ಭಾಗ - ೭ ಮನುವಿನ ಧರ್ಮ: ಯಾವುದು ಅಶುದ್ಧ? ಯಾವುದು ಪರಿಶುದ್ಧ?

ಭಾಗ - ೭ ಮನುವಿನ ಧರ್ಮ: ಯಾವುದು ಅಶುದ್ಧ? ಯಾವುದು ಪರಿಶುದ್ಧ?

ಚಿತ್ರ
 1. ಪುರುಷರನ್ನು ಹಾಳು ಮಾಡುವುದು ಸ್ತ್ರೀಯರ ಸ್ವಭಾವ. ಪುರುಷನು ಎಂತಹ ವಿದ್ವಾಂಸನಾದರೂ ಸಹ ಸ್ತ್ರೀಯರ ಬಲೆಗೆ ಬೀಳುವುದು ಸಹಜ.
 2. ವ್ಯಭಿಚಾರವು ಸ್ತ್ರೀಯರ ಲಕ್ಷಣ.
 3. ಸ್ತ್ರೀಯರು ದುಷ್ಟ ಬುದ್ಧಿಯುಳ್ಳವರು ಮತ್ತು ಚಂಚಲ ಸ್ವಭಾವವನ್ನು ಹೊಂದಿರುವುದರಿಂದ ಪತಿಯು ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೂ ಸಹ ಅವನ ಮೇಲಿನ ದುಷ್ಟ ಭಾವನೆಯಿಂದ ಅವರು ಹಾಳಾಗುತ್ತಾರೆ. 
 4. ಶಯನ, ಆಸನ, ಕಾಮಕ್ರೋಧಗಳು, ಕಪಟ ಸ್ವಭಾವ, ದ್ರೋಹಬುದ್ಧಿ, ಕೆಟ್ಟ ನಡವಳಿಕೆಗಳು ಸ್ತ್ರೀಯರಿಗೆ ಸಹಜವಾದವುಗಳು.
 5. ಮದ್ಯಪಾನ, ಕೆಟ್ಟ ಸಹವಾಸ, ಅಕ್ಕ-ಪಕ್ಕದ ಮನೆಗಳಿಗೆ ಹೋಗುವುದು ಸ್ತ್ರೀಯರನ್ನು ಕುಲಗೆಡಿಸುತ್ತವೆ. 
 6. ಮಂತ್ರ ಹೀನರೂ, ಸಂಸ್ಕಾರ ಹೀನರೂ ಆಗಿರುವುದರಿಂದ ಕೆಲವು ಸ್ತ್ರೀಯರು ಅಶುಭ ರೂಪದಲ್ಲಿ ಇರುತ್ತಾರೆ. ಕೆಲವರು ಮಾನಸಿಕ ವ್ಯಭಿಚಾರ ಮಾಡುತ್ತಾರೆ. ಅವುಗಳಿಗೆ ಪ್ರಾಯಶ್ಚಿತ್ತಗಳನ್ನು ಮಾಡಿಸಿ ಸಂಸ್ಕರಿಸಬೇಕು. 
 7. ಸ್ತ್ರೀಯರು ಸಾಕ್ಷಿಯಾಗಿ ಕೆಲಸಕ್ಕೆ ಬರುವುದಿಲ್ಲ, ಏಕೆಂದರೆ ಅವರು ಚಂಚಲಚಿತ್ತರು.
 8. ಸ್ತ್ರೀಯು ಬಾಲೆಯಾಗಿರಲಿ, ಯುವತಿಯಾಗಿರಲಿ ಅಥವಾ ಮುದುಕಿಯಾಗಿರಲಿ ಆಕೆ ಯಾವುದೇ ಗೃಹಕಾರ್ಯಗಳನ್ನು ಸ್ವತಂತ್ರವಾಗಿ ಮಾಡಲು ಅರ್ಹಳಲ್ಲ.
 9. ಸ್ತ್ರೀಯು ಗಂಡನ ಸೇವೆಯನ್ನು ಮಾಡಲೇಬೇಕು. 
 10. ಪುರುಷರು ಸ್ತ್ರೀಯರನ್ನು ಯಾವಾಗಲೂ ತಮ್ಮ ಅಧೀನದಲ್ಲಿಯೇ ಇಟ್ಟುಕೊಳ್ಳಬೇಕು.
 11. ಸ್ತ್ರೀಯರು ಯಾವಾಗಲೂ ಒಬ್ಬರ ರಕ್ಷಣೆಯಲ್ಲಿರ ಬೇಕಾದವರೇ ಹೊರತು ಅವರು ಒಂಟಿಯಾಗಿ ಎಂದಿಗೂ ಇರತಕ್ಕದ್ದಲ್ಲ. 
 12. ಪತ್ನಿಯು ತಪ್ಪು ಮಾಡಿದರೆ  ಹಗ್ಗದಿಂದಾಗಲಿ (ಬಾರುಕೋಲಿನಿಂದ?), ಬೆತ್ತದಿಂದಾಗಲಿ ಶರೀರದ ಹಿಂಭಾಗದಲ್ಲಿ ಹೊಡೆಯಬೇಕು.
 13. ವ್ಯಭಿಚಾರ ಮಾಡುವ ಪತ್ನಿಯನ್ನು ಗೃಹಬಂಧನದಲ್ಲಿರಿಸಿ ಪ್ರಾಯಶ್ಚಿತ್ತ ಮಾಡಿಸಬೇಕು.
 14. ಕನ್ಯೆಯ ಮರ್ಮಾಂಗದಲ್ಲಿ ಬೆರಳಿಟ್ಟು ಬಾಧೆಯುಂಟು ಮಾಡಿದ ಸ್ತ್ರೀಯ ತಲೆಯನ್ನು ಬೋಳಿಸಿ, ಆಕೆಯ ಎರಡು ಬೆರಳುಗಳನ್ನು ಕತ್ತರಿಸಿ, ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಬೇಕು.
 15. ತನ್ನ ತಂದೆಯ ಐಶ್ವರ್ಯ, ಕುಲಗಳನ್ನು ನೋಡಿಕೊಂಡು ಸೊಕ್ಕಿನಿಂದ ತನ್ನ ಪತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಪರಪುರುಷನೊಂದಿಗೆ ವ್ಯಭಿಚಾರ ಮಾಡುವ ಸ್ತ್ರೀಯನ್ನು ಎಲ್ಲರ ಸಮ್ಮುಖದಲ್ಲಿ ನಾಯಿಗಳಿಂದ ಕಚ್ಚಿಸಬೇಕು.
 16. ಗಂಡನನ್ನು ದ್ವೇಷಿಸುವ ಹೆಂಡತಿಯನ್ನು ಒಂದು ವರ್ಷಕಾಲ ಕಾಯ್ದು ನೋಡಿ ನಂತರ ಆಕೆಯು ಬದಲಾಗದಿದ್ದರೆ ಆಕೆಯನ್ನು ಪರಿತ್ಯಜಿಸಬೇಕು. 
 17. ಮದ್ಯವನ್ನು ಸೇವಿಸುವ, ದುಷ್ಟಳಾದ, ರೋಗಿಷ್ಟಳಾದ, ಗಂಡನಿಗೆ ಪ್ರತಿಕೂಲಳಾಗಿರುವ, ವಿಪರೀತವಾಗಿ ಖರ್ಚು ಮಾಡುವವಳಾದ ಹೆಂಡತಿಯನ್ನು ತ್ಯಜಿಸಿ ಇನ್ನೊಬ್ಬಾಕೆಯನ್ನು ಮದುವೆ ಮಾಡಿಕೊಳ್ಳಬಹುದು. 

          ಮೇಲಿನ ಸಂಗತಿ ಹಿಂದೆ ಇದ್ದವಾ ಅಥವಾ ಆಮೇಲೆ ಸೇರಿಸಿದ ಸಂಗತಿಗಳಾ ಎನ್ನುವ ವಿಷಯವನ್ನು ಆಲೋಚಿಸದೆ, ಸಧ್ಯ ಈಗ ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಗಳನ್ನು ಪಾತಾಳ ಗರಡಿ ಹಾಕಿ ಹುಡುಕಿ ನೋಡಿದರೆ ಸ್ತ್ರೀಯರನ್ನು ಉದ್ದೇಶಿಸಿ ಅವರನ್ನು ಕೀಳಾಗಿ ಚಿತ್ರಿಸಿದಂತೆ...... ಕ್ರೂರತ್ವ, ಲಿಂಗಭೇದ (ಲಿಂಗ ವಿವಕ್ಷತೆ) ತೋರಿಸಿದಂತೆ.... ಸ್ತ್ರೀಯರ ಆತ್ಮಗೌರವಕ್ಕೆ ಕುಂದು ತಂದಂತೆ....... ಮುಂತಾಗಿ ಯಾರಾದರೂ ಆಕ್ಷೇಪಣೆ ಎತ್ತಿ ತೋರಿಸ ಬಯಸಿದರೆ ಅವರಿಗೆ ಅವಕಾಶವಿರುವುದು ಮೇಲೆ ಹೇಳಲ್ಪಟ್ಟ ಕೆಲವು ವಿಷಯಗಳಿಗಷ್ಟೆ! ಯಾವುದೋ ಓಬೀರಾಯನ ಕಾಲದಲ್ಲಿ ಹೇಳಿದ ನೀತಿ ಸೂತ್ರಗಳಿವು. ಯಾವ ಸಂದರ್ಭದಲ್ಲಿ, ಯಾವ ಉದ್ದೇಶದಿಂದ ಹೇಳಿದರು, ಮೂಲಶ್ಲೋಕಗಳಿಗೆ ಮೇಲೆ ಹೇಳಿದ ಅನುವಾದಗಳು ಎಷ್ಟರ ಮಟ್ಟಿಗೆ ಸಮಂಜಸವಾದವು, ಮುಂತಾದವುಗಳನ್ನು ಆಲೋಚಿಸದೆ ಕೇವಲ ಈ ಸಂಗತಿಗಳಿಗೆ ಮಾತ್ರವೇ ಪರಿಮಿತವಾಗಿ ಅವನ್ನು ಅನುಮಾನದ ದೃಷ್ಟಿಯಿಂದ, ರಂಧ್ರಾನ್ವೇಷಣ ದೃಷ್ಟಿಯಿಂದ ನೋಡುವ ಇಂದಿನ ಮಹಾನ್ ಮಾನವತಾವಾದಿಗಳಿಗೆ ಇವು ತೀವ್ರ ಅಭ್ಯಂತರಕರವಾಗಿ ತೋರುತ್ತವೆ. 
          ಮನುಸ್ಮೃತಿಯಲ್ಲಿ ಕಾಲಾನಂತರದಲ್ಲಿ ಬಂದು ಸೇರಿದ ಅಶುದ್ಧ ಭಾಗಗಳನ್ನು ತೊಲಗಿಸಿ ಮನುವಿನ ಮೂಲ ಆಶಯಗಳಿಗೆ, ಸ್ಪೂರ್ತಿಗೆ, ಆದರ್ಶಗಳಿಗೆ ಅನುಗುಣವಾಗಿ ಇರುವ ಶ್ಲೋಕಗಳನ್ನಷ್ಟೆ ಉಳಿಸಿ ಆರ್ಯಸಮಾಜದವರು ಕೆಲವು ವರ್ಷಗಳ ಹಿಂದೆ "ಶುದ್ಧ ಮನುಸ್ಮೃತಿ" (ತೆಲುಗನಿಲ್ಲಿ ವಿಶುದ್ಧ ಮನುಸ್ಮೃತಿ) ಎನ್ನುವ ಗ್ರಂಥವನ್ನು ಪ್ರಾಚುರ್ಯಕ್ಕೆ ತಂದರೆ ನಮ್ಮ ಮಹಾನ್ ಮೇಧಾವಿಗಳು ಅದೂ ಸಹ ಅಶುದ್ಧ ಎಂದು ಅದರ ಮೇಲೆ ಮುದ್ರೆಯೊತ್ತಿದ್ದಾರೆ. ಮನುಸ್ಮೃತಿಯಲ್ಲಿ ಇರುವುದೆಲ್ಲಾ ಅಶುದ್ಧವೇ! ಅದರಲ್ಲಿ ಅವರಿಗೆ ಕಂಡು ಬರುವಂತಹ ಅಶುದ್ಧವನ್ನೆಲ್ಲಾ ತೆಗೆದು ಹಾಕಿದರೂ ಆ ಬುದ್ಧಿಜೀವಿಗಳಿಗೆ ಅದರಲ್ಲಿ ಉಳಿದಿರುವುದು ಅಶುದ್ಧವೇ! "ಮನುಸ್ಮೃತಿ ಮೈನಸ್ ಅಶುದ್ಧಂ ಈಸ್ಹ್ ಈಕ್ವೆಲ್ ಟು ಅಶುದ್ಧಂ" ಎಂದು ನಿರ್ವಚಿಸುತ್ತಾ ರಾವಿಪುಡಿ ವೆಂಕಟಾದ್ರಿ ಎನ್ನುವ ಹೇತುವಾದಿ (ರ‍್ಯಾಷನಲಿಸ್ಟ್ - ವಿಚಾರವಾದಿ) "ಮನುಸ್ಮೃತಿ ಮೈನಸ್ ಅಶುದ್ಧಂ" ಎನ್ನುವ ಪುಸ್ತಕವನ್ನು ಬರೆದಿದ್ದಾನೆ. 
          ಇರಲಿ, ನಮ್ಮ ಮನುಸ್ಮೃತಿ ಅಶುದ್ಧ ಗ್ರಂಥವೆಂದು ನಮ್ಮ ಮಹಾನ್‌ ಜ್ಞಾನಿಗಳು ಅಪ್ಪಣೆ ಕೊಡಿಸಿದ್ದಾರೆ. ಬಹಳ ಸಂತೋಷ. ಅದು ಸಂಪೂರ್ಣವಾಗಿ ಅಶುದ್ಧವಾಗಿದ್ದರೆ ಸಂಪೂರ್ಣವಾಗಿ ಶುದ್ಧವಾಗಿರುವುದು ಮತ್ತ್ಯಾವುದೋ ಇರಬೇಕಲ್ಲವೇ? ಅಶುದ್ಧವಾದದು ಎಷ್ಟರ ಮಟ್ಟಿಗೆ ಅಶುದ್ಧವಾದುದು ಎನ್ನುವುದನ್ನು ನಿರ್ಧರಿಸಬೇಕಾದರೆ ಅದರ ಪಕ್ಕದಲ್ಲಿ ಪರಿಶುದ್ಧವಾದುದನ್ನಿರಿಸಿ ತುಲನೆ ಮಾಡಬೇಕಲ್ಲವೇ?
           ಅಂತಹುದು ಈಗೆಲ್ಲಿ ಸಿಗುತ್ತದೆ? ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ಸಂಖ್ಯೆಯಲ್ಲಿರುವ ಗ್ರಂಥಗಳಲ್ಲಿ ಇದು ಮಾತ್ರವೇ ಪರಿಶುದ್ಧವಾದ ಗ್ರಂಥವೆಂದು ಯಾರು ನಿರ್ಣಯಿಸಬಲ್ಲರು ಎನ್ನುವ ಸಂಶಯ ಬೇಡ. ಹೆಸರೇ, "ಪರಿಶುದ್ಧ ಗ್ರಂಥ" ಎನ್ನುವ ಪವಿತ್ರ ಗ್ರಂಥವೊಂದಿದೆ (ಪವಿತ್ರ ಬೈಬಲ್ - ಕನ್ನಡ). ಅದು ಪರಿಶುದ್ಧವಾದುದಲ್ಲ, ಅದರಲ್ಲಿ ಇರುವುದು ಆಶುದ್ಧವಾದುದೆಂದು ಈ ಮಹಾನ್ ಬುದ್ಧಿಜೀವಿಗಳ್ಯಾರೂ ಗಂಟಲು ಹರಿದುಕೊಂಡದ್ದಾಗಲಿ, ಬಾಯಿಬಡಿದುಕೊಂಡದ್ದಾಗಲಿ ದಾಖಲಾಗಿಲ್ಲ. ಮನುಸ್ಮೃತಿಯ ವಿಷಯದಲ್ಲಿ ಮೈಮೇಲೆ ಮೆಣಸು ಅರಸಿಕೊಂಡವರಂತೆ ಹಾರಾಡುತ್ತಿಲ್ಲ. ಆದ್ದರಿಂದ ಆ ಗ್ರಂಥದ ಪರಿಶುದ್ಧತೆಯನ್ನು ಅವರು ಅಂಗೀಕರಿಸಿದ್ದಾರೆಂದು ಭಾವಿಸಬಹುದು. ಇಗೋ ನೋಡಿ ಆ ಪವಿತ್ರ ಗ್ರಂಥವಾವುದೆಂದು! 
           ಈಗ ಅದರಲ್ಲಿ ಸ್ತ್ರೀಯರಿಗೆ ಸಂಬಂಧಿಸಿದಂತೆ ಕೆಲವೊಂದು ಪರಿಶುದ್ಧವಾದ ವಾಕ್ಯಗಳನ್ನು ನೋಡೋಣ. 
            ಒಬ್ಬನ ಹೆಂಡತಿ ತಪ್ಪುದಾರಿ ಹಿಡಿದು, ತನ್ನ ಗಂಡನಿಗೆ ಅಪ್ರಾಮಾಣಿಕಳಾಗಿ ನಡೆದು ಸಿಕ್ಕಿಕೊಳ್ಳದೆ, ಸಾಕ್ಷಿಯಿಲ್ಲದೆ ಗುಟ್ಟಾಗಿಯೇ ಪರಪುರುಷನೊಡನೆ ಸಂಗಮಿಸಿ, ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾಗಿರಬಹುದು. ಅಥವಾ ಹಾಗೆ ಮಾಡದೆ ಕೆಟ್ಟುಹೋಗದೆ ಇದ್ದರೂ ಕೆಟ್ಟುಹೋದಳೆಂದು ಗಂಡನ ಸಂಶಯಕ್ಕೆ ಗುರಿಯಾಗಿರಬಹುದು. ಈ ಎರಡು ಸಂದರ್ಭಗಳಲ್ಲೂ ಆ ಗಂಡನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು. ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ, ಅವನು ಯಾಜಕನಿಗೆ ಮೂರು ಸೇರು ಜವೆಗೋದಿ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು...... “ಯಾಜಕನು ಅವಳನ್ನು ಕರೆದು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಬೇಕು. ಒಂದು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು. ಯಾಜಕನು ಆಕೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಕೂದಲನ್ನು ಕೆದರಿಸಿ, ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿಡಬೇಕು; ಶಾಪವನ್ನು ತರುವ ವಿಷಕರವಾದ ನೀರನ್ನು ತನ್ನ ಕೈಯಲ್ಲೇ ಹಿಡಿದುಕೊಳ್ಳಬೇಕು. ಅದೇ ಯಾಜಕನು ಅವಳಿಂದ ಶಪಥಪೂರ್ವಕ ಪ್ರಮಾಣ ಮಾಡಿಸುತ್ತಾ ಅವಳಿಗೆ - “ನೀನು ನಿನ್ನ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ, ಪರಪುರುಷನನ್ನು ಕೂಡದೆ, ಅಶುದ್ಧಳಾಗದೆ ಇರುವವಳಾದರೆ ಶಾಪ ತರುವ ಈ ವಿಷಕರವಾದ ನೀರಿನಿಂದ ನಿನಗೆ ಹಾನಿಯಾಗದು. ಆದರೆ ನೀನು ಗಂಡಸಿದ್ದವಳಾಗಿ ಪರಪುರುಷನನ್ನು ಕೂಡಿ ಕೆಟ್ಟಿದ್ದರೆ ನಿನ್ನ ಗಂಡನಲ್ಲದೆ ಬೇರೊಬ್ಬನು ನಿನ್ನನ್ನು ಸಂಗಮಿಸಿದ್ದರೆ, ಸರ್ವೇಶ್ವರನು ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ, ನಿನ್ನ ಹೊಟ್ಟೆ ಉಬ್ಬುವಂತೆ ಮಾಡಿ, ನೀನು ನಿನ್ನ ಜನರ ಮಧ್ಯೆ ಶಾಪಗ್ರಸ್ತಳನ್ನಾಗಿ ಮಾಡಲಿ. ಶಾಪತರುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ,” ಎಂದು ಹೇಳಬೇಕು. ಅದಕ್ಕೆ ಆ ಹೆಂಗಸು, “ಆಗಲಿ, ಹಾಗೆಯೇ ಆಗಲಿ,” ಎಂದು ಹೇಳಬೇಕು..........
           ವ್ಯಭಿಚಾರ ಸಂಶಯವನ್ನು ಪರಿಹರಿಸುವ ವಿಧಿ ಇದುವೆ. ಹೆಂಡತಿಯಾದವಳು ಗಂಡನ ಸ್ವಾಧೀನದಲ್ಲಿದ್ದರೂ ಪಾತಿವ್ರತ್ಯವನ್ನು ತೊರೆದು ಜಾರತ್ವ ಮಾಡಿರುವಾಗ ಅಥವಾ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯಪಡುವಾಗ ಅವನು ಅವಳನ್ನು ಸರ್ವೇಶ್ವರನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿ ನಿಯಮವನ್ನು ನೆರವೇರಿಸಬೇಕು. ಆಗ ಗಂಡನು ನಿರಪರಾಧಿಯಾಗುವನು. ಹೆಂಡತಿ ತನ್ನ ಅಕ್ರಮಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುವಳು. (Numbers (ಅರಣ್ಯ ಕಾಂಡ)ಸಂಖ್ಯಾ ಕಾಂಡ, ೫ನೇ ಅಧ್ಯಾಯ, ೧೨ - ೩೧ನೇ ವಾಕ್ಯಗಳು) 
          “ಒಬ್ಬನು ತಾನು ಮದುವೆಮಾಡಿಕೊಂಡ ಹೆಂಡತಿಯನ್ನು ದ್ವೇಷಿಸಿ, ಅವಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ‘ನಾನು ಇವಳನ್ನು ಮದುವೆಮಾಡಿಕೊಂಡೆ; ಆದರೆ ಕೂಡಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು’ ಎಂದು ಹೇಳಿ ಅವಳ ಮೇಲೆ ಆಪಾದನೆ ತರಬಹುದು. ಅವಳ ತಾಯಿತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು ಎಂಬುದಕ್ಕೆ ಆಧಾರವನ್ನು ಊರಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು. ತಂದೆ ಅವರಿಗೆ, ‘ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟೆ; ಆಮೇಲೆ ಇವನು ಅವಳನ್ನು ದ್ವೇಷಿಸಿ ಪರಪುರುಷ ಸಂಪರ್ಕಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳನ್ನು ಅವಮಾನಪಡಿಸುತ್ತಾನೆ. ಇಗೋ, ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುದಕ್ಕೆ ಇದೇ ಪ್ರಮಾಣ’ ಎಂದು ಹೇಳಿ ಅವಳ ಹಚ್ಚಡವನ್ನು* ಹಿರಿಯರ ಮುಂದೆ ಇಡಬೇಕು..........
(*ಮದುವೆಯಾದ ಹುಡುಗಿಯ ಕನ್ಯತ್ವವನ್ನು ರುಜುವಾತು ಪಡಿಸಿಕೊಳ್ಳಲು ಪ್ರಥಮ ರಾತ್ರಿ ಗಂಡ ಹೆಂಡತಿ ಮಲಗಿಕೊಳ್ಳುವ ಜಾಗದಲ್ಲಿ ಒಂದು ವಿಧವಾದ ಬಿಳಿಬಟ್ಟೆಯನ್ನು ಹಾಸುತ್ತಿದ್ದರು. ಅದರ ಮೇಲೆ ರಕ್ತದ ಕಲೆಗಳಿದ್ದರೆ ಮಾತ್ರ ಆಕೆಯು ಕನ್ಯೆಯೆಂದು ನಿರ್ಧರಿಸಲಾಗುತ್ತಿತ್ತು) 
          “ಆದರೆ ಆ ಮಹಿಳೆ ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳೇ ಎಂದು ತಿಳಿದುಬಂದರೆ ಅವಳು ತಂದೆಯ ಮನೆಯಲ್ಲೇ ಸೂಳೆತನ ಮಾಡಿದ್ದರಿಂದ ಅವಳನ್ನು ತಂದೆಯ ಮನೆಯ ಬಾಗಿಲಿಗೆ ಬರಮಾಡಬೇಕು; ಊರಿನವರೆಲ್ಲರು ಕಲ್ಲೆಸೆದು ಅವಳನ್ನು ಕೊಲ್ಲಬೇಕು. ಹೀಗೆ ಇಂಥ ಕೇಡನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು. (Dueteronomy ದ್ವಿತೀಯ ಧರ್ಮೋಪದೇಶ ಕಾಂಡ, ೨೨ನೇ ಅಧ್ಯಾಯ, ೧೩-೨೧ ವಾಕ್ಯಗಳು)
          ಒಬ್ಬನು ದಾಸಿಯೊಡನೆ ಶಯನಿಸಿ ವೀರ್ಯಸ್ಕಲನ ಮಾಡಿದ ಪಕ್ಷದಲ್ಲಿ......ಅವರಿಗೆ ವಿಧಿಸಬೇಕಾದ ಶಿಕ್ಷೆಯ ಬಗ್ಗೆ ನ್ಯಾಯವಿಚಾರಣೆ ಆಗಬೇಕು. ಆದರೆ ಮರಣಶಿಕ್ಷೆ ವಿಧಿಸಬಾರದು........ ಆ ವ್ಯಕ್ತಿ ಪ್ರಾಯಶ್ಚಿತ್ತ ಬಲಿಗಾಗಿ ಸರ್ವೇಶ್ವರನ ಸನ್ನಿಧಿಗೆ, ದೇವದರ್ಶನದ ಗುಡಾರದ ಬಾಗಿಲಿಗೆ ಒಂದು ಹೋತವನ್ನು (ಟಗರು) ತರಬೇಕು. ಅವನ ದೋಷಪರಿಹಾರಕ್ಕಾಗಿ ಯಾಜಕನು ಆ ಟಗರನ್ನು ಪ್ರಾಯಶ್ಚಿತ್ತ ಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಿ ಅವನ ಪರವಾಗಿ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮೆ ದೊರಕುವುದು. (Leviticus ಯಾಜಕ ಕಾಂಡ, ೨೦ನೇ ಅಧ್ಯಾಯ, ೨೦-೨೩ ವಾಕ್ಯಗಳು)  
          ಅವನ ಯಜಮಾನನು ದಾಸನಿಗೆ (ಮದುವೆ ಮಾಡಿ) ಕೊಟ್ಟ ಹೆಂಡತಿಯು ಅವನಿಗೆ ಕುಮಾರರನ್ನೂ ಕುಮಾರ್ತೆಯರನ್ನೂ ಹೆತ್ತಿದ್ದರೆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನವರಾಗಿರಬೇಕು. ಅವನು ಒಬ್ಬನಾಗಿಯೇ ಹೋಗಬೇಕು.......  ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ ದಾಸನು ಹೋಗುವಂತೆ ಆಕೆಯು ಹೋಗಬಾರದು. (Exodus ನಿರ್ಗಮ ಕಾಂಡ, ೨೧ನೇ ಅಧ್ಯಾಯ, ೩-೭ ವಾಕ್ಯಗಳು) 
 
ಬೆಯೇರಿಯನ ಮಗನಾದ ಹೋಶೇಯನಿಗೆ ಕರ್ತನ ವಾಕ್ಯವು ಬಂತು.......
          ನಿಮ್ಮ ತಾಯಿಯ ಸಂಗಡ ವಾದಿಸಿರಿ; ಅವಳು ನನ್ನ ಹೆಂಡತಿಯಲ್ಲ; ಇಲ್ಲವೆ ನಾನು ಅವಳ ಗಂಡನಲ್ಲ; ಆದದರಿಂದ ಅವಳು ತನ್ನ ದೃಷ್ಟಿಯಿಂದ ತನ್ನ ವ್ಯಭಿಚಾರತ್ವಗಳನ್ನು ತನ್ನ ಸ್ತನಗಳ ಮಧ್ಯದಿಂದ ತನ್ನ ವ್ಯಭಿಚಾರಗಳನ್ನು ತೊಲಗಿಸಲಿ. ಇಲ್ಲದಿದ್ದರೆ ನಾನು ಅವಳನ್ನು ಬೆತ್ತಲೆಯಾಗಿ ಮಾಡಿ ಅವಳು ಹುಟ್ಟಿದ ದಿನದಲ್ಲಾದ ಹಾಗೆ ನಿಲ್ಲಿಸಿ ಅವಳನ್ನು ಅರಣ್ಯದಂತೆ ಮಾಡುವೆನು. ಅವಳನ್ನು ಒಣಗಿದ ಭೂಮಿಯಂತೆ ಇಟ್ಟು ದಾಹದಿಂದ ಅವಳನ್ನು ಕೊಲ್ಲುತ್ತೇನೆ. ಅವಳ ಮಕ್ಕಳನ್ನು ಸಹ ಕರುಣಿಸುವದಿಲ್ಲ; ಅವರು ಸೂಳೆತನದಿಂದಾದ ಮಕ್ಕಳೇ...... ಅವರ ತಾಯಿ ಸೂಳೆತನ ಮಾಡಿದ್ದಾಳೆ; ಅವರನ್ನು ಹೆತ್ತವಳು ನಾಚಿಕೆಯಿಲ್ಲದೆ ನಡೆದಿದ್ದಾಳೆ....... ಆದದರಿಂದ ಇಗೋ, ನಾನು ನಿನ್ನ ಮಾರ್ಗಕ್ಕೆ ಮುಳ್ಳುಗಳ ಬೇಲಿ ಹಾಕುವೆನು; ಅವಳು ತನ್ನ ಹಾದಿಗಳನ್ನು ಕಾಣದ ಹಾಗೆ ಗೋಡೆಯನ್ನು ಕಟ್ಟುವೆನು. ಅವಳು ತನ್ನ ಮಿಂಡರನ್ನು ಹಿಂಬಾಲಿಸಿದರೂ ಅವರನ್ನು ಸಂಧಿಸುವದಿಲ್ಲ, ಹುಡುಕಿದರೂ ಅವರು ಸಿಕ್ಕುವದಿಲ್ಲ.......ಅವಳ ಬೆತ್ತಲೆತನವನ್ನು ಮುಚ್ಚುವದಕ್ಕಿದ್ದ ನನ್ನ ಉಣ್ಣೆಯನ್ನೂ ನನ್ನ ನಾರು ಬಟ್ಟೆಯನ್ನೂ ತೆಗೆದುಕೊಳ್ಳುವೆನು. ಈಗ ಅವಳ ತುಚ್ಛತನವನ್ನು ಅವಳ ಮಿಂಡರ ಕಣ್ಣುಗಳ ಮುಂದೆ ಬಯಲು ಪಡಿಸುವೆನು; ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು. ....... ನಾನು ನಿನ್ನ ತಾಯಿಯನ್ನು ನಾಶ ಮಾಡುವೆನು. ಅವರು ನನಗೆ ವಿರೋಧವಾಗಿ ಪಾಪಮಾಡಿದರು; ಆದದರಿಂದ ನಾನು ಅವರ ಮಾನವನ್ನು ನಾಚಿಕೆಗೆ ಮಾರ್ಪಡಿಸುವೆನು....... ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿಯಾಗುವದಿಲ್ಲ.......... ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವರು; ನಿಮ್ಮ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವರು........ ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವಾಗಲೂ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವಾಗಲೂ ನಾನು ಶಿಕ್ಷಿಸುವದಿಲ್ಲ. ಯಾಕಂದರೆ ಸೂಳೆಯರ ಸಂಗಡ ತಮ್ಮನ್ನು ಬೇರ್ಪಡಿಸಿಕೊಂಡಿದ್ದಾರೆ; ಸೂಳೆಯರ ಸಂಗಡ ಬಲಿ ಅರ್ಪಿಸುತ್ತಾರೆ (Hosea ಹೋಶೇಯ ಕಾಂಡ ಅಧ್ಯಾಯ ೧/೧, ೨/೧-೧೦, ೪/೫-೧೪)  
         ಅವರಿಗೆ-ಹೆಂಗಸರನ್ನೆಲ್ಲಾ ಉಳಿಸಿದಿರೋ?......... ಎಲ್ಲಾ ಗಂಡಸರನ್ನೂ ಕೊಂದು, ಪುರುಷ ಸಂಗಮ ಮಾಡಿದ ಎಲ್ಲಾ ಸ್ತ್ರೀಯರನ್ನು ಕೊಂದುಹಾಕಿರಿ. ಆದರೆ ಪುರುಷ ಸಂಗಮ ಮಾಡದಿರುವ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗೆ ಉಳಿಸಿಕೊಳ್ಳಿರಿ. (Numbers ಸಂಖ್ಯಾ ಕಾಂಡ (ಅರಣ್ಯ ಕಾಂಡ), ೩೧ನೇ ಅಧ್ಯಾಯ, ೧೫-೧೮ನೇ ವಾಕ್ಯಗಳು)
         ಈ ಅಮೃತ ವಾಕ್ಯಗಳಿಗೇ ಆಶ್ಚರ್ಯಪಡುತ್ತಿದ್ದೀರಾ? ಹೊಸದಾಗಿ ಕೇಳುವವರಿಗೆ ಒಂದೇ ಬಾರಿಗೆ ಮೂರ್ಚೆ ಹೋಗುವಂತಹ ಪರಿಶುದ್ಧ ಗ್ರಂಥದ ವಾಕ್ಯಗಳು ಇನ್ನೂ ಬಹಳಷ್ಟಿವೆ. 
 
ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೬ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಮಿತ್ರನೋ, ಶತ್ರುವೋ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%AE...
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು ಪುಸ್ತಕದ ಏಳನೆಯ ಅಧ್ಯಾಯ).
 
ಚಿತ್ರಗಳ ಕೃಪೆ: ಗೂಗಲ್
ಚಿತ್ರ - ೧: ವಿಶುದ್ಧ ಮನುಸ್ಮೃತಿ
ಚಿತ್ರ -೨: ಪರಿಶುದ್ಧ ಗ್ರಂಥಮು
 

Rating
No votes yet

Comments

Submitted by makara Mon, 03/11/2019 - 05:29

ಈ ಸರಣಿಯ‌ ಮುಂದಿನ ಲೇಖನ ಭಾಗ - ೮ ಮನುವಿನ ಧರ್ಮ: ಪುಕ್ಕಟೆಯಾಗಿ ಸಿಕ್ಕಿರುವುದು ಹಿಂದೂಗಳು ಮಾತ್ರವೇ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%AE...