ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ 'ಸ್ವರಲೀನ'

ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ 'ಸ್ವರಲೀನ'

ಸ್ವರಾಧಿರಾಜ ಪಂಡಿತ ಭೀಮಸೇನ ಜೋಶಿ.

 

ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಡಯಾಬಿಟಿಸ್ ಸ್ವರ ಸಾಮ್ರಾಟ್ ನನ್ನು ಹಿಂಡಿ ಹಿಪ್ಪೆ ಮಾಡಿತ್ತು. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಅವರು ವಿಧಿವಶರಾದರು.

 

ಉಸಿರಾಟದ ತೊಂದರೆ ಹಾಗೂ ಡಯಾಲಿಸಿಸ್ ಚಿಕಿತ್ಸೆಗಾಗಿ ಪುಣೆಯ ಖಾಸಗಿ ಆಸ್ಪತ್ರೆಗೆ ಅವರನ್ನು ಕಳೆದ ಒಂದು ವಾರದ ಹಿಂದೆ ದಾಖಲಿಸಲಾಗಿತ್ತು. ದಶಕಗಳಿಂದ ಅವರ ಆರೋಗ್ಯದ ಉಸ್ತುವಾರಿ ವಹಿಸಿ ನೋಡಿಕೊಳ್ಳುತ್ತಿರುವ ಡಾ. ಅತುಲ್ ಜೋಷಿ "ಪಂಡಿತ್ ಜೀ ಕೃತಕ ಉಸಿರಾಟದ ಮೇಲಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡುವ ಅಗತ್ಯವಿದೆ. ಅವರ ದೇಹಸ್ಥಿತಿ ಗಂಭೀರವಾಗಿದೆ. ಕಳೆದ ೧೨ ಗಂಟೆಗಳಿಂದ ಹದಗೆಟ್ಟಿರುವ ಅವರ ಆರೋಗ್ಯದ ಯಥಾ ಸ್ಥಿತಿ ಮುಂದುವರೆದಿದೆ. ಕಳೆದ ಡಿಸೆಂಬರ್ ೩೧, ೨೦೧೦ ರಿಂದ ಅವರು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಬಂದಿದ್ದಾರೆ" ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.

 

ನಾಡಿನಾದ್ಯಂತ ಇರುವ ಪಂಡಿತ್ ಜೀ ಶಿಷ್ಯರು, ಅಭಿಮಾನಿಗಳು ಅವರ ಆರೋಗ್ಯದ ಸ್ಥಿತಿ ಬಗ್ಗೆ ತೀವ್ರ ಕಳವಳಗೊಂಡಿದ್ದರು. ಧಾರವಾಡ- ಕುಂದಗೋಳ, ಗದಗ-ಹೊಂಬಳದ ಜನತೆ ಇನ್ನಿಲ್ಲದ ದುಗುಡದಲ್ಲಿದ್ದರು. ಆತಂಕದಲ್ಲಿಯೇ ನಾವು ಧಾರವಾಡ ಉತ್ಸವ ೨೦೧೦-೧೧ಕ್ಕೆ ನಾವು ನಾಂದಿ ಹಾಡಿದ್ದೆವು. ಸಾಸ್ಕೃತಿಕ ರಾಯಭಾರಿ ನಮ್ಮ ಕೈಬಿಡುವುದಿಲ್ಲ, ಸ್ವರಾಧೀಶ ಈಶ್ವರ ಅವರ ಶಿಷ್ಯರ, ಅಭಿಮಾನಿಗಳ ಕೋರಿಕೆ ಈಡೇರಿಸುತ್ತಾನೆ ಎಂದೇ ನಂಬಿದ್ದೆವು. ಆದರೆ ಹಾಗಾಗಲಿಲ್ಲ.

 

ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ ಅವರು, ಕರ್ನಾಟಕದ ಯಾವುದೇ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಜರುಗಲಿ, ರಾಜ್ಯ ಸರಕಾರ ಎಲ್ಲ ಅಗತ್ಯ ವ್ಯವಸ್ಥೆಯನ್ನು ಕೈಗೊಂಡು ಸಕಲ ಸರಕಾರಿ ಗೌರವ ಮರ್ಯಾದೆಗಳೊಂದಿಗೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಲಿದೆ ಎಂದಿದ್ದಾರೆ. ಧಾರವಾಡ, ಗದುಗಿನ ಹೊಂಬಳ, ಕುಂದಗೋಳ ಅವರಿಗಾಗಿ ಕಾಯ್ದಿವೆ. ಅವರ ಪಾರ್ಥಿವ ಶರೀರವನ್ನು ತನ್ನ ಒಡಲಿಗೆ ಹಾಕಿಕೊಳ್ಳುವ ಪುಣ್ಯ ಅದಾವ ಮಣ್ಣಿಗೆ ಕಾಯ್ದಿದೆಯೋ ಅವರ ಸಂಬಂಧಿಕರು ನಿರ್ಧರಿಸಲಿದ್ದಾರೆ.

Comments