ಉತ್ಪಾತವಾಗಬೇಕಿದೆ ಈಗ...

ಉತ್ಪಾತವಾಗಬೇಕಿದೆ ಈಗ...

ಕವನ

 

 "ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು" 

                                                                  ಎಚ್. ಎಸ್. ವೆಂಕಟೇಶಮೂರ್ತಿ 
 
ಉತ್ಪಾತವಾಗಬೇಕಿದೆ ಈಗ 
ಮನೆಗಳಲ್ಲಿ ಗುಡಿಗಳಲ್ಲಿ 
ಚರ್ಚು ಮಸೀದಿಗಳಲ್ಲಿ 
ಮತ್ತೆಲ್ಲಕ್ಕಿಂತ ಹೆಚ್ಚಾಗಿ 
ನಮ್ಮ ಮನಗಳಲ್ಲಿ. 
 
ಹಸಿದ ಹೊಟ್ಟೆಗಳ 
ನರಳಾಟ ಕೇಳದೆ 
ಕಂತೆ ಕಂತೆ ನೋಟು 
ಹುಂಡಿಗೋ, ಜೋಳಿಗೆಗೋ
ಡಬ್ಬಿಗೋ ಹಾಕಿ  
ದೈವ ಸಂಪನ್ನವಾದ ಹಾಗೆ 
ಹುಸಿ ತೃಪ್ತಿಯಲ್ಲಿರದಂತೆ 
ಉತ್ಪಾತವಾಗಬೇಕಾಗಿದೆ ಈಗ. 
 
ಅನಾಥ ಕಣ್ಣಲಿ 
ಜಿನುಗುವ ಹನಿಗಳ 
ಒರೆಸದೆ ವರ್ಷಕ್ಕೊಮ್ಮೆ 
ಹಣ್ಣು- ಬಟ್ಟೆ ಕೊಟ್ಟು 
ಬೀಗದಿರುವಂತೆ 
ಉತ್ಪಾತವಾಗಬೇಕಾಗಿದೆ ಈಗ. 
 
ಸಾವಿರ ಒಸಾಮರು 
ಸತ್ತು ನರಿಮೊಗದ 
ಒಬಾಮರು ಹುಟ್ಟಿದರೂ 
ಸುಳ್ಳು ಸಾಂತ್ವನದ ಬದುಕ 
ನೆಚ್ಚಿಕೊಳ್ಳದಂತೆ 
ಉತ್ಪಾತವಾಗಬೇಕಿದೆ ಈಗ. 
 
ಭಾವ ಲೋಕದ 
ತಲ್ಲಣಗಳಿಗೆ ಕಿವುಡಾಗಿ
ಸುಳ್ಳೇ ನಿರ್ಲಿಪ್ತವಾಗಿರದಂತೆ 
ಶೋಷಣೆಯ ಹಲ 
ಮುಖವಾಡಗಳು ಜಯಭೇರಿ 
ಹೊರಟಿರುವಾಗ ಸುಮ್ಮನಿರದಂತೆ 
ಉತ್ಪಾತವಾಗಬೇಕಿದೆ ಈಗ. 
 
ಇದೆಲ್ಲಕ್ಕಿಂತ ಮಿಗಿಲಾಗಿ 
ಮನುಷ್ಯತ್ವದ ಹಲವು 
ಸೊಗಸಾದ ಗುಣಗಳ 
ಮರೆತು ಇರಲಾರದಂತೆ 
ಉತ್ಪಾತವಾಗಬೇಕಾಗಿದೆ ಈಗ 
ನಿಮ್ಮಲ್ಲಿ, ನನ್ನಲ್ಲಿ 
ಮುಂದುವರೆದು.... 
ನಮ್ಮ ಎಳೆಯರಿಗೆ 
ನಾವು ಕಟ್ಟಿಕೊಡುತ್ತಿರುವ 
ಕನಸುಗಳಲ್ಲಿ..........
 
 
 
 
 
 

 

Comments