ಮತ್ತಷ್ಟು ಹನಿಗಳು

ಮತ್ತಷ್ಟು ಹನಿಗಳು

 

 

 

 ಹರಿದು ಹೋದ ಚಿಂದಿ ಬಟ್ಟೆಗಳಂತೆ

ಉಳಿದಿರುವ ಕಹಿ ನೆನಪುಗಳ

ಹೊರ ಚೆಲ್ಲಿ ಮತ್ತೆ ಮರಳಬೇಕಿದೆ

ಒಂದೊಮ್ಮೆ ಗೆಲುವಾಗಿದ್ದ ಮನಸ್ಸಿನೆಡೆಗೆ.

*******************************

ಪ್ರತಿದಿನವೂ ಹೀಗೆ

ಕನಸುಗಳು ಆತ್ಮಹತ್ಯೆ

ಮಾಡಿಕೊಳ್ಳುತ್ತವೆ ಮನದ

ಆಳ ಬಾವಿಯಲಿ

ಶವ ತೆಗೆಯುವ ಕೆಲಸ

ನನ್ನ ಕರ್ಮ.

******************************

ಗೋಜಲಾದ ಸಿಕ್ಕುಗಳ

ಪೊರಕೆಯಿಂದ ಗುಡಿಸಿ

ಬದುಕಿನ ಮರ್ಮ ಅರಿವುದೆಂತು?

ಮಾತುಗಳ ಗಾಳಿ ಗೋಪುರದಲ್ಲಿ

ಮೌನದ ಪ್ರೀತಿ ವಾತ್ಸಲ್ಯ ತೋರುವುದೆಂತು?

******************************

ಮನಸ್ಸಿಗೆ ಕವಲುಗಳಿರುವಂತೆ

ಆತ್ಮಕ್ಕೂ ಕವಲುಗಳಿರುತ್ತವಾ?

*********************************

ನೀನು ನನ್ನಿಂದ ದೂರವಾಗಿರಬಹುದು

ಆದರೆ ಆತ್ಮ ತೃಪ್ತಿಗೆ ಬರೆದುಕೊಂಡ

ಕವಿತೆಯಾಗಿ ಸದಾ ನನ್ನೊಡನೆ ಇರುವೆ.

*******************************

ನಿನ್ನ ಮರೆತರೂ

ಫಲವಿಲ್ಲ

ರಾತ್ರಿಯ ಕನವರಿಕೆಗಳಲ್ಲಿ

ನೀನು

ಮತ್ತೆ ಪ್ರತ್ಯಕ್ಷ!

************************

ಗೆಳತಿ,

ಮುಂದಿನ ಜನ್ಮವೊಂದಿದ್ದರೆ

ನಾನು ಗೆದ್ದಲಾಗುವೆ

ನೀನು ಹಾವಾಗಿ

ಹಗಲಿರುಳೂ ದುಡಿದು

ಕಟ್ಟಿದ  ನನ್ನ ಅರಮನೆಯಲ್ಲಿ

ಬಲವಂತವಾಗಿಯಾದರೂ ಬಂದು

ನೆಲಸು.

*************************

ಆತ್ಮ ಬೆತ್ತಲಾದರೂ

ಯಾರೂ ಆಗಿಲ್ಲ ಆಪ್ತ

ಭಯದ ಕತ್ತಲಲ್ಲಿ

ನಾನು ಮಾತ್ರ ಪರಿತ್ಯಕ್ತ.

******************************

ಪರಿಚಯವಿಲ್ಲದ

ಹಾದಿಗಳಲ್ಲಿ

ಎಡವಿದಲ್ಲೆಲ್ಲಾ

ಕಲ್ಲು ಮುಳ್ಳುಗಳು.

*******************************

ಕಣ್ಣೀರಿಗೆ ಕರಗದ

ಕಲ್ಲು ಹೃದಯಿ ನಾನಲ್ಲ

ನೋವಿಗೆ ಮಿಡಿಯದ

ನಿರ್ಭಾವುಕನಲ್ಲ

ಭಾವ ವೃತ್ತಿಗಳನ್ನು

ತಡೆಯಬಲ್ಲ ಯೋಗಿಯೂ ಅಲ್ಲ

ನೀನಂದಂತೆ ನಾನು

ಬಂಡೆಗಲ್ಲೇ ಇರಬಹುದು

ಆದರೆ ಪ್ರೀತಿ ನದಿ

ಮೂಡಿಸಿದ ಕಲೆಗಳೆಂದೂ

ಮಾಸಿಲ್ಲ/ ಮಾಸೋಲ್ಲ.

Rating
No votes yet

Comments