? ? ? ? ? ?

? ? ? ? ? ?

ಕವನ

ಮಣ್ಣ ಹಾದಿಗಳಲ್ಲಿ ಏಕಾಂಗಿ 

ಯಾತ್ರೆ ಹೊರಟ ಪಯಣಿಗ 

ಬದುಕ ಮರ್ಮ ಅರಿಯುವೆನೆಂಬ 

ಸಾಹಸದಿ ಮುನ್ನಡೆಯುತಿರಲು...

 

ಆಗಾಗ ಜೊತೆ ನಡೆವ 

ನೆರಳು ಮುನಿಸಿಕೊಂಡಂತೆ ಮಾಯ.

ಹಾದಿಬದಿಯ ಬೇಲಿಯ ಮೇಲಿನ 

ಗೋಸುಂಬೆ ಗೋಣುದ್ದ ಮಾಡಿ 

ಕರೆದಂತೆಯೋ, ಪ್ರಶ್ನಿಸಿದಂತೆಯೋ, 

 ಹ್ಞೂ ಗುಟ್ಟಂತೆಯೋ ಭಾಸ.

 

ಕಾನನದ ಗರ್ಭದಿಂದ ಕಲ್ಲಾದ 

ಅಹಲ್ಯೆಯದೋ ಅಥವ ಕಾಯುತಿರುವ 

ಶಬರಿಯದೋ ಕ್ಷೀಣ ಧ್ವನಿ. 

ಬೇಡನ ಬಲೆಗೆ ಬಿದ್ದ 

ಎಲ್ಲೆ ಮೀರಿ, ಕಾಳಿನಾಸೆಗೆ ಹಾರಿಬಂದ 

ಮುಗ್ಧ ಹಕ್ಕಿಗಳ ಚೀರಾಟ. 

ಹುಲಿಯ ಬಾಯಿಗೆ ಇನ್ನೇನು 

ಸಿಕ್ಕೇ ಬಿಡುವ ಭಯದಲಿರುವ ಜಿಂಕೆ.

ಎಲ್ಲದರ ನಡುವೆ ನಿರಂತರ 

ಹುಟ್ಟು- ಸಾವಿನ ಮಹಾಭಾರತ. 

 

ಬುದ್ಧನ ಕೃಪೆಯಿರದೆ ಅಂಗುಲಿಮಾಲ 

ಪುಣ್ಯಾಕ್ಷನಾಗಿ ಹೇಗೆ ಬದಲಾಗುತ್ತಿದ್ದ? 

ಎದೆ ಒಡಲಲಿ ನೋವಿಲ್ಲದೆ 

ಎಲ್ಲಿಯ ವಾಲ್ಮೀಕಿ, ಎಲ್ಲಿಯ ರಾಮಾಯಣ? 

ಚಿತ್ತದಲಿ ಅನುಭವ ಹರಳುಗಟ್ಟಿ ಹುತ್ತವಾಗದಿರೆ 

ಎಲ್ಲಿಯ ಯಾತ್ರೆ, ಎಲ್ಲಿಯ ಬದುಕು? 

Comments