ಚಂದ್ರಯಾನಕೆ ಬಾ, ಸಖೀ!

ಚಂದ್ರಯಾನಕೆ ಬಾ, ಸಖೀ!

ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,
ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ;

ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,
ಚಂದ್ರ ಲೋಕವನೇ ಏರಿ ಸುಖಿಸೋಣ ಬಾ;

ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,
ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ!

ಗಿಡಮರಗಳ ಸುತ್ತಾಡಿ ಹಾಡಬೇಕಿಲ್ಲ ಇನ್ನು,
ಗ್ರಹಗಳ ಸುತ್ತುತ್ತಾ ನಾವು ನಲಿಯಬಹುದಿನ್ನು;

ಇಲ್ಲಿ ನಮಗೆ ದುರುಗುಟ್ಟುವ ಕಣ್ಣುಗಳ ಶನಿಕಾಟ,
ಅಲ್ಲಿ ಗುರು-ಶನಿಗಳಿಗೇ ಮಾಡಬಹುದು ಟಾಟಾ;

ಬೆಳದಿಂಗಳಿಗಾಗಿ ಹುಣ್ಣಿಮೆಯ ನಿರೀಕ್ಷೆ ಇಲ್ಲಿ,
ದಿನ-ರಾತ್ರಿ ಬೆಳದಿಂಗಳ ಸತತ ಸ್ನಾನ ನಮಗಲ್ಲಿ;

ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,
ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ!
***********************

 

ಭಾರತೀಯ ಆಕಾಶನೌಕೆ "ಚಂದ್ರಯಾನ" ಚಂದ್ರನಲ್ಲಿಗೆ ಹೋದಂದು ಬರೆದ ಕವನ!

Rating
No votes yet

Comments