ಪ್ರೇಮ ಪರ್ವ

ಪ್ರೇಮ ಪರ್ವ

ಕವನ

                    ಪ್ರೇಮ ಪರ್ವ

ಒಂದೇ ಒಂದು ತಿಂಗಳಾದರೂ ಸುಂದರವಾಗಿತ್ತು
ಸುಂದರಿಯವಳ ಕೆಂದುಟಿಗಳಲಿ ಮಂದಹಾಸವಿತ್ತು ||
                                                  ಅದು ಬಲು ಸುಂದರವಾಗಿತ್ತು ||



ಪಗಡೆಯಲವಳ ಸೋಲಿಸಲಾಗದೆ ದಣಿದಿಹ ದಿನವಿತ್ತು
ಸೊಗಸಿನಳವಳ ಮೀರಿಸಲಾಗದೆ  ಮನ ಮರುಳಾಗಿತ್ತು
ನಗುವಿನ ಪ್ರಶ್ನೆಗೆ ನಗುವಿನ ಉತ್ತರ ಅನುದಿನ ಸಾಗಿತ್ತು
ನಗುವಿನ ಮರೆಯಲಿ ದುಗುಡಗಳಿದ್ದರು ಪ್ರೇಮವು ಬೆಸೆದಿತ್ತು
                                                 ಸುಂದರ ಪ್ರೇಮವು ಬೆಸೆದಿತ್ತು ||



ಗೆಲುವಿನ ಹಂಬಲ ಬದುಕಿನ ಕಾತರ ಇಬ್ಬರಲು ಇತ್ತು
ಒಲವಿನ ಉಡುಗೊರೆಗಂದೇ ಒಲವಲಿ ಉತ್ತರ ಮೂಡಿತ್ತು
ಬೆಳೆದನುರಾಗವು ದಿನವಿರುಳೆನ್ನದೆ ಮನದಲಿ ತುಂಬಿತ್ತು
ಮಳೆಗಾಲದ ಮಲೆನಾಡಿನ ಜೀವನ ನೆಮ್ಮದಿ ನೀಡಿತ್ತು
                                                     ಸುಂದರ ಬದುಕನು ಬಯಸಿತ್ತು ||



ಕವಿಯೆದೆ ತಟ್ಟಿದ ಸುಂದರಿಯಿಂದ ಪ್ರೇರಣೆ ದೊರೆತಿತ್ತು
ನವರಸವಿಲ್ಲದೆ ಶೃಂಗಾರದಲೇ  ಪದಗಳು ಮೂಡಿತ್ತು
ಯುವತಿಯ ಮೊಗದಲಿ ಆಶಾಕಿರಣವು ಹೊರಹೊಮ್ಮುತಲಿತ್ತು
ನವ ಸಂದೇಶವ ಪ್ರೇಮದ ಲೋಕಕೆ ನೀಡುವ ತೆರನಿತ್ತು
                                                       ಸುಂದರ ಕವಿತೆಯದಾಗಿತ್ತು ||




                                                                              - ಸದಾನಂದ



Comments