ಚಿಂದಿ ಆಯುವ ಹುಡುಗರು ನಾವು

ಚಿಂದಿ ಆಯುವ ಹುಡುಗರು ನಾವು

ಕವನ

ಚಿಂದಿ ಆಯುವ ಹುಡುಗರು ನಾವು


ಊರು, ಬೀದಿಯ ಸುತ್ತುವೆವು


ನೀವು ಬೇಡವೆಂದಿಸೆದ ಕಸವ


ರಸವನಾಗಿಸೆ ಹೆಕ್ಕುವೆವು|1|


 


ಹರಕು ಬಟ್ಟೆಯೆ ನಮ್ಮಯ ವೇಷ


ನೋಣದ ಮೇಲೆಯೂ ಇಲ್ಲ ದ್ವೇಷ


ಕಾಣುವುದೇ ಬರಿ ನಮ್ಮಯ ಕೊಳಕು?

ಹೊಟ್ಟೆಗಾಗಿಯೆ ನಮ್ಮೀ ಬದುಕು|2|


ಅಪ್ಪನು ಇಲ್ಲ, ಅಮ್ಮನು ಇಲ್ಲ


ಇದ್ದವರಲೆಮಾರಿಗಳು, ಕುಡುಕರು


ನನ್ನ ತಮ್ಮ ತಂಗಿಯರನು ಬೆಳೆಸೆ


ನನ್ನ ಕನಸ ನಾ ಕೊಂದಿಹೆನು|3|


ನಿಮ್ಮ ಬದುಕು ನಿಮಗ್ಹೇಗೋ ಹಾಗೆ


ನಮ್ಮ ಕಸುಬು ನಮಗೆ


ಮೋಸ ಮಾಡದ, ಪರರ ಹಿಂಸಿಸದ


ಕೊಡುಗೆ ಸ್ವಚ್ಛತೆಯಡೆಗೆ|4|


ನಮಗೂ ನಿಮ್ಮಂತೆ ಶಾಲೆಯು ಬೇಕು


ಕಸ ತುಂಬಿ ತಿರುಗೋ ಚೀಲವು ಸಾಕು


ಮಳೆಯಲಿ ನೆನೆಯದ ನಿದ್ದೆಯ ನೆನಪು


ಎಂದು ಮೂಡುವುದೋ ಬಾಳಲಾ ಬೆಳಕು?|5|


Comments