲಕ್ಕೆ ಅದು ಸಾಲದೆ ದಂಡ ವಿಧಿಸುವುದು ಅಂದರೆ ದ್ರವ್ಯರೂಪದ ಅಥವಾ ಆರ್ಥಿಕವಾದ ದಂಡನೆಯ ಅವಶ್ಯಕತೆಯುಂಟಾಯಿತು. ಅದೂ ಕೆಲಸ ಮಾಡದಾದಾಗ ದುಷ್ಟರನ್ನು ಮಟ್ಟ ಹಾಕಲು ಶಿರಶ್ಛೇದನವನ್ನು ಮಾಡದೇ ಅನ್ಯ ಮಾರ್ಗವಿಲ್ಲ ಎನ್ನುವಂತಹ ಪರಿಸ್ಥಿತಿಯುಂಟಾಗಿದೆ!" ಎಂದು ಹೇಳಿದನು.
       ಸತ್ಯವಾನನು, "ತಂದೆಯೇ ಒಂದು ವಿಷಯವನ್ನು ನಿಮ್ಮ ದೃಷ್ಟಿಗೆ ತರಲು ಬಯಸುತ್ತೇನೆ. ದರೋಡೆಕೋರರು ಹಾಗು ಕಳ್ಳಕಾಕರನ್ನು ವಧಿಸದೆ ಪ್ರಜೆಗಳನ್ನು ರಕ್ಷಿಸುವುದು ನಿಮ್ಮ ಕೈಯ್ಯಲ್ಲಿ ಆಗುತ್ತಿಲ್ಲ. ದುರ್ಜನರನ್ನು ಸಜ್ಜನರನ್ನಾಗಿ ಮಾರ್ಪಡಿಸುವ ಅಹಿಂಸಾ ಮಾರ್ಗದಿಂದ ಕೂಡಿದ ಮತ್ತು ಕಳ್ಳರನ್ನು ಸಮಾಜ ಸೇವಕರಾಗಿ ಬದಲಾಯಿಸುವ ಉಪಾಯವೊಂದಿದೆ. 
       "ರಾಜನಾದವನು ಮೊದಲು ತನ್ನಷ್ಟಕ್ಕೆ ತಾನು ಮನೋನಿಗ್ರಹವನ್ನು ಹೊಂದಿದವನಾಗಿರಬೇಕು. ಅವನು ವಿಷಯ ಲಂಪಟನಾಗಿರಬಾರದು. ಇಂದ್ರಿಯಗಳನ್ನು ಜಯಿಸಿದವನು ಒಂದೇ ಘಳಿಗೆಯಲ್ಲಿ ಲೋಕಗಳನ್ನೇ ಗೆಲ್ಲಬಲ್ಲ. ಅವನ ಸ್ವಭಾವವು ಒಳ್ಳೆಯದಾಗಿರದೆ ಅವನು ಇತರರಿಗೆ ಉಪದೇಶ ಮಾಡ ಹೊರಟರೆ ಅದರಿಂದ ಪ್ರಯೋಜನವುಂಟಾಗುವುದಿಲ್ಲ". 
        "ದೇಶದಲ್ಲಿ ಪಾಪಾಚರಣೆಯು ಇಲ್ಲದಂತೆ ಮಾಡಬೇಕೆಂದು ಬಯಸುವ ರಾಜನು ಮೊದಲು ತಾನು ತಪ್ಪು ಮಾಡುವುದರಿಂದ ದೂರವುಳಿಯಬೇಕು. ತನ್ನ ಬಂಧುಗಳು ಹಾಗು ಮಿತ್ರರು ಸನ್ಮಾರ್ಗದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ರಾಜನು ತನ್ನವರ ವಿಷಯದಲ್ಲಿ ವಜ್ರಕ್ಕಿಂತಲೂ ಕಠೋರವಾಗಿ (ವಜ್ರಾದಪಿ ಕಠೋರಾಣಿ) ಇರಬೇಕು ಮತ್ತು ಇತರರ ವಿಷಯದಲ್ಲಿ ಹೂವಿಗಿಂತಲೂ ಮೃದುವಾಗಿ (ಮೃದೂನಿ ಕುಸುಮಾದಪಿ) ಇರಬೇಕು"
         "ಅಂತಹ ರಾಜನಿದ್ದರೆ ಎಲ್ಲರೂ ಅವನನ್ನು ತಲೆಯ ಮೇಲೆ ಹೊತ್ತು ಮೆರೆಯುತ್ತಾರೆ. ಅಂತಹ ರಾಜನ ಪರಿಪಾಲನೆಯಲ್ಲಿ ದುಷ್ಟರು, ಅಪರಾಧಿಗಳು ತಮ್ಮ ಕೃತ್ಯಗಳಿಗೆ ನಾಚಿಕೆ ಪಡುತ್ತಾರೆ. ಅವರಲ್ಲಿ ತಪ್ಪದೇ ಸದ್ಭಾವನೆಯು ಉಂಟಾಗುತ್ತದೆ"
          "ಹೀಗೆ, ಹಿರಿಯರು ಮಾತನಾಡಿಕೊಳ್ಳುತ್ತಿದ್ದಾಗ ಕೇಳಿಸಿಕೊಂಡ ಮಾತುಗಳನ್ನು ನಿನ್ನ ಮುಂದೆ ಇರಿಸುತ್ತಿದ್ದೇನೆ" ಎಂದು ಸತ್ಯವಾನನು ಹೇಳಿದನು. 
        "ಆದ್ದರಿಂದ, ಧರ್ಮನಂದನನೇ, ಲೋಕ ಸಂಸ್ಕಾರವನ್ನು ಮಾಡಲುದ್ಯುಕ್ತನಾಗುವ ರಾಜನು ಮೊದಲು ಆತ್ಮ ಸಂಸ್ಕಾರ ಅಂದರೆ ತನ್ನನ್ನು ತಾನು ತಿದ್ದಿಕೊಳ್ಳುವ ಕೆಲಸದ ಕುರಿತು ಅವಶ್ಯವಾಗಿ ಚಿಂತಿಸುವ ಅಗತ್ಯವಿರುತ್ತದೆ" ಎಂದು ಭೀಷ್ಮನು ಧರ್ಮರಾಯನಿಗೆ ಧರ್ಮಸೂಕ್ಷ್ಮವನ್ನು ಬೋಧಿಸಿದನು. 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
 
ಹಿಂದಿನ ಲೇಖನ ಭಾಗ - ೨೦ ಭೀಷ್ಮ ಯುಧಿಷ್ಠಿರ ಸಂವಾದ: ಚಿರಕಾರಿಯ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A6-...

Rating
No votes yet

Comments

Submitted by makara Wed, 10/24/2018 - 18:58

ಈ ಲೇಖನದ ಮುಂದಿನ ಭಾಗ - ೨೨ ಭೀಷ್ಮ ಯುಧಿಷ್ಠಿರ ಸಂವಾದ: ಇಂದ್ರ ಶುಕ ಸಂವಾದ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A8-...